CONNECT WITH US  

ಮುಸಲಧಾರೆಗೆ ಮಲೆನಾಡಿಗರ ಜೀವನ ಅಯೋಮಯ

ಹಾಸನ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಭೂ ಕುಸಿತದಿಂದಾಗಿ ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆಗಳ ಸಂಪರ್ಕ, ವಿದ್ಯುತ್‌ ಕಡಿತವುಂಟಾಗಿ ದಿನ ನಿತ್ಯದ ಬದುಕಿಗೂ ಪರದಾಡುವಂತಾಗಿದೆ. ಕರಾವಳಿ - ರಾಜ್ಯದ ರಾಜಧಾನಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟ್‌, ರಾಜ್ಯ ಹೆದ್ದಾರಿ ಬಿಸಿಲೆ ರಸ್ತೆಯಲ್ಲಿಯೂ ಭೂ ಕುಸಿತವುಂಟಾಗಿದೆ. ಸಕಲೇಶಪುರ - ಸುಬ್ರಹ್ಮಣ್ಯ ನಡುವೆ ರೈಲು ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದು ನಾಲ್ಕು ದಿನಗಳಿಂದ ರೈಲು ಸಂಚಾರವೂ ಬಂದ್‌ ಆಗಿದೆ.  

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್‌ನಲ್ಲಿ ಕಳೆದ ಜನವರಿಯಿಂದ ಆಗಸ್ಟ್‌ವರೆಗೆ ಬಂದ್‌ ಮಾಡಲಾಗಿತ್ತು. ಶಿರಾಡಿಘಾಟ್‌ನಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಆಗಸ್ಟ್‌ ಮೊದಲ ವಾರ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ, ಧಾರಾಕಾರ ಮಳೆಗೆ ರಸ್ತೆ ಮೇಲೆಯೇ ಭೂಮಿ ಕುಸಿದಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಶಿರಾಡಿಯಲ್ಲಿ ಮತ್ತೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಬಿಸಿಲೆ - ಸುಬ್ರಹ್ಮಣ್ಯ ಮೂಲಕ ಕರಾವಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಭೂ ಕುಸಿತವುಂಟಾಗಿರುವುದರಿಂದ ಆ ರಸ್ತೆಯಲ್ಲೂ ಮೂರು ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರವಿದ್ದರೂ ವಾಹನಗಳ ದಟ್ಟಣೆಯಿಂದ ಗಂಟೆಗಟ್ಟಲೆ ಸಂಚಾರ ಬಂದ್‌ ಆಗುತ್ತಿದೆ. ಇನ್ನು ರೈಲು ಹಳಿಗಳ ಮೇಲೆ ಹಲವು ಕಡೆ ಭೂ ಕುಸಿತವುಂಟಾಗಿರುವುದರಿಂದ ರೈಲು ಸಂಚಾರವೂ ಮಂಗಳೂರಿಗೆ ಸ್ಥಗಿತವಾಗಿದೆ. ನೆರೆಯಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಜೀವನಾವಶ್ಯಕ ವಸ್ತುಗಳನ್ನು ಸಾಗಿಸಲೂ ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ರಸ್ತೆ ಮತ್ತು  ರೈಲು ಹಳಿಗಳ ಮೇಲೆ ಭೂ ಕುಸಿತವುಂಟಾಗಿರುವುದನ್ನು ತೆರವುಗೊಳಿಸಲೂ ಮಳೆ ಅಡ್ಡಿಯಾಗಿದೆ. ಪರಿಹಾರ ಕಾರ್ಯದಲ್ಲಿ ತೊಡಗಲು ಕಾರ್ಮಿಕರೂ ಹಿಂದೇಟು ಹಾಕುತ್ತಿದ್ದಾರೆ. ಕೆಲಸ ಮಾಡುವಾಗ ತಮ್ಮ ಮೇಲೆಯೇ ಭೂಮಿ ಕುಸಿಯಬಹುದೆದಂಬ ಆತಂಕದಿಂದ ಕಾರ್ಮಿಕರು ಕೆಲಕ್ಕೆ ಹೋಗುತ್ತಿಲ್ಲ.

ಹಾಗಾಗಿ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ. ಯಡಕುಮರಿ ಬಳಿ  ರೈಲು ಹಳಿಗಳ ಮೇಲೆ ಕುಸಿದಿದ್ದ ಗುಡ್ಡವನ್ನು ತೆರವುಗೊಳಿಸಲು ಹೋಗಿದ್ದ 16 ಕಾರ್ಮಿಕರು ಸತತ ಮಳೆಯಿಂದ ಹೊರ ಬರಲಾಗದೆ 24 ಗಂಟೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ, ಅವರನ್ನು ಪತ್ತೆ ಹಚ್ಚಿ ಶುಕ್ರವಾರ ಸಂಜೆ ಸಕಲೇಶಪುರಕ್ಕೆ ಕರೆತರಲಾಯಿತು. ಈ ಘಟನೆಯಿಂದ ಕಾರ್ಮಿಕರು ಪರಿಹಾರ ಕಾರ್ಯದಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದಾರೆ. 

ಸತತ ಮಳೆಯಿಂದ ಭೂ ಕುಸಿತವುಂಟಾಗಿ ಟ್ಯಾಂಕರ್‌ ಸಹಿತ ಪ್ರಪಾತಕ್ಕೆ ಬಿದಿದ್ದ ಚಾಲಕನ ಶವದ ಶೋಧ ನಡೆಯುತ್ತಿದ್ದರೂ ನಾಲ್ಕು ದಿನಗಳಿಂದ ಶವಪತ್ತೆ ಸಾಧ್ಯವಾಗಿಲ್ಲ. 


Trending videos

Back to Top