CONNECT WITH US  

ಡಾ.ಸರೋಜಿನಿ ಮಹಿಷಿ ಇನ್ನಿಲ್ಲ

ಬೆಂಗಳೂರು: ರಾಜ್ಯದ ಮೊದಲ ಸಂಸದೆ ಹಾಗೂ ಸಚಿವೆ ಡಾ.ಸರೋಜಿನಿ ಮಹಿಷಿ (88) ಭಾನುವಾರ ಬೆಳಿಗ್ಗೆ ಗಾಜಿಯಾಬಾದ್‌ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ "ಸರೋಜಿನಿ ಮಹಿಷಿ ವರದಿ' ಎಂದೇ ಮನೆಮಾತಾಗಿದೆ. 1983ರಲ್ಲಿ ಸಲ್ಲಿಸಿದ ಈ ವರದಿ ಅನುಷ್ಠಾನಕ್ಕಾಗಿ ಈಗಲೂ ಅನೇಕ ರೀತಿಯ ಹೋರಾಟಗಳು ನಡೆಯುತ್ತಿವೆ.

ಧಾರವಾಡ ಮೂಲದ ಸರೋಜಿನಿ ಮಹಿಷಿ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿ ಹಾಗೂ ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿ ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕೇಂದ್ರ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಕಾನೂನು ಮತ್ತು ಕಂಪೆನಿ ವ್ಯವಹಾರಗಳ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ವಿಧಿವಶರಾದರು.

ಅವರು ಸಹೋದರಿಯರಾದ ವಿಜಯಾ, ಮಾಲಿನಿ, ಸಾವಿತ್ರಿ, ಶಕುಂತಲಾ ಹಾಗೂ ಸಹೋದರರಾದ ನಾರಾಯಣ್‌ ಮತ್ತು ಪ್ರಹ್ಲಾದ್‌ ಅವರನ್ನು ಅಗಲಿದ್ದಾರೆ.

"ಶನಿವಾರ ರಾತ್ರಿ 10 ಗಂಟೆವರೆಗೆ ದೂರವಾಣಿ ಮೂಲಕ ಅಕ್ಕ ನಮ್ಮೆಲ್ಲರೊಂದಿಗೆ ಮಾತನಾಡಿದ್ದರು. ಆರಾಮವಾಗಿದ್ದೇನೆ ಎಂದು ಹೇಳಿದ್ದರು. ತಂಗಿಯ ಮಗಳ ಮದುವೆ ನಿಶ್ಚಯವಾಗಿದ್ದು, ಮದುವೆ ಸಿದ್ಧತೆ ಬಗ್ಗೆಯೂ ಕೇಳಿದ್ದಳು. ಆದರೆ, ಭಾನುವಾರ ಮಧ್ಯಾಹ್ನದ ಹೊತ್ತಿಗೆ ಈ ಸುದ್ದಿ ತಿಳಿಯಿತು' ಎಂದು ಸಹೋದರಿ ಸಾವಿತ್ರಿ ಮಹಿಷಿ ಕಣ್ಣೀರಾದರು.

ದೆಹಲಿಯಲ್ಲೇ ಅಂತ್ಯಕ್ರಿಯೆ

ಮೃತ ಸರೋಜಿನಿ ಮಹಿಷಿ ಅವರ ಅಂತ್ಯಕ್ರಿಯೆ ರಾಜಧಾನಿ ದೆಹಯಲಿಯಲ್ಲೇ ನಡೆಸಲು ನಿರ್ಧರಿಸಿದ್ದು, ಸೋಮವಾರ ಬೆಳಿಗ್ಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಣ್ಯರು, ಬಂಧುಗಳು, ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
 

Trending videos

Back to Top