CONNECT WITH US  

ಸ್ಲಮ್‌ ಹುಡುಗನ ಸೆಳೆತ

ಹಾಗೂ ಆಗಬಹುದು; ಹೀಗೂ ಆಗಬಹುದು

ಕೆಲವು ವರ್ಷಗಳ ಹಿಂದೆ ಧನಂಜಯ್‌ ಅಲಿಯಾಸ್‌ ಡಿಜೆ ಒಂದು ಚಿತ್ರ ನಿರ್ಮಾಣ ಮಾಡುತ್ತೀನಿ ಅಂತ ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹತ್ತಿರ ಬಂದರಂತೆ. ಸ್ವಂತ ಬಿಝಿನೆಸ್‌ ಇದೆ, ನಂಬಿದವರು ಇದ್ದಾರೆ ... ಹೀಗಿರುವಾಗ ಯಾವುದಕ್ಕೂ, ಯಾರಿಗೂ ಸಮಸ್ಯೆ ಆಗಲಿಲ್ಲ ಎಂದರೆ ಮಾತ್ರ ಸಿನಿಮಾ ಮಾಡಿ, ಸುಮ್ಮನೆ ರಿಸ್ಕ್ ತೆಗೆದುಕೊಳ್ಳಬೇಡಿ ಅಂತ ಹೇಳಿ ಕಳುಹಿಸಿದರಂತೆ ರಾಕ್‌ಲೈನ್‌. ವಾಪಸ್ಸು ಹೋದ ಡಿಜೆ, ಕೆಲವು ವರ್ಷಗಳ ನಂತರ ಬಂದು, "ಚಿತ್ರ ನಿರ್ಮಾಣ ಮಾಡೋಕೆ ರೆಡಿ, ಈಗ ಯಾವ ಸಮಸ್ಯೆಯೂ ಇಲ್ಲ' ಅಂದರಂತೆ. ಹಾಗೆ ಶುರುವಾದ ಚಿತ್ರವೇ "ಕರ್ಷಣಂ'.

"ಕರ್ಷಣಂ' ಇದೀಗ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯೂ ಆಗಲಿದೆ. ಈ ಚಿತ್ರವನ್ನು ನಿರ್ಮಿಸಿರುವುದಷ್ಟೇ ಅಲ್ಲ, ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ ಡಿಜೆ. ಈ ಚಿತ್ರವನ್ನು ಶರವಣ ಎನ್ನುವವರು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾದವು. ಅಶ್ವಿ‌ನಿ ಆಡಿಯೋ ಹೊರತಂದಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಹಿರಿಯ ನಟ ಜಿ.ಕೆ. ಶ್ರೀನಿವಾಸಮೂರ್ತಿ ಬಂದಿದ್ದರು.

ಧನಂಜಯ್‌ ಸುಮಾರು 11 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವರು. ಆ ಸಂದರ್ಭದಲ್ಲಿ ಉಪೇಂದ್ರ ಅಭಿನಯದ "ಬುದ್ಧಿವಂತ', ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಮೂರು ಚಿತ್ರಗಳು, "ಮುಂಜಾವು', "ಪರಿಣಿತ' ಮತ್ತು "ಚಿತ್ರಲೇಖ' ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದರಂತೆ. ಆ ನಂತರ ಬಿಝಿನೆಸ್‌ ವಿಸ್ತರಿಸುವುದಕ್ಕೆ ಮುಂದಾದ ಅವರು, ಇದೀಗ "ಕರ್ಷಣಂ' ಚಿತ್ರದ ಮೂಲಕ ಬಂದಿದ್ದಾರೆ. "ಕರ್ಷಣಂ' ಎನ್ನುವುದು ಸಂಸ್ಕೃತ ಮೂಲದ ಹಳೆಗನ್ನಡ ಪದ ಎನ್ನುವ ಅವರು, "ಹಾಗೆಂದರೆ ಸೆಳೆತ ಎಂದರ್ಥ. ಆಕರ್ಷಣೆ, ವಿಕರ್ಷಣೆ ಗೊತ್ತು. ಆದರೆ, ಇದೊಂದು ನ್ಯೂಟ್ರಲ್‌ ಆದಂತಹ ಪದ.  ಹಾಗೂ ಆಗಬಹುದು, ಹೀಗೂ ಆಗಬಹುದು. ಸ್ಲಮ್‌ನಲ್ಲಿರುವ ಹುಡುಗನ ಸುತ್ತ ಈ ಕಥೆ ಸುತ್ತುತ್ತದೆ. ಮೂಲತಃ ಅವನು ಸ್ಲಮ್‌ನವನಲ್ಲ. ಆದರೆ, ಏಕೆ ಅಲ್ಲಿರುತ್ತಾನೆ ಎನ್ನುವುದೇ ಚಿತ್ರದ ಕಥೆ' ಎಂದು ಒನ್‌ಲೈನ್‌ ಹೇಳಿದರು ಡಿಜೆ.

ನಿರ್ದೇಶಕ ಶರವಣ ಅವರಿಗೆ ಇದು ಮೊದಲ ಚಿತ್ರ. ಇದಕ್ಕೂ ಮುನ್ನ ಹಲವು ವರ್ಷಗಳ ಕಾಲ ಕಿರುತೆರೆಯಲ್ಲಿದ್ದ ಅವರು, ಶ್ರೀನಿವಾಸಮೂರ್ತಿ ಅವರ ಗರಡಿಯಿಂದ ಬಂದವರು. "ಇವತ್ತು ನಾನು ಏನಾದರೂ ಕಲಿತಿದ್ದೀನಿ ಎಂದರೆ, ಅದು ಮೂರ್ತಿಗಳಿಂದ. "ಅಣ್ಣ ಬಸವಣ್ಣ' ಧಾರಾವಾಹಿಯಿಂದ ನನ್ನ ಕೆರಿಯರ್‌ ಶುರುವಾಯಿತು. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಗುರಿ ಸಾಧನೆಗೆ ಬೇರೆಯವರನ್ನ ತುಳಿಯಬಾರದು ಎಂಬ ಸಂದೇಶವಿರುವ ಚಿತ್ರ ಇದು' ಎಂದು ಶರವಣ ಹೇಳಿಕೊಂಡರು.

ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಶರವಣ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಹೇಳಿದರೆ, ರಾಕ್‌ಲೈನ್‌ ವೆಂಕಟೇಶ್‌ ಅವರು ಧನಂಜಯ್‌ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಇಬ್ಬರೂ ಚಿತ್ರತಂಡಕ್ಕೆ ಶುಭ ಹಾರೈಸಿ ತಮ್ಮ ಮಾತುಗಳನ್ನು ಮುಗಿಸಿದರು. ವೇದಿಕೆಯ ಮೇಲೆ ನಟ ವಿಜಯ್‌ ಚೆಂಡೂರ್‌, ಸಂಗೀತ ನಿರ್ದೇಶಕ ಹೇಮಂತ್‌ ಕುಮಾರ್‌, ಛಾಯಾಗ್ರಾಹಕ ಮೋಹನ್‌ ಮುಗುದೇಶ್ವರನ್‌ ಮುಂತಾದವರು ಇದ್ದರು.

Trending videos

Back to Top