CONNECT WITH US  

ನಂಬಿಕೆಯೇ ಬಲು ದೊಡ್ಡ ಆಸ್ತಿ: ಡಾ| ವಿರೇಂದ್ರ ಹೆಗ್ಗಡೆ

ಕಾಪು: ನಂಬಿಕೆಯೇ ಬಲು ದೊಡ್ಡ ಆಸ್ತಿಯಾಗಿದ್ದು ಧರ್ಮ ಮತ್ತು ಧರ್ಮದ ಆಚರಣೆಗಳ ಬಗ್ಗೆ ನಂಬಿಕೆ ಬಲು ಮುಖ್ಯ. ಭಗವಂತನ ಮೇಲಿನ ನಂಬಿಕೆ ಮತ್ತು ಶ್ರದ್ಧೆಯೇ ಮನುಷ್ಯನ ಜೀವನವನ್ನು ಪರಿಪೂರ್ಣಗೊಳಿಸುತ್ತದೆ ಎಂದು ಶ್ರೀ ಕೇÒತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.

ಕಟಪಾಡಿ ಶೀÅ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ದೇವರ ನವೀಕರಣ ಪುನರ್‌ ಪ್ರತಿಷ್ಠೆಯ ಅಂಗವಾಗಿ ಗುರುವಾರ ಜರಗಿದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಜಿ.ಎಸ್‌.ಬಿ. ಸಮಾಜ ಎಲ್ಲರಿಗೂ ಮಾದರಿ

ಯಾವುದೇ ರೀತಿಯ ಭೇಧವಿಲ್ಲದೇ, ಸರ್ವರೂ ಸಮಾನರು ಎಂಬ ರೀತಿಯಲ್ಲಿ ಮುನ್ನಡೆಯುವ ಸಮಾಜವೆಂದರೆ ಅದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ. ಈ ಸಮಾಜದ ಹಿರಿಯರು ಅಂದಿನಿಂದ ಇಂದಿನವರೆಗೂ ತಮ್ಮ ಹಿರಿಯರು ನಡೆದುಕೊಂಡು ಬಂದ ರೀತಿ-ರಿವಾಜುಗಳನ್ನು ಚಾಚೂ ತಪ್ಪದೇ ಅನುಸರಿಸುತ್ತಿರುವ ಕಾರಣದಿಂದ ಎಲ್ಲರಿಗೂ ಮಾದರಿಯಾದ ಸಮಾಜವಾಗಿ ಗುರುತಿಸಲ್ಪಡುತ್ತಿದೆ ಎಂದರು.

ಕಟಪಾಡಿ ವೆಂಕಟರಮಣನ ಸನ್ನಿಧಾನದಲ್ಲಿ ದೇವರಿಗೆ ವರದಿ ಒಪ್ಪಿಸುವ ಧಾರ್ಮಿಕ ನಂಬಿಕೆ ಇಂದಿಗೂ ಜೀವಂತವಾಗಿದ್ದು, ಇದು ಸಮಾಜದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಇದೇ ರೀತಿಯ ಧಾರ್ಮಿಕ ಆಚಾರ-ವಿಚಾರಗಳು, ನಂಬಿಕೆ ಮತ್ತು ನಡವಳಿಕೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬರುವ ಮಹತ್ವದ ಜವಾಬ್ದಾರಿ ಇಲ್ಲಿನ ಪ್ರತಿಯೋರ್ವ ಸಮಾಜ ಭಾಂಧವರದ್ದಾಗಿದೆ ಎಂದರು.

ಶಿಲಾಮಯ ಕಲ್ಪನೆ ಧರ್ಮಸ್ಥಳದಿಂದ ಪ್ರಾರಂಭ

1962ರಲ್ಲಿ ರತ್ನವರ್ಮ ಹೆಗ್ಗಡೆಯವರು ಕಾರ್ಕಳದ ಮಸ್ತಕಾಭಿಷೇಕ ನೋಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶಿಲಾಮಯ ಬಾಹುಬಲಿ ವಿಗ್ರಹ ಪ್ರತಿಷ್ಠಾಪನೆಗೆ ಸಂಕಲ್ಪಿಸಿದರು. ಈ ವಿಗ್ರಹ ನಿರ್ಮಿಸಿಕೊಟ್ಟವರು ಕಾರ್ಕಳ ರೆಂಜಾಳದ ಗೋಪಾಲ ಶೆಣೈಯವರು. ಅಂದಿನಿಂದ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಲಾಮಯದ ಕಲ್ಪನೆ ಪ್ರಾರಂಭಗೊಂಡಿತು ಎಂದು ಹೆಗ್ಗಡೆ ಹೇಳಿದರು.

ಮತ್ತೂಂದು ಗರಿ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಸಮಾಜದ ಬಂಧುಗಳ ಉತ್ಕೃಷ್ಟ ಮನೋಭಾವ, ಶ್ರದ್ಧೆ, ಶ್ರಮ, ನಿಷ್ಠೆ ಮತ್ತು ಸತ್ಯದ ಕಾರಣದಿಂದ ಜಿ.ಎಸ್‌.ಬಿ. ಸಮಾಜ ಮಾದರಿಯಾಗಿ ಮೂಡಿಬರುವಂತಾಗಿದೆ. ಇದೀಗ ಕಟಪಾಡಿ ವೆಂಕಟರಮಣನ ಸಾನಿಧ್ಯವೂ ಮಾದರಿಯಾಗಿ ಮೂಡಿ ಬಂದಿರುವುದು ನಮ್ಮ ಸಮಾಜದ ಹೆಮ್ಮೆಗೆ ಮತ್ತೂಂದು ಗರಿ ಪೋಣಿಸಿದಂತಾಗಿದೆ ಎಂದರು.

ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಅಧ್ಯಕ್ಷ ಪಿ. ರಬೀಂದ್ರ ನಾಯಕ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ ಶುಭಾಶಂಸನೆಗೈದರು.

ಬೆಂಗಳೂರು ಸೆಂಚುರಿ ಬಿಲ್ಡರ್ನ ಮಾಲಕ ಡಾ| ಪಿ. ದಯಾನಂದ ಪೈ, ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಎಂ.ವಿ. ಕಿಣಿ, ವಾಸ್ತುತಜ್ಞ ಪ್ರಸಾದ್‌ ಮುನಿಯಂಗಳ, ಉಡುಪಿ ಹನುಮಾನ್‌ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಪಿ. ವಿಲಾಸ್‌ ನಾಯಕ್‌, ತಂತ್ರಿಕ ಸಲಹೆಗಾರ ವೆಂಕಟೇಶ್‌ ಪೈ, ಗಣಪತಿ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀ ದೇವಳದ ಆಡಳಿತ ಮೊಕ್ತೇಸರ ಸತೀಶ್‌ ಕಾಮತ್‌, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸುಧಾಕರ ಭಟ್‌ ಉಪಸ್ಥಿತರಿದ್ದರು. ದೇವಳದ ಅಭಿವೃದ್ಧಿಗೆ ಕಾರಣರಾದವರು ಸಮ್ಮಾನಿಸಿ ಗೌರವಿಸಲಾಯಿತು.

ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಸತ್ಯೇಂದ್ರ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ದೇವಳದ ಮೊಕ್ತೇಸರ ಮಟ್ಟಾರು ದಿನೇಶ್‌ ಕಿಣಿ ವಂದಿಸಿದರು. ನಿವೃತ್ತ ಶಿಕ್ಷಕ ರಾಧಾಕೃಷ್ಣ ಪ್ರಭು ಮತ್ತು ಜಗದೀಶ್‌ ಕಾಮತ್‌ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Trending videos

Back to Top