CONNECT WITH US  

ಕಾಗೋಡು ನಿವೃತ್ತಿ ವಿಷಾದಯೋಗ!

ಗೆಲುವಿನ ನಗೆಯಡಿ ನಿವೃತ್ತಿ ಘೋಷಿಸಬೇಕೆಂಬ ಬಯಕೆ ಭಗ್ನ

ಶಿವಮೊಗ್ಗ: ಹಿರಿಯ ಸಮಾಜವಾದಿ ಹೋರಾಟಗಾರ ಕಾಗೋಡು ತಿಮ್ಮಪ್ಪನವರ ರಾಜಕೀಯ ನಿವೃತ್ತಿ ಕೊನೆಗೂ ವಿಷಾದಯೋಗವಾಗಿ ಹೋಯಿತು. ಇದೇ ತಮ್ಮ ಕೊನೆ ಚುನಾವಣೆ ಎಂದು 2013ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕಾಗೋಡು ತಿಮ್ಮಪ್ಪ, ಬಳಿಕ 2018ರ ಚುನಾವಣೆಯಲ್ಲಿಯೂ ಸ್ಪರ್ಧಿಸುವ  ಮನಸ್ಸು ಮಾಡಿದರು. ಗೆಲುವಿನ ಹುಮ್ಮಸ್ಸು ಅವರಲ್ಲಿತ್ತು. ಈ ಚುನಾವಣೆಯ ಬಳಿಕ ನಿವೃತ್ತಿ ಘೋಷಿಸಲು ಸಿದ್ಧತೆ ಮಾಡಿಕೊಂಡಿದ್ದ 86 ವರ್ಷ ಹರೆಯದ ಅತ್ಯಂತ ಹಿರಿಯ ರಾಜಕಾರಣಿ ಕಾಗೋಡು ಅವರ ಗೆಲುವಿನ ಕನಸು ಕೊನೆಗೂ ಭಗ್ನವಾಗಿದೆ.

1967ರಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಆ ಚುನಾವಣೆಯಲ್ಲಿ ಅವರು ಗೆಲ್ಲಲಾಗಲಿಲ್ಲ. ನಂತರ 1972ರಲ್ಲಿ ಗೆಲುವು ಸಾಧಿಸಿದರು. ರಾಜಕೀಯ ಜೀವನದುದ್ದಕ್ಕೂ ಸೋಲು ಗೆಲುವಿನ ಆಟದಲ್ಲಿಯೇ ಮುಂದುವರೆದರು. ಆದರೆ ಅವರ ರಾಜಕೀಯ ಸೋಲು ಕಂಗೆಡುವಂತೆ ಮಾಡಿದ್ದು
2004ರಲ್ಲಿ. ತಮ್ಮ ಸೋದರಳಿಯ ಬೇಳೂರು ಗೋಪಾಲಕೃಷ್ಣ ಅವರು ಬಂಗಾರಪ್ಪ ನೆರಳಲ್ಲಿ ಇಲ್ಲಿಗೆ ಬಂದು ತಮ್ಮ ವಿರುದ್ದ ಸಡ್ಡು ಹೊಡೆದಿದ್ದು, ತಮ್ಮನ್ನು ಸೋಲಿಸಿದ್ದು ಅವರನ್ನು ಕಂಗಾಲಾಗುವಂತೆ ಮಾಡಿತ್ತು. ಆದರೆ, ಆ ಬಳಿಕ ಅರಣ್ಯ ಹಕ್ಕು ಹೋರಾಟ, ಬಗರ್‌ ಹುಕುಂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ 2008ರಲ್ಲಿ ಪುನಃ ಇದೇ ಬೇಳೂರು ಮತ್ತೂಮ್ಮೆ ಸೋಲನ್ನು ಉಣಿಸಿದರು. 2013ರಲ್ಲಿ ಈ ಸೋಲಿನಿಂದ ಹೊರಬರಲು ಇನ್ನಿಲ್ಲದ ಸಾಹಸ ಮಾಡಿ, ಕೊನೆಗೂ ಗೆಲುವು ಸಾಧಿಸಿದರು. ಆ ಗೆಲುವಿನ ಬಳಿಕ ಸಚಿವರಾಗಬೇಕೆಂಬ ಆಸೆಗೆ ಸಿದ್ದರಾಮಯ್ಯ ತಣ್ಣೀರೆರಚಿ ಸಭಾಧ್ಯಕ್ಷರನ್ನಾಗಿ ಮಾಡಿದಾಗಲೇ ನಿಜವಾಗಿಯೂ ಅವರು ಹೀರೋ ಆಗಿದ್ದು. ನಂತರ ಸಚಿವರಾದರೂ ಅವಧಿ ಕಡಿಮೆ ಇದ್ದುದರಿಂದ ತಮ್ಮ ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲಾಗಲಿಲ್ಲ. ಇದರ ನಡುವೆಯೇ ಎದುರಾದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಎದುರು ಬೇಳೂರು ಗೋಪಾಲಕೃಷ್ಣ ಬಿಜೆಪಿಯಿಂದ ಸ್ಪರ್ಧಿಸುವ ಸುದ್ದಿಯಿತ್ತು. ಕೊನೆಗಳಿಗೆಯಲ್ಲಿ ಅದು ಕೈತಪ್ಪಿ ಹೋದಾಗ ಕಾಗೋಡು ತಿಮ್ಮಪ್ಪ ಮತ್ತವರ ಬಳಗ
ನಿಜವಾಗಿಯೂ ನಿರಾಳರಾಗಿದ್ದರು. ಹರತಾಳು ಹಾಲಪ್ಪ ದುರ್ಬಲ ಎಂದೇ ಭಾವಿಸಿದ್ದರು. ಆದರೆ, ಚುನಾವಣೆ ಫಲಿತಾಂಶ ಬಂದಾಗ ನಿಜವಾಗಿಯೂ ಅವರಿಗೆ ಅಘಾತ ಕಾದಿತ್ತು. ರಾಜಕೀಯ ನಿವೃತ್ತಿಯನ್ನು ಗೆಲುವಿನ ನಗೆಯ ಅಡಿಯಲ್ಲಿ ಘೋಷಿಸಬೇಕೆಂಬ ಅವರ ಬಯಕೆ ಭಗ್ನವಾಗಿ ಹೋಗಿತ್ತು. ಕಾಗೋಡು ತಿಮ್ಮಪ್ಪನವರು ಎಸ್‌. ಬಂಗಾರಪ್ಪನವರ ಇನ್ನೋರ್ವ ಶಿಷ್ಯ ಹರತಾಳು ಹಾಲಪ್ಪ ಅವರ ಎದುರು ಸೋತು ಹೋಗಿದ್ದರು. ವಿಷಾದ
ಯೋಗ ಮನೆ ಬಾಗಿಲಿಗೆ ಬಂದು ನಿಂತಿತ್ತು.

ಗೋಪಾಲ್‌ ಯಡಗೆರೆ

Trending videos

Back to Top