CONNECT WITH US  

ಇಡ್ಲಿ ಸ್ಪೆಷಲ್‌

ಯಾವತ್ತಿದ್ದರೂ ಇಡ್ಲಿ ಒಂದು ಆರೋಗ್ಯಕರ ತಿನಿಸು. ಇಡ್ಲಿಯಾ ಅಂತ ಮುಖ ಸಿಂಡರಿಸುವವರಿಗೆ ಇಲ್ಲಿದೆ ಕೆಲವು ಇಡ್ಲಿ ವೈವಿಧ್ಯ. ಒಮ್ಮೆ ಮಾಡಿ ಸವಿದು ನೋಡಿ. 

ಸೋರೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ : ಅಕ್ಕಿ 2 ಕಪ್‌, ಸೋರೆಕಾಯಿ ತುರಿ 1 ಕಪ್‌, ತೆಂಗಿನಕಾಯಿತುರಿ 1 ಕಪ್‌, ಉಪ್ಪು ರುಚಿಗೆ ತಕ್ಕಷ್ಟು , ಸಿಹಿ ಬೇಕಿದ್ದರೆ 2 ಚಮಚ ಬೆಲ್ಲ , ಇಡ್ಲಿ ಬೇಯಿಸಲು 1 ಚಮಚ ಎಣ್ಣೆ .

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೆನೆಸಿರಿ. ಬಳಿಕ ನೆನೆದ ಅಕ್ಕಿಯನ್ನು ರುಬ್ಬಿಕೊಂಡು ಅದಕ್ಕೆ ಸೋರೆಕಾಯಿ ತುರಿ, ತೆಂಗಿನ ತುರಿ, ಬೆಲ್ಲ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸೋರೆಕಾಯಿ ನೀರು ಬಿಡುವುದರಿಂದ ಹೆಚ್ಚು ನೀರು ಸೇರಿಸಬೇಕಾಗಿಲ್ಲ . ನಂತರ ಎರಡು ಗಂಟೆಬಿಟ್ಟು ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟನ್ನು ಹೊಯ್ದು ಹಬೆಯಲ್ಲಿ ಬೇಯಿಸಿದರೆ ಆರೋಗ್ಯಕರ ಇಡ್ಲಿ ತಯಾರು. ಕಾಯಿಚಟ್ನಿಯೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ.

ಸೌತೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ : ಅಕ್ಕಿ 2 ಕಪ್‌, ತೆಂಗಿನತುರಿ 1 ಕಪ್‌, ಎಳೆ ಸೌತೆಕಾಯಿ ಹೋಳುಗಳು 1 ಕಪ್‌, ಒಂದು ಹಿಡಿಯಷ್ಟು ಅವಲಕ್ಕಿ, ರವಾ 1 ಕಪ್‌, ಮೊಸರು ಅರ್ಧ ಕಪ್‌, ಇಡ್ಲಿ ಬೇಯಿಸಲು 1 ಚಮಚ ಎಣ್ಣೆ .

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿಡಿ. ಸೌತೆಕಾಯಿಯನ್ನು ಹೆಚ್ಚಿಕೊಳ್ಳಿ. ಬಳಿಕ ಅಕ್ಕಿಯನ್ನು ರುಬ್ಬಿರಿಕೊಂಡು ಅದಕ್ಕೆ ಸೌತೆಕಾಯಿ, ಅವಲಕ್ಕಿ, ತೆಂಗಿನ ತುರಿ ಸೇರಿಸಿ ಒಂದು ಸುತ್ತು ರುಬ್ಬಿ. ಸೌತೆಕಾಯಿ ನೀರು ಬಿಡುವ ಕಾರಣ ಜಾಸ್ತಿ ನೀರು ಸೇರಿಸಬಾರದು. ಬಳಿಕ ಇದಕ್ಕೆ ರವೆ, ಉಪ್ಪು ಹಾಗೂ ಅಡುಗೆಸೋಡಾ, ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಇಡ್ಲಿ ತಟ್ಟೆಗೆ ತುಪ್ಪ ಸವರಿ ಇಡ್ಲಿ ಹೊಯ್ದು ಹಬೆಯಲ್ಲಿ ಬೇಯಿಸಿದರೆ ಘಮಘಮಿಸುವ ಸೌತೆಕಾಯಿ ಇಡ್ಲಿ ರೆಡಿ. ಇದನ್ನು ಕಾಯಿಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. 

ಬಾಳೆಹಣ್ಣು ಸಿಹಿ ಇಡ್ಲಿ
ಬೇಕಾಗುವ ಸಾಮಗ್ರಿ :
ರವಾ 2 ಕಪ್‌, ಬಾಳೆ ಹಣ್ಣು 4, ತೆಂಗಿನತುರಿ 1 ಕಪ್‌, ಬಟಾಣಿ 1 ಕಪ್‌, ಕ್ಯಾರೆಟ್‌ 1, ಸಕ್ಕರೆ 3 ಚಮಚ, ಚಿಟಿಕೆ ಅಡುಗೆ ಸೋಡಾ, ಉಪ್ಪು ರುಚಿಗೆ ತಕ್ಕಷ್ಟು , ಇಡ್ಲಿ ಬೇಯಿಸಲು ಸ್ವಲ್ಪ ತುಪ್ಪ .

