CONNECT WITH US  

ಪಾರಂಪರಿಕ ತಾಣಗಳನ್ನು ರಕ್ಷಿಸಿ

"ಕಾಲನ ಕೆನ್ನೆಯ ಮೇಲೆ ಎಂದೆಂದಿಗೂ ಹೊಳೆಯುತ್ತಿರುವ ಶುಭ್ರ ಕಣ್ಣೀರ ಬಿಂದು' ಎಂದು ಕವಿ ರವೀಂದ್ರನಾಥ ಠಾಗೋರ್‌ ವರ್ಣಿಸಿದ ತಾಜ್‌ ಮಹಲ್‌ ಈಗ ಸ್ವತಃ ಕಣ್ಣೀರು ಸುರಿಸುತ್ತಿದೆ. ಪರಿಸರ ಮಾಲಿನ್ಯದಿಂದಾಗಿ ತಾಜ್‌ ಮಹಲ್‌ ದಿನದಿಂದ ದಿನಕ್ಕೆ ಕಳೆಗುಂದುತ್ತಿದ್ದು, ಹೀಗೆ ಮುಂದುವರಿದರೆ ಒಂದು ದಿನ ಈ ಭವ್ಯ ಕಟ್ಟಡ ನಾಶವಾದೀತು ಎಂಬ ಕಳವಳವನ್ನು ಸುಪ್ರೀಂ ಕೋರ್ಟ್‌ ಪರಿಣಾಮಕಾರಿಯಾಗಿಯೇ ವ್ಯಕ್ತಪಡಿಸಿದೆ.

ಸೋಮವಾರದ ವಿಚಾರಣೆ ವೇಳೆ ತಾಜ್‌ ಮಹಲ್‌ ಒಮ್ಮೆ ನಾಶವಾದರೆ ಅದನ್ನು ಉಳಿಸುವ ಇನ್ನೊಂದು ಅವಕಾಶ ನಿಮಗೆ ಸಿಗುವುದಿಲ್ಲ ಎಂದು ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರ ಹಾಗೂ ಪುರಾತತ್ವ ಇಲಾಖೆ ಸೇರಿದಂತೆ ತಾಜ್‌ ಮಹಲ್‌ ಸಂರಕ್ಷಿಸಬೇಕಾದ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ಮತ್ತೂಮ್ಮೆ ನೆನಪಿಸಿದೆ. 

ತಾಜ್‌  ಸಂರಕ್ಷಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸುವುದು ಇದೇ ಮೊದಲಲ್ಲ. ಒಂದು ಸಲವಂತೂ ರಕ್ಷಿಸುವ ಇಚ್ಛೆ ಇಲ್ಲ ಎಂದಾದರೆ ಮುಚ್ಚಿ ಕೆಡವಿ ಬಿಡಿ ಎಂದು ಹತಾಶವಾಗಿ ಕಿಡಿಕಾರಿತ್ತು. ಆದರೆ ಯಾವುದೇ ಹೇಳಿಕೆಗಳು ವ್ಯವಸ್ಥೆಯ ದಪ್ಪ ಚರ್ಮಕ್ಕೆ ನಾಟುತ್ತಿಲ್ಲ. ಸುಮಾರು 30 ವರ್ಷಗಳಿಂದಲೂ ತಾಜ್‌ ಸಂರಕ್ಷಣೆಗೆ ಆದೇಶಗಳನ್ನು ನೀಡುತ್ತಿದ್ದರೂ ಸಂಬಂಧಪಟ್ಟವರು ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಪರಿಣಾಮವಾಗಿ ಈ ಕಟ್ಟಡವೀಗ ಅಪಾಯದ ಮಟ್ಟಕ್ಕೆ ಸಮೀಪಿಸಿದೆ. ಈಗಾಗಲೇ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿವೆ, ಮಿನಾರುಗಳು ವಾಲುತ್ತಿವೆ, ಕಲ್ಲುಗಳು ಮತ್ತು ಇನ್ನಿತರ ವಸ್ತುಗಳು ಕಳಚಿ ಬೀಳಲಾರಂಭಿಸಿವೆ, ಅಮೃತ ಶಿಲೆಯ ಬಣ್ಣ ಕಳೆಗುಂದುತ್ತಿದ್ದು ಸ್ಫಟಿಕ ಶುಭ್ರ ಶಿಲೆ ಕಂದು ಬಣ್ಣಕ್ಕೆ ತಿರುಗಿ ಕ್ರಮೇಣ ಪಾಚಿ ಬಣ್ಣವಾಗುತ್ತಿದೆ ಎಂದು ತಾಜ್‌ ಮಹಲ್‌ ಉಳಿವಿಗಾಗಿ ಹೋರಾಡುತ್ತಿರುವ ಎಂ. ಸಿ. ಮೆಹ್ತಾ ಸೇರಿದಂತೆ ಹಲವು ಪರಿಸರವಾದಿಗಳು ಸುಪ್ರೀ ಕೋರ್ಟಿನಲ್ಲಿ ಅಳಲು ತೋಡಿಕೊಂಡಿದ್ದಾರೆ. 

