CONNECT WITH US  

ಆರ್‌.ಕೆ.ಲಕ್ಷ್ಮಣ್‌: ಭಾರತ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‌ಪಿಯರ್‌

ಭಾರತೀಯ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‌ಪಿಯರ್‌ ಎಂದೇ ಜನಪ್ರಿಯರಾಗಿದ್ದವರು ರಾಶಿಪುರಂ ಕೃಷ್ಣಸ್ವಾಮಿ ಐಯ್ಯರ್‌ ಲಕ್ಷ್ಮಣ್‌ . ಸುಮಾರು ಐದು ದಶಕಗಳ ಕಾಲ ವ್ಯಂಗ್ಯಚಿತ್ರಕಾರರಾಗಿ ಅವರು ಮೂಡಿಸಿದ ಛಾಪು ಅದ್ವೀತಿಯ. 1924ರ ಅಕ್ಟೋಬರ್‌ 23ರಂದು ಮೈಸೂರಿನಲ್ಲಿ ಜನಿಸಿದರು. ಲಕ್ಷ್ಮಣ್‌ ತಂದೆ ಶಿಕ್ಷಕರು. ಆರು ಮಂದಿ ಮಕ್ಕಳಲ್ಲಿ ಲಕ್ಷ್ಮಣ್‌ ಕಿರಿಯರು. ಇವರ ಹಿರಿಯ ಸಹೋದರ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಪ್ರಮುಖ ಕಾದಂಬರಿಕಾರ ಎನಿಸಿಕೊಂಡ ಆರ್‌.ಕೆ.ನಾರಾಯಣ್‌.

ಚಿತ್ರಕಲೆಯತ್ತ ಸೆಳೆತ:

ಮನೆಗೆ ಲಂಡನ್ನಿನಿಂದ ಬರುತ್ತಿದ್ದ ಕಾಮಿಕ್ಸ್‌ ಪುಸ್ತಕಗಳತ್ತ ಆಕರ್ಷಿತರಾದ ಲಕ್ಷ್ಮಣ್‌ ಮಾತು ಕಲಿಯುವ ಮುನ್ನ ಚಿತ್ರಗಳನ್ನು ಗುರುತಿಸುವುದನ್ನು ಕಲಿತರು. ಈ ಪುಸ್ತಕಗಳನ್ನು ನೋಡುತ್ತಾ ಚಿತ್ರ ಗೀಚಲಾರಂಭಿಸಿದ ಲಕ್ಷ್ಮಣ್‌ ಸಂಪೂರ್ಣವಾಗಿ ಚಿತ್ರಕಲೆಯತ್ತ ಆಕರ್ಷಿತರಾದರು. ಶಾಲೆಯಲ್ಲಿ ಚಿತ್ರಗಳನ್ನು ಬರೆದು ಶಿಕ್ಷಕರಿಗೆ ಮೆಚ್ಚುಗೆ ಪ್ರೋತ್ಸಾಹವನ್ನೂ ಪಡೆದ ಮೇಲೆ ಲಕ್ಷ್ಮಣ್‌ಗೆ ಚಿತ್ರಕಾರನಾಗುವುದೇ ಗುರಿಯಾಗಿ ಹೋಯಿತು.
ಈ ನಡುವೆ ಅಣ್ಣ ಆರ್‌.ಕೆ.ನಾರಾಯಣ್‌ ಬರೆಯುತ್ತಿದ್ದ ಸಣ್ಣ ಕತೆಗಳಿಗೆ ಚಿತ್ರಗಳನ್ನು ಬರೆದುಕೊಡುತ್ತಿದ್ದರು. ಅವು ಅಣ್ಣನ ಕತೆಗಳ ಜತೆಗೆ ದೇಶದ ಪ್ರತಿಷ್ಠಿತ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಮೆಟ್ರಿಕ್‌ ಪೂರೈಸಿದ ಮುಂಬೈನ ಜೆಜೆ ಸ್ಕೂಲ್‌ ಆಫ್ ಆರ್ಟ್ಸ್ನಲ್ಲಿ ವ್ಯಾಸಂಗ ಮಾಡಬೇಕೆಂದು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರು. ಭಾರತದ ಪ್ರಖ್ಯಾತ ಕಲಾಶಾಲೆಗಳಲ್ಲಿ ಅದು ಒಂದು. ಅಲ್ಲಿ ಪ್ರವೇಶ ಪಡೆಯಬೇಕೆಂಬ ಲಕ್ಷ್ಮಣ್‌ ಆಸೆ ಈಡೇರಲಿಲ್ಲ. ಆ ಸಂಸ್ಥೆಯು, ಇಲ್ಲಿ ವಿದ್ಯಾರ್ಥಿಯಾಗಲು ಇರಬೇಕಾದ ಅರ್ಹತೆ ನಿಮ್ಮಲ್ಲಿ ಇಲ್ಲವೆಂದು ಪ್ರವೇಶ ನಿರಾಕರಿಸಿತು. ನಿರಾಶರಾದ ಲಕ್ಷ್ಮಣ್‌ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕಲಾ ಪದವಿ ಪ್ರವೇಶ ಪಡೆದರು. ವ್ಯಾಸಂಗ ಮಾಡುತ್ತಲೇ ಲಕ್ಷ್ಮಣ್‌ ಬ್ಲಿಜ್‌, ಸ್ವರಾಜ್ಯ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ಬರೆಯಲಾರಂಭಿಸಿದರು. ಡಾ.ಶಿವರಾಂ ಆರಂಭಿಸಿದ್ದ ಕೊರವಂಜಿ ಪತ್ರಿಕೆಗೂ ಕೆಲ ಕಾಲ ವ್ಯಂಗ್ಯಚಿತ್ರಗಳನ್ನು ಬರೆದರು.

ಗುರಿಯ ದಾರಿಯಲ್ಲಿ:

ರಾಜಕೀಯ ವ್ಯಂಗ್ಯಚಿತ್ರಕಾರನಾಗಬೇಕೆಂದು ಹೊರಟ ಲಕ್ಷ್ಮಣ್‌, ದೆಹಲಿಯಲ್ಲಿ ಕೆಲ ಕಾಲ ಆನಿಮೇಷನ್‌ ಕೆಲಸ ಮಾಡಿ ಮುಂಬೈಗೆ ಬಂದರು. ಫ್ರೀಪ್ರಸ್‌ ಜರ್ನಲ್‌ನಲ್ಲಿ ವ್ಯಂಗ್ಯಚಿತ್ರ ಬರೆಯುವ ಅವಕಾಶ ದೊರೆಯಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಕೆಲವೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದರು.

ನಂತರ ಅವರು ಸೇರಿದ್ದು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯನ್ನು. ಇಲ್ಲಿಂದ ಲಕ್ಷ್ಮಣ್‌ ಅವರ ಹೊಸ ಬದುಕು ಆರಂಭವಾಯಿತು. ಮಕ್ಕಳ ಪುಟಗಳಿಗೆ ಚಿತ್ರ ಬರೆಯಲು ಸೇರಿದ ಲಕ್ಷ್ಮಣ್‌, ನಂತರ ಪೂರ್ಣ ಪ್ರಮಾಣದ ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಸಕ್ರಿಯರಾದರು.

