CONNECT WITH US  

ದೇಸಾಯಿ ರಿಟರ್ನ್ಸ್ ನಾನು ಹೇಳಿದ್ದನ್ನೇ ಮಾಡ್ತೀನಿ ...

ಸುನೀಲ್‌ಕುಮಾರ್‌ ದೇಸಾಯಿ ಅಂದಾಕ್ಷಣ, "ತರ್ಕ', "ನಿಷ್ಕರ್ಷ', "ಬೆಳದಿಂಗಳ ಬಾಲೆ', "ನಮ್ಮೂರ ಮಂದಾರ ಹೂವೇ,'  "ಸ್ಪರ್ಶ' ಹೀಗೆ ಒಂದಷ್ಟು  ಯಶಸ್ವಿ ಚಿತ್ರಗಳು ನೆನಪಿಗೆ ಬರುತ್ತವೆ. ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಚಿತ್ರಗಳನ್ನು ನೀಡಿರುವ ದೇಸಾಯಿ ಮತ್ತೆ  ಗಾಂಧಿನಗರಕ್ಕೆ  ಕಾಲಿಟ್ಟಿದ್ದಾರೆ. ಈ ಬಾರಿ ಅವರು ಹೊಸತೇನನ್ನೋ  ಕೊಡುವ ಉತ್ಸಾಹದಲ್ಲಿದ್ದಾರೆ. ಬಹುದೊಡ್ಡ  ಗ್ಯಾಪ್‌ ಬಳಿಕ ನಿರ್ದೇಶಿಸಿರುವ "... ರೆ' ಶೀರ್ಷಿಕೆಯ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ದೇಸಾಯಿ ಎಲ್ಲೋ ಮಾಯವಾಗಿಬಿಟ್ಟರು ಅನ್ನುವ ಮಂದಿಗೆ ಈಗ ಉತ್ತರವಾಗಿದ್ದಾರೆ. "... ರೆ' ನಿರ್ದೇಶಿಸಿರುವುದರ ಹಿಂದೆ ಅವರು ಪಟ್ಟ ಕಷ್ಟ, ಎದುರಿಸಿದ ಸಮಸ್ಯೆಗಳು ಮತ್ತು ಆ ಚಿತ್ರದ ಬಗ್ಗೆ ಅವರಿಗಿರುವ ಅಪಾರ ನಂಬಿಕೆ ಇತ್ಯಾದಿ ಕುರಿತು ಒಂದಷ್ಟು ಮಾತಾಡಿದ್ದಾರೆ.

ಓವರ್‌ ಟು ದೇಸಾಯಿ...
"ಈ ಸಲ ನಾನು ಗ್ಯಾರಂಟಿ ಬೈಸಿಕೊಳ್ಳುವುದಿಲ್ಲ. ಹಂಡ್ರೆಡ್‌ ಪರ್ಸೆಂಟ್‌ ನಿಮಗೆ ಖುಷಿಯಾಗುವ ಚಿತ್ರವನ್ನೇ ಕೊಡ್ತೀನಿ. ನಾನು ತುಂಬಾ ಇಷ್ಟಪಟ್ಟು, ಗೆಲ್ಲಲೇಬೇಕು ಎಂಬ ಛಲದಿಂದ ಮಾಡಿದ ಚಿತ್ರವಿದು. ಹಾಗಾಗಿ ಯಾರಿಗೂ ಬೇಸರವಾಗುವುದಿಲ್ಲ ಎಂಬ ನಂಬಿಕೆ ನನಗಿದೆ. ಇಲ್ಲಿ ಶೀರ್ಷಿಕೆ ವಿಭಿನ್ನ. ಅದಕ್ಕೆ ಕಾರಣವೂ ಇದೆ. ಚಿತ್ರಕ್ಕೆ ಪೂರಕವಾಗಿಯೂ ಇದೆ. ಲೈಫ‌ಲ್ಲೆ "ರೆ' ಎಂಬ ಪದ ತುಂಬ ಮುಖ್ಯ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.

