CONNECT WITH US  

ಅರಸೀಕೆರೆಯಲ್ಲಿ ಎಮರ್ಜೆನ್ಸಿ ವಿರುದ್ಧ ಗುಡುಗಿದ್ದ ಅಟಲ್‌

ಹಾಸನ/ಅರಸೀಕೆರೆ: ಆಜಾತ ಶತ್ರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತುರ್ತು ಪರಿಸ್ಥಿತಿ ನಂತರ ನಡೆದ ಲೋಕಸಭಾ ಚುನಾವಣೆಯ ಪ್ರಚಾರ ಭಾಷಣಕ್ಕೆ ಹಾಸನ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದರು. ಅರಸೀಕೆರೆಯ ಕಳ್ಳನಕಟ್ಟೆ ಮೈದಾನ ಹಾಗೂ ಹಾಸನದ ಜ್ಯೂಬಿಲಿ ಮೈದಾನದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ವಾಜಪೇಯಿ ಭಾಷಣ ಕೇಳಲೆಂದೇ ಸಾವಿರಾರು ಜನರು ಸಭೆಯಲ್ಲಿ ಸೇರಿದ್ದರು.

ಜನತಾ ಪಾರ್ಟಿ ಅಭ್ಯರ್ಥಿ ಗೆಲುವು: ಪ್ರಪ್ರಥಮ ಬಾರಿಗೆ ಅರಸೀಕೆರೆ ನಗರಕ್ಕೆ ಭೇಟಿ ನೀಡಿದ್ದು, ಅಂದಿನ ಕಳ್ಳನಕಟ್ಟೆ ಮೈದಾನವಾಗಿದ್ದ ಇಂದಿನ ಬಸ್‌ನಿಲ್ದಾಣದ ಆವರಣದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಪ್ರಚಂಡ ಭಾಷಣ ಮಾಡುವ ಮೂಲಕ ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ನಂಜೇಶ್‌ಗೌಡರ ಗೆಲುವಿಗೆ ಕಾರಣರಾಗಿದ್ದರು.

ತದ ನಂತರ ದೇಶದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ನಗರದ ಅದೇ ಕಳ್ಳನಕಟ್ಟೆ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಲ್ಲದೇ ತಾಲೂಕಿನ ಬಾಣಾವರ ಗ್ರಾಮದಲ್ಲಿಯೂ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

ವಿದೇಶಾಂಗ ಸಚಿವರಾಗಿ ಬಂದ ಸಂದರ್ಭದಲ್ಲಿ ಅರಸೀಕೆರೆ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಎ.ಎಸ್‌.ಬಸವರಾಜು ಮತ್ತು ಬಿಜೆಪಿ ಮುಖಂಡರಾದ ಎನ್‌.ಸಿ.ಗೋವಿಂದರಾಜು, ಪುಕ್‌ರಾಜ್‌ ಜೈನ್‌, ಚಗನ್‌ಲಾಲ್‌ ಜೈನ್‌, ಶಿವನಂಜಪ್ಪ ಹಾಗೂ

ಗುರುಲಿಂಗಪ್ಪ ಮತ್ತಿತರ ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆ ಕುರಿತು ಅವರು ಸುದೀರ್ಘ‌ ಚರ್ಚೆಯನ್ನು ನಡೆಸುವ ಮೂಲಕ ತಾಲೂಕಿನ ಜನತೆಗೆ ಅತ್ಯಂತ ಪ್ರಿಯವಾದ ಮುತ್ಸದ್ಧಿ ರಾಜಕಾರಣಿ ಎನ್ನುವ ಕೀರ್ತಿಗೆ ಪಾತ್ರರಾಗಿ, ಅರಸೀಕೆರೆ ತಾಲೂಕಿನ ಬಹುತೇಕ ಬಿಜೆಪಿ ಹಿರಿಯ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಹತ್ತಿರದವರಾಗಿದ್ದರು.

ಹಾಸನದ ಕೇಂದ್ರ ಗ್ರಂಥಾಲಯದ ಮುಂಭಾಗ ಈಗಿನ ಕಲಾಭವನದ ಸ್ಥಳದಲ್ಲಿ ಸರಳವಾಗಿ ಏರ್ಪಡಿಸಿದ್ದ ವೇದಿಕೆಯಲ್ಲಿ ವಾಜಪೇಯಿ ಭಾಷಣ ಮಾಡುತ್ತಿದ್ದ ಸಂದರ್ಭವನ್ನು ನೆನಪಿಸಿಕೊಳ್ಳುವ ಈಗ 80ರ ಹರೆಯದಲ್ಲಿರುವ ಹಾಸನದ ಪಾಪಣ್ಣ ಅವರು, ಸಾವಿರಾರು ಜನರು ನಿಶ್ಯಬ್ಧವಾಗಿ ನಿಂತು ಭಾಷಣ ಆಲಿಸಿದರು. ಹಿಂದಿಯಲ್ಲಿ ಮಾಡಿದ ಭಾಷಣ ಹಿಂದಿ ಭಾಷೆಯ ಸೊಗಡು ಗೊತ್ತಿಲ್ಲದವರೂ ತದೇಕ ಚಿತ್ತದಿಂದ ಆಲಿಸಿದ್ದರು ಎಂದು ಸ್ಮರಿಸುತ್ತಾರೆ.

Trending videos

Back to Top