CONNECT WITH US  

ವೀರಪ್ಪ ಮೊಯ್ಲಿಗೆ ಸರಸ್ವತಿ ಸಮ್ಮಾನ

ನವದೆಹಲಿ: ಕಾಂಗ್ರೆಸ್‌ ಹಿರಿಯ ಮುಖಂಡ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು 2014ನೇ ಸಾಲಿನ ಪ್ರತಿಷ್ಠಿತ "ಸರಸ್ವತಿ ಸಮ್ಮಾನ'ಕ್ಕೆ ಭಾಜನರಾಗಿದ್ದಾರೆ. ತನ್ಮೂಲಕ ಈ ಗೌರವ ಪಡೆದ ಎರಡನೇ ಕನ್ನಡಿಗ ಅವರಾಗಿದ್ದಾರೆ.

ಮೊಯ್ಲಿ ಅವರ ಪ್ರಸಿದ್ಧ ಮಹಾಕಾವ್ಯ "ರಾಮಾಯಣ ಮಹಾನ್ವೇಷಣಂ'ಗಾಗಿ ಪ್ರಶಸ್ತಿ ಲಭಿಸಿದೆ. 2010ನೇ ಸಾಲಿನ ಸರಸ್ವತಿ ಸಮ್ಮಾನ ಕನ್ನಡದ ಖ್ಯಾತ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರಿಗೆ ಒಲಿದಿತ್ತು.
5 ಸಂಪುಟಗಳನ್ನು ಒಳಗೊಂಡಿರುವ "ರಾಮಾಯಣ ಮಹಾನ್ವೇಷಣಂ' 2007ರಲ್ಲಿ ಕನ್ನಡದಲ್ಲಿ ಮೊದಲು ಪ್ರಕಟಗೊಂಡಿತ್ತು. ಬಳಿಕ ಅದನ್ನು ಇಂಗ್ಲಿಷ್‌, ಹಿಂದಿ, ತೆಲುಗು ಮತ್ತು ಹಿಂದಿ ಭಾಷೆಗೆ ಭಾಷಾಂತರಿಸಲಾಗಿತ್ತು.
"ರಾಮಾಯಣ ಮಹಾನ್ವೇಷಣಂ' ಕಾವ್ಯದಲ್ಲಿ ಮೊಯ್ಲಿ ಅವರು ರಾಮರಾಜ್ಯದ ಕುರಿತು ವರ್ಣಿಸಿದ್ದಾರೆ. ಕಲ್ಯಾಣ ರಾಜ್ಯದ ಆದರ್ಶ ಸಿದ್ಧಾಂತಗಳನ್ನು ಮತ್ತು ಆಧುನಿಕ ದೃಷ್ಟಿಕೋನಗಳನ್ನು ತೆರೆದಿಟ್ಟಿದ್ದಾರೆ ಎಂದು ಪ್ರತಿಷ್ಠಾನ ಹೇಳಿದೆ.

ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯನ್ಯಾಯಮೂರ್ತಿ ಆರ್‌. ಸಿ. ಲಹೋಟಿ ನೇತೃತ್ವದ 13 ಸದಸ್ಯರ ವಿದ್ವಾಂಸರು ಮತ್ತು ಬರಹಗಾರರ ತಂಡ ಮೊಯ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿರುವ ಮೊಯ್ಲಿ ಅವರು ಒಬ್ಬ ಕನ್ನಡದ ಪ್ರಸಿದ್ಧ ಲೇಖಕರಾಗಿಯೂ ಹೆಸರು ಮಾಡಿದ್ದು, ನಾಲ್ಕು ಕಾದಂಬರಿಗಳು, ಮೂರು ಕಾವ್ಯ ಸಂಗ್ರಹ, ಹಲವಾರು ನಾಟಕಗಳು ಮತ್ತು ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳಾದ "ಕೊಟ್ಟ' ಮತ್ತು "ತೆಂಬರೆ' ಕಾದಂಬರಿಗಳು ಹಿಂದಿ, ಇಂಗ್ಲಿಷ್‌ ಮತ್ತು ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿವೆ.

ವೀರಪ್ಪ ಮೊಯ್ಲಿ ಅವರು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾರ್ಪೊರೇಟ್‌ ವ್ಯವಹಾರ, ವಿದ್ಯುತ್‌ ಮತ್ತು ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1992 ರಿಂದ 1994ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಜಕಾರಣಕ್ಕೆ ಬರುವುದಕ್ಕೂ ಮುನ್ನ ಕಾರ್ಕಳ ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿ, ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದರು.
-

ಏನಿದು ಸರಸ್ವತಿ ಸಮ್ಮಾನ?

ಕೆ.ಕೆ. ಬಿರ್ಲಾ ಪ್ರತಿಷ್ಠಾನ 1991ರಲ್ಲಿ "ಸರಸ್ವತಿ ಸಮ್ಮಾನ' ಪ್ರಶಸ್ತಿಯನ್ನು ಆರಂಭಿಸಿದೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಇದನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ವಿದ್ಯೆಯ ದೇವಿಯಾದ ಸರಸ್ವತಿಯ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ 10 ಲಕ್ಷ ರೂ. ನಗದು, ಪಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ಒಳಗೊಂಡಿದೆ.

Trending videos

Back to Top