CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯೋಗಿಗೊಲಿದ ಗದ್ದುಗೆ : ಮಹಾಂತನಿಂದ ಸಿಎಂ ತನಕ

ಯೋಗಿ ಮುಖ್ಯಮಂತ್ರಿಯಾಗಿರುವುದರಿಂದ ಉತ್ತರ ಪ್ರದೇಶದ ಮುಸ್ಲಿಮರಿಗೆ ಭಾರೀ ಗಂಡಾಂತರ ಕಾದಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿವೆ ಉಳಿದ ಪಕ್ಷಗಳು. ಇವೇ ಪಕ್ಷಗಳು ಅಧಿಕಾರಕ್ಕಾಗಿ ಮುಸ್ಲಿಂ ಲೀಗ್‌, ಓವೈಸಿಯ ಎಐಎಂಐಎಂ ಪಕ್ಷಗಳ ಜತೆಗೆ ಕೈಜೋಡಿಸಿದ್ದನ್ನು ಯಾರಾದರೂ ನೆನಪಿಸುವ ಅಗತ್ಯವಿದೆ.

ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವುದು 21ನೇ ಶತಮಾನದ ಅತ್ಯುತ್ತಮ ಸುದ್ದಿ ಎಂದಿದ್ದಾರೆ ಕೇಂದ್ರ ಸಚಿವೆ ಉಮಾ ಭಾರತಿ. ಉತ್ತಮ ಸುದ್ದಿಯೇ, ಕೆಟ್ಟ ಸುದ್ದಿಯೇ ಎನ್ನುವುದನ್ನು ಕಾಲವೇ ತೀರ್ಮಾನಿಸಬೇಕು ಮತ್ತು ಅದಕ್ಕಿನ್ನು ಬಹಳ ಸಮಯವಿದೆ. ಆದರೆ ಯೋಗಿ ಮುಖ್ಯಮಂತ್ರಿಯಾಗಿರುವುದು 21ನೇ ಶತಮಾನದ ಅತ್ಯಂತ ಆಶ್ಚರ್ಯದ ಸುದ್ದಿ ಎನ್ನುವುದರಲ್ಲಿ ಮಾತ್ರ ಅನುಮಾನವಿಲ್ಲ. ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಯೋಗಿ ಮುಖ್ಯಮಂತ್ರಿಯಾಗಲಿದ್ದಾರೆಂಬ ಗಾಳಿ ಸುದ್ದಿ ಇತ್ತು. ಅವರ ಬೆಂಬಲಿಗರು ಇದನ್ನು ಘಂಟಾಘೋಷವಾಗಿಯೇ ಹೇಳುತ್ತಿದ್ದರು. ಆದರೆ ಈ ಗಾಳಿ ಸುದ್ದಿ ಇಷ್ಟು ಬೇಗ ನಿಜವಾಗಬಹುದು ಎನ್ನುವುದನ್ನು ಉಳಿದವರು ಬಿಡಿ ಬಹುಶಃ ಯೋಗಿಯೇ ನಿರೀಕ್ಷಿಸಿರಲಿಕ್ಕಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು 325 ಸ್ಥಾನಗಳನ್ನು ಗೆದ್ದು  ನೀಡಿರುವ ಶಾಕ್‌ಗಿಂತಲೂ ಎದುರಾಳಿಗಳಿಗೆ ಯೋಗಿ ಸಿಎಂ ಆಗಿರುವುದು  ಹೆಚ್ಚು ಶಾಕ್‌ ಕೊಟ್ಟಿದೆ.

ಯೋಗಿ ದೇಶ ಕಂಡ ಎರಡನೇ ಕಾಷಾಯ ವಸ್ತ್ರಧಾರಿ ಸಿಎಂ. ಉಮಾಭಾರತಿ ಕೆಲ ವರ್ಷಗಳ ಹಿಂದೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಉಗ್ರ ಹಿಂದುತ್ವ ಪ್ರತಿಪಾದಕ ಮತ್ತು ಆಡಳಿತದ ಗಾಢ ಅನುಭವ ಇಲ್ಲ ಎನ್ನುವುದನ್ನು ಬಿಟ್ಟರೆ ಮುಖ್ಯಮಂತ್ರಿಯಾಗುವ ಎಲ್ಲ ಯೋಗ್ಯತೆಯಿರುವ ಯುವ ನಾಯಕ ಯೋಗಿ. ಐದು ಸಲ ಸಂಸದರಾಗಿ ಆಯ್ಕೆಯಾಗಿದ್ದರೂ ಯೋಗಿ ಸಚಿವರಾಗಿರಲಿಲ್ಲ. ಹೀಗಾಗಿ ಆಡಳಿತದ ಅನುಭವ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರಖರ ಹಿಂದುತ್ವ ಪ್ರತಿಪಾದನೆಯ ಕಾರಣ ಯೋಗಿಗೆ ಮುಸ್ಲಿಂ ವಿರೋಧಿ ಎಂಬ ಅಪಖ್ಯಾತಿ ಅಂಟಿಕೊಂಡಿದೆ. ನಾನು ಮುಸ್ಲಿಂ ವಿರೋಧಿಯಲ್ಲ, ಆದರೆ ಮುಸ್ಲಿಮರ ಓಲೈಕೆಯ ವಿರೋಧಿ ಎನ್ನುವುದು ಯೋಗಿ ಈ ಆರೋಪಕ್ಕೆ ನೀಡುವ ಉತ್ತರ. ಯೋಗಿ ಭ್ರಷ್ಟಾಚಾರದ ಕಡು ವಿರೋಧಿ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ, ಅವರ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರು ಕೂಡ ಅವರನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಅಂಶಗಳನ್ನು ಕೂಡ ಹೇಳದಿದ್ದರೆ ತಪ್ಪಾಗುತ್ತದೆ.

