CONNECT WITH US  

ಪರಸ್ಪರ ಸಾಮರಸ್ಯದಿಂದ ಕನ್ನಡ-ಮರಾಠಿ ಬಾಂಧವ್ಯ ಗಟ್ಟಿ

ಕಲ್ಯಾಣ್‌ ಕರ್ನಾಟಕ ಸಂಘದ ಮಹಾರಾಷ್ಟ್ರ  ದಿನಾಚರಣೆಯಲ್ಲಿ  ಶಾಸಕ ಗಾಯಕ್ವಾಡ್‌

ಮುಂಬಯಿ: ನಮ್ಮ ಜನ್ಮಭೂಮಿಯ ಸಂಸ್ಕೃತಿಯ ಜೊತೆಗೆ ಕರ್ಮಭೂಮಿಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡ ಮುಂಬಯಿ ಕನ್ನಡಿಗರು ಅಭಿನಂದನಾರ್ಹರು. ತುಳು-ಕನ್ನಡಿಗರು ಇಲ್ಲಿ ಹೊಟೇಲ್‌ ಉದ್ದಿಮೆಗಳನ್ನು ಪ್ರಾರಂಭಿಸಿ ಎಲ್ಲರೊಡನೆ ಒಂದಾಗಿ ಬಾಳುತ್ತಿದ್ದು, ಹೃದಯ ವೈಶಾಲ್ಯದಿಂದ ಮೆರೆಯುತ್ತಿದ್ದಾರೆ. ನಾವು ಮಹಾರಾಷ್ಟ್ರದಲ್ಲಿ ಒಂದಾಗಿ ಪರಸ್ಪರ ಸಂಸ್ಕೃತಿಯನ್ನು ಉಳಿಸಿ-ಬೆಳೆಸೋಣ ಎಂದು ಶಾಸಕ ಗಣಪತ್‌ ರಾವ್‌ ಗಾಯಕ್ವಾಡ್‌ ಹೇಳಿದರು.

ಮೇ 1ರಂದು ಕಲ್ಯಾಣ್‌ನ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ಡಾ| ಸುರೇಂದ್ರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಜರಗಿದ ಮಹಾರಾಷ್ಟ್ರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ತಮ್ಮ ಜೀವನದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಜನ್ಮಭೂಮಿ ಕರ್ನಾಟಕವನ್ನು ತೊರೆದು ಮಹಾರಾಷ್ಟ್ರದಲ್ಲಿ ನೆಲೆಸುವುದರ ಜತೆಗೆ ಕನ್ನಡಿಗರು ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಮೂಲಕ ಕನ್ನಡ-ಮರಾಠಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.

ಶಾಸಕ ನರೇಂದ್ರ ಪವಾರ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳು ಕನ್ನಡಿಗರಿಂದ ನಿರಂತರವಾಗಿ ನಡೆಯುತ್ತಿರಲಿ. ಅದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದರು. 

ನಗರ ಸಭಾ ಸದಸ್ಯ ಸಂಜಯ್‌ ಪಾಟೀಲ್‌ ಮಾತನಾಡಿ, ಜಾತಿ, ಮತ, ಧರ್ಮ, ಗಡಿಯನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಾವು ಬದುಕನ್ನು ಕಟ್ಟಬೇಕು. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾಲು ಅಪಾರ ಎಂದರು.

ಇದೇ ಸಂದರ್ಭದಲ್ಲಿ ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ಅತಿಥಿಗಳಿಗೆ ಹೂಮಾಲೆ ಹಾಕಿ, ಶಾಲು ಹೊದೆಸಿ, ಶ್ರೀಫಲ ಹಾಗೂ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.
ಕಲ್ಯಾಣ್‌ ಕರ್ನಾಟಕ ಸಂಘದ ಗಾಯಕ ಕೆ. ಎನ್‌. ಸತೀಶ್‌ ಮತ್ತು ಗುರುರಾಜ ಕಾಂಚಿಕರ ತಂಡದವರಿಂದ ಓಂಕಾರ ಸ್ವರೂಪ ಪ್ರಾರ್ಥನೆ, ಮಹಾರಾಷ್ಟ್ರ ಗೀತೆಗಳ ಗಾಯನ ಕಾರ್ಯಕ್ರಮ ಜರಗಿತು. ಸಂಘದ ಅಧ್ಯಕ್ಷ ಟಿ. ಎಸ್‌. ಉಪಾಧ್ಯಾಯ ಸ್ವಾಗತಿಸಿದರು.ನ್ಯಾಯವಾದಿ ನೂತನ ಹೆಗಡೆ ಮತ್ತು ನಂದಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಗೋಪಾಲ್‌ ಹೆಗ್ಡೆ ವಂದಿಸಿದರು. ಶ್ರೀಕಾಂತ್‌ ಸೊನಕರ ಅವರು ಡಾ| ಸುರೇಂದ್ರ ಶೆಟ್ಟಿ ಅವರ ಸಂದೇಶ ಪತ್ರವನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. 

ಗುರುದೇವ್‌ ಭಾಸ್ಕರ್‌ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಆರ್‌. ಬಿ. ಹೆಬ್ಬಳ್ಳಿ, ಗುರುರಾಜ ನಾಯಕ್‌, ಇಂ. ಸತೀಶ್‌ ಆಲಗೂರ, ಉಷಾ ವಾಲಂಜಿ, ವಿದ್ಯಾವತಿ ಆಲಗೂರ ಮೊದಲಾದವರು, ನಗರದ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡಿಗ ಕಲಾವಿದರಿಂದ ಮಹಾರಾಷ್ಟ್ರ ಲೋಕಗೀತೆಗಳ ಗಾಯನ, ಲಾವಣಿ ನೃತ್ಯ, ಕೋಲಿ ಜನಾಂಗ ಜನಜೀವನವನ್ನು ಬಿಂಬಿಸುವ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಕಲ್ಯಾಣ್‌ (ಪೂ.) ಕರ್ನಾಟಕ ಸಂಘದ ಕಲಾವಿದರಿಂದ ಆಯಿ ಕೊಲಿವಾಡಾಚಿ ಶಾನ, ಕರ್ನಾಟಕ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಕಲಾವಿದರಿಂದ ನೃತ್ಯ, ಕಲ್ಯಾಣ್‌ನ ಓಂ ಶಕ್ತಿ ಗ್ರೂಪ್‌ನ ಮಲ್ಹಾರಿ ವಾರಿ ಲಾವಣಿ ನೃತ್ಯ, ಜಯಂತಿ ಹೆಗಡೆ, ಯಶೋದಾ ಶೆಟ್ಟಿ ಅವರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿಲೇಶ್‌ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 

ಚಿತ್ರ-ವರದಿ : ಗುರುರಾಜ ಪೋತನೀಸ

Trending videos

Back to Top