CONNECT WITH US  

ಸಾಂಸ್ಕೃತಿಕ ಏಕೀಕರಣ ಇಂದಿನ ಅವಶ್ಯ

ಹುಬ್ಬಳ್ಳಿ: ಕೇವಲ ಸಾಹಿತಿಗಳು ಮಾತ್ರವಲ್ಲದೇ, ಓದುಗರಲ್ಲೂ ಗುಂಪುಗಾರಿಕೆ ಪ್ರಾರಂಭವಾಗಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಕನ್ನಡ ಸಂಸ್ಕೃತಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ನಾಡಕವಿ ಡಾ|ಎಚ್‌.ಎಸ್‌. ವೆಂಕಟೇಶಮೂರ್ತಿ ವಿಷಾದ ವ್ಯಕ್ತಪಡಿಸಿದರು.

ಅಕ್ಷರ ಸಾಹಿತ್ಯ ವೇದಿಕೆ ಹಾಗೂ ಎಚ್ಚೆಸ್ವಿ ಪ್ರಕಾಶನ ವತಿಯಿಂದ ನಡೆದ ಮಹಾಂತಪ್ಪ ನಂದೂರ ಅವರ "ಕಲ್ಯಾಣವೆಂಬ ಪ್ರಣತಿ' ಸುನೀತ ಸಂಗ್ರಹ ಹಾಗೂ ಲೇಖನಗಳ ಸಂಗ್ರಹಗಳ "ಆನಂದ ನಿನಾದ' ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಸಾಹಿತಿಗಳಲ್ಲಿ ಗುಂಪುಗಾರಿಕೆ ಹೆಚ್ಚಾಗಿರುವುದರಿಂದ ಸಾಹಿತ್ಯ ಸಮುದಾಯ ಒಡೆಯುತ್ತಿದೆ ಎಂದರು.

ನಿಜವಾದ ಅಖಂಡ ಕರ್ನಾಟಕಕ್ಕೆ ಸಾಂಸ್ಕೃತಿಕ ಏಕೀಕರಣದ ಅಗತ್ಯವಿದೆ. ಸಾಹಿತಿಗಳು ಎಲ್ಲೆಡೆ ನಡೆಯುವ ಸಾಹಿತ್ಯ ಸಂಭ್ರಮಗಳಲ್ಲೂ ಭಾಗವಹಿಸುವ ಮೂಲಕ, ಮಾಸ್ತಿ ಅವರು ಹೇಳಿದಂತೆ ನಾವೆಲ್ಲ ನುಡಿ ಬಂಧುಗಳಾಗಿರಬೇಕು. ಕವಿತೆಗೆ ಸಾಲುಗಳ ಮಿತಿ ಇರಬೇಕು. ಇಲ್ಲವಾದಲ್ಲಿ ಅದು ಭಾಷಣವಾಗುತ್ತದೆ. ಇಂದಿನ ದಿನಗಳಲ್ಲಿ ಕವಿಗಳಿಗೆ ಪ್ರಶಸ್ತಿಗಳು ಬೇಕಿಲ್ಲ. ಉತ್ತಮ ಪ್ರಕಾಶಕರು ಬೇಕಾಗಿದ್ದಾರೆ ಎಂದರು.

ವಿಮರ್ಶಕ ಗಿರಡ್ಡಿ ಗೋವಿಂದರಾಜ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಲ್ಯಾಣದಲ್ಲಿ ನಡೆದದ್ದು ಮೌನ ಕ್ರಾಂತಿ. ಬಸವಣ್ಣ ಮತ್ತು ಅಲ್ಲಮಪ್ರಭು ಪ್ರವೃತ್ತಿ ಹಾಗೂ ನಿವೃತ್ತಿಗೆ ರೂಪಕವಾಗಿದ್ದರು. ಸಾಹಿತ್ಯ ಗಮನಿಸದೇ ಮಾತನಾಡುವ ಕೆಲವರು 12ನೇ ಶತಮಾನದಲ್ಲಿ ನಡೆದಿದ್ದೆಲ್ಲ ಸುಳ್ಳು ಎನ್ನುವಂತೆ ಬಿಂಬಿಸಿದ್ದಾರೆ. ಇತಿಹಾಸವನ್ನು ವಸ್ತುನಿಷ್ಟವಾಗಿ ರೂಪಿಸದೆ ಕೇವಲ ಕಾಲ್ಪನಿಕವಾಗಿ ತಮಗೆ ಬೇಕಾದ ಹಾಗೆ ಬದಲಾಯಿಸಲಾಗುತ್ತಿದೆ ಎಂದರು.

ಹಿಂದಿನ ದಿನಗಳಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ವಿವಿಧ ಭಾಷೆಗಳೇ ಪಾರುಪತ್ಯ ಸಾಧಿಸಿದ್ದರಿಂದ ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರಕಿರಲಿಲ್ಲ. ಕನ್ನಡ ಸಂಘ ಸ್ಥಾಪನೆಯಾದ ನಂತರ ಅಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ತಕ್ಕಮಟ್ಟಿನ ಸ್ಥಾನಮಾನ ದೊರೆತಿದೆ ಎಂದರು.

21ನೇ ಶತಮಾನದಲ್ಲೂ ಸುನೀತಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನಂದೂರ ಅವರ ಸುನೀತಗಳಲ್ಲಿ ಕ್ರಿಯಾಪದಗಳ ಬಳಕೆ ಕಡಿಮೆಯಾಗಿದೆ. ಶರಣರ ವಚನಗಳ ಲಯದಲ್ಲೇ ನಂದೂರ ಅವರ ಸುನೀತಗಳು ಮೂಡಿ ಬರಬೇಕು ಎಂದರು.
ಲೇಖಕ ಮಹಾಂತಪ್ಪ ನಂದೂರ ಇನ್ನಿತರರು ಮಾತನಾಡಿದರು. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಿಂಗರಾಜ ಅಂಗಡಿ, ಡಾ|ಪ್ರಹ್ಲಾದ ಅಗಸನಕಟ್ಟೆ ಮೊದಲಾದವರು ಇದ್ದರು. ಸಾಹಿತಿ ಆರೂರು ಲಕ್ಷ್ಮಣ ಶೇಟ್‌ ಸ್ವಾಗತಿಸಿದರು. ಮುನಿಸ್ವಾಮಿ ವಂದಿಸಿದರು.
 

Trending videos

Back to Top