ಟೈಮ್ಸ್‌ ಪತ್ರಿಕೆಯಲ್ಲಿ ಲಕ್ಷ್ಮಣ್‌ ಅವರಿಗೆ ಬೇಕಾದ ಸ್ವಾತಂತ್ರ್ಯ ಸಿಕ್ಕಿತು. ಹಾಗೆಯೇ ಪ್ರೋತ್ಸಾಹವೂ ಸಿಕ್ಕಿತು. ಆರಂಭದಲ್ಲಿ ಒಳಪುಟದಲ್ಲಿ ಸಂಪಾದಕೀಯ ವ್ಯಂಗ್ಯ ಚಿತ್ರ ಬರೆಯುತ್ತಿದ್ದ, ಲಕ್ಷ್ಮಣ್‌ ಮುಖಪುಟದಲ್ಲಿ ಪಾಕೆಟ್‌ ವ್ಯಂಗ್ಯಚಿತ್ರ ಬರೆಯಲಾರಂಭಿಸಿದರು. 1951ರಲ್ಲಿ ಇವರು ಸೃಷ್ಟಿಸಿದ ಕಾಮನ್‌ ಮ್ಯಾನ್‌ ಪಾತ್ರ ಅತ್ಯಂತ ಜನಪ್ರಿಯವಾಯಿತು. ಖಾಸಗಿ ವಿಮಾನ ಕಂಪನಿಯ ಲಾಂಛನವೂ ಆಯಿತು.

ಸಹೋದರ ಆರ್‌.ಕೆ.ನಾರಾಯಣ್‌ ಅವರು ಕಾದಂಬರಿ ಆಧರಿಸಿ ಶಂಕರ್‌ನಾಗ್‌ ನಿರ್ಮಿಸಿ, ನಿರ್ದೇಶಿಸಿದ ಮಾಲ್ಗುಡಿ ಡೇಸ್‌ ಧಾರಾವಾಹಿಗೆ ಲಕ್ಷ್ಮಣ್‌ ಅವರು ಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಮಿಸ್ಟರ್‌ ಅಂಡ್‌ ಮಿಸೆಸ್‌ 55 ಎಂಬ ಹಿಂದಿ ಚಿತ್ರದಲ್ಲೂ ಲಕ್ಷ್ಮಣ್‌ ಅವರು ಚಿತ್ರಗಳು ಬಳಕೆಯಾಗಿವೆ.

ಅಸ್ತ್ರವಾಯಿತು ಗೆರೆ:

ಸುಮಾರು ಐದು ದಶಕಗಳ ಕಾಲ ನಿರಂತರವಾಗಿ ವ್ಯಂಗ್ಯಚಿತ್ರಗಳನ್ನು ಬರೆದ ಲಕ್ಷ್ಮಣ್‌ ಸಾಮಾಜಿಕ ವ್ಯವಸ್ಥೆಯನ್ನು, ಆಡಳಿತ ಯಂತ್ರಗಳನ್ನು ನಿರ್ಭೀತರಾಗಿ ಟೀಕಿಸಿದರು. ಇವರ ವ್ಯಂಗ್ಯಚಿತ್ರಗಳು ಹಲವು ರಾಜಕಾರಣಿಗಳನ್ನು ಕೆಣಕಿತು. ನಿರ್ಬಂಧಗಳನ್ನು ಎದುರಿಸಬೇಕಾಯಿತು. ಏನೇ ಆದರೂ ಲಕ್ಷ್ಮಣ್‌ ಹೇಳಬೇಕಾದ್ದನ್ನು ಅದುಮಿಡುವ ಪ್ರಯತ್ನವನ್ನು ಮಾಡಲಿಲ್ಲ.

ತುರ್ತು ಪರಿಸ್ಥಿತಿಯನ್ನು ಖಂಡಿಸಿ ವ್ಯಂಗ್ಯ ಬರೆದರು. ಅಷ್ಟೇ ಅಲ್ಲ ಹಲವು ಪ್ರಕರಣಗಳು ಇವರ ವ್ಯಂಗ್ಯಚಿತ್ರಗಳಿಂದಾಗಿಯೇ ಹೆಚ್ಚು ಚರ್ಚೆಯಾಗಿದ್ದಲ್ಲದೆ ಕೋರ್ಟ್‌ ಮೆಟ್ಟಿಲು ಏರಿದವು. ಉದಾಹರಣೆಗೆ ಸಚಿನ್‌ ಕಾರು ತೆರಿಗೆ ವಿವಾದ. ನೀನೂ ಒಬ್ಬ ಸೂಪರ್‌ ಕ್ರಿಕೆಟಿಗ ಆಗು, ನಿನ್ನ ಕೂಲ್‌ ಡ್ರಿಂಕ್ಸ್‌, ಟಾಯ್ಲೆಟ್‌ ಸೋಪ್‌, ಟೂತ್‌ ಪೇಸ್ಟ್‌ ಎಲ್ಲದ ಮೇಲೆ ಫೈನಾನ್ಸ್‌ ಮಿನಿಸ್ಟ್ರಿ ತೆರಿಗೆ ವಿನಾಯಿತಿ ನೀಡುವಂತಾಗಲಿ ಎಂದು ಲಕ್ಷ್ಮಣ್‌ ವ್ಯಂಗ್ಯ ಚಿತ್ರ ಬರೆದಿದ್ದರು. ವ್ಯಂಗ್ಯಚಿತ್ರ ನೋಡಿದ ದೆಹಲಿ ಹೈಕೋರ್ಟ್‌ ಸಚಿನ್‌ಗೆ ನೋಟಿಸ್‌ ಜಾರಿ ಮಾಡಿತು.

ಇಂಥ ಇನ್ನು ಹತ್ತಾರು ಪ್ರಸಂಗಗಳು ಲಕ್ಷ್ಮಣ್‌ ಅವರ ಜೀವನದಲ್ಲಿವೆ. ಹಲವು ಘಟನೆಗಳನ್ನು ಸ್ವತಃ ಲಕ್ಷ್ಮಣ್‌ ತಮ್ಮ ಆತ್ಮಕತೆ ದಿ ಟನಲ್‌ ಆಫ್ ಟೈಮ್‌ ನಲ್ಲಿ ದಾಖಲಿಸಿದ್ದಾರೆ. ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಲಕ್ಷ್ಮಣ್‌ ಅವರ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿವೆ. ಅವರ ಚಿತ್ರಗಳ ಬಗ್ಗೆ, ಅವರ ನಿಲುವುಗಳ ಬಗ್ಗೆ ಅಬು ಅಬ್ರಹಂ, ಓ.ವಿ.ವಿಜಯನ್‌ ಸೇರಿದಂತೆ ಭಾರತದ ಹಿರಿಯ ವ್ಯಂಗ್ಯಚಿತ್ರಕಾರರು ಟೀಕಿಸಿದ್ದರು. ಏನೇ ಆದರೂ ಇಷ್ಟು ಸುದೀರ್ಘ‌ ಕಾಲದ ವರೆಗೆ ಅವರು ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂಬುದು ನಿರ್ವಿವಾದ.

