CONNECT WITH US  

ರೈತರ ಸಂಕಟ-ಸರ್ಕಾರದ ಸಮಸ್ಯೆ

ಕಳೆದ 15 ದಿನದಲ್ಲಿ ರಾಜ್ಯದಲ್ಲಿ ಸುಮಾರು 28 ಮಂದಿ ರೈತರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಅರ್ಧಕ್ಕರ್ಧ ರೈತರು ಕಬ್ಬು ಬೆಳೆಗಾರರು. ಇನ್ನೊಂದು ಕೋನದಲ್ಲಿ ನೋಡಿದರೆ, ಕಬ್ಬು ಬೆಳೆಗಾರರಲ್ಲದ ರೈತರೂ ದೊಡ್ಡ ಪ್ರಮಾಣದಲ್ಲೇ ಸಂಕಷ್ಟದಲ್ಲಿದ್ದಾರೆ ಎಂಬುದು ಕಾಣಿಸುತ್ತದೆ. ಜೂನ್‌ ತಿಂಗಳ ಉತ್ತರಾರ್ಧದ ನಂತರ ಇದ್ದಕ್ಕಿದ್ದಂತೆ ರೈತರು ಜೀವ ತೆಗೆದುಕೊಳ್ಳುವಂತಹ ದುರ್ಘ‌ಟನೆಗಳು ಹಠಾತ್‌ ಏರಿಕೆಯಾಗಲು ಏನು ಕಾರಣ? ನಿಜಕ್ಕೂ ಇದು ಆಶ್ಚರ್ಯ ಮತ್ತು ಆಘಾತಕಾರಿ ಸಂಗತಿ.

ಕೊನೆಗೂ ಈ ವಿಷಯದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮೊನ್ನೆ ವಿಧಾನಸಭೆಯಲ್ಲಿ ರೈತರ ಹಿತರಕ್ಷಣೆಗೆ ನಾನಾ ಉಪಕ್ರಮಗಳನ್ನು ಪ್ರಕಟಿಸಿದೆ. ಅದರಲ್ಲಿ ರೈತರ ಆತ್ಮಹತ್ಯೆಯ ಕಾರಣ ಪತ್ತೆಗೆ ತಜ್ಞರ ಸಮಿತಿ, ಕೃಷಿ ಕ್ಷೇತ್ರದ ಒಟ್ಟಾರೆ ಸಮಸ್ಯೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ ನೀಡಲು ಕೃಷಿ ತಜ್ಞ ಸ್ವಾಮಿನಾಥನ್‌ ನೇತೃತ್ವದಲ್ಲಿ ವಿಷನ್‌ ಗ್ರೂಪ್‌ ರಚನೆ ಮುಂತಾದ ಹಲವಾರು ಸ್ವಾಗತಾರ್ಹ ನಿರ್ಧಾರಗಳಿವೆ.

ಆದರೆ ಇವ್ಯಾವುವೂ ತಕ್ಷಣಕ್ಕೆ ಫ‌ಲ ನೀಡುವ ಕ್ರಮಗಳೇನಲ್ಲ. ತಜ್ಞರ ಸಮಿತಿ ಹಾಗೂ ಸ್ವಾಮಿನಾಥನ್‌ ಸಮಿತಿ ವರದಿ ನೀಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಅದೇ ರೀತಿ 23 ಬರಪೀಡಿತ ತಾಲೂಕುಗಳಿಗೆ ಕೃಷಿಭಾಗ್ಯ ಯೋಜನೆ, ಕೃಷಿ ಉಪಕರಣಗಳ ಖರೀದಿ ಸಬ್ಸಿಡಿ ರೈತರ ಖಾತೆಗೆ ನೇರ ರವಾನೆ, ತೊಗರಿ ಮಂಡಳಿ ಪುನಶ್ಚೇತನ, ತೋಟಗಾರಿಕೆ ಬೆಳೆಗಾರರ ಒಕ್ಕೂಟ ರಚನೆ ಮುಂತಾದ ನಿರ್ಧಾರಗಳು ಜಾರಿಗೆ ಬರುವುದಕ್ಕೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಈಗ ನಡೆಯುತ್ತಿರುವ ಸಮೂಹ ಸನ್ನಿ ಮಾದರಿಯ ಆತ್ಮಹತ್ಯೆಗಳನ್ನು ನಿಯಂತ್ರಿಸುವವರು ಯಾರು? ಇದರ ಬಗ್ಗೆ ಸರ್ಕಾರ ಯೋಚಿಸಿದಂತಿಲ್ಲ.

