CONNECT WITH US  

ಇಂದಿನಿಂದ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ

ಶಿವಮೊಗ್ಗ: ಗೌರಿ ಲಂಕೇಶ್‌ ಮತ್ತು ಕಲ್ಬುರ್ಗಿ ಅವರ ಹತ್ಯೆಯನ್ನು ವಿರೋಧಿ ಸಿ ದೇಶದಲ್ಲಿ ನಡೆಯುತ್ತಿರುವ ನಿರ್ಭೀತಿ ವಾತಾವರಣ ಖಂಡಿಸಿ ಗೌರಿ ಲಂಕೇಶ್‌ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್‌ ಆ.30ರಿಂದ ಸೆ. 5ರವರೆಗೆ 'ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ' ನಡೆಸಲು ತೀರ್ಮಾನಿಸಿದೆ ಎಂದು ಗೌರಿ ಲಂಕೇಶ್‌ ಬಳಗದ ಕೆ.ಎಲ್‌. ಅಶೋಕ್‌ ತಿಳಿಸಿದರು.

 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧ್ವನಿಯಾಗಿದ್ದವರು ಗೌರಿ ಲಂಕೇಶ್‌. ಸೆ.5ಕ್ಕೆ ಅವರ ಹತ್ಯೆಯಾಗಿ ಒಂದು ವರ್ಷವಾಗುತ್ತದೆ. ಹಾಗೆಯೇ ನಾಡಿನ ವಿಶಿಷ್ಟ ವಿದ್ವಾಂಸರಾಗಿದ್ದ ಕಲ್ಬುರ್ಗಿಯವರ ಹತ್ಯೆಯಾಗಿ ಆ. 30ಕ್ಕೆ 3 ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.30ರಿಂದ ಸೆ. 5ರವರೆಗೆ ರಾಜ್ಯಾದ್ಯಂತ ಈ ಅಭಿವ್ಯಕ್ತಿ ಹತ್ಯೆ ವಿರೋಧಿ  ಸಪ್ತಾಹ ನಡೆಸಲು ಉದ್ದೇಶಿಸಲಾಗಿದೆ ಎಂದರು.

 ಸೆ.30ರಂದು ಧಾರವಾಡದಲ್ಲಿ ಕಲ್ಬುರ್ಗಿ ದಿನದ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಇದಕ್ಕೆ ಚಾಲನೆ ನೀಡಲಾಗುವುದು. ಸೆ. 5ರಂದು ಬೆಂಗಳೂರಿನಲ್ಲಿ ಗೌರಿ ದಿನದ ಮೂಲಕ ಅವರ ಸಮಾಧಿಯ ಬಳಿ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದರು.

ಸೆ. 5ರ ಬೆಳಿಗ್ಗೆ 10.30ಕ್ಕೆ ಗಾಂಧಿ ನಗರದ ಮೌರ್ಯ ಹೊಟೇಲ್‌ ಬಳಿ ಇರುವ ಇಂದಿರಾ ಗಾಂಧಿ  ಪ್ರತಿಮೆಯಿಂದ ರಾಜ್‌ಭವನ ಚಲೋ ಪ್ರತಿರೋಧದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರ 2.30ಕ್ಕೆ ಸೆಂಟ್ರಲ್‌ ಕಾಲೇಜ್‌ ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯಾ ಸಮಾವೇಶ ಮತ್ತು ಸಾಂಸ್ಕೃತಿಕ ಪ್ರತಿರೋಧ ನಡೆಯಲಿದೆ ಎಂದರು.

ಸಮಾವೇಶಕ್ಕೆ ಸ್ವಾಮಿ ಅಗ್ನಿವೇಶ್‌, ಗಿರೀಶ್‌ ಕಾರ್ನಾಡ್‌, ತೀಸ್ತಾ ಸೆಟಲ್ವಾಡ್‌, ಜಿಗ್ನೇಶ್‌ ಮೇವಾನಿ, ಉಮರ್‌ ಖಾಲಿದ್‌, ವರವರ ರಾವ್‌, ನರೇಂದ್ರ ನಾಯಕ್‌, ಕೆ.ಎಸ್‌. ಭಗವಾನ್‌, ಪ್ರಕಾಶ್‌ ರೈ, ಯೋಗೀಶ್‌ ಮಾಸ್ತರ್‌, ಜಿ.ಎನ್‌. ದೇವಿ, ಮುಕ್ತ ದಾಬೋಲ್ಕರ್‌, ಮೇಘನಾ ಪನ್ಸಾರೆ, ಉಮಾದೇವಿ ಕಲ್ಬುರ್ಗಿ, ಕವಿತಾ ಲಂಕೇಶ್‌, ಪ್ರೊ| ಹರಗೋಪಾಲ್‌ ಸೇರಿದಂತೆ ಪ್ರಗತಿಪರರು, ಪತ್ರಕರ್ತರು, ಲೇಖಕರು ಉಪಸ್ಥಿತರಿರುತ್ತಾರೆ ಎಂದರು.