"ನಾನು ಹಾಗೆ ಆಗಿಬಿಟ್ಟರೆ, ಅದು ಸಿಕ್ಕಿಬಿಟ್ಟರೆ, ಮಾಡುವುದಾದರೆ, ಬರುವುದಾದರೆ, ಹೀಗೆ ಆಗುವುದಾದರೆ ...' ಈ "ರೆ' ಎಂಬ ಪದ ಬಳಕೆ ಸಾಮಾನ್ಯವಾಗಿದ್ದರೂ ಅದಕ್ಕೊಂದು ಮಹತ್ವ ಇದೆ. ಅದು ಈ ಚಿತ್ರದಲ್ಲೂ ಇದೆ. ಅದೇ ಚಿತ್ರದ ಸಸ್ಪೆನ್ಸ್‌. ಇನ್ನು, ಎಷ್ಟೋ ಜನ ನನ್ನನ್ನು ಭೇಟಿ ಮಾಡಿದಾಗೆಲ್ಲ, ಕೇಳುತ್ತಿದ್ದರು, ಯಾಕೆ ನೀವು ಸಿನಿಮಾ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದೀರಿ ಅಂತ. ಇನ್ನು ಕೆಲವರು ನನ್ನ ಹಳೆಯ ಯಶಸ್ವಿ ಚಿತ್ರಗಳ ಬಗ್ಗೆ ಮಾತಾಡುತ್ತಲೇ ನೀವು ಹಿಂದಿನ ರೀತಿಯ ಚಿತ್ರ ಯಾಕೆ ಮಾಡಬಾರದು ಎನ್ನುತ್ತಿದ್ದರೆ ಹೊರತು, ಯಾರೂ ಧೈರ್ಯ ತುಂಬಿ ನಾವಿದ್ದೇವೆ ಮಾಡಿ ಸಾರ್‌ ಅನ್ನುತ್ತಿರಲಿಲ್ಲ. ನಾನು ಇಷ್ಟು ವರ್ಷ ಚಿತ್ರ ಮಾಡದೇ ಇರುವುದಕ್ಕೆ ಹಲವು ಕಾರಣಗಳಿವೆ. ಅವುಗಳನ್ನೆಲ್ಲಾ ವಿಚಾರ ಮಾಡಲು ಹೋದರೆ ಉತ್ತರ ಸಿಗುವುದಿಲ್ಲ. ಎಷ್ಟೋ ಸಲ ನಾನು ಸಿನಿಮಾ ಮಾಡಬೇಕು ಅಂತ ಹೋಗಿದ್ದೂ ಇದೆ. ಆದರೆ, ಅದು ಆಗುತ್ತಿರಲಿಲ್ಲ. ಯಾಕೆ ಆಗಲಿಲ್ಲ  ಅನ್ನುವ ಪ್ರಶ್ನೆಗೆ ಈಗಲೂ ನಾನು ಉತ್ತರ ಹುಡುಕುತ್ತಿದ್ದೇನೆ ಸಿಕ್ಕಿಲ್ಲ' ಎನ್ನುತ್ತಾರೆ ದೇಸಾಯಿ.

ದೇಸಾಯಿ ಅವರನ್ನು ಹುಡುಕಿಕೊಂಡು ಅದೆಷ್ಟೋ ಜನ ಬರುತ್ತಿದ್ದರಂತೆ. ಸಿನಿಮಾ ಮಾಡೋಣ ಎನ್ನುತ್ತಿದ್ದರಂತೆ. ಆದರೆ, ಬಹಳಷ್ಟು ಕೈಗೂಡಲಿಲ್ಲ ಎನ್ನುತ್ತಾರೆ ಅವರು. "ಅದೆಷ್ಟೋ ಜನ ಬರುತ್ತಿದ್ದರು. ಸಾರ್‌, ನಿಮ್ಮ ಜತೆ ಒಂದು ಸಿನಿಮಾ ಮಾಡಬೇಕು ಅಂತ ಇದ್ದೇವೆ ಅನ್ನೋರು. ಅವರ ಮಾತಿನಿಂದ ಖುಷಿಯಾಗುತ್ತಿದ್ದ ನಾನು, ಒಂದು ಕಥೆ ಹೇಳುತ್ತಿದ್ದೆ. ನನ್ನ ಆ ಕಥೆ ಕೇಳ್ಳೋರು, ನಕ್ಕು ಆಮೇಲೆ ಫೋನ್‌ ಮಾಡ್ತೀವಿ ಸರ್‌ ಅಂತ ಹೋಗುತ್ತಿದ್ದರು. ಪುನಃ ಅವರ ಸುದ್ದಿನೇ ಇರುತ್ತಿರಲಿಲ್ಲ. ಯಾಕೆ ಹಾಗಾಗುತ್ತಿತ್ತೆಂಬುದು ಗೊತ್ತಾಗುತ್ತಿರಲಿಲ್ಲ. ನನಗೇ ಕಥೆ ಹೇಳಲಿಕ್ಕೆ ಬರುತ್ತಿರಲಿಲ್ಲವೋ ಅಥವಾ ನನ್ನ ಕಥೆ ಅವರಿಗೆ ಅರ್ಥವಾಗುತ್ತಿರಲಿಲ್ಲವೋ ಎಂಬುದು ನನ್ನಲ್ಲೇ ಪ್ರಶ್ನೆ ಮೂಡುತ್ತಿತ್ತು. "... ರೆ' ಎರಡು ವರ್ಷಗಳ ಹಿಂದೆಯೇ ಶುರುವಾಗಿತ್ತು. ಕಾರಣಾಂತರಗಳಿಂದ ತಡವಾಯ್ತು.
ನನ್ನನ್ನು ಬಹಳಷ್ಟು ಅರ್ಥ ಮಾಡಿಕೊಂಡು ಸಿನಿಮಾ ಮಾಡೋಕೆ ಮುಂದೆ ಬಂದಿದ್ದು ಲೋಕೇಶ್‌. ನಾನು ಹೇಳಿದ ಕಥೆ ಅವರಿಗೆ ಇಷ್ಟವಾಯಿತು. ಹಿಂದೆ ಮುಂದೆ ನೋಡದೆ, ನಿಮ್ಮ ಹಿಂದೆ ನಾನಿದ್ದೇನೆ ಶುರುಮಾಡಿ ಅಂತ ಸಹಕಾರ ನೀಡಿದರು. ಚಿತ್ರ ಪೂರ್ಣಗೊಂಡು ರಿಲೀಸ್‌ಗೆ ರೆಡಿಯಾಗಿದೆ. ನಿರ್ಮಾಪಕ ಲೋಕೇಶ್‌ ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ನನ್ನನ್ನು ಸಹಿಸಿಕೊಂಡಿದ್ದಕ್ಕೆ ಮತ್ತು ಅವರು ತಾಳ್ಮೆಯಿಂದ ಇದ್ದುದಕ್ಕೆ ಈ ಚಿತ್ರ ಕಂಪ್ಲೀಟ್‌ ಆಗಿದೆ. ಈ ಚಿತ್ರ ಬೇರೆ ಕ್ಯಾನ್‌ವಾಸ್‌ನಲ್ಲಿದೆ. ಈ ಕಥೆಯನ್ನು ಈಗ ನಾನೇ ಹೇಳ್ಳೋಕೆ ಹೊರಟರೆ, ಬಹುಶಃ ಯಾರಿಗೂ ಅರ್ಥ ಆಗೋದಿಲ್ಲ. ನೋಡ್ತಾ ನೋಡ್ತಾ, ಹೊಸ ಅನುಭವ ಕೊಡುತ್ತೆ. ನೋಡೋರಿಗೆ ಮನರಂಜನೆ ಕೊಡುವುದಷ್ಟೇ ಈ ಸಿನಿಮಾದ ಉದ್ದೇಶ ಎನ್ನುತ್ತಾರೆ ದೇಸಾಯಿ.

