CONNECT WITH US  

"ಕವಿಯಾಗಲು ಆಮಿಷ ಗೆಲ್ಲುವುದು ಮುಖ್ಯ'

ಮುಂಬಯಿ: ಮೈಸೂರು ಅಸೋಸಿಯೇಶನ್‌ಗೆ 90ವರ್ಷ ತುಂಬಿದ ಸವಿನೆನಪಿಗಾಗಿ ಜಾಗತಿಕ ಮಟ್ಟದಲ್ಲಿ ಕವನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ನೇಸರು  ಜಾಗತಿಕ ಕನ್ನಡ ಕವನ ಸ್ಪರ್ಧೆ - 2016 ರ ಫಲಿತಾಂಶ ಘೋಷಣೆ, ವಿಜೇತರಿಗೆ ಸಮ್ಮಾನ, ಬಹುಮಾನ ವಿತರಣೆ ಹಾಗೂ ಮೈಸೂರು ಅಸೋಸಿಯೇಶನಿನ ಮುಖ ವಾಣಿ ನೇಸರು ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭವು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನಿನ ಸಭಾ ಗೃಹದಲ್ಲಿ ನಡೆಯಿತು. ಪದ್ಮನಾಭ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಮುಖ್ಯ ಅತಿಥಿಯಾಗಿ  ಕವಿ ಡಾ| ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ ಅವರು ಉಪಸ್ಥಿತರಿದ್ದು, ದೀಪ ಬೆಳಗಿಸಿ  ಕಾರ್ಯಕ್ರಕ್ರಮಕ್ಕೆ ಚಾಲನೆ ನೀಡಿ ವಿಜೇತರನ್ನು ಅಭಿನಂದಿಸಿದರು. 