ಯೋಗಿಯನ್ನು ಮುಖ್ಯಮಂತ್ರಿಯಾಗಿ ಆರಿಸುವ ಮೂಲಕ ಬಿಜೆಪಿ ಎರಡು ಗುರಿಗೆ ಒಂದೇ ಕಲ್ಲು ಬೀಸಿದೆ. ಹಿಂದುತ್ವ ಮತ್ತು ಅಭಿವೃದ್ಧಿ ಎರಡಕ್ಕೂ ಆದ್ಯತೆಯಿದೆ ಎಂದು ಸಾರಿದೆ. ಎರಡನೆಯದಾಗಿ ಠಾಕೂರ್‌ ಸಮುದಾಯಕ್ಕೆ ಸೇರಿದ ಯೋಗಿಯನ್ನು ಮುಖ್ಯಮಂತ್ರಿ ಮತ್ತು ಒಬಿಸಿಯ ಕೇಶವ ಪ್ರಸಾದ್‌ ಮೌರ್ಯ ಮತ್ತು ಬ್ರಾಹ್ಮಣರಾಗಿರುವ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡುವ ಮೂಲಕ ಉತ್ತರ ಪ್ರದೇಶದ ಸೂಕ್ಷ್ಮ ಜಾತಿ ರಾಜಕಾರಣವನ್ನು ಜಾಣತನದಿಂದ ನಿಭಾಯಿಸಿದೆ. 

ಯೋಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೇ ಕಾಂಗ್ರೆಸ್‌ ಜಾತ್ಯತೀತತೆಯ ಮೇಲಾಗಿರುವ ಹಲ್ಲೆ ಎಂದು ಪ್ರತಿಕ್ರಿಯಿಸಿದೆ.ಇನ್ನಿತರ  ತಥಾಕಥಿತ ಜಾತ್ಯಾತೀತ ಪಕ್ಷಗಳು ಪ್ರತಿಕ್ರಿಯೆಗಳು ಹೆಚ್ಚು ಕಮ್ಮಿ ಇದೇ ರೀತಿ ಇದೆ. ಯೋಗಿ ಮುಖ್ಯಮಂತ್ರಿಯಾಗಿರುವುದರಿಂದ ಉತ್ತರ ಪ್ರದೇಶದ ಮುಸ್ಲಿಮರಿಗೆ ಭಾರೀ ಗಂಡಾಂತರ ಕಾದಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿವೆ ಉಳಿದ ಪಕ್ಷಗಳು. ಅಧಿಕಾರಕ್ಕಾಗಿ ಮುಸ್ಲಿಂ ಲೀಗ್‌, ಓವೈಸಿಯ ಎಐಎಂಐಎಂ ಪಕ್ಷಗಳ ಜತೆಗೆ ಕೈಜೋಡಿಸಿದ್ದೇವೆ ಎನ್ನುವುದನ್ನು ಈ ಪಕ್ಷಗಳಿಗೆ ಯಾರಾದರೂ ನೆನಪಿಸುವ ಅಗತ್ಯವಿದೆ. ಹಾಗೆಂದು ಉ.ಪ್ರದೇಶದ ಅರ್ಧದಷ್ಟು ಜಿಲ್ಲೆಗಳು ಕೋಮು ಸೂಕ್ಷ್ಮ ಎಂದು ವರ್ಗೀಕರಿಸಲ್ಪಟ್ಟಿವೆ, 20 ಕೋಟಿ ಜನಸಂಖ್ಯೆಯಲ್ಲಿ ಶೇ. 19ರಷ್ಟು ಮುಸ್ಲಿಮರಿದ್ದಾರೆ ಎನ್ನುವ ಅಂಶವನ್ನು ಮರೆಯುವಂತಿಲ್ಲ. ಮುಖ್ಯಮಂತ್ರಿಯಾದ ಬಳಿಕ ಎಲ್ಲರನ್ನು ಜತೆಯಾಗಿ ಕೊಂಡೊಯ್ಯುವ ಜವಾಬ್ದಾರಿ ಯೋಗಿಯ ಮೇಲಿದೆ. ಮೋದಿಯಂತೆ ಯೋಗಿಯೂ ಕಠಿಣ ಪರಿಶ್ರಮಿ. ಕೇವಲ ನಾಲ್ಕು ತಾಸು ನಿದ್ದೆ ಮಾಡುವ,  ಸೌಲಭ್ಯಗಳನ್ನು ಮಿತವಾಗಿ ಬಳಸುವ ಅಪ್ಪಟ ಸನ್ಯಾಸ ಜೀವನ ಅವರದ್ದು. ಉಗ್ರ ಹಿಂದುತ್ವವಾದಿಗಳನ್ನು ಮತ್ತು ಮೂಲಭೂತವಾದಿಗಳನ್ನು ದೂರವಿಟ್ಟು, ಎಲ್ಲರನ್ನು ಸಮಾನವಾಗಿ ಕಂಡು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯವನ್ನು ಅಭಿವೃದ್ಧಿಗೊಳಿಸಿದರೆ ಖಂಡಿತ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಆಗಬಹುದು.

Back to Top