ಲಕ್ಷ್ಮಣ್‌ ಅವರಿಗೆ ಸಂದ ಗೌರವಗಳು
ಬಿಡಿ ಗೊಯೆಂಕಾ ಪ್ರಶಸ್ತಿ
ದುರ್ಗ ರತ್ನ ಚಿನ್ನದ ಪದಕ
ರಾಮನ್‌ ಮ್ಯಾಗ್ಸೆಸೆ (1984)
ಪದ್ಮಭೂಷಣ..???
ಪದ್ಮ ವಿಭೂಷಣ (2005)
ಜೀವಮಾನದ ಸಾಧನೆ ಪ್ರಶಸ್ತಿ- ಸಿಎನ್ನೆನ್‌ ಐಬಿಎನ್‌ (2008)
ಭಾರತ ಭೂಷಣ (2013)

ಲಕ್ಷ್ಮಣ್‌ ಅವರ ಕೃತಿಗಳು
ದಿ ಇಲೋಕ್ವೆಂಟ್‌ ಬ್ರಷ್‌: ಎ ಸೆಲೆಕ್ಷನ್‌ ಆಫ್ ಕಾಟೂìನ್ಸ್‌ ಫ‌Åಮ್‌ ನೆಹರು ಟು ರಾಜೀವ್‌
ದಿ ಬೆಸ್ಟ್‌ ಆಫ್ ಲಕ್ಷ್ಮಣ್‌ ಸೀರೀಸ್‌
ಹೋಟೆಲ್‌ ರಿವೇರ
ದಿ ಮೆಸ್ಸೆಂಜರ್‌
ಸರ್ವೆಂಟ್ಸ್‌ ಆಫ್ ಇಂಡಿಯಾ
ದಿ ಟನೆಲ್‌ ಆಫ್ ಟೈಮ್‌ (ಆತ್ಮಕತೆ)
ದಿ ರೀಲ್‌ ವರ್ಲ್ಡ್
ಬ್ರಷಿಂಗ್‌ ಅಪ್‌ ದಿ ಇಯರ್: ಆ ಕಾಟೂìನಿಸ್ಟ್‌ ಹಿಸ್ಟರಿ ಆಫ್ ಇಂಡಿಯಾ
ಲಕ್ಷ್ಮಣ್‌ ರೇಖಾ (ಆತ್ಮಕತೆ-ಮರಾಠಿಯಲ್ಲಿ)

ಭಾರತದ ನಂ.1, 2, 3, ಕಾಟೂರ್ನಿಸ್ಟ್‌ ನಾನೆ..!

ಅಮೆರಿಕದ ರನ್‌ ಲೂರಿ ಅಂತಾರಾಷ್ಟ್ರೀಯ ಖ್ಯಾತಿ ವ್ಯಂಗ್ಯಚಿತ್ರಕಾರ. ಇವರನ್ನು ಲಕ್ಷ್ಮಣ್‌ ಒಮ್ಮೆ ಭೇಟಿಯಾದರು. ಮಾತಿನ ನಡುವೆ ಲೂರಿ ಭಾರತದ ಅತ್ಯುತ್ತಮ ವ್ಯಂಗ್ಯಚಿತ್ರಕಾರರು ಯಾರು ಎಂದು ಕೇಳಿದರು. ಲಕ್ಷ್ಮಣ್‌ ನಾನು ಎಂದುತ್ತರಿಸಿದರು.

ನಂ.2 ವ್ಯಂಗ್ಯಚಿತ್ರಕಾರ ಯಾರು ಎಂದು ಮತ್ತೆ ಪ್ರಶ್ನಿಸಿದರು. ಲಕ್ಷ್ಮಣ್‌ ನಾನೇ... ಎಂದರು ಲೂರಿ ಮೂರು, ನಾಲ್ಕು, ಐದು ಎಂದು ಪ್ರಶ್ನೆ ಕೇಳಿದರು. ಎಲ್ಲ ಪ್ರಶ್ನೆಗಳಿಗೆ ಲಕ್ಷ್ಮಣ್‌ ನಾನು ಎಂದು ಹೇಳಿ ಲೂರಿ ಗಾಬರಿಯಾಗುವಂತೆ ಮಾಡಿದರು. ಲಕ್ಷ್ಮಣ್‌ ಪ್ರಕಾರ ಭಾರತದಲ್ಲಿ ತನಗಿಂತ ಉತ್ತಮ ವ್ಯಂಗ್ಯಚಿತ್ರಕಾರ ಮತ್ತೂಬ್ಬರಿಲ್ಲ ಎಂದು ನಂಬಿದ್ದರು. ಹಾಗೆಯೇ ಹೇಳುತ್ತಿದ್ದರು.

