CONNECT WITH US  

ಮೆತ್ತಗಾದ ಜಾರಕಿ, ಇಂದು ಕ್ಲೈಮಾಕ್ಸ್‌ ! ಭೇಟಿಗೆ ಸಮ್ಮತಿ

ಬೆಂಗಳೂರು: ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಗುರುವಾರ ಇಡೀ ದಿನ ನಡೆದ ರಾಜಿ-ಪಂಚಾಯ್ತಿಯ ಪರಿಣಾಮವಾಗಿ ಸಚಿವ ಸತೀಶ್‌ ಜಾರಕಿಹೊಳಿ ರಾಜೀನಾಮೆ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣ ಗೋಚರಿಸಿವೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮನವೊಲಿಸಲು ನಡೆಸಿದ ಪ್ರಯತ್ನ ಸಫ‌ಲವಾದಂತಿದ್ದು, ಮಾತುಕತೆಗೆ ಬೆಂಗಳೂರಿಗೆ ಆಗಮಿಸಲು ಸತೀಶ್‌ ಜಾರಕಿಹೊಳಿ ಒಪ್ಪಿದ್ದಾರೆ.

ಆದರೆ, ಈ ಹಂತದಲ್ಲೂ ರಾಜೀನಾಮೆ ಹಿಂಪಡೆಯುವ ಬಗ್ಗೆ ಸ್ಪಷ್ಟ ನಿರ್ಧಾರವಾಗಿಲ್ಲ. ಶುಕ್ರವಾರ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಅವರೊಂದಿಗೆ ನೇರಾನೇರ ಚರ್ಚೆ ನಡೆಸಿದ ನಂತರ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಜಾರಕಿಹೊಳಿ ಪರವಾಗಿ ಸಂಧಾನ ನಡೆಸಲು ನಿಯೋಗದಲ್ಲಿ ಬೆಳಗಾವಿಯಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಹೆಬ್ಟಾಳಕರ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಶಾಸಕರಾದ ಫಿರೋಜ್‌ ಶೇಠ, ವಿಧಾನ ಪರಿಷತ್‌ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಶಾಸಕ ಶಾಮ ಘಾಟಗೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಡರಾತ್ರಿವರೆಗೂ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಾರಕಿಹೊಳಿ ಅಸಮಾಧಾನಕ್ಕೆ ಇರುವ ಕಾರಣಗಳನ್ನು ಅರಿತ ನಂತರ ಸಿದ್ದರಾಮಯ್ಯ ಅವರು ಜಾರಕಿಹೊಳಿ ಅವರೊಂದಿಗೆ ನೇರವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸಲು ಮುಂದಾದರು.

ಈ ಸಂದರ್ಭದಲ್ಲಿ ಅಸಮಾಧಾನಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಾತುಕತೆಗಳು ಆರಂಭಗೊಂಡರೂ, ಚರ್ಚೆ ದೀರ್ಘ‌ವಾಗಿ ನಡೆಯದೆ ಬೆಂಗಳೂರಿಗೆ ಬನ್ನಿ ಕುಳಿತು ಮಾತನಾಡೋಣ ಎಂದು ಸಿಎಂ ಸೂಚಿಸಿದ್ದು, ಇದಕ್ಕೆ ಜಾರಕಿಹೊಳಿ ಒಪ್ಪಿದರು ಎನ್ನಲಾಗಿದೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕರು ಹಾಗೂ ಸಚಿವರೊಂದಿಗೆ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್‌ ಸಭೆ ನಡೆಸಲಿದ್ದು, ಆ ಸಭೆಗೆ ನೇರವಾಗಿ ಜಾರಕಿಹೊಳಿ ಆಗಮಿಸುವರು. ಇದಾದ ಸಿಎಂ ಹಾಗೂ ಜಾರಕಿಹೊಳಿ ಮಾತುಕತೆ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ತಡವಾದರೆ ಈ ಮಾತುಕತೆ ಶನಿವಾರಕ್ಕೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಾರಕಿಹೊಳಿ 3 ಷರತ್ತು?:

ಇದಕ್ಕೂ ಮುನ್ನ ನಿಯೋಗದೊಂದಿಗೆ ಸಿಎಂ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಜಾರಕಿಹೊಳಿ ಅಸಮಾಧಾನ ಹಾಗೂ ಅವರ ಮೂರು ಷರತ್ತುಗಳ ಬಗ್ಗೆ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ-

1. ಜನಸಂಪರ್ಕವಿರುವ ಖಾತೆಯೇ ಜಾರಕಿಹೊಳಿ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ಸಿಎಂ ಅವರು ಏಪ್ರಿಲ್‌ನಂತರ ಖಾತೆ ಬದಲಾವಣೆಯ ಭರವಸೆ ನೀಡಿದರು ಎನ್ನಲಾಗಿದೆ.

