CONNECT WITH US  

ಪ್ರೇಮಿಗಳ ದಿನಕ್ಕೆ ಅಪೂರ್ವ ಹಾಡುಗಳು

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ರವಿಚಂದ್ರನ್‌ ಅಭಿನಯದ, ನಿರ್ಮಾಣ-ನಿರ್ದೇಶನದ "ಅಪೂರ್ವ' ಚಿತ್ರದ ಹಾಡುಗಳು ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಸಂಕ್ರಾಂತಿ ವೇಳಿಗೆ ಆಡಿಯೋ ಬಿಡುಗಡೆ ಎಂದು ಆಡಿಯೋ ಹಕ್ಕುಗಳನ್ನು ಕೊಂಡಿರುವ ಲಹರಿ ವೇಲು ಸಹ ಹೇಳಿಕೊಂಡಿದ್ದರು. ಪ್ಲಾನ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿ, ಈಗ ಹಾಡುಗಳು ಪ್ರೇಮಿಗಳ ದಿನದಂದು ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ.

ರವಿಚಂದ್ರನ್‌ ನಿರ್ದೇಶನದ ಚಿತ್ರವೊಂದರ ಹಾಡುಗಳನ್ನು ಬಿಡುಗಡೆ ಎಂದರೆ ಯಾವಾಗ, ಎಲ್ಲಿ, ಯಾರು ಬಿಡುಗಡೆ ಮಾಡುತ್ತಾರೆ ಮತ್ತು ಹೇಗೆ ಬಿಡುಗಡೆ ಮಾಡುತ್ತಾರೆ ಎಂಬಂತಹ ಪ್ರಶ್ನೆಗಳು ಸಹಜ. "ಅಪೂರ್ವ' ಚಿತ್ರಕ್ಕೂ ಅದು ಹೊರತಲ್ಲ. ಈ ಬಾರಿ ರವಿಚಂದ್ರನ್‌ "ಅಪೂರ್ವ' ಚಿತ್ರದ ಹಾಡುಗಳನ್ನು ಉದಯ ಟಿವಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಯಾರೋ ಒಬ್ಬರಿಂದ ಹಾಡುಗಳನ್ನು ಬಿಡುಗಡೆ ಮಾಡಿಸುವುದಕ್ಕಿಂತ ಹೆಚ್ಚಾಗಿ ಒಂದೊಂದು ಹಾಡನ್ನು ಒಬ್ಬೊಬ್ಬ ಸ್ಟಾರ್‌ ಕೈಯಿಂದ ಬಿಡುಗಡೆ ಮಾಡಿಸುವುದು ಅವರ ಯೋಚನೆ. ಅದಕ್ಕಾಗಿ ಮೂರು ಗಂಟೆಗಳ ಕಾರ್ಯಕ್ರಮವನ್ನು ಅವರು ಮಾಡುತ್ತಿದ್ದಾರೆ. ಆ ಕಾರ್ಯಕ್ರಮದಲ್ಲಿ ಹಾಡುಗಳ ಬಿಡುಗಡೆಯಾಗಲಿದೆ. ಅದಕ್ಕೆ ಈಗಾಗಲೇ ಅವರು ಸದ್ದಿಲ್ಲದೆ ಕೆಲಸ ಶುರು ಮಾಡಿದ್ದಾರೆ. ಈಗಾಗಲೇ ಪುನೀತ್‌ ರಾಜ್‌ಕುಮಾರ್‌ ಸದ್ದಿಲ್ಲದೆ ಒಂದು ಹಾಡನ್ನು ಬಿಡುಗಡೆ ಮಾಡುವ ಮತ್ತು ಹಾಡಿನ ಬಗ್ಗೆ ಮಾತಾಡುವ ದೃಶ್ಯವನ್ನು ರವಿಚಂದ್ರನ್‌ ಚಿತ್ರೀಕರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌, ದರ್ಶನ್‌, ಯಶ್‌ ಮುಂತಾದವರು ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ಅದನ್ನೆಲ್ಲಾ ಎಡಿಟ್‌ ಮಾಡಿ, ಒಂದು ಚೆಂದದ ಕಾರ್ಯಕ್ರಮ ರೂಪಿಸಿ, ಅದನ್ನು ಪ್ರೇಮಿಗಳ ದಿನದಂದೇ ಪ್ರಸಾರ ಮಾಡುವುದು ರವಿಚಂದ್ರನ್‌ ಅವರ ಐಡಿಯಾ.

ಇನ್ನು "ಅಪೂರ್ವ' ಚಿತ್ರದ ಚಿತ್ರೀಕರಣವನ್ನು ಅವರು ಬಹುತೇಕ ಮುಗಿಸಿದ್ದಾರಂತೆ. ನಾಲ್ಕು ದಿನಗಳ ಚಿತ್ರೀಕರಣ ಮುಗಿದರೆ ಚಿತ್ರಕ್ಕೆ ಕುಂಬಳಕಾಯಿ. ಮಾರ್ಚ್‌ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ರವಿಚಂದ್ರನ್‌ ಯೋಚಿಸುತ್ತಿದ್ದಾರೆ.

Trending videos

Back to Top