ಕಾಮನ್‌ ಮ್ಯಾನ್‌

ಆರ್‌.ಕೆ.ಲಕ್ಷ್ಮಣ್‌ ಅವರು ಅಮರಗೊಳಿಸುವ ಒಬ್ಬನೇ ವ್ಯಕ್ತಿ, ಅದು ಕಾಮನ್‌ ಮ್ಯಾನ್‌. ಕಚ್ಚೆ, ಗೆರೆಯ ಅಂಗಿ, ಕೂದಲು ಉದುರಿದ ತಲೆ, ಕಪ್ಪು ಕನ್ನಡಕ, ಮೀಸೆ, ಚಪ್ಪಲಿ, ಸಂದರ್ಭಕ್ಕೆ ತಕ್ಕಂತೆ ಛತ್ರಿ ಇದು ಲಕ್ಷ್ಮಣ್‌ ಅವರ "ಕಾಮನ್‌ ಮ್ಯಾನ್‌'. ಈ ಕಾಮನ್‌ ಮ್ಯಾನ್‌ ಪಾತ್ರ ಹುಟ್ಟಿದ್ದೇ ಸ್ವಾರಸ್ಯ. ಟೈಮ್ಸ್‌ ಆಫ್ ಇಂಡಿಯಾ ಸೇರಿದ ಲಕ್ಷ್ಮಣ್‌ ತಮ್ಮ ವ್ಯಂಗ್ಯಚಿತ್ರದಲ್ಲಿ ತಮಿಳ, ಪಂಜಾಬಿ, ಬಂಗಾಳಿ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತದ ಭಿನ್ನ ಸಂಸ್ಕೃತಿಯನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ಪಾತ್ರಗಳಾಗಿ ವ್ಯಂಗ್ಯಚಿತ್ರದಲ್ಲಿ ಚಿತ್ರಿಸುತ್ತಿದ್ದರು. ಆದರೆ ಪತ್ರಿಕೆಯಲ್ಲಿ ಸಮಯದ ಮಿತಿಯಿಂದಾಗಿ ಚಿತ್ರದ ಇಂಥ ಪಾತ್ರಗಳು ಕಡಿಮೆಯಾಗಲಾರಂಭಿಸಿದವು. ಈ ಕೊರತೆಯನ್ನು ನೀಗಿಸಲು ಲಕ್ಷ್ಮಣ್‌ ಅವರಿಗೆ ಇಡೀ ಭಾರತದ ಸಾಮಾನ್ಯ ನಾಗರಿಕನನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬ ಬೇಕಾಗಿತ್ತು. ಅಂಥದ್ದೊಂದು ಪಾತ್ರಕ್ಕಾಗಿ ಪರಿತಪಿಸುತ್ತಿದ್ದರು. ಕಡೆಗೂ ಒಂದು ಚೌಕ ಕೋಟು ತೊಟ್ಟ, ಧೋತಿದಾರಿ ಹಿರಿಯನೊಬ್ಬ ಲಕ್ಷ್ಮಣ್‌ ಕುಂಚದಲ್ಲಿ ಅರಳಿಯೇ ಬಿಟ್ಟ. ಈತನೇ ಕಾಮನ್‌ ಮ್ಯಾನ್‌. ನಾನು ಆತನನ್ನು ಹುಡುಕಲಿಲ್ಲ, ಆತನೇ ನನ್ನನ್ನು ಹುಡುಕಿಕೊಂಡು ಬಂದ ಎಂದು ಲಕ್ಷ್ಮಣ್‌ ಕಾಮನ್‌ ಮ್ಯಾನ್‌ ಬಗ್ಗೆ ಹೇಳಿ ಕೊಂಡರು. ಲಕ್ಷ್ಮಣ್‌ ಅವರ ಪ್ರಕಾರ ಆತ ಸರಿಯುತ್ತಿರುವ ಕಾಲವನ್ನು ಮೂಕ ಪ್ರೇಕ್ಷಕನಂತೆ ನೋಡುತ್ತಿರುವ ಕೋಟ್ಯಂತರ ಭಾರತೀಯರ ಪ್ರತಿನಿಧಿ ಈ ಕಾಮನ್‌ ಮ್ಯಾನ್‌. 1951ರಿಂದ ಈ ಕಾಮನ್‌ಮ್ಯಾನ್‌ ಸಂಪಾದಕೀಯ ವ್ಯಂಗ್ಯಚಿತ್ರಗಳಲ್ಲಿ, ನಂತರ ಯು ಸೆಡ್‌ ಇಟ್‌ ಪಾಕೆಟ್‌ ವ್ಯಂಗ್ಯಚಿತ್ರದ ಅಂಕಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ. ಸಾಮಾಜಿಕ, ರಾಜಕೀಯ ಹಾಗೂ ಎಲ್ಲ ಸ್ಥರದ ಬೆಳವಣಿಗೆಗಳಿಗೆ ಈತ ಸಾಕ್ಷಿಯಾದ. ಸುದೀರ್ಘ‌ ಕಾಲ ಪತ್ರಿಕೆ ವ್ಯಂಗ್ಯಚಿತ್ರದಲ್ಲಿ ಕಾಣಿಸಿಕೊಂಡು ಸಾಮಾನ್ಯ ದನಿಯಾದ. ಈ ಪಾತ್ರ ಹಲವು ರೀತಿಯ ಪ್ರಭಾವ ಬೀರಲಾರಂಭಿಸಿತು. ಹಾಗೆಯೇ ವಾಗ್ಲೆ ಕಿ ದುನಿಯಾ ಎಂಬ ಧಾರಾವಾಹಿಯ ಮುಖ್ಯಪಾತ್ರಕ್ಕೆ ಪ್ರೇರಣೆಯಾಯಿತು. ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯ 150ನೇ ವರ್ಷಾಚರಣೆ ವೇಳೆ ಭಾರತ ಸರ್ಕಾರ ಈ ಕಾಮನ್‌ ಮ್ಯಾನ್‌ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವಿಸಿತು.

2005ರಲ್ಲಿ ಬೆಂಗಳೂರು ಮೂಲದ ವೈಮಾನಿಕ ಸಂಸ್ಥೆ ಏರ್‌ಡೆಕ್ಕನ್‌ ತನ್ನ ಲಾಂಛನವಾಗಿ ಈ ಕಾಮನ್‌ಮ್ಯಾನ್‌ನನ್ನೇ ಸ್ವೀಕರಿಸಿತು. ಮುಂಬೈನ ವರ್ಲಿಯಲ್ಲಿ 10 ಅಡಿಯ ಕಂಚಿನ ಪ್ರತಿಮೆ ಕೂಡ ನಿರ್ಮಿಸಲಾಗಿದೆ. ಜಗತ್ತಿನ ಇತಿಹಾಸದಲ್ಲಿ ವ್ಯಂಗ್ಯಚಿತ್ರ ಪಾತ್ರಕ್ಕೆ ಈ ಪರಿಯ ಗೌರವ ಸಿಕ್ಕಿದ್ದು ಅಪರೂಪ. ಅಂಥ ಅಪರೂಪದ ಗೌರವ ಲಕ್ಷ್ಮಣ್‌ ಸೃಷ್ಟಿಸಿದ ಕಾಮನ್‌ಮ್ಯಾನ್‌ಗೆ ಸಿಕ್ಕಿದ್ದು ಭಾರತೀಯರಿಗೆ ಹೆಮ್ಮೆ.
------

ದಿನಚರಿ

ಕ್ರಿಯಾಶೀಲ ವ್ಯಂಗ್ಯಚಿತ್ರಕಾರರಾಗಿದ್ದಾಗ ಲಕ್ಷ್ಮಣ್‌ ಅವರ ದಿನಚರಿ

8.30ಕ್ಕೆ ನಿದ್ರೆಯಿಂದೇಳುವುದು.

9ರಿಂದ 12 ಗಂಟೆಯ ತನಕ ಪತ್ರಿಕೆಗಳ ಓದು.

ನಂತರ ಆರು ಗಂಟೆ ಕಾಲ ಚಿತ್ರ ಬರೆಯುವ ಕೆಲಸ.

6 ಗಂಟೆ ಹೊತ್ತಿಗೆ ಕಚೇರಿಗೆ ವ್ಯಂಗ್ಯಚಿತ್ರ ರವಾನೆ.

ಕಿರುಕುಳ, ದಾಳಿ, ಬೆದರಿಕೆ....