ಕೆಲ ವರ್ಷಗಳಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಎಂಬ ಸಂಗತಿ ಪ್ರಸ್ತಾಪವಾದಾಗಲೆಲ್ಲ ಮಹಾರಾಷ್ಟ್ರದ ವಿದರ್ಭವನ್ನು ಉದಾಹರಣೆಯಾಗಿ ಕೊಡಲಾಗುತ್ತಿದೆ. ವಿದರ್ಭದ ರೈತರ ಸಾವಿನ ಬಗ್ಗೆ ಡಾಕ್ಯುಮೆಂಟರಿ, ಸಿನಿಮಾ, ಪುಸ್ತಕ ಹಾಗೂ ನಾಟಕಗಳು ಬಂದಿವೆ. ಮಹಾರಾಷ್ಟ್ರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ತಂದುಕೊಟ್ಟ ವಿದ್ಯಮಾನವದು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ರೈತರ ಸಾವಿನ ಪ್ರಕರಣಗಳ ವೇಗ ಎಷ್ಟಿದೆಯೆಂದರೆ, ರಾಜ್ಯ ಸರ್ಕಾರ ಇದನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕಕ್ಕೂ ಮಹಾರಾಷ್ಟ್ರಕ್ಕೆ ಬಂದಂತಹ ಕುಖ್ಯಾತಿ ಪ್ರಾಪ್ತವಾದೀತು. ಯಾವುದೇ ಕಾರಣಕ್ಕೂ ಇದು ಹಗುರವಾಗಿ ತೆಗೆದುಕೊಳ್ಳಬಹುದಾದ ಪ್ರಕರಣವಲ್ಲ.

ನಮ್ಮ ದೇಶ ಆಹಾರ ಭದ್ರತೆಯಲ್ಲಿ ಶ್ರೀಮಂತಿಕೆ ಸಾಧಿಸಿ ಹಲವು ವರ್ಷಗಳೇ ಆಗಿವೆ. ಆದರೆ, ಅದಕ್ಕೆ ಕಾರಣನಾದ ರೈತ ಮಾತ್ರ ಕಡುಬಡವನಾಗಿಯೇ ಉಳಿದಿದ್ದಾನೆ ಎಂಬುದು ವಿಪರ್ಯಾಸ. ಇದಕ್ಕೆ ರಾಷ್ಟ್ರೀಯ ಕೃಷಿ ನೀತಿಯಲ್ಲಿನ ಲೋಪಗಳೂ ಕಾರಣ. ರೈತರ ಕಷ್ಟಕ್ಕೆಲ್ಲ ರಾಜ್ಯ ಸರ್ಕಾರಗಳೇ ಹೊಣೆಯಾಗಿದ್ದಿದ್ದರೆ 30 ರಾಜ್ಯಗಳಲ್ಲಿ ಒಂದೆರಡು ರಾಜ್ಯಗಳಲ್ಲಾದರೂ ರೈತರು ಸ್ಥಿತಿವಂತರಾಗಿರಬೇಕಿತ್ತು.

ಆದರೆ, ರಾಜ್ಯ ಸರ್ಕಾರಗಳು ಕೈಗೊಳ್ಳುವ ಕೆಲ ವಿಪರೀತ ನಿರ್ಧಾರಗಳೂ ಕೃಷಿಕರ ಭವಿಷ್ಯಕ್ಕೆ ಕಂಟಕವಾಗುತ್ತವೆ ಎಂಬುದಕ್ಕೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಕೈಗೊಂಡ ಸಕ್ಕರೆ ಕಾರ್ಖಾನೆಗಳಲ್ಲಿನ ಸಕ್ಕರೆ ಜಪ್ತಿ ನಿರ್ಧಾರವೇ ಉದಾಹರಣೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸರ್ಕಾರ ನಿಗದಿಪಡಿಸಿರುವ ದರ ಪಾವತಿಸುತ್ತಿಲ್ಲವೆಂದು ಕಾರ್ಖಾನೆಗಳಲ್ಲಿನ ಸಕ್ಕರೆಯನ್ನು ಸರ್ಕಾರ ಜಪ್ತಿ ಮಾಡಿಕೊಂಡಿದೆ. ಆದರೆ, ವರ್ಷಂಪ್ರತಿ ರೈತರು ಕಾರ್ಖಾನೆಗೆ ತರುವ ಕಬ್ಬನ್ನು ಇನ್ನುಮುಂದೆ ಅರೆಯುವವರಾರು ಎಂಬುದನ್ನು ಸರ್ಕಾರ ಮುಂದಾಲೋಚಿಸಲಿಲ್ಲ. ಅದರ ಪರಿಣಾಮ ಈಗ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ತಮ್ಮ ಹೊಲದಲ್ಲಿ ಬೆಳೆದು ನಿಂತ ಕಬ್ಬನ್ನು ಕೊಳ್ಳುವವರಿಲ್ಲದೆ ಬೆಂಕಿ ಹಚ್ಚಿ, ಟ್ರಾಕ್ಟರ್‌ ಹರಿಸಿ ನಾಶಪಡಿಸುತ್ತಿದ್ದಾರೆ.
ಇಂತಹ ನಿರ್ಧಾರಗಳಿಂದ ರೈತರ ಸ್ಥಿತಿ ಸುಧಾರಿಸಲು ಯಾವತ್ತೂ ಸಾಧ್ಯವಿಲ್ಲ.


Trending videos

Back to Top