CONNECT WITH US  

ಶೃಂಗೇರಿಯ 37ನೇ ಪೀಠಾಧಿಪತಿ : ವಿಧುಶೇಖರ ಭಾರತಿ ಉತ್ತರಾಧಿಕಾರಿ

ಶೃಂಗೇರಿ: ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಶುಕ್ರವಾರ ಸನ್ಯಾಸ ದೀಕ್ಷೆ ನೀಡಲಾಗಿದ್ದು, ಶ್ರೀ ವಿಧುಶೇಖರ ಭಾರತಿ ಎಂದು ನಾಮಕರಣ ಮಾಡಲಾಗಿದೆ. ಮಠದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿ ಅವರು ತಮ್ಮ ಶಿಷ್ಯನಿಗೆ ಮರು ನಾಮಕರಣ ಮಾಡಿ, ವಿಧುಶೇಖರರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ವಿಧುಶೇಖರರು ಶೃಂಗೇರಿಯ 37ನೇ ಪೀಠಾಧಿಪತಿಯಾಗಿದ್ದಾರೆ.

ವಸ್ತ್ರ ತ್ಯಜಿಸಿ, ಕಾಷಾಯ ಧರಿಸಿದ ನೂತನ ಯತಿಗಳು: ಶುಕ್ರವಾರ ಮಠದ ಆವರಣದಲ್ಲಿ ನೂತನ ಯತಿಗಳ ಪದಗ್ರಹಣ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7.30ಕ್ಕೆ ತುಂಗಾ ನದಿಯ ಸಂಧ್ಯಾವಂದನೆ ಮಂಟಪದ ಬಳಿ ಪುರುಷ ಸೂಕ್ತ ಹಾಗೂ ವಿರಜಾ ಹೋಮಗಳು ನೆರವೇರಿದವು. ನಂತರ, ವೆಂಕಟೇಶ ಶರ್ಮರು "ಸನಾತನ ಧರ್ಮದ ಉನ್ನತಿಗಾಗಿ ತಮ್ಮ ಸನ್ಯಾಸ ಧರ್ಮದ ಪರಿಪಾಲನೆಯ ಕೈಂಕರ್ಯಕ್ಕೆ ಬಂಧು ಬಾಂಧವರಿಂದ ಅಡೆತಡೆಯಾಗಬಾರದು' ಎಂದು ವಿನಂತಿಸಿದರು. ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನು ತ್ಯಜಿಸಿದರು. ಬಳಿಕ, ಭಾರತಿ ತೀರ್ಥರು ಕಾಷಾಯ ವಸ್ತ್ರ, ದಂಡ ಕಮಂಡಲಗಳನ್ನು ವೆಂಕಟೇಶ ಶರ್ಮರಿಗೆ ನೀಡುವ ಮೂಲಕ ಸನ್ಯಾಸ ದೀಕ್ಷೆ ದಯಪಾಲಿಸಿದರು. ಬಳಿಕ, ಶ್ರೀಗಳುನರಸಿಂಹವನದಲ್ಲಿರುವ ಹಿಂದಿನ ಜಗದ್ಗುರುಗಳಾದ ಅಭಿನವ ವಿದ್ಯಾ ತೀರ್ಥರು, ಚಂದ್ರಶೇಖರ ಭಾರತಿ ತೀರ್ಥರು ಮತ್ತು ನರಸಿಂಹ ಭಾರತಿ ಸ್ವಾಮೀಜಿಗಳ ಸಮಾಧಿ ಸ್ಥಳಕ್ಕೆ ತೆರಳಿದರು.