ಮೈಸೂರು ಅಸೋಸಿ ಯೇಶನಿನ ತನ್ನ ನಿಡಿದಾದ 90 ವರ್ಷಗಳ ಸಾಮಾಜಿಕ, ಸಾಂಸ್ಕೃತಿಕ ಕೈಂಕರ್ಯದ ಈ ಸುವರ್ಣ ಅಧ್ಯಾಯ ಇವತ್ತು ಜಾಗತಿಕ ಮಟ್ಟದ ಕವಿತಾ  ಸ್ಪರ್ಧೆಯನ್ನು ಏರ್ಪಡಿಸಿ, ಅದರಲ್ಲಿ ವಿಜೇತರಾದವರನ್ನು ಕರೆಸಿ, ಸಮ್ಮಾನಿಸಿದ್ದು ಬಹಳ ಒಳ್ಳೆಯ ಕೆಲಸ.  ಹೊಸ ಪೀಳಿಗೆಯ ಲೇಖಕರನ್ನು ನೋಡಿ ದಾಗ, ವಯಸ್ಸಾದ ನನ್ನಂಥವರಿಗೆ ತುಂಬ ಸಂತೋಷವಾಗುತ್ತದೆ. ಯಾಕೆಂದರೆ ನಮ್ಮ ಹಿರಿಯರು ಯಾವ ಒಂದು ಕಾವ್ಯ ಪರಂಪರೆಯನ್ನು ಪ್ರಾರಂಭ ಮಾಡಿದರೋ ಅದನ್ನು ಮುಂದುವರಿಸುವಂತಹ ವಾರಿಸುದಾರರು ಇದ್ದಾರೆ ಅನ್ನೋದೇ ಬಹಳ ಸಂತೋಷದ ಮತ್ತು ಅಭಿಮಾನದ ಸಂಗತಿ. ಇವತ್ತು ವಿಜೇತರಾದ ಐದು ಕವಿಗಳಲ್ಲಿ ಮೂರು ಜನ ಮಹಿಳೆಯರೇ. ಇದು ನಿಧಾನವಾಗಿ ಕನ್ನಡ ಕಾವ್ಯ ಸಂದರ್ಭದಲ್ಲಿ ಗಟ್ಟಿಯಾದ ಒಂದು ಮಹಿಳಾ ದ್ವನಿ ರೂಪಿತವಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಹೊಸ ಕವಿಗಳು ನಮ್ಮ ದೊಡ್ಡ ಕಾವ್ಯ ಪರಂಪರೆಯನ್ನು ತಕ್ಕಮಟ್ಟಿಗಾದರೂ ಓದಿಕೊಂಡಿರಬೇಕು ಎಂಬ ಕಿವಿ ಮಾತನ್ನು ಹೇಳಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಡಾ| ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ ಅವರನ್ನು ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷೆ ಕೆ. ಕಮಲಾ ಮತ್ತು ಮಂಜುನಾಥಯ್ಯನವರು ಶಾಲು ಹೊದಿಸಿ, ಫಲ- ಪುಷ್ಪವನ್ನಿತ್ತು ಗೌರವಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನಿನ ಅಧ್ಯಕ್ಷೆ ಕೆ. ಕಮಲಾ ಅವರು,  ಕವನ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಭಿನಂದಿಸಿ ಮಾತನಾಡಿ, ಕವಿತೆ ಮಾತ್ರವಲ್ಲ ಯಾವುದೇ ಕಾರ್ಯ ಕ್ಷೇತ್ರದಲ್ಲೂ ಕೆಲಸ ಮಾಡಬೇಕಾದರೂ ಛಲ ಬಹಳ ಮುಖ್ಯ. ಮೈಸೂರು ಅಸೋಸಿಯೇಶನ್‌ ಶತಮಾನೋತ್ಸವವನ್ನು ಬಹಳ  ಅದ್ದೂರಿಯಾಗಿ  ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಪ್ರಮೋದಿನಿ ರಾವ್‌ ಅವರು ಪ್ರಶಸ್ತಿ ವಿಜೇತ ಕವನಗಳನ್ನು ರಾಗ ಹೊಂದಿಸಿ ಹಾಡುವುದರ ಜೊತೆಗೆ ಕನ್ನಡದ ಖ್ಯಾತ ಕವಿತೆಗಳನ್ನು ಹಾಡಿ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಮೋದಿನಿ ರಾವ್‌ ಅವರನ್ನು ಗೌರವಿಸಲಾಯಿತು. ಹಾರ್ಮೋನಿಯಂನಲ್ಲಿ ಸಹಕರಿಸಿದ ಪ್ರಮೋದಿನಿ ರಾವ್‌ ಅವರ ಅಕ್ಕ ಪ್ರತಿಮ ರಾವ್‌ ಹಾಗೂ ತಬಲಾದಲ್ಲಿ ಸಹಕರಿಸಿದ ಅನುಪಮ್‌ ಮಿಶ್ರ ಅವರನ್ನು ಸಮ್ಮಾನಿಸಲಾಯಿತು. ಜಾಗತಿಕ ಕವನ ಸ್ಪರ್ಧೆಗೆ ಅವಿರತವಾಗಿ ಶ್ರಮಿಸಿದ ನಾರಾಯಣ ನವಿಲೇಕರ್‌,  ನೇಸರು ಸಂಪಾದಕಿ ಡಾ| ಜ್ಯೋತಿ ಸತೀಶ್‌ ಅವರನ್ನು ಅಭಿನಂದಿಸಲಾಯಿತು. ಡಾ| ಮಂಜುನಾಥ್‌ ಅವರು ಕವನ ಸ್ಪರ್ಧೆಗೆ ತಮ್ಮ ಸಂಪೂರ್ಣ ಸಲಹೆ, ಸಹಕಾರ ನೀಡಿ ಸಹಕರಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸಿ,  ತೀರ್ಪುಗಾರರಾಗಿ ಸಹಕರಿಸಿದ ಹಿರಿಯ ಕವಿ ಬಿ. ಎಸ್‌. ಕುರ್ಕಾಲ್‌ ಹಾಗೂ ಡಾ| ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು. ರಮಾ ವಸಂತ ಅವರು ಕಾರ್ಯಕ್ರಮ ನಿರೂಪಿಸಿದರು.

ಮಂಜುನಾಥಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು ಅಸೋಸಿಯೇಶನ್‌ ಈ ಮಟ್ಟಕ್ಕೆ  ಬೆಳೆದು ಬರಲು ಹಲವಾರು ಮಹನೀಯರ ನಿರಂತರ ಪರಿಶ್ರಮವೇ ಕಾರಣ ಎಂದು ಹೇಳಿದರು. ನಾರಾಯಣ ನವಿಲೇಕರ್‌ ಅವರು ಕವನ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಘೋಷಣೆ ಮಾಡಿದರು.  ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಚೈತ್ರಿಕಾ ಶ್ರೀಧರ್‌ ಹೆಗಡೆ, ಛಾಯಾ ಭಗವತಿ, ವೀಣಾ ಬಡಿಗೇರ, ಗಣಪತಿ ದಿವಾಣ, ರಾಮಚಂದ್ರ ಪೈ ಮೂಡುಬಿದಿರೆ ಅವರನ್ನು ಡಾ| ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ ಅವರು ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.

Trending videos

Back to Top