ವ್ಯಂಗ್ಯಚಿತ್ರಕಾರರು ಸಾಮಾನ್ಯವಾಗಿ ಕಿರುಕುಳ, ಬೆದರಿಕೆಗಳನ್ನು ಎದುರಿಸಿಯೇ ಇರುತ್ತಾನೆ. ಲಕ್ಷ್ಮಣ್‌ ಅವರೂ ತಮ್ಮ ವೃತ್ತಿ ಜೀವನದಲ್ಲಿ ಅಂಥ ಸಂದರ್ಭಗಳನ್ನು ಎದುರಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆನ್ಸಾರ್‌ ಮಂಡಳಿ ತಮ್ಮ ವ್ಯಂಗ್ಯಚಿತ್ರದ ಮೇಲೆ ನಿರ್ಬಂಧ ಹೇರಿತ್ತು. ಬೇಸರಗೊಂಡ ಲಕ್ಷ್ಮಣ್‌ ಈ ಬಗ್ಗೆ ಪ್ರಧಾನಿ ಇಂದಿರಾಗಾಂಧಿ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದಿರಾ ಸೃಜನಶೀಲ ವ್ಯಕ್ತಿಗಳಿಗೆ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಸಮಾಧಾನ ಮಾಡಿಕಳುಹಿಸಿದ್ದರು. ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ಲಕ್ಷ್ಮಣ್‌ ವ್ಯಂಗ್ಯ ಗೆರೆಗಳ ಮೇಲೆ ನಿರ್ಬಂಧ ಹೇರುವುದನ್ನು ಬಿಡಲಿಲ್ಲ. ಕೋಪಗೊಂಡ ಲಕ್ಷ್ಮಣ್‌ ಇಂದಿರಾಗಾಂಧಿ ಆಷಾಡಭೂತಿ ಎಂದು ಕಿಡಿಕಾರಿದ್ದರು. ಪ್ರಜಾಪ್ರಭುತ್ವವನ್ನೇ ಕಿತ್ತೂಗೆದು, ಪ್ರಜಾಪ್ರಭುತ್ವದಲ್ಲಿ ವ್ಯಂಗ್ಯಚಿತ್ರಗಳು ಅತ್ಯಗತ್ಯ. ಬರೆಯುತ್ತಿರಿ ತಮಗೆ ಸಮಾಧಾನ ಮಾಡಿ ಕಳುಹಿಸಿದ್ದರೆಂದು ಟೀಕಿಸಿದ್ದರು.

ಮತ್ತೂಂದು ವ್ಯಂಗ್ಯಚಿತ್ರ ಲಕ್ಷ್ಮಣ್‌ ಅವರನ್ನು ಕೋರ್ಟ್‌ ಮೆಟ್ಟಿಲು ಹತ್ತಿಸಿತು ಮತ್ತು ಪ್ರಾಣಕ್ಕೆ ಸಂಚಕಾರ ಉಂಟು ಮಾಡಿತು. ಮುಂಬೈ ಗಲಭೆ ಸಂದರ್ಭದಲ್ಲಿ ಬರೆದ ವ್ಯಂಗ್ಯಚಿತ್ರವದು.ಗಲಭೆ ವೇಳೆ ಅನೇಕ ಬಸ್‌, ಕಾರ್‌ ಮುಂತಾದ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದನ್ನೇ ವಿಷಯವಾಗಿಟ್ಟುಕೊಂಡು ಲಕ್ಷ್ಮಣ್‌ ವ್ಯಂಗ್ಯಚಿತ್ರ ಬರೆದರು. ಮೋಟಾರ್‌ ಸೈಕಲ್‌ಗೆ ಬೆಂಕಿ ಹಚ್ಚಲು ಯತ್ನಿಸುತ್ತಿರುವ ಯುವಕನಿಗೆ ನೀನೆಂಥ ದೇಶಭಕ್ತ? ನಿನ್ನಿಂದ ಒಂದು ಸಣ್ಣ ಮೋಟರ್‌ ಸೈಕಲ್‌ ಸುಟ್ಟ ಹಾಕಲು ಆಗೋಲ್ವೆ? ಎಂಬ ಅಡಿ ಶೀರ್ಷಿಕೆಯೊಂದಿಗೆ ವ್ಯಂಗ್ಯ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಯಿತು. ಗಲಭೆಗೆ ಪ್ರೋತ್ಸಾಹಿಸುವ ವ್ಯಂಗ್ಯಚಿತ್ರವೆಂದು ಆರೋಪಿಸಿತು. ಸೂಕ್ತ ಸಮಜಾಯಿಷಿ ನೀಡಿ ಆರೋಪದಿಂದ ಲಕ್ಷ್ಮಣ್‌ ಮುಕ್ತರಾದರು. ಆದರೆ ಕೆಲ ಉದ್ರಿಕ್ತರ ಗುಂಪೊಂದು ಕಚೇರಿಗೆ ನುಗ್ಗಿ ಮುಖದ ಮೇಲೆ ಆ್ಯಸಿಡ್‌ ಎರಚಲು ಪ್ರಯತ್ನಿಸಿದರು! ಇಷ್ಟೇ ಅಲ್ಲ, ಗುಂಡು ಹೊಡೆಯುವುದಾಗಿ, ದಾಳಿ ನಡೆಸುವುದಾಗಿ ಹಲವು ಬಾರಿ ಬೆದರಿಕೆ ಕರೆಗಳು ಲಕ್ಷ್ಮಣ್‌ ಅವರಿಗೆ ಬಂದಿದ್ದವು.

ಗಟ್ಟು ಗುಟ್ಟು..

ಏಷ್ಯನ್‌ ಪೇಂಟ್ಸ್‌ ಲಾಂಛನದಲ್ಲಿ ಪೇಂಟಿಂಗ್‌ ಬ್ರಷ್‌ ಹಿಡಿದು ಮೈಯಲ್ಲಿ ಬಣ್ಣ ಮೆತ್ತಿಕೊಂಡು ಹುಡುಗನನ್ನು ನೋಡಿರಬಹುದು. ಆತನ ಹೆಸರು ಗಟ್ಟು. ಇದನ್ನು ಬರೆದವರು ಆರ್‌.ಕೆ.ಲಕ್ಷ್ಮಣ್‌. 1954ರಲ್ಲಿ ಜಾಹೀರಾತು ಏಜೆನ್ಸಿಯೊರ್ವರ ಮನವಿ ಮೇರೆಗೆ ಲಕ್ಷ್ಮಣ್‌ ಅದನ್ನು ಮಾಡಿಕೊಟ್ಟಿದ್ದರು.

ನಿವೃತ್ತಿ ಇಲ್ಲ

ವ್ಯಂಗ್ಯಚಿತ್ರಕಾರರಿಗೆ ನಿವೃತ್ತಿ ಎಂಬುದಿಲ್ಲ. ಪತ್ರಿಕೆಯ ಐಡೆಂಟಿಯಾದ ವ್ಯಂಗ್ಯಚಿತ್ರಕಾರರ ವಿಷಯದಲ್ಲಂತೂ ನಿವೃತ್ತಿ ಎಂಬುದು ಸುಳ್ಳೇ. ಲಕ್ಷ್ಮಣ್‌ ಅವರಿಗೆ ವರ್ಷಗಳ ಹಿಂದೆ ಪಾರ್ಶ್ವವಾಯುವಿನಿಂದ ಎಡಗೈ ಸ್ವಾಧೀನ ಕಳೆದುಕೊಂಡಿತು. ಆದರೂ ಚಿತ್ರ ಬರೆಯುವುದನ್ನು ನಿಲ್ಲಿಸಲಿಲ್ಲ. ಹಾಗೂ ಬರೆಯಲಾಗದ ದಿನ ಪತ್ರಿಕೆಯಲ್ಲಿ ಹಳೇ ವ್ಯಂಗ್ಯ ಪ್ರಕಟವಾಗುತ್ತಿತ್ತು!