ಅದೇ ದಿನ ನಡೆಯುವ ಸಾಂಸ್ಕೃತಿಕ ಪ್ರತಿರೋಧದಲ್ಲಿ ಖ್ಯಾತ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್‌, ಗೊಲ್ಲಹಳ್ಳಿ ಶಿವಪ್ರಸಾದ್‌, ಜೆನ್ನಿ, ಬಿ.ಜಯಶ್ರೀ ಎಂ.ಡಿ. ಪಲ್ಲವಿ, ಆರತಿರಾವ್‌, ಮುಂತಾದವರು ಭಾಗವಹಿಸಲಿದ್ದಾರೆ ಎಂದರು ಸುದ್ದಿಗೋಷ್ಠಿಯಲ್ಲಿ ಡಿ.ಎಸ್‌. ಶಿವಕುಮಾರ್‌, ಎಂ.ಗುರುಮೂರ್ತಿ ಇದ್ದರು. 

ಧಾರವಾಡದಿಂದ ಬೆಂಗಳೂರುವರೆಗೆ ವಾಹನ ಜಾಥ
ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ ಉದ್ಘಾಟನೆಯ ಮರುದಿನ ಬೆಂಗಳೂರಿಗೆ ವಾಹನ ಜಾಥಾ ಸಾಗುವುದು. ಪ್ರಮುಖ ನಗರಗಳಲ್ಲಿ ಕರಪತ್ರ ಹಂಚಿಕೆ ಕಾರ್ಯಕ್ರಮಗಳು ನಡೆಯುತ್ತವೆ ಎಂದ ಅವರು ಆ.30ರಿಂದ ಸೆ. 5ರವರೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಕಿರಣ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಉಪವಾಸ ಸತ್ಯಾಗ್ರಹ, ಪಂಜಿನ ಮೆರವಣಿಗೆ, ಮಾನವ ಸರಪಳಿಗಳು ನಡೆಯಲಿವೆ ಎಂದು ಹೇಳಿದರು. 

ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ. ಗೌರಿಯನ್ನು ಕೊಂದವರೇ ಕಲ್ಬುರ್ಗಿಯವರನ್ನು ಕೊಂದಿದ್ದಾರೆ. ಹಂತಕರನ್ನ ಬಂಧಿಸಿದರೆ ಮಾತ್ರ ಸಾಲದು. ಇದರ ಹುನ್ನಾರ ರೂಪಿಸಿದವರನ್ನು ಬಂಧಿಸಬೇಕು. ಕೊಲೆಗಾರರು ಮಾತ್ರವಲ್ಲ. ಕೊಲೆಗಡುಕ ಸಂಘಟನೆಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.ಸಮಾವೇಶದಲ್ಲಿ ಸನಾತನ ಸಂಸ್ಥೆ ಭಯೋತ್ಪಾದಕ ಸಂಸ್ಥೆಯನ್ನು ಘೋಷಿಸಿ ಚಟುವಟಿಕೆಗಳನ್ನು ನಿಷೇಧಿಸಿ, ಸಂಸ್ಥೆಯ ನಾಯಕರನ್ನು ಬಂಧಿಸಿ ಇದರ ಹಿಂದಿರುವ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳನ್ನು ಗುರುತಿಸಿ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದರು.

 ಲೇಖಕ ಬಿ. ಚಂದ್ರೇಗೌಡ ಮಾತನಾಡಿ, ಭಾರತದಲ್ಲಿ ಪ್ರಜಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭಯದಿಂದ ಉಪಯೋಗಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು. ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಪಿ. ಶ್ರೀಪಾಲ್‌ ಮಾತನಾಡಿ, ಸೆ.4ರ ಸಂಜೆ 4.30ಕ್ಕೆ ಶಿವಮೊಗ್ಗದ ಅಂಬೇಡ್ಕರ್‌ ಭವನದಿಂದ ಮೆರವಣಿಗೆ ನಡೆಯಲಿದೆ.

ಎ.ಎ. ಸರ್ಕಲ್‌ ಹಾಗೂ ಗೋಪಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ಸೆ.5ರ ಬೆಂಗಳೂರಿನ ಸಮಾವೇಶಕ್ಕೆ ಶಿವಮೊಗ್ಗದಿಂದ 500ಕ್ಕೂ ಹೆಚ್ಚು ಮಂದಿ ತೆರಳಲಿದ್ದಾರೆ ಎಂದರು.


Trending videos

Back to Top