ನಂತರ, ಅಧಿಷ್ಠಾನ ಮಂದಿರದಲ್ಲಿ ಭಾರತಿ ತೀರ್ಥರು ತಮ್ಮ ಶಿಷ್ಯನಿಗೆ ಪ್ರಣವೋಪದೇಶ, ಮಹಾ ವಾಕೊÂàಪದೇಶ ಅನುಗ್ರಹಿಸಿದರು. "ಅಹಂಬ್ರಹ್ಮಾಸಿ'¾ ಎಂಬ ಪೀಠದ ಆಧ್ಯಾತ್ಮಿಕ ವಾಕ್ಯವನ್ನು ಉಪದೇಶಿಸಿದರು. "ಶ್ರೀ ಅಭಿನವ ವಿದ್ಯಾತೀರ್ಥರಿಂದ ಸನ್ಯಾಸತ್ವ ಪಡೆದು ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಇಂದು ಇದೇ ಗುರುತರ ಜವಾಬ್ದಾರಿಯನ್ನು ನನ್ನ ನೆಚ್ಚಿನ ಶಿಷ್ಯ ಶರ್ಮರಿಗೆ ನೀಡುತ್ತಿದ್ದೇನೆ. ತಮ್ಮ ಅನುಜ್ಞೆಯೊಂದಿಗೆ ಆಶೀರ್ವಾದವನ್ನು ಬೇಡುತ್ತಿದ್ದೇನೆ' ಎಂದು ಪ್ರಾರ್ಥಿಸಿಕೊಂಡರು. ಬಳಿಕ, ಅಭಿನವ ವಿದ್ಯಾತೀರ್ಥ ಅಧಿಷ್ಠಾನ ಮಂದಿರದಲ್ಲಿÉ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ, ನೂತನ ಶ್ರೀಗಳು ನರಸಿಂಹವನದಿಂದ ಅಲಂಕೃತವಾದ ದೋಣಿಯಲ್ಲಿ ತುಂಗಾ ನದಿಯ ಆಚೆ ದಡಕ್ಕೆ ತೆರಳಿ ಪರ್ಯಂಕ ಶೌಚದ ವಿಧಿ ಮುಗಿಸಿ, ಮಠದ ಆವರಣಕ್ಕೆ ಬಂದರು. ನಂತರ ಉಭಯ ಯತಿಗಳು ಶಾರದಾಂಬೆಯ ಗರ್ಭಗುಡಿಗೆ ಆಗಮಿಸಿದರು. ಅಲ್ಲಿ ಕಿರಿಯ ಯತಿಗಳನ್ನು ವ್ಯಾಖ್ಯಾನ ಸಿಂಹಾಸನದ ಮೇಲೆ ಕುಳ್ಳಿರಿಸಿ ಅವರ ತಲೆಯ ಮೇಲೆ ಸಾಲಿಗ್ರಾಮವನ್ನಿಟ್ಟು ಹಿರಿಯ ಶ್ರೀಗಳು ಪೂಜೆ ನೆರವೇರಿಸಿದರು. ಅವರನ್ನು ನಾರಾಯಣ ಸ್ವರೂಪರೆಂದು ಪೂಜಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಶಿಷ್ಯ ಸ್ವೀಕಾರ ಮಹೋತ್ಸವದ ವಿಧಿ ವಿಧಾನಗಳ ಬಳಿಕ ಕಿರಿಯ ಯತಿಗಳು ಪುಷ್ಪ, ಗಂಧ, ಅಕ್ಷತೆ ಹಾಗೂ ಬಂಗಾರದ ನಾಣ್ಯಗಳ ಮೂಲಕ ಹಿರಿಯ ಯತಿಗಳ ಪಾದಪೂಜೆ ನೆರವೇರಿಸಿ ನಮಸ್ಕರಿಸಿದರು. ಇದಾದ ನಂತರ ಹಿರಿಯ ಶ್ರೀಗಳು ಕಿರಿಯ ಶ್ರೀಗಳಿಗೆ ಯೋಗಪಟ್ಟ ಪ್ರದಾನಿಸಿ ವಿಧುಶೇಖರ ಭಾರತಿ ಸ್ವಾಮೀಜಿ ಎಂದು ನಾಮಕರಣ ಮಾಡಿದರು. "ಜಯನಾಮ ಸಂವತ್ಸರದ ಮಾಘ ಶುದ್ಧ ತದಿಗೆ, ಶುಕ್ರವಾರದ ಈ ದಿನ ದಕ್ಷಿಣಾಮ್ನಾಯ ಶಾರದಾ ಪೀಠದ ಉತ್ತರಾಧಿಕಾರಿಯಾಗಿ ಶ್ರೀ ವಿಧುಶೇಖರ ಭಾರತಿ ಅವರು ಪದಗ್ರಹಣ ಮಾಡಿದ್ದಾರೆ' ಎಂದು ಘೋಷಿಸಿದರು. ವಿಧುಶೇಖರರು ಶೃಂಗೇರಿಯ 37ನೇ ಪೀಠಾಧಿಪತಿಯಾಗಿದ್ದಾರೆ.

