CONNECT WITH US  

ನಂಬಿಕೆ ತಳಹದಿಯಲ್ಲಿ ಬದುಕಿನ ಯಶಸ್ಸು: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಜಾತಿ, ಧರ್ಮ, ಗಡಿ ಭೇದ ಮರೆತು ಒಮ್ಮತದಲ್ಲಿ ಸೇರುವ, ಒಡೆದು ಹೋದ ಮನಸ್ಸುಗಳನ್ನು ಬೆಸೆಯುವ ಏಕೈಕ ಸ್ಥಳವಿದ್ದರೆ ಅದು ದೇವಳ, ದೈವಸ್ಥಾನ. ನೊಂದವರ ಆತ್ಮಸ್ಥೈರ್ಯ ಹೆಚ್ಚಿಸಿ ಬದುಕಿನಲ್ಲಿ ಭರವಸೆ ಮೂಡಿಸುವ ದೈವಸ್ಥಾನ ಅಭಿವೃದ್ಧಿಯಾದರೆ ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ. ಆದುದರಿಂದ ನಂಬಿಕೆಯ ತಳಹದಿಯಲ್ಲಿ ಬದುಕನ್ನು ರೂಪಿಸಿಕೊಂಡು ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಜ. 26ರಂದು ಕುಂದಾಪುರ ಸಮೀಪದ ತಲ್ಲೂರಿನ ಶ್ರೀ ಮಹಾಕಾಳಿ ದೇವಸ್ಥಾನ ಮತ್ತು ಶ್ರೀ ಕೋಟಿ-ಚೆನ್ನಯ್ಯರ ಗರಡಿಯ ನೂತನ ಶಿಲಾದೇಗುಲ ಸಮರ್ಪಣೆ, ಪುನಃ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಬಿ. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೋಟ ಶ್ರೀನಿವಾಸ ಪೂಜಾರಿ ಅವರು ಧಾರ್ಮಿಕ ದತ್ತಿ ಸಚಿವರಾದ ಅವಧಿಧಿಯಲ್ಲಿ ಕಳೆದ 6 ದಶಕಗಳಲ್ಲಿ ಧಾರ್ಮಿಕ ಇಲಾಖೆಯಿಂದ ದೇವಳದ ಅಭಿವೃದ್ಧಿಗೆ ನೀಡಿದ ಒಟ್ಟು ಅನುದಾನದ ಎರಡರಷ್ಟು ಹಣವನ್ನು ರಾಜ್ಯದ ದೇಗುಲ, ದೈವಸ್ಥಾನದ ಅಭಿವೃದ್ಧಿಗೆ ನೀಡಿ ದಾಖಲೆ ಬರೆದಿದ್ದಾರೆ. ಮಲಗಿದ್ದ ಧಾರ್ಮಿಕ ಇಲಾಖೆಗೆ ಹೊಸ ಹುರುಪು ಮೂಡಿಸಿ ಸಾಧನೆಯ ಶಿಖರವನ್ನೇರಿದ್ದಾರೆ ಎಂದು ತಲ್ಲೂರಿನ ಪರಿಸರದ ದೇವಳಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರ ಔದಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿ ಶುಭಹಾರೈಸಿದರು. ಇದೇ ಸಂದರ್ಭ ದೇವಳದ ಅಭಿವೃದ್ಧಿ ಕಾರ್ಯಕ್ಕೆ ಮಹತ್ತರ ಕೊಡುಗೆ ನೀಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಳದ ಶಿಲ್ಪಿ ಮಂಜುನಾಥ ಕಾರ್ಕಳ, ದೈವದ ಪಾತ್ರಿ ರಾಜು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ರಾಜ್ಯದ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಉಡುಪಿ ಚಿಕ್ಕಮಗಳೂರು ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಗೀತಾಂಜಲಿ ಸುವರ್ಣ, ನಿವೃತ್ತ ಅಧ್ಯಾಪಕ ಗಣಪಯ್ಯ ಶೆಟ್ಟಿ ಮಾರ್ಕೋಡು, ರವೀಂದ್ರ ವಿ. ಶೆಟ್ಟಿ ತಲ್ಲೂರು ದೊಡ್ಮನೆ, ಸರ್ವೋತ್ತಮ ಶೆಟ್ಟಿ ತಲ್ಲೂರು ದೊಡ್ಮನೆ, ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕೋಟಿ ಪೂಜಾರಿ, ಉದ್ಯಮಿ ಸದಾನಂದ ಶೇರುಗಾರ್‌, ತಲ್ಲೂರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಟಿ.ಕೆ. ಕೋಟ್ಯಾನ್‌, ತಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಆನಂದ ಬಿಲ್ಲವ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಆರ್‌. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಬಿ. ಶೆಟ್ಟಿ ಸ್ವಾಗತಿಸಿದರು. ದೇವರಾಜ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Trending videos

Back to Top