ತಾಜ್‌ ಮಹಲ್‌ ಕಳೆಗುಂದಲು ಮುಖ್ಯ ಕಾರಣ ಪರಿಸರ ಮಾಲಿನ್ಯ. ಅತಿಕ್ರಮಣ, ಅಂಕೆಯಿಲ್ಲದೆ ತಲೆ ಎತ್ತುತ್ತಿರುವ ಕೈಗಾರಿಕೋದ್ಯಮಗಳು, ವಾಹನ ಮತ್ತು ಜನ ದಟ್ಟಣೆಯಲ್ಲಾಗಿರುವ ಹೆಚ್ಚಳದ ಪರಿಣಾಮ. ಕಟ್ಟಡದ ಸುತ್ತ ಇದ್ದ ದಟ್ಟ ಹಸಿರಿನ ಹೊದಿಕೆ ಮಾಯವಾಗಿ ದಶಕಗಳೇ ಸಂದಿವೆ. ಯಮುನಾ ನದಿ ಪೂರಾ ಕಲುಷಿತಗೊಂಡಿದ್ದು, ಕೊಳಚೆ ನೀರಿನಲ್ಲಿ ಸೃಷ್ಟಿಯಾಗುತ್ತಿರುವ ಕ್ರಿಮಿ ಕೀಟಗಳೂ ತಾಜ್‌ ಅವನತಿಗೆ ಕೊಡುಗೆ ನೀಡುತ್ತಿವೆ. 
ಯುನೆಸ್ಕೊ ತಾಜ್‌ ಸಂರಕ್ಷಣೆಗೆ ಸಮಗ್ರ ಯೋಜನೆಯನ್ನು ರೂಪಿಸ ಬೇಕೆಂದು ಹೇಳಿ ಬಹಳ ಕಾಲವಾಯಿತು.