ಸಿಂಪಲ್‌ ಲೈನ್ಸ್‌

ಇಂಗ್ಲೆಂಡಿನಲ್ಲಿ ಏಕ ವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನ ಮಾಡಿದ ಹೆಗ್ಗಳಿಕೆ ಆರ್‌.ಕೆ.ಎಲ್‌ ಅವರದ್ದು.

ಲಕ್ಷ್ಮಣ್‌ ಜೀವನದುದ್ದಕ್ಕೂ ಕೈಗಡಿಯಾರ ಕಟ್ಟಲಿಲ್ಲ

ಲಕ್ಷ್ಮಣ್‌ ತಮ್ಮ ಅಣ್ಣ ನಾರಾಯಣ್‌ ಸಣ್ಣ ಕಥೆಗಳಿಗೆ ಚಿತ್ರ ಬರೆಯುತ್ತಿದ್ದರು.

ಲಂಡನ್ನಿನ ಈವನಿಂಗ್‌ ಸ್ಟಾಂಡರ್ಡ್‌ ಪತ್ರಿಕೆಯಿಂದ ವ್ಯಂಗ್ಯಚಿತ್ರಕಾರ ಹುದ್ದಗೆ ಆಹ್ವಾನ ಬಂದಿತ್ತು.

ಲಕ್ಷ್ಮಣ್‌ ಮೆಚ್ಚಿದ ವ್ಯಂಗ್ಯಚಿತ್ರಕಾರ ಡೇವಿಡ್‌ ಲೋ. ಚಿಕ್ಕಂದಿನಲ್ಲಿ ಔಟಡಿ ಹೆಸರನ್ನು ಇಟಡಿ ಎಂದು ತಿಳಿದುಕೊಂಡಿದ್ದರಂತೆ.

ಲಕ್ಷ್ಮಣ್‌ ಮೆಚ್ಚಿದ್ದ ಇಬ್ಬರು ರಾಜಕಾರಣಿಗಳು, ಲಾಲು ಪ್ರಸಾದ್‌ ಯಾದವ್‌, ಅಟಲ್‌ ಬಿಹಾರಿ ವಾಜಪೇಯಿ.

ವ್ಯಂಗ್ಯಚಿತ್ರದ ಬಗ್ಗೆ ಲಕ್ಷ್ಮಣ್‌ ಯಾರೊಂದಿಗೂ ಚರ್ಚಿಸುತ್ತಿರಲಿಲ್ಲ. ಸಂಪಾದಕರೂ ಕೂಡ ಬರೆದ ಚಿತ್ರದ ಬಗ್ಗೆ ತಕರಾರು ಎತ್ತುತ್ತಿರಲಿಲ್ಲ!

ಲಕ್ಷ್ಮಣ್‌ ಹೇಳಿದ್ದು...

ನಾನು ಅದೃಷ್ಟವಂತ. ಏಕೆಂದರೆ ನನಗೆ ಒಂದು ದೊಡ್ಡ ಸಂಸ್ಥೆಯೇ ವ್ಯಂಗ್ಯಚಿತ್ರಗಳಿಗೆ ಸ್ಫೂರ್ತಿಯಾಗಿತ್ತು, ಐಡಿಯಾ ಕೊಡುತ್ತಿತ್ತು. ಅದು ಭಾರತ ಸರ್ಕಾರ.

ವ್ಯಂಗ್ಯಚಿತ್ರಕಾರ ವೈರುಧ್ಯಗಳನ್ನು, ವಿಲಕ್ಷಣ ಘಟನೆಗಳನ್ನು, ಸನ್ನಿವೇಶಗಳನ್ನು ಬಳಸಿಕೊಳ್ಳುತ್ತಾನೆ. ಆತನ ಉದ್ದೇಶ ಬದಲಾವಣೆ ಮಾಡಲು ಅಲ್ಲ. ತಿದ್ದುವುದಕ್ಕೆ ಅಥವಾ ಪ್ರಭಾವಿಸುವುದಕ್ಕೂ ಅಲ್ಲ.
ವ್ಯಂಗ್ಯಚಿತ್ರ ವಿದೇಶದಿಂದ ಆಮದಾಗಿದ್ದು. ಬ್ರಿಟಿಷರು ಅದನ್ನು ಭಾರತಕ್ಕೆ ತಂದಿದ್ದು. ಅಮೆರಿಕ, ಇಂಗ್ಲೆಂಡ್‌ನ‌ಲ್ಲಿ ಉತ್ತಮ ವ್ಯಂಗ್ಯ ಚಿತ್ರಕಾರರು ಕಾಣಸಿಗುತ್ತಾರೆ. ಭಾರತದಲ್ಲಿ ಅಂಥ ವ್ಯಂಗ್ಯಚಿತ್ರಕಾರರಿಲ್ಲ.

ಪ್ಲೇಬಾಯ್‌ ಅವಾಂತರ

ಲಕ್ಷ್ಮಣ್‌ ತಾವು ಮಾಡದ ತಪ್ಪಿಗೆ ನೋಟಿಸ್‌ ಪಡೆಯಬೇಕಾಯಿತು. ಅದು ಆಗಿದ್ದು ಹೀಗೆ...

ಅಮೆರಿಕದಲ್ಲಿರುವ ಸ್ನೇಹಿತರೊಬ್ಬರು ಕ್ರಿಸ್‌ ಮಸ್‌ ಉಡುಗೊರೆಯಾಗಿ ಪ್ಲೇಬಾಯ್‌ ಮ್ಯಾಗಜೀನ್‌ ಕಳುಹಿಸಿದ್ದರು. ಅಂಚೆ ಇಲಾಖೆ ಲಕ್ಷ್ಮಣ್‌ ಅವರಿಗೆ ನೋಟಿಸ್‌ ಕಳುಹಿಸಿ, ಕಾರಣ ಕೇಳಿತು; ನೀವು ಅಶ್ಲೀಲ ಸಾಹಿತ್ಯವನ್ನು ವಿದೇಶದಿಂದ ತರಿಸಿದ್ದೀರಿ. ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದು, 1892ರ ಸೆಕ್ಷನ್‌ 2ರ ಪ್ರಕಾರ ಸೀಮಾ ಸುಂಕ ಕಾಯ್ದೆಯಡಿ ನಿಮ್ಮ ವಿರುದ್ಧ ಯಾಕೆ ಕೈಗೊಳ್ಳಬಾರದು, ಎಂದು ವಿವರಣೆ ಕೇಳಿತು. ಈ ಸಮಸ್ಯೆಗೆ ಪರಿಹಾರ ಬಯಸಿ ಮಿತ್ರರಲ್ಲಿ ವಿಷಯ ಪ್ರಸ್ತಾಪಿಸಿದಾಗ ಮಿತ್ರರೆಲ್ಲಾ ಪರಿಹಾರದ ಬದಲು ಪ್ಲೇಬಾಯ್‌ ಪತ್ರಿಕೆಯನ್ನೇ ಕೊಡುವಂತೆ ಕೇಳಿದ್ದರಂತೆ! ಇಲಾಖೆಗೆ ಏನಾಗಿದೆ ಎಂದು ತಿಳಿಸಿ, ಯಾವುದೇ ಕ್ರಮ ಎದುರಿಸದೆ ಮುಕ್ತರಾದರು.

