CONNECT WITH US  

ಮೈಸೂರು ಅಸೋಸಿಯೇಶನ್‌ ಸದಸ್ಯೆ, ಕಲಾವಿದೆ ಗೀತಾ ವಿಶ್ವನಾಥ್‌ ನಿಧನ

ಮುಂಬಯಿ:  ಮೈಸೂರು ಅಸೋಸಿಯೇಶನ್‌ನ ಓರ್ವ ಉತ್ತಮ ಕಲಾವಿದ ಸದಸ್ಯೆ ಗೀತಾ ವಿಶ್ವನಾಥ್‌ ಮೇ 24ರಂದು  ಸಿಂಗಾಪುರದ ಮಗಳ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಗೀತಾ ವಿಶ್ವನಾಥ್‌ ಅವರು ಅಸೋಸಿಯೇಶನ್‌ನಲ್ಲಿ ಕಲಾ ವಿಭಾಗದ ಸಕ್ರಿಯ ಸದಸ್ಯೆಯಾಗಿದ್ದರು.  ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದೆಯಾಗಿದ್ದರು. ಅವರು ಬರೆದು ಪ್ರದರ್ಶಿಸಿದ ಹಲವು  ನೃತ್ಯ ರೂಪಕಗಳು ಈಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಶ್ಯಾಮಲಾ ದಂಡಕಮ್‌, ಕೋಳೂರು ಕೊಡಗೂಸು, ಶ್ರೀಕೃಷ್ಣ ಪಾರಿಜಾತ ಮೊದಲಾದವು   ಅವರ ಶ್ರೇಷ್ಠ ಪ್ರದರ್ಶನಗಳಾಗಿದ್ದವು. ಅವರು ಅನೇಕ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದರು. ಅವರು ಬರೆದ ಕಥಾ ಸಂಕಲನ ಮತ್ತು ಮನೋಚಿಕಿತ್ಸಕ ಲೇಖನಗಳ ಪುಸ್ತಕಗಳು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿವೆ.

ಅಸೋಸಿಯೇಶನ್‌ನ  ಹಿರಿಯ ಸದಸ್ಯರೂ, ಅಧ್ಯಕ್ಷರೂ ಆಗಿದ್ದ  ಮುಂಬಯಿಯ ವರದರಾಜನ್‌ ಅವರ ಪುತ್ರ ವಿಶ್ವನಾಥ್‌  ಪತ್ನಿಯಾಗಿ ಮುಂಬಯಿಗೆ ಕಾಲಿಟ್ಟರು. ಆಗಲೇ ಆಕೆ  ನೃತ್ಯ ವಿಶಾರದೆಯಾಗಿ ಹೆಸರು ಗಳಿಸಿದ್ದರು. ಪತಿಯ ಮನೆಯ ಪ್ರೋತ್ಸಾಹದಾಯಕ ವಾತಾವರಣದಲ್ಲಿ ಅವರ ಕಲೆ ಇನ್ನಷ್ಟು  ಬೆಳೆಯಿತು.  ನಾಟಕ, ಕಥೆ, ಲೇಖನ ಕಾರ್ಯ, ಸಮಾಜ ಕಾರ್ಯ ಎಲ್ಲದರಲ್ಲೂ ಅವರು ತೊಡಗಿಸಿಕೊಂಡಿದ್ದರು.

ವಿಶ್ವನಾಥ್‌ ನಿಧನದ ಬಳಿಕ ಅವರು ಬೆಂಗಳೂರಿಗೆ ಹಿಂದಿರುಗಿದ್ದರು. ಇತ್ತೀಚೆಗೆ ಕೆಲವು ವರ್ಷಗಳಿಂದ ಸಿಂಗಾಪುರದಲ್ಲಿ ಮಗಳ ಜೊತೆ ವಾಸವಾಗಿದ್ದರು. ಮೃತರು ಪುತ್ರಿಯರಾದ ಶಾರ್ವರಿ, ಶೃತಾರನ್ನು  ಅಗಲಿದ್ದಾರೆ. 

ಮೇ 30ರಂದು  ಸಂತಾಪಸೂಚಕ ಸಭೆ

ಗೀತಾ ವಿಶ್ವನಾಥ್‌  ನಿಧನಕ್ಕೆ ಮುಂಬಯಿ ಮೈಸೂರು ಅಸೋಸಿಯೇಶನ್‌ ಶೋಕ  ವ್ಯಕ್ತಪಡಿಸಿದ್ದು, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಲು  ಮಾಟುಂಗದಲ್ಲಿರುವ  ಭಾವುದಾಜಿ ರಸ್ತೆ ಸಮೀಪದ ಅಸೋಸಿಯೇಶನ್‌ ಕಚೇರಿಯಲ್ಲಿ  ಮೇ 30ರಂದು ಸಂಜೆ ಗಂಟೆ  6.30ಕ್ಕೆ  ಸಂತಾಪಸೂಚಕ ಸಭೆಯನ್ನು ಹಮ್ಮಿಕೊಂಡಿದೆ. ಗೀತಾ ವಿಶ್ವನಾಥ್‌ ಅವರ ಸ್ನೇಹಿತರು, ಬಂಧುಗಳು, ಹಿತೈಷಿಗಳು  ಭಾಗವಹಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ, ಶ್ರದ್ಧಾಂಜಲಿ ಸಮರ್ಪಿಸಬೇಕು ಎಂದು ಮೈಸೂರು ಅಸೋಸಿಯೇಶನ್‌ ಕಾರ್ಯಕಾರಿ ಸಮಿತಿ ತಿಳಿಸಿದೆ.

Trending videos

Back to Top