CONNECT WITH US  

ಚಗಟೆ ಸೊಪ್ಪಿನಲ್ಲಿ ವೈವಿಧ್ಯ

ಈಗ ಮಳೆಗಾಲ. ಈ ಸಮಯದಲ್ಲಿ ಮನೆ ತೋಟದ ಸುತ್ತ ಬೆಳೆಯುವ ಕಳೆಗಿಡಗಳಲ್ಲಿ ಕೆಲವೊಂದು ಸಸ್ಯಗಳನ್ನು ಅಡುಗೆಗೆ ಬಳಸುವುದು ವಾಡಿಕೆ. ಚಗಟೆ ಸೊಪ್ಪು ಅಥವಾ ತಜಂಕ್‌ ಸೊಪ್ಪು ಎಂದು ಕರೆಯುವ ಈ ಸೊಪ್ಪು ಔಷಧೀಯ ಗುಣಗಳಿಂದ ಕೂಡಿದೆ. ಇದರಿಂದ ವಿವಿಧ ರೀತಿಯ ಅಡುಗೆಗಳನ್ನು ಮಾಡಬಹುದು. ಇವುಗಳು ರುಚಿಕರ ಮಾತ್ರವಲ್ಲ , ಆರೋಗ್ಯಕ್ಕೂ ಒಳ್ಳೆಯದು. ಪೇಟೆಯಿಂದ ತರುವ ರಾಸಾಯನಿಕ ಪದಾರ್ಥಗಳ ಸಿಂಪರಣೆ ಮಾಡಿದ ತರಕಾರಿಗಿಂತ ಪ್ರಕೃತಿಯ ಮಡಿಲಲ್ಲಿ ಬೆಳೆದ ತರಕಾರಿ, ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು.

ಚಗಟೆ ಸೊಪ್ಪಿನ ಬೋಂಡಾ 
ಬೇಕಾಗುವ ಸಾಮಗ್ರಿ: 1 ಕಪ್‌ ಎಳೆಯ ಚಗಟೆ ಸೊಪ್ಪು , 3/4 ಕಪ್‌ ಕಡ್ಲೆಹಿಟ್ಟು , 1/2 ಕಪ್‌ ಅಕ್ಕಿಹಿಟ್ಟು , ಒಂದೂವರೆ ಚಮಚ ಕ‌ಡ್ಲೆಬೇಳೆ, 1/4 ಕಪ್‌ ಸಣ್ಣಗೆ ಹೆಚ್ಚಿದ ಈರುಳ್ಳಿ ಚೂರು, 2 ಹಸಿಮೆಣಸು ಚೂರು, 1/4 ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಕಡ್ಲೆಬೇಳೆ 2-3 ಗಂಟೆ ನೆನೆಸಿ ತೊಳೆದು, ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿ . ಎಳೆ ಚಗಟೆ ಸೊಪ್ಪು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ. ನಂತರ ಕಡ್ಲೆಹಿಟ್ಟು , ಅಕ್ಕಿ ಹಿಟ್ಟು , ರುಬ್ಬಿದ ಕಡ್ಲೆಬೇಳೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಚೂರು, ಹಸಿಮೆಣಸಿನ ಚೂರು, ಖಾರದ ಪುಡಿ, ಉಪ್ಪು , ಹೆಚ್ಚಿದ ತೊಗಟೆ ಸೊಪ್ಪು  ಎಲ್ಲಾ ಸೇರಿಸಿ ಕಲಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಗೆ ಕಲಸಿ. ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈ ಮಳೆಗಾಲದಲ್ಲಿ ಬಿಸಿ ಬಿಸಿಯಾದ ಈ ಬೋಂಡ ಸವಿಯಲು ರುಚಿಯಾಗಿರುತ್ತದೆ.

ಚಗಟೆ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿ: 1 ಕಪ್‌ ಎಳೆ ಚಗಟೆ ಸೊಪ್ಪು , 1/4 ಕಪ್‌ ಹೆಸರುಬೇಳೆ, 1 ದೊಡ್ಡ ಈರುಳ್ಳಿ , 1/2 ಚಮಚ ಖಾರದ ಪುಡಿ, 1/4 ಚಮಚ ಅರಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು , 2 ಚಮಚ ಎಣ್ಣೆ , 1/4 ಕಪ್‌ ಕಾಯಿತುರಿ, 1/2 ಚಮಚ ಸಾಸಿವೆ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಸಣ್ಣಗೆ ತುಂಡು ಮಾಡಿದ ಈರುಳ್ಳಿ ಚೂರು ಹಾಕಿ ಸ್ವಲ್ಪ ಕೆಂಪಗಾಗುವ ವರೆಗೆ ಹುರಿದು, ನಂತರ ಸಣ್ಣಗೆ ಹೆಚ್ಚಿದ ಚಗಟೆ ಸೊಪ್ಪು ಹಾಕಿ ಸ್ವಲ್ಪ ಹುರಿದು, ಖಾರದ ಪುಡಿ, ಅರಸಿನ ಪುಡಿ, ಉಪ್ಪು ಸೇರಿಸಿ ಮುಚ್ಚಿ ಬೇಯಿಸಿ. ನಂತರ ನೀರಲ್ಲಿ ನೆನೆಸಿದ ಹೆಸರುಬೇಳೆ ಹಾಕಿ. ಬೇಳೆ ಬೆಂದ ನಂತರ ಸ್ವಲ್ಪ ನೀರು, ಕಾಯಿತುರಿ ಸೇರಿಸಿ 2-3 ನಿಮಿಷ ಮುಚ್ಚಿಡಿ. ನಂತರ ಕೆಳಗಿಳಿಸಿ. ಸಾಸಿವೆ ಒಗ್ಗರಣೆ ಕೊಡಿ. ಇದು ಚಪಾತಿ, ಅನ್ನಕ್ಕೆ ತಿನ್ನಲು ರುಚಿ.