ಎಲೆ ತೋರಿದ ದಾರಿ...

ಲಕ್ಷ್ಮಣ್‌ ಮಾತು ಕಲಿಯುವ ಮುನ್ನ ಚಿತ್ರಗಳನ್ನು ನೋಡುವುದನ್ನು, ಗುರುತಿಸುವುದನ್ನು ಕಲಿತಿದ್ದರು. ಹಾಗಾಗಿ ಚಿತ್ರಕಲೆ ಜನ್ಮಜಾತವಾಗಿತ್ತು ಎಂದರೆ ತಪ್ಪಲ್ಲ. ಇದೇ ಮಾತನ್ನು ಲಕ್ಷ್ಮಣ್‌ ತಮ್ಮ ಬದುಕಿನುದ್ದಕ್ಕೂ ಹೇಳುತ್ತಿದ್ದರು. ಬೆಳೆದು ನಿಂತ ಈ ವ್ಯಂಗ್ಯ ಕಲೆಯ ಸಿರಿಯನ್ನು ಮೊಳಕೆಯಲ್ಲಿ ಬೆನ್ನುತಟ್ಟಿದ ಘಟನೆಯೊಂದು ನಡೆದಿತ್ತು.

ಮೈಸೂರಿನ ಸರ್ಕಾರಿ ಮುನ್ಸಿಪಲ್‌ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಡೆದ ಘಟನೆ ಇದು. ಮೇಷ್ಟ್ರು ಒಬ್ಬರಿಗೆ ಬೀಡಿ ಸೇದುವ ಚಟ. ಆ ದಿನ ಮೇಷ್ಟ್ರಿಗೆ ಬೀಡಿ ಸೇದಬೇಕೆನಿಸಿತು. ವಿದ್ಯಾರ್ಥಿಗಳಿಗೆ ಅಶೋಕದ ಎಲೆಯ ಚಿತ್ರವನ್ನು ಬರೆಯಲು ಹೇಳಿ ಹೊರಹೋದರು. ಬಂದ ಮೇಲೆ ಎಲ್ಲ ಹುಡುಕರೂ ಬರೆದ ಚಿತ್ರ ನೋಡುತ್ತಾ ಬಂದರು. ಲಕ್ಷ್ಮಣ್‌ ಚಿತ್ರ ಅದ್ಭುತವಾಗಿತ್ತು. ಅವರ ಕೈಹಿಡಿದ ಮೇಷ್ಟ್ರು ನೀನೇ ಬರೆದದ್ದಾ ಎಂದು ಆಶ್ಚರ್ಯದಿಂದ ಕೇಳಿದರು. ಬರೆಯುವುದನ್ನು ಮುಂದುವರೆಸಿ ದೊಡ್ಡ ಕಲಾವಿದನಾಗುತ್ತೀಯಾ ಎಂದು ಬೆನ್ನು ತಟ್ಟಿದರು. ಈ ಘಟನೆಯನ್ನು ಲಕ್ಷ್ಮಣ್‌ ತಮ್ಮ ಆತ್ಮಕತೆ ದಿ ಟನಲ್‌ ಆಫ್ ಟೈಮ್‌ನಲ್ಲಿ ದಾಖಲಿಸಿದ್ದಾರೆ.

ಮೈಸೂರು ಟು ಮುಂಬೈ

ಮೈಸೂರಿನಿಂದ ಮದ್ರಾಸ್‌ಗೆ ಹೋಗಿ ಅನಿಮೇಟರ್‌ ಆಗಿ ಕೆಲಸ ಹುಡುಕಿಕೊಂಡರು. ಆದರೆ ಅವರ ಸೆಳೆತವಿದ್ದಿದ್ದು ವ್ಯಂಗ್ಯಚಿತ್ರದ ಕಡೆಗೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಸೇರಬೇಕೆಂದು ಮದ್ರಾಸ್‌ ಮತ್ತು ದೆಹಲಿಯಲ್ಲಿ ಎರಡು ಬಾರಿ ಪ್ರಯತ್ನಿಸಿದರು. ಆದರೆ ಕೆಲಸ ಸಿಗಲಿಲ್ಲ. ಇವರ ಚಿತ್ರಗಳನ್ನು ನೋಡಿದ್ದ ತಮಿಳು ಪತ್ರಿಕೆಯೊಂದು ಆಹ್ವಾನ ನೀಡಿತು.

ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂದು ಕನಸುಕಂಡಿದ್ದ ಲಕ್ಷ್ಮಣ್‌ ತಮಿಳು ಪತ್ರಿಕೆಯ ಆಹ್ವಾನ ಒಪ್ಪಿಕೊಳ್ಳಲಿಲ್ಲ. ದೆಹಲಿಗೆ ತೆರಳಿ ಕೆಲಸ ಹುಡುಕಲು ಪ್ರಾರಂಭಿಸಿದರು.

ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ಬಾಗಿಲು ಬಡಿದರು. ಅವರೇನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಇನ್ನು ಹೀಗೆ ಕಾಲ ಕಳೆಯಬಾರದೆಂಬು ಮದ್ರಾಸ್‌ಗೆ ತೆರಳಿ ಆಹ್ವಾನವಿತ್ತ ತಮಿಳು ಪತ್ರಿಕೆಗೇ ಸೇರಿಕೊಳ್ಳವೆಂದು ನಿರ್ಧರಿಸಿದರು. ಅಲ್ಲಿಗೆ ಹೋಗುವ ಮುನ್ನ ಮುಂಬೈನಲ್ಲಿ ಒಂದೆರಡು ದಿನ ಕಳೆದು ಹೋಗೋಣವೆಂದು ಮುಂಬೈಗೆ ಬಂದರು.

ಅಲ್ಲಿಗೆ ಫ್ರೀ ಪ್ರಸ್‌ ಜರ್ನಲ್‌ ಪತ್ರಿಕೆ ಕೆಲಸ ಕೊಟ್ಟಿತು. ಇದೇ ಪತ್ರಿಕೆಯಲ್ಲಿ ಶಿವಸೇನಾ ನಾಯಕ ಬಾಳಾ ಠಾಕ್ರೆ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮಣ್‌ ಕಮ್ಯುನಿಸ್ಟ್‌ರ ವಿರುದ್ಧ ವ್ಯಂಗ್ಯಚಿತ್ರಬರೆದದ್ದು ಸಹಿಸದ ಜರ್ನಲ್‌ ಸಂಪಾದಕರು ಲಕ್ಷ್ಮಣ್‌ಗೆ ತಾಕೀತು ಮಾಡಿದರು. ನೊಂದ ಲಕ್ಷ್ಮಣ್‌ ಜರ್ನಲ್‌ಗೆ ರಾಜೀನಾಮೆ ನೀಡಿ ಹೊರಬಂದರು. ಅದೇ ದಿನ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತು. ಆದರೆ ವ್ಯಂಗ್ಯಚಿತ್ರಕಾರನಾಗಿ ಅಲ್ಲ, ಚಿತ್ರಕಾರನಾಗಿ! ಇದೇ ಸಂಸ್ಥೆಯಲ್ಲಿ ಸುಮಾರು ಅರ್ಧ ಶತಮಾನ ವ್ಯಂಗ್ಯಚಿತ್ರಕಾರರಾಗಿ ದುಡಿದರು.