ಬಳಿಕ, ಉಭಯ ಶ್ರೀಗಳು ಮಠದ ಪ್ರಾಂಗಣದಲ್ಲಿರುವ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ರಾತ್ರಿ ಪಟ್ಟಣದ ರಾಜಮಾರ್ಗದಲ್ಲಿ ಉಭಯ ಶ್ರೀಗಳ ವೈಭವದ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.

ನಗರದೆಲ್ಲೆಡೆ ಸಂಭ್ರಮ: ನೂತನ ಸ್ವಾಮೀಜಿಯ ಪೀಠಾರೋಹಣದ ಅಂಗವಾಗಿ ಶೃಂಗೇರಿ ಪಟ್ಟಣದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ. ಮಠದ ಆವರಣ, ಗುರು ನಿವಾಸಕ್ಕೆ ತೆರಳುವ ಮಾರ್ಗ, ಎಲ್ಲಾ ದೇವಾಲಯಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಶಾರದಾಂಬಾ ದೇಗುಲವನ್ನು ರಂಗೋಲಿ, ಪುಷ್ಪ, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಅಡ್ಡಪಲ್ಲಕ್ಕಿ ಉತ್ಸವ ನಡೆದ ರಸ್ತೆಗಳನ್ನು ಸ್ವತ್ಛಗೊಳಿಸಿ, ಅಲಂಕೃತ ಚಪ್ಪರದಿಂದ ಶೃಂಗರಿಸಲಾಗಿತ್ತು. ಸಮಾರಂಭ ವೀಕ್ಷಿಸಲು ಗಣ್ಯರ ದಂಡೇ ಹರಿದು ಬಂದಿತ್ತು. ಭಕ್ತರಿಗೆಲ್ಲಾ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಶಾರದಾ ಪೀಠಕ್ಕೆ ಗಣ್ಯರ ದಂಡು: ನೂತನ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮದ ಅಂಗವಾಗಿ ಜಗದ್ಗುರುಗಳ ಅನುಗ್ರಹ ಪಡೆಯಲು ವಿವಿಧ ಗಣ್ಯರು ಆಗಮಿಸಿದ್ದರು. ಕೇಂದ್ರ ಸಚಿವ ಅನಂತಕುಮಾರ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್‌ ಸಭಾಧ್ಯಕ್ಷ ಡಿ.ಎಚ್‌.ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌, ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಶಾಸಕ ಡಿ.ಎನ್‌.ಜೀವರಾಜ್‌, ಬೆಂಗಳೂರು ಶಾಸಕ ವಿಜಯಕುಮಾರ್‌, ರವಿಸುಬ್ರಮಣ್ಯ, ಮಾಜಿ ಶಾಸಕ ರಾಮಚಂದ್ರೇಗೌಡ, ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್‌, ಚೆನ್ನೈ ಹೈಕೋರ್ಟ್‌ ನ್ಯಾಯಮೂರ್ತಿ ರಾಮನಾಥನ್‌ ಮತ್ತಿತರ ಗಣ್ಯರು ಆಗಮಿಸಿದ್ದರು.

ದಶನಾಮ ಸನ್ಯಾಸ ಪದ್ಧತಿ ಅನುಷ್ಠಾನ: ಶಂಕರಾಚಾರ್ಯರು ಶೃಂಗೇರಿಯಲ್ಲಿ ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠದಲ್ಲಿ ದಶನಾಮ ಸನ್ಯಾಸ ಪದ್ಧತಿ ಅನುಷ್ಠಾನಗೊಳಿಸಿದ್ದರು. ಈ ಪದ್ಧತಿಯಲ್ಲಿ ಭಾರತಿ, ತೀರ್ಥ, ಅರಣ್ಯ ಎಂಬವು ಪ್ರಮುಖವಾದವು. ಈಗ ಉತ್ತರಾಧಿಕಾರಿಯಾಗಿ ಪದಗ್ರಹಣ ಮಾಡಿರುವ ವಿಧುಶೇಖರರಿಗೆ ಭಾರತಿ ಅನುಷ್ಠಾನ ಪದ್ಧತಿ ಪ್ರದಾನಿಸಲಾಗಿದೆ. ವಿಧು ಎಂದರೆ ಚಂದ್ರ, ಮಠದ ಗುರು ಪರಂಪರೆಯ 34ನೇ ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯ ಹೆಸರನ್ನೇ ಇದೀಗ 37ನೇ ಯತಿಗಳಿಗೂ ಪ್ರದಾನಿಸಲಾಗಿದೆ.

Trending videos

Back to Top