ಅದಿನ್ನೂ ಕಾರ್ಯಗತಗೊಂಡಿಲ್ಲ. ಸ್ವತಃ ಸುಪ್ರೀಂ ಕೋರ್ಟ್‌ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಶನ್‌ ಡಾಕ್ಯುಮೆಂಟ್‌ ಸಲ್ಲಿಸಲು ಸೂಚಿಸಿದ್ದರೂ ಸಂಬಂಧಿಸಿದವರು ಅವಧಿ ಕೇಳುತ್ತಾ ಕಾಲ ತಳ್ಳುತ್ತಿರುವುದು ನಮ್ಮ ಪ್ರಾಚೀನ ಪರಂಪರೆಯ ಕುರಿತು ನಮಗಿರುವ ನೈಜ ಕಾಳಜಿಯನ್ನು ತಿಳಿಸುತ್ತದೆ. 
ತಾಜ್‌ ಮಹಲ್‌ ಒಂದು ಧರ್ಮ/ ಒಂದು ರಾಜ್ಯಕ್ಕೆ ಸೀಮಿತವಾಗಿರುವ ಸ್ಮಾರಕವಲ್ಲ. ಜಗತ್ತಿನ ಏಳು ಅದ್ಭುತಗಳಲ್ಲಿ ಸ್ಥಾನ ಪಡೆದಿರುವ ಅದೀಗ ರಾಷ್ಟ್ರದ ಸಂಪತ್ತು. ಅದನ್ನು ಸಂರಕ್ಷಿಸಬೇಕಾದುದು ಆಡಳಿತದಲ್ಲಿರುವವರ ಕರ್ತವ್ಯ. 370 ವರ್ಷದ ಹಿಂದೆ ನಿರ್ಮಾಣವಾಗಿರುವ ತಾಜ್‌ ಮಹಲ್‌ ಅನೇಕ ರಾಜ ಮಹಾರಾಜರ ಆಳ್ವಿಕೆಯನ್ನು ಕಂಡಿದೆ. ಹಲವು ಯುದ್ಧಗಳಿಗೆ ಸಾಕ್ಷಿಯಾಗಿದೆ. ಗಾಳಿ, ಮಳೆ, ಪ್ರವಾಹದ ಹೊಡೆತಕ್ಕೆ ಸಡ್ಡು ಹೊಡೆದು ನಿಂತಿದೆ. ಆದರೆ ಇದೀಗ ನಿರ್ಲಕ್ಷ್ಯದಿಂದಾಗಿ ಅವಸಾನ ಹೊಂದುತ್ತಿರುವುದು ದುರದೃಷ್ಟಕರ. ಒಂದು ವೇಳೆ ತಾಜ್‌ಗೆ ಹಿಂದಿನ ಭವ್ಯತೆಯನ್ನು ತಂದು ಕೊಡಲು ಸಾಧ್ಯವಾಗದಿದ್ದರೆ ಜಗತ್ತು ನಮ್ಮನ್ನು ಕ್ಷಮಿಸಲಿಕ್ಕಿಲ್ಲ. 
ತಾಜ್‌ ಮಹಲ್‌ನಂಥ ಭವ್ಯ ಪಾರಂಪರಿಕಾ ತಾಣಗಳು ನಮ್ಮಲ್ಲಿ 
ಧಾರಾಳ ಇವೆ. ಆದರೆ ನಿರ್ವಹಣೆಯ ಕೊರತೆಯಿಂದ ಈ ಪೈಕಿ ಅನೇಕ ತಾಣಗಳು ಅಳಿದು ಹೋಗಿವೆ. ಉಳಿದಿರುವವಗಳೂ ಕೂಡಾ ಹದಗೆಟ್ಟ ಸ್ಥಿತಿಯಲ್ಲಿವೆ. ಪ್ರವಾಸೋದ್ಯಮವನ್ನು ಅದ್ಭುತವಾಗಿ ಬೆಳೆಸಿಕೊಳ್ಳಲು ಅಗತ್ಯವಿರುವ ಎಲ್ಲ ಅಂಶಗಳು ಇದ್ದರೂ ಥಾಯ್ಲೆಂಡ್‌, ಮಲೇಶ್ಯಾದಂಥ ಪುಟ್ಟ ದೇಶಗಳು ಆಕರ್ಷಿಸುವಷ್ಟು ಪ್ರವಾಸಿಗರನ್ನು ಆಕರ್ಷಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ದೃಷ್ಟಿಯಿಂದಲಾದರೂ ತಾಜ್‌ ಹಾಗೂ ಈ ಮಾದರಿಯ ಎಲ್ಲ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವುದು ಅಗತ್ಯ.

Trending videos

Back to Top