ತಯಾರಿಸುವ ವಿಧಾನ : ಬಾಳೆಹಣ್ಣಿನ ಸಿಪ್ಪೆ$ಸುಲಿದು ಚೆನ್ನಾಗಿ ಹಿಸುಕಿಕೊಳ್ಳಿ. ಕ್ಯಾರೆಟನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಅದಕ್ಕೆ ರವೆ, ಬಟಾಣಿ, ತೆಂಗಿನ ತುರಿ, ಸಕ್ಕರೆ, ಉಪ್ಪು , ಅಡುಗೆಸೋಡಾ ಬೆರೆಸಿ ಬೇಕಾದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ ಅರ್ಧ ಗಂಟೆ ಮುಚ್ಚಿಡಿ. ಬಳಿಕ ಇಡ್ಲಿ ತಟ್ಟೆಗೆ ತುಪ್ಪ ಸವರಿಕೊಂಡು ಹಿಟ್ಟನ್ನು ಎರೆದು ಇಡ್ಲಿ ಪಾತ್ರೆಯಲ್ಲಿ ಇಟ್ಟು ಬೇಯಿಸಿದರೆ ಮೆದುಮೆದುವಾದ ಸಿಹಿ ಸಿಹಿ ಇಡ್ಲಿ ರೆಡಿ. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಹಾಲು ಅಥವಾ ತೆಂಗಿನ ಹಾಲು ಇಲ್ಲವೇ ಸಕ್ಕರೆಯೊಂದಿಗೆ ಸವಿಯಬಹುದು.

ಹೆಸರುಬೇಳೆ ಇಡ್ಲಿ
ಬೇಕಾಗುವ ಸಾಮಗ್ರಿ : ದಪ್ಪ ಅವಲಕ್ಕಿ 1 ಕಪ್‌, ಹೆಸರುಬೇಳೆ 1 ಕಪ್‌, ಅಕ್ಕಿರವೆ 3 ಕಪ್‌, ಉಪ್ಪು ರುಚಿಗೆ ತಕ್ಕಷ್ಟು , ಇಡ್ಲಿ ಬೇಯಿಸಲು ಎಣ್ಣೆ ಇಲ್ಲವೇ ತುಪ್ಪ ಸ್ವಲ್ಪ .

ತಯಾರಿಸುವ ವಿಧಾನ: ಹೆಸರುಬೇಳೆ ಮತ್ತು ಅವಲಕ್ಕಿಯನ್ನು ತೊಳೆದು ಬೇರೆ ಬೇರೆಯಾಗಿ ನೆನೆಸಿಡಿ. ಬಳಿಕ ಹೆಸರುಬೇಳೆಯನ್ನು ರುಬ್ಬಿರಿ. ಅವಲಕ್ಕಿಯನ್ನು ಹಾಕಿ ಕೊನೆಗೆ ಒಂದು ಸುತ್ತು ತಿರುವಿ ಮಿಕ್ಸಿಯಿಂದ ತೆಗೆಯಿರಿ. ಬಳಿಕ ಇದಕ್ಕೆ ರವೆ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ. ಬಳಿಕ ನಾಲ್ಕು ಗಂಟೆ ಬಿಟ್ಟರೆ ಇಲ್ಲವೇ ಮೊದಲಿನ ರಾತ್ರಿ ಹಿಟ್ಟು ತಯಾರಿಸಿಟ್ಟರೆ ಮರುದಿನಕ್ಕೆ ಉಬ್ಬಿ ಬರುತ್ತದೆ. ತಟ್ಟೆಗೆ ಎಣ್ಣೆ ಯಾ ತುಪ್ಪ ಸವರಿ ಹಿಟ್ಟು ಹೊಯ್ದು ಹಬೆಯಲ್ಲಿ ಬೇಯಿಸಿ. ಇದನ್ನು ಚಟ್ನಿ ಯಾ ಸಾಂಬಾರಿನೊಂದಿಗೆ ಬಿಸಿಬಿಸಿ ತಿನ್ನಲು ರುಚಿಯಾಗಿರುತ್ತದೆ. 

ಮೆಂತ್ಯೆ ಇಡ್ಲಿ
ಬೇಕಾಗುವ ಸಾಮಗ್ರಿ : ಅಕ್ಕಿ 2 ಕಪ್‌, ಮೆಂತೆ ನಾಲ್ಕು ಚಮಚ, ಕಾಯಿತುರಿ 1 ಕಪ್‌, ಬೆಲ್ಲ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು , ಚಿಟಿಕೆ ಅಡುಗೆಸೋಡಾ, ಇಡ್ಲಿ ಬೇಯಿಸಲು ಎಣ್ಣೆ ಯಾ ತುಪ್ಪ .