ಈ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿಂದ ಮಾತನಾಡುವ ಅವರು, "ಎಷ್ಟೋ ಜನ ಆಡಿಕೊಳ್ತಾರೆ. ದೇಸಾಯಿ 80 ವರ್ಷ, 70 ಮತ್ತು 50 ವರ್ಷದ ನಂತರದವರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಅವರನ್ನೆಲ್ಲಾ ಇಟ್ಟುಕೊಂಡು ಎಂಥಾ ಸಿನಿಮಾ ಮಾಡಿದ್ದಾರೋ ಏನೋ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ನೋಡ್ತಾ ಇರಿ, ಅಂಥವರಿಗೆ ಈ ಚಿತ್ರ ಏನು ಅನ್ನೋದನ್ನು ಸಾಬೀತುಪಡಿಸುತ್ತೆ. ಹಳಬರಾಗಿದ್ದರೂ ಇಲ್ಲಿ ಸೊಗಸು, ಸೊಗಡಿದೆ. ಅನುಭವಸ್ಥರ ಸಿನಿಮಾ ಆಗಿರುವುದರಿಂದ ನೋಡೋರಿಗೆ ಅಪ್ಪಟ ಮನರಂಜನೆ ಸಿಗುತ್ತೆ. ರಮೇಶ್‌ ಅರವಿಂದ್‌, ಅನಂತ್‌ನಾಗ್‌, ಲೋಕನಾಥ್‌, ಜಿ.ಕೆ.ಗೋವಿಂದರಾವ್‌ ಇಂತಹ ಅನುಭವಿ ಕಲಾವಿದರ ಶ್ರದ್ಧೆಯ ಕೆಲಸ ಸಿನಿಮಾದ ಪ್ಲಸ್‌ಪಾಯಿಂಟ್‌. ಇದೊಂದು ಪರಿಪೂರ್ಣ ಸಿನಿಮಾ ಎಂಬುದನ್ನು ನೋಡಿದ ಜನರೇ ಹೇಳುತ್ತಾರೆ ಆ ನಂಬಿಕೆ ನನಗಿದೆ ಎನ್ನುತ್ತಲೇ ಸುಮ್ಮನಾಗುತ್ತಾರೆ ಸುನೀಲ್‌ಕುಮಾರ್‌ ದೇಸಾಯಿ.

*ವಿಭ

Trending videos

Back to Top