CONNECT WITH US  

ಜಾರಕಿ ಪ್ರಹಸನ ಕಡೆಗೂ ಅಂತ್ಯ: ರಾಜೀನಾಮೆ ವಾಪಸ್‌ಗೆ ಒಪ್ಪಿಗೆ

ಬೆಂಗಳೂರು: ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ರಾಜೀನಾಮೆ ಪ್ರಹಸನ ಶುಕ್ರವಾರ ತಡರಾತ್ರಿ ನಿರೀಕ್ಷೆಯಂತೆ ಸುಖಾಂತ್ಯವಾಗಿದೆ. ತಮ್ಮ ಆಹ್ವಾನ ಮನ್ನಿಸಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಸತೀಶ್‌ ಜಾರಕಿಹೊಳಿ ಅವರನ್ನು ಸಚಿವ ಮಹದೇವಪ್ಪ ನಿವಾಸದಲ್ಲಿ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಈ ವೇಳೆ ಸತೀಶ್‌ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ರಾಜೀನಾಮೆ ವಾಪಸ್‌ ಪಡೆದು ಸಚಿವ ಸಂಪುಟದಲ್ಲಿ ಮುಂದುವರಿಯುವುದಾಗಿ ಮಾತುಕತೆ ಬಳಿಕ ಸ್ವತಃ ಜಾರಕಿಹೊಳಿ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಪ್ರತಿಯಾಗಿ ಅವರಿಗೆ ತಕ್ಷಣಕ್ಕೆ ಅಂದರೆ, ವಿಧಾನಮಂಡಲ ಅಧಿವೇಶನದ ನಂತರ (ಬಹುತೇಕ ಫೆ. 14ರ ವೇಳೆಗೆ ) ಅಬಕಾರಿ ಖಾತೆ ಜತೆಗೆ ಹೆಚ್ಚುವರಿ ಖಾತೆಯೊಂದು (ಸಣ್ಣ ಕೈಗಾರಿಕೆ?) ದೊರೆಯಲಿದೆ.

ಸನಿಹ ಭವಿಷ್ಯದಲ್ಲಿ, ಅಂದರೆ ಸಚಿವ ಸಂಪುಟ ವಿಸ್ತರಣೆ ವೇಳೆ ಅಬಕಾರಿ ಖಾತೆ ಬದಲು ಜನ ಸಂಪರ್ಕವಿರುವ ಪ್ರಮುಖ ಖಾತೆ ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ, ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಪೊಲೀಸ್‌ ಸೇರಿದಂತೆ ಯಾವುದೇ ಇಲಾಖೆಯ ವರ್ಗಾವಣೆಯೂ ಅವರ ಒಪ್ಪಿಗೆ ನಂತರವೇ ನಡೆಯಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರು ಇನ್ನು ಮುಂದೆ ಜಾರಕಿಹೊಳಿ ಅವರನ್ನು ಉಪೇಕ್ಷೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ಮೂಲಕ ಕಳೆದ 3 ದಿನಗಳಿಂದ ನಡೆದಿದ್ದ ರಾಜೀನಾಮೆ ಹಾಗೂ ಮನವೊಲಿಸುವ ಪ್ರಹಸನ ಅಂತ್ಯಗೊಂಡಂತೆ ಆಗಿದೆ.

ಜಾರಕಿಹೊಳಿ ಅವರ ಪರವಾಗಿ ಗುರುವಾರ ನಗರಕ್ಕೆ ಆಗಮಿಸಿದ್ದ ಬೆಳಗಾವಿ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ್‌, ಶಾಸಕರಾದ ಫಿರೋಜ್‌ ಶೇಟ್‌, ವೀರಕುಮಾರ್‌ ಪಾಟೀಲ್‌ ಹಾಗೂ ಮಾಜಿ ಶಾಸಕ ಶ್ಯಾಮ ಘಾಟಗೆ ನಿಯೋಗದೊಂದಿಗೆ ಸಿಎಂ ಸಮಾಲೋಚನೆ ನಡೆಸಿ, ಅನಂತರ ಖುದ್ದು ಜಾರಕಿಹೊಳಿಗೆ ಕರೆ ಮಾಡಿ ನಗರಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಅದರಂತೆ ಸಂಜೆ ಆಗಮಿಸಿದ ಜಾರಕಿಹೊಳಿ ನೇರವಾಗಿ ಸಿದ್ದರಾಮಯ್ಯ ನಿವಾಸಕ್ಕೆ ತೆರಳದೆ ಮಹದೇವಪ್ಪ ನಿವಾಸಕ್ಕೆ ಹೋದರು. ಹೀಗಾಗಿ ಸಿದ್ದರಾಮಯ್ಯ ಅವರು ಮಹದೇವಪ್ಪ ನಿವಾಸಕ್ಕೆ ತೆರಳಬೇಕಾಯಿತು. ಈ ಸಭೆಯಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್‌ ಹಾಗೂ ಬೆಳಗಾವಿಯಿಂದ ಆಗಮಿಸಿದ್ದ ನಿಯೋಗವೂ ಪಾಲ್ಗೊಂಡಿತ್ತು.

ಒಂದು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯ ನಂತರ ಜಾರಕಿಹೊಳಿ ರಾಜೀನಾಮೆ ಹಿಂಪಡೆಯಲು ಒಪ್ಪಿದರು ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಉಪೇಕ್ಷೆ ಮಾಡುತ್ತಿದ್ದಾರೆ ಎಂದು ಮನನೊಂದು ಸತೀಶ್‌ ಜಾರಕಿಹೊಳಿ ಹಠಾತ್‌ ರಾಜೀನಾಮೆ ಘೋಷಿಸಿದ್ದರು. ಈ ಬಗ್ಗೆ ಮಾತುಕತೆಗೆ ಆಗಮಿಸುವಂತೆ ಖುದ್ದು ಸಿಎಂ ಅವರು ಆಹ್ವಾನ ನೀಡಿದರೂ ಆಗಮಿಸದೇ ಸತೀಶ್‌ ತಮ್ಮ ಪರವಾಗಿ ನಿಯೋಗವೊಂದನ್ನು ಸಿಎಂ ಅವರ ಬಳಿಗೆ ಕಳುಹಿಸಿದ್ದರು. ನಿಯೋಗದೊಂದಿಗೆ ಸಿಎಂ ಭೇಟಿ ಮಾಡಿ ಅನಂತರ ಮತ್ತೂಮ್ಮೆ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ ನಂತರ ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿದ ಅವರು ಸಿಎಂ ಅವರೊಂದಿಗೆ ಮಾತುಕತೆ ನಡೆಸಿದರು. ಈ ವರದಿ ಮುದ್ರಣಕ್ಕೆ ಹೋಗುವ ವೇಳೆಗೆ ಸಭೆ ಇನ್ನು ಮುಗಿದಿರಲಿಲ್ಲ. ಆದರೆ, ಸಿಎಂ ಆಪ್ತರಿಗೆ ಲಭ್ಯವಾಗಿರುವ ಸುಳಿವಿನ ಪ್ರಕಾರ ಪ್ರಕರಣ ಸುಖಾಂತ್ಯ ಕಂಡಿದೆ.


Trending videos

Back to Top