ತಯಾರಿಸುವ ವಿಧಾನ: ಮೊದಲಿಗೆ ಅಕ್ಕಿಯನ್ನು ಹಾಗೂ ಮೆಂತೆಯನ್ನು ತೊಳೆದು ಪ್ರತ್ಯೇಕವಾಗಿ ನೆನೆಸಿಡಿ. ಬಳಿಕ ಮೆಂತೆಯನ್ನು ನಯವಾಗಿ ರುಬ್ಬಿಕೊಳ್ಳಿ. ನಂತರ ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಂಡು ಅದಕ್ಕೆ ಅಡುಗೆಸೋಡಾ, ಕಾಯಿತುರಿ, ಉಪ್ಪು ಸೇರಿಸಿ ಹುದುಗಲು ಬಿಡಿ. ನಾಲ್ಕು ಐದು ಗಂಟೆಗಳ ಬಳಿಕ ಹಿಟ್ಟು ಉಬ್ಬಿಕೊಳ್ಳುತ್ತದೆ. ರುಬ್ಬಿದ ಹಿಟ್ಟಿಗೆ ಬೆಲ್ಲವನ್ನು ಪುಡಿ ಮಾಡಿ ಸೇರಿಸಿ. ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟು ಹೊಯ್ದು ಹಬೆಯಲ್ಲಿ ಬೇಯಿಸಿ. ಬಿಸಿಬಿಸಿ ಇರುವಾಗ ತಿಂದರೆ ಬಲು ರುಚಿಯಾಗಿರುತ್ತದೆ.

ಬಟಾಣಿ ಇಡ್ಲಿ
ಬೇಕಾಗುವ ಸಾಮಗ್ರಿ : ಬಟಾಣಿ 1 ಕಪ್‌, ರವೆ 2 ಕಪ್‌, ಮೊಸರು ಅರ್ಧ ಕಪ್‌, ಕೊತ್ತಂಬರಿ ಸೊಪ್ಪು-ಮೆಂತೆಸೊಪ್ಪು ಸ್ವಲ್ಪ , ಹಸಿಮೆಣಸು 2, ಶುಂಠಿ, ತೆಂಗಿನತುರಿ 1 ಕಪ್‌, ಉಪ್ಪು ರುಚಿಗೆ ತಕ್ಕಷ್ಟು , ಎಣ್ಣೆ ಯಾ ತುಪ್ಪ ಸ್ವಲ್ಪ .

ತಯಾರಿಸುವ ವಿಧಾನ: ಬಟಾಣಿಯನ್ನು ಸ್ವಲ್ಪ ಬೇಯಿಸಿ ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ರವೆ, ತೆಂಗಿನತುರಿ, ಮೆಂತೆಸೊಪ್ಪು , ಕೊತ್ತಂಬರಿ ಸೊಪ್ಪು , ಹಸಿಮೆಣಸು, ಶುಂಠಿಯನ್ನು ಸೇರಿಸಿ ಮೊಸರು ಹಾಗೂ ಬೇಕಾದಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಅರ್ಧ ಗಂಟೆ ಬಿಟ್ಟು ಇಡ್ಲಿ ತಟ್ಟೆಗೆ ತುಪ್ಪ ಸವರಿ ಹಿಟ್ಟು ಸುರಿದು ಹಬೆಯಲ್ಲಿ ಬೇಯಿಸಿ. ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ರಾಗಿ ಇಡ್ಲಿ
ಬೇಕಾಗುವ ಸಾಮಗ್ರಿ : ರಾಗಿ 2 ಕಪ್‌, ಉದ್ದಿನಬೇಳೆ ಅರ್ಧ ಕಪ್‌, ರುಚಿಗೆ ತಕ್ಕಷ್ಟು ಉಪ್ಪು , ಚಿಟಿಕೆ ಅಡುಗೆಸೋಡಾ, ಇಡ್ಲಿ ಬೇಯಿಸಲು ಎಣ್ಣೆ ಅಥವಾ ತುಪ್ಪ .

ತಯಾರಿಸುವ ವಿಧಾನ: ರಾಗಿಯನ್ನು ಹಾಗೂ ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ತೊಳೆದು ನೆನೆಸಿಡಿ. ಬೆಳಗ್ಗೆ ನೆನೆಯಲು ಇಟ್ಟರೆ ರಾತ್ರಿಗೆ ಮೊಳಕೆ ಬಂದಿರುತ್ತದೆ. ಮೊಳಕೆ ಬಂದ ಕಾಳುಗಳನ್ನು ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು$ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಮುಚ್ಚಿಡಿ. ಹಿಟ್ಟು ಉಬ್ಬಿದ ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಇಡ್ಲಿ ಹೊಯ್ದು ಆವಿಯಲ್ಲಿ ಬೇಯಿಸಿ. ಇದು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ. ಸಾಂಬಾರು ಇಲ್ಲವೇ ಚಟ್ನಿಯೊಂದಿಗೆ ಸವಿದು ನೋಡಿ.

ಪಾಂಚಾಲಿ

Trending videos

Back to Top