CONNECT WITH US  

ಗಣಪನ ತಯಾರಿಕೆಗೆ ಮಣ್ಣಿನ ಪೂಜೆ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಗಣೇಶನ ಉತ್ಸವಕ್ಕೆ ವಿಶೇಷವಾದ ಗಣಪನನ್ನು ಕೂರಿಸಿ 52 ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ ಎಂದು ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್‌.ಅಶೋಕ್‌ ತಿಳಿಸಿದರು.

ಗಣಪತಿ ಆಸ್ಥಾನ ಮಂಟಪದಲ್ಲಿ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಣ್ಣಿನ ಪೂಜೆಯಲ್ಲಿ ಮಾತನಾಡಿದ ಅವರು, ಗಣಪತಿ ಪ್ರತಿಷ್ಠಾಪನೆಗೆ ಎಲ್ಲಾ ಜಾತಿ ಧರ್ಮಗಳ ಜನರೂ ಕೈಜೋಡಿಸುವುದು ಈ ಉತ್ಸವದ ವಿಶೇಷ. 52 ದಿನಗಳ ಕಾಲವೂ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದು ಹೇಳಿದರು.

ಪುರಸಭಾಧ್ಯಕ್ಷ ಸಿ.ಜೆ.ನಟರಾಜ್‌ ಮಾತನಾಡಿ, ಇತ್ತೀಚೆಗೆ ಗಣಪತಿ ಆಸ್ಥಾನ ಮಂಟಪದ ಕಲ್ಯಾಣ ಮಂಟಪದ ಕೊಠಡಿಗಳ ಅಭಿವೃದ್ಧಿಗೆ 6 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ನಂತರದ ಕಂತಿನಲ್ಲಿ 4 ಲಕ್ಷ ರೂ. ನೀಡಲಾಗುವುದು. ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಪೊಲೀಸ್‌ ಠಾಣೆಗೆ 2 ಕಂತುಗಳಲ್ಲಿ ಒಟ್ಟು 8 ಲಕ್ಷ ರೂ. ಅನುದಾನ ನೀಡಲಾಗಿದೆ. ಇನ್ನಿತರ ಅಭಿವೃದ್ಧಿಗೆ ಒಟ್ಟು ಪುರಸಭೆ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಪಟ್ಟಣದ ಜನತೆ ತಮ್ಮ ಕಂದಾಯವನ್ನು ನಿಗದಿತ ಸಮಯದಲ್ಲಿ ಪಾವತಿಸಿದರೆ ಹೆಚ್ಚಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸಿ.ಕೆ. ಕುಸುಮಾರಾಣಿ ಮಾತನಾಡಿ, ಬಡವರಿಗೆ ಗಣಪತಿ ಆಸ್ಥಾನ ಮಂಟಪದಲ್ಲಿ ಕಡಿಮೆ ವೆಚ್ಚದಲ್ಲಿ ಸಮಾರಂಭ ನಡೆಸಲು ಅನುಕೂಲ ಕಲ್ಪಿಸಲಾಗುತ್ತಿದೆ. ಈ ಆಸ್ಥಾನ ಮಂಟಪಕ್ಕೆ ಶಾಸಕರ ನಿಧಿಯಿಂದಲೂ ಹಣ ನೀಡಿದ್ದು, ಪುರಸಭೆಯ 2ನೇ ಕಂತಿನ ಹಣವನ್ನು 4 ರೂ. ಜೊತೆಗೆ ಇನ್ನು 2 ಲಕ್ಷ ಸೇರಿಸಿ 6 ಲಕ್ಷ ರೂ. ನೀಡುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ. ಕೃಷ್ಣ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್‌, ಸದಸ್ಯರಾದ ನವೀನ್‌, ಪ್ರಸನ್ನ ಗಣಪತಿ ಸೇವಾ ಸಮಿತಿ ಗೌರವಾಧ್ಯಕ್ಷ ಪಟೇಲ್‌ ಮಂಜುನಾಥ್‌, ಉಪಾಧ್ಯಕ್ಷ ಸಿ.ಕೆ.ಕೃಷ್ಣ, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಸಹಕಾರ್ಯದರ್ಶಿ ಪ್ರಕಾಶ್‌ ಜೈನ್‌, ಖಜಾಂಚಿ ಲ.ನಾ. ಗುಪ್ತ ಉಪಸ್ಥತರಿದ್ದರು.
 

Trending videos

Back to Top