ಪುನೀತ್ ರಾಜ್ಕುಮಾರ್ಗೆ 6 ಪ್ರಶ್ನೆಗಳು

ಮೈತ್ರಿ ಚಿತ್ರ ನಿಧಾನವಾಗಿ ಎಲ್ಲರಿಗೂ ಇಷ್ಟವಾಗುತ್ತಿದೆ. ಪುನೀತ್ ಸರಳ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆ ಅನ್ನುವುದು ಅವರನ್ನು ಮೆಚ್ಚುವವರ ಮನಸ್ಸು ಗೆದ್ದಿದೆ. ನಿಜಕ್ಕೂ ಪುನೀತ್ ಮುಂದೆ ಅಂಥ ಚಿತ್ರಗಳಲ್ಲಿ ನಟಿಸುತ್ತಾರಾ? ಅವರ ಆದ್ಯತೆಗಳೇನು? ಪುನೀತ್ ಉತ್ತರಿಸಿದ್ದಾರೆ.
1 ಮುಂದಿನ ಚಿತ್ರ?
ದೊಡ್ಮನೆ ಹುಡುಗ. ರಣವಿಕ್ರಮ ಮುಗಿದಿದೆ. ಡಬ್ಬಿಂಗ್ ಇನ್ನೇನು ಶುರುವಾಗಲಿದೆ. ಏಪ್ರಿಲ್ ಐದರಿಂದ ದೊಡ್ಮನೆ ಹುಡ್ಗ ಚಿತ್ರೀಕರಣ ಶುರು.
2 ಜೇಮ್ಸ್, ಜಯಣ್ಣ ನಿರ್ಮಾಣದ ಚಿತ್ರ, ಸಂತೋಷ್ ಆನಂದರಾಮ್ ಸಿನಿಮಾಗಳಲ್ಲಿ ನಟಿಸ್ತಿದ್ದೀರಿ ಅಂತ ಸುದ್ದಿಯಿದೆಯಲ್ಲ?
ಸುದ್ದಿಗಳು ಸಾಕಷ್ಟಿವೆ. ಕತೆಗಳನ್ನು ಕೇಳಿದ್ದೀನಿ. ಆದರೆ ಇನ್ನೂ ಅವೆಲ್ಲ ಫೈನಲೈಸ್ ಆಗಿಲ್ಲ. ಸೆಟ್ಟೇರುವುದಕ್ಕೆ ಇನ್ನೂ ತುಂಬ ಸಮಯ ಬೇಕು. ಎಲ್ಲವೂ ಮಾತುಕತೆಯ ಹಂತದಲ್ಲೇ ಇವೆ.
3 ಮುಂದೇನು?
ಒಪ್ಪಿಕೊಂಡ‚ ಸಿನಿಮಾಗಳು ಸಾಕಷ್ಟಿವೆ. ದೊಡ್ಮನೆ ಹುಡ್ಗ ಮುಗೀತಿದ್ದ ಹಾಗೆ, ಎಂಗೆಯುಂ ಎಪ್ಪೋದಂ ನಿರ್ದೇಶಕ ಶರವಣನ್ ಸಿನಿಮಾ. ಆಮೇಲೆ ಹೊಂಬೊಳೆ ವಿಜಯಕುಮಾರ್ ಚಿತ್ರ. ಅದಾದ ಬೇರೆ ಬೇರೆ ಸಿನಿಮಾ.
4 ಯಾವ ಆಧಾರದ ಮೇಲೆ ಸಿನಿಮಾ ಒಪ್ಕೋತೀರಿ?
ಬಜೆಟ್ಟು, ಯಾರು ಮಾಡ್ತಾರೆ ಅನ್ನೋದಕ್ಕಿಂತ ಹೇಗ್ ಮಾಡ್ತಾರೆ ಅನ್ನೋದೇ ಮುಖ್ಯ. ಶೂಟಿಂಗ್ ಯಾರು ಬೇಕಿದ್ರೂ ಮಾಡಬಹುದು. ತಂತ್ರಜ್ಞಾನ ಬದಲಾಗಿದೆ. ದೊಡ್ಡ ಕೆಮರಾಗಳೇ ಬೇಕಾಗಿಲ್ಲ. ಮೊಬೈಲಿನಲ್ಲೇ ಶೂಟಿಂಗ್ ಮಾಡಬಹುದು. ಹೀಗಾಗಿ ಮನಸ್ಸಲ್ಲೇನಿದೆ ಅನ್ನೋದನ್ನು ಹ್ಯಾಂಡಿಕ್ಯಾಮ್ನಲ್ಲಿ ಶೂಟ್ ಮಾಡಿಕೊಂಡು ಬಂದರೆ ಅರ್ಥ ಮಾಡಿಕೊಳ್ಳೋದು ಸುಲಭ.
5 ಬಜೆಟ್ಟು ಮುಖ್ಯ ಅಲ್ವಾ?
ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಕತೆ ಸರಳವಾಗಿರಬಹುದು. ಹೇಗೆ ಶೂಟಿಂಗ್ ಮಾಡ್ತೀರಿ. ನಿಮ್ಮ ಅಭಿರುಚಿ ಏನು, ಐಡಿಯಾ ಏನು ಅನ್ನೋದಷ್ಟೇ ನಂಗೆ ಮುಖ್ಯ.
6 ನಿಮಗೆ ಯಾವ ಥರದ ಸಿನಿಮಾ ಇಷ್ಟ?
- ನನಗೆ ಮೇಕಿಂಗ್ ಫಿಲ್ಮ್ಗಳು, ಫಾಸ್ಟ್ ಪೇಸ್ಡ್ ಫಿಲ್ಮ್ಗಳು ಬಹಳ ಇಷ್ಟ. ಇತ್ತೀಚೆಗೆ "ಪಿಕೆ' ನೋಡಿದೆ. ಚೆನ್ನಾಗಿತ್ತು. "ಬೇಬಿ' ನೋಡಿದೆ. ಸೂಪರ್ ಆಗಿತ್ತು. ಎಷ್ಟು ಚೆನ್ನಾಗಿ ಶೂಟ್ ಮಾಡಿದ್ದಾರೆ ನೋಡಿ. ಮೇಕಿಂಗ್ ಅದ್ಭುತವಾಗಿದೆ. "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನೋಡಿದೆ. ಅದು ಚೆನ್ನಾಗಿತ್ತು'.