ಸ್ವತ್ಛಂದ ಬಾಲ್ಯ

ಲಕ್ಷ್ಮಣ್‌ ಅವರು ಮಾತುಗಳಲ್ಲಿ ನೇರ, ಅಹಮ್ಮಿಕೆ ಕಾಣುತ್ತದೆ ಎಂಬ ಆರೋಪ ಇದ್ದೇ ಇತ್ತು. ಅವರು ಸ್ವತ್ಛಂದವಾಗಿ ಬೆಳೆದ ಕಾರಣ ಇದು. ಲಕ್ಷ್ಮಣ್‌ ಅವರ ತಂದೆ ಕೃಷ್ಣಸ್ವಾಮಿ ಅಯ್ಯರ್‌ ಮುಖ್ಯೋಪಾಧ್ಯಾಯರು. ಮಕ್ಕಳನ್ನು ಯಾವುದೇ ಹೇರಿಕೆ ಇಲ್ಲದೆ ಬೆಳೆಸಿದರು. ಲಕ್ಷ್ಮಣ್‌ ಅವರ ಚಿತ್ರಕಲೆಗೂ ಮನೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯಿತು. ಮನೆಯ ಬಾಗಿಲು, ಗೋಡೆ, ನೆಲದ ಮೇಲೆ ಚಿತ್ರಗಳನ್ನು ಬರೆದಾಗ ಲಕ್ಷ್ಮಣ್‌ ಅವರಿಗೆ ಏಟಿನ ಬದಲು ಶಹಭಾಸ್‌ ಗಿರಿ ಸಿಕ್ಕಿತ್ತು.

ಪಾರ್ಶ್ವವಾಯು ಪೀಡಿತರಾಗಿ ತಂದೆ ನಿಧನರಾದಾಗ ಕುಟುಂಬದ ಜವಾಬ್ದಾರಿ ಮಕ್ಕಳ ಮೇಲೆ ಬಿತ್ತು. ಆಗಲೂ ಅಣ್ಣ ನಾರಾಯಣ್‌ ಅವರು ಎಲ್ಲ ಕುಟುಂಬದ ಹೊಣೆ ಹೊತ್ತರು. ಹೀಗಾಗಿ ಲಕ್ಷ್ಮಣ್‌ ಅವರ ಬಾಲ್ಯ ಸ್ವತ್ಛಂದ ಹಕ್ಕಿಯಂತಿತ್ತು. ತಾವು ಬಯಸಿದ್ದನ್ನು ಮಾಡುತ್ತಾ ಲಕ್ಷ್ಮಣ್‌ ತಮ್ಮ ಕನಸು ನನಸು ಮಾಡಿಕೊಳ್ಳುವುದಕ್ಕೆ ಸಾಕಷ್ಟು ಪ್ರೋತ್ಸಾಹ ಮತ್ತು ಅವಕಾಶ ಲಭಿಸಿತು.

ಎರಡು ರುಪಾಯಿ ಎಂಟಾಣೆ..

ಲಕ್ಷ್ಮಣ್‌ 12-13 ವರ್ಷದವರಿದ್ದಾಗ ನಾರಾಯಣ್‌ ಅವರು ಬರೆದ ಕತೆಗಳಿಗೆ ಚಿತ್ರ ಬರೆಯುತ್ತಿದ್ದರು. ಆಗ ಕತೆ ಮತ್ತು ಚಿತ್ರಗಳೆರಡು ಹಿಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಕತೆಗೆ ಅಣ್ಣನಿಗೆ ಸಂಭಾವನೆ ಸಿಕ್ಕರೆ, ಚಿತ್ರಕ್ಕೆ ಲಕ್ಷ್ಮಣ್‌ ಅವರಿಗೂ ಸಂಭಾವನೆ ಸಿಗುತ್ತಿತ್ತು. ಒಂದು ಚಿತ್ರಕ್ಕೆ ಎರಡು ರುಪಾಯಿ ಎಂಟಾಣೆ! ಇದು ಅವರ ಚಿತ್ರ ಬರೆಯಲು ಬೇಕಾದ ಪರಿಕರಕೊಳ್ಳಲು ಉಪಯೋಗವಾಗುತ್ತಿತ್ತಂತೆ!

ಕನ್ನಡಿಗರು... ಆದರೆ...

ಲಕ್ಷ್ಮಣ್‌ ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲಿ. ಅವರು ಚಿತ್ರ ಬರೆಯಲು ಆರಂಭಿಸಿದಾಗ ಅವರನ್ನು ಗುರುತಿಸಿ ಅವಕಾಶ ನೀಡಿದ್ದು ಹಾಸ್ಯ ಸಾಹಿತಿ ಡಾ.ಎಂ. ಶಿವರಾಂ ಆರಂಭಿಸಿದ್ದ ಪತ್ರಿಕೆ ಕೊರವಂಜಿ. ಆದರೆ ಈ ಬಗ್ಗೆ ಎಲ್ಲೂ ಲಕ್ಷ್ಮಣ್‌ ಮಾತಾಡಿದ್ದು ಕೇಳಲಿಲ್ಲ. ಹಳೆಯ ನೆನಪುಗಳನ್ನು ಹಂಚಿಕೊಂಡ ಉಲ್ಲೇಖವಿಲ್ಲ. ಬದುಕಿನ ಕಡೆಯ ದಿನಗಳನ್ನು ಪುಣೆಯಲ್ಲೇ ಕಳೆದಿದ್ದರು.

ಮದುವೆ....

ಲಕ್ಷ್ಮಣ್‌ ಅವರು ಮಕ್ಕಳ ಸಾಹಿತಿ ಕಮಲಾ ಅವರೊಂದಿಗೆ ವಿವಾಹವಾದರು. ಚೆನ್ನೈ ಮೂಲದವರಾದ ಇವರು ಜೆಜೆ ಸ್ಕೂಲ್‌ ಆಫ್ ಆರ್ಟ್ಸ್ನಲ್ಲಿ ವ್ಯಾಸಂಗ ಮಾಡಿದ್ದರು (ಇದೇ ಶಾಲೆಗೆ ಲಕ್ಷ್ಮಣ್‌ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ). ಮಕ್ಕಳಿಗಾಗಿ ಕತೆಗಳನ್ನು ಬರೆಯಲಾರಂಭಿಸಿದ ಇವರು 70ರ ದಶಕದಲ್ಲಿ ಹಲವು ಮಕ್ಕಳ ಕೃತಿಗಳನ್ನು ಸಂಪಾದಿಸಿಕೊಟ್ಟರು. ಇವರು ಬರೆದ ತೆನಾಲಿರಾಮನ ಕತೆ 13 ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. 15ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ.
 

Trending videos

Back to Top