ಚಗಟೆ ಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿ: 1 ಕಪ್‌ ಕುಚ್ಚಲಕ್ಕಿ , 1/2 ಕಪ್‌ ಬೆಳ್ತಿಗೆ ಅಕ್ಕಿ, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, 5-6 ಒಣಮೆಣಸು, 1/4 ಕಪ್‌ ತೆಂಗಿನ ತುರಿ, 1 ಚಮಚ ಹುಳಿರಸ, 2 ಕಪ್‌ ಸಣ್ಣಗೆ ಹೆಚ್ಚಿದ ಎಳೆ ಚಗಟೆ ಸೊಪ್ಪು , ಸಣ್ಣ ತುಂಡು ಬೆಲ್ಲ , ಉಪ್ಪು ರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ: ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆಸಿ. ತೆಂಗಿನ ತುರಿ, ಹುಳಿರಸ, ಕೊತ್ತಂಬರಿ, ಜೀರಿಗೆ, ಬೆಲ್ಲ, ಒಣಮೆಣಸು ಸೇರಿಸಿ ರುಬ್ಬಿ . ನಂತರ ನೆನೆಸಿದ ಅಕ್ಕಿ ತೊಳೆದು, ರುಬ್ಬಿದ ತೆಂಗಿನತುರಿ ಮಿಶ್ರಣದ ಜೊತೆ ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ಚಗಟೆ ಸೊಪ್ಪಿನ ಚೂರು, ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ನಂತರ ಬಾಡಿಸಿದ ಬಾಳೆಲೆಯಲ್ಲಿ ಸುತ್ತಿಟ್ಟು ಹಬೆಯಲ್ಲಿ 1ರಿಂದ 3/4 ಗಂಟೆ ಬೇಯಿಸಿ. ತಣಿದ ನಂತರ ತೆಂಗಿನೆಣ್ಣೆ ಹಚ್ಚಿ ತಿನ್ನಲು ರುಚಿಯಾಗಿರುತ್ತದೆ. ಪತ್ರೊಡೆ ಪುಡಿ ಮಾಡಿ ಬೆಲ್ಲ , ತೆಂಗಿನ ತುರಿ ಸೇರಿಸಿ ಒಗ್ಗರಣೆ ಮಾಡಿದರೆ ರುಚಿಯಾದ ಉಸ್ಲಿ ತಿನ್ನಲು ರೆಡಿ.

ಚಗಟೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 1 ಕಪ್‌ ಎಳೆ ಚಗಟೆ ಸೊಪ್ಪು , 1/2 ಕಪ್‌ ತೆಂಗಿನ ತುರಿ, 1/4 ಚಮಚ ಕಾಳುಮೆಣಸು, 1 ಕೆಂಪು ಮೆಣಸು, 1 ಕಪ್‌ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಸಾಸಿವೆ, 1 ಚಮಚ ಎಣ್ಣೆ , 1/2 ಚಮಚ ಜೀರಿಗೆ.

ಮಾಡುವ ವಿಧಾನ: ಚಗಟೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದಾಗ ಜೀರಿಗೆ, ಕಾಳುಮೆಣಸು, ಕೆಂಪುಮೆಣಸು, ಚಗಟೆ ಸೊಪ್ಪು ಹಾಕಿ ಚೆನ್ನಾಗಿ ಹುರಿದು ಕೆಳಗಿಳಿಸಿ. ನಂತರ ತೆಂಗಿನತುರಿ ಸೇರಿಸಿ ನಯವಾಗಿ ರುಬ್ಬಿ . ನಂತರ ಮಜ್ಜಿಗೆ, ಬೇಕಾದಷ್ಟು ನೀರು ಸೇರಿಸಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಅನ್ನ , ಗಂಜಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಸರಸ್ವತಿ

Trending videos

Back to Top