CONNECT WITH US  

ಗ್ರಾಪಂ ಸದಸ್ಯರು ಪಕ್ಷಾತೀತರಾಗಿರಬೇಕು

ಹಾಸನ: ಗಾಂಧೀಜಿ ಕಂಡ ಗ್ರಾಮಗಳ ಅಭಿವೃದ್ಧಿ ಕನಸು ನನಸಾಗಬೇಕಾದರೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರು ಪಕ್ಷಬೇಧವಿಲ್ಲದೆ ಕೆಲಸ ಮಾಡಬೇಕು ಎಂದು ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಅಣ್ಣಪ್ಪಶೆಟ್ಟಿ ಹೇಳಿದರು.

ಮಣಿಚನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಟಿ.ಸುಮಿತ್ರ ಮತ್ತು ಲೋಹಿತ್‌ರನ್ನು ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದಲೇ ರಾಜಕೀಯ ಪಕ್ಷಗಳ ಪ್ರವೇಶವಿಲ್ಲದೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಟಿ. ಸುಮಿತ್ರ, ಈ ಬಡಾವಣೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ತಾವು ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಕುಡಿಯುವ ನೀರು ಮತ್ತು ಸ್ವತ್ಛತೆಗೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಸಿದ್ದೇಗೌಡ ಮಾತನಾಡಿ, ವಿಜಯನಗರ ಬಡಾವಣೆ ಹಾಸನ ನಗರಸಭೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇತ್ತ ಗ್ರಾಮ ಪಂಚಾಯಿತಿಗೂ ಸೇರಿಲ್ಲ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸ್ಥಳೀಯ ಶಾಸಕರು ಹಾಗೂ ಈ ಹಿಂದೆ ಇದ್ದ ಪ್ರಾಧಿಕಾರದ ಅಧ್ಯಕ್ಷರ ಸಹಕಾರದಿಂದ ಕೆಲವೆಡೆ ಒಳಚರಂಡಿ ಕೆಲಸವಾಗಿದೆ. ಇನ್ನೂ ಅರ್ಧಭಾಗಕ್ಕೆ ಒಳಚರಂಡಿ ಆಗಿಲ್ಲ. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಕುಡಿಯುವ ನೀರಿಗೆ ಹಾಹಾಕಾರವಿದೆ. ಪ್ರಾಧಿಕಾರವು ಕೊಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಸುತ್ತಿದೆ.

ಆದರೂ ಪರಿಯಾರ ದೊರೆತಿಲ್ಲ. ಇಲ್ಲಿಂದ ಚುನಾುತರಾಗಿರುವ ಸದಸ್ಯರು ಕುಡಿಯುವ ನೀರಿನ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯಿಂದಲಾದರೂ ನೀರನ್ನು ನೀಡಿ ಜನರ ದಾಹವನ್ನು ನೀಗಿಸಬೇಕೆಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ನಾರಾಣಗೌಡ ಮಾತನಾಡಿ, ಈ ಹಿಂದೆ ನಗರಾಭಿವೃದ್ಧಿ ಸಚಿವರು ಬಡಾವಣೆಗೆ ಖುದ್ದು ಭೇಟಿ ನೀಡಿದ್ದರಿಂದ ಎರಡನೇ ಹಂತದ ಒಳಚರಂಡಿ ಕಾಮಗಾರಿ ಇನ್ನು ಒಂದು ತಿಂಗಳೊಳಗಾಗಿ ಪ್ರಾರಂಭವಾಗಲಿದೆ. ಕೆಲವು ಭಾಗಕ್ಕೆ ರಸ್ತೆ ಹಾಗೂ ಪಾರ್ಕ್‌ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಪುಟ್ಟಸ್ವಾಮಿಗೌಡ, ಚನ್ನೇಗೌಡರು, ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಹೇಮಣ್ಣ, ಸುರೇಶ್‌, ಶಿವಸ್ವಾಮಿ ಉಪಸ್ಥಿತರಿದ್ದರು.

 

Trending videos

Back to Top