2. ಬೇರೆ ಖಾತೆ ದೊರೆಯುವವರೆಗೂ ಅಬಕಾರಿ ಇಲಾಖೆಯಲ್ಲಿ "ಯಾರದ್ದೂ' ಹಸ್ತಕ್ಷೇಪವಿರಬಾರದು ಎಂಬ ಎರಡನೇ ಷರತ್ತಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

3. ಬೆಳಗಾವಿ ಜಿಲ್ಲೆಯ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಪ್ರಮುಖ ವರ್ಗಾವಣೆಗಳಲ್ಲಿ ತಮ್ಮ ಮಾತು ನಡೆದಿಲ್ಲ. ತಾವೂ ಸೂಚಿಸಿದವರನ್ನು ಹೊರತುಪಡಿಸಿ ವರ್ಗಾವಣೆ ಮಾಡಲಾಗಿದೆ. ಇದನ್ನು ಬದಲಾಯಿಸಬೇಕು ಎಂಬ ಬೇಡಿಕೆಗೆ ಜಾರಕಿಹೊಳಿ ಬಯಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡುವ ಭರವಸೆಯನ್ನು ಸಿಎಂ ನೀಡಿದರು ಎನ್ನಲಾಗಿದೆ.

ದಿನವಿಡೀ ಹಚ್ಚಿದರು ತೇಪೆ:

ಇದಕ್ಕೂ ಮುನ್ನ ಸತೀಶ್‌ ಜಾರಕಿಹೊಳಿ ರಾಜೀನಾಮೆ ಪ್ರಕರಣದ ರಾಜಿ-ಪಂಚಾಯ್ತಿಯು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಟ್ಟೊಟ್ಟಿಗೆ ನಡೆಯಿತು.

ಜಾರಕಿಹೊಳಿ ದೂತರಾಗಿ ಬೆಂಗಳೂರಿಗೆ ಆಗಮಿಸಿದ ಲಕ್ಷ್ಮೀ ಹೆಬ್ಟಾಳಕರ ನೇತೃತ್ವದ ನಿಯೋಗ ಲೋಕೋಪಯೋಗಿ ಸಚಿವ ಮಹದೇವಪ್ಪ ಅವರೊಂದಿಗೆ ಎರಡು ಸುತ್ತಿನ ಸಭೆ ನಡೆಸಿತು. ಅನಂತರ ಮಹದೇವಪ್ಪ ಅವರು ಈ ನಿಯೋಗವನ್ನು ಮುಖ್ಯಮಂತ್ರಿ ನಿವಾಸಕ್ಕೆ ಒಯ್ದು ಅವರೊಂದಿಗೆ ಮಾತುಕತೆ ನಡೆಸಿದರು.

ಅತ್ತ ಬೆಳಗಾವಿ ಜಿಲ್ಲೆ ಗೋಕಾಕದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌ ಅವರು ಒಂದು ಗಂಟೆಗೂ ಹೆಚ್ಚು ಕಾಲ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಸಂಧಾನ ನಡೆಸಿದರು. ಇದೆಲ್ಲದರ ಫ‌ಲವಾಗಿ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿ ಸಿಎಂ ಅವರೊಂದಿಗೆ ಚರ್ಚೆ ನಡೆಸಲು ಒಪ್ಪಿದ್ದಾರೆ. ಆದರೆ, ಖಚಿತವಾಗಿ ರಾಜೀನಾಮೆ ಹಿಂಪಡೆಯುವರೆ ಎಂಬ ಪ್ರಶ್ನೆಗೆ ಸಿಎಂ ಅವರೊಂದಿಗಿನ ಚರ್ಚೆಯ ನಂತರವೇ ಉತ್ತರ ದೊರೆಯಲಿದೆ.


Trending videos

Back to Top