CONNECT WITH US  

ಅನಭಿಷಿಕ್ತ ಸಾಮ್ರಾಟ ಕೆ.ಎನ್‌. ಟೇಲರ್‌ ರಂಗ ನಿರ್ಗಮನ...

ಮಂಗಳೂರು: ತುಳು ಚಲನಚಿತ್ರ ಮತ್ತು ರಂಗಭೂಮಿಯ "ಅನಭಿಷಿಕ್ತ ಸಾಮ್ರಾಟ'ನಾಗಿದ್ದ, ನಾಯಕನಟ-ನಿರ್ದೇಶಕ- ನಿರ್ಮಾಪಕ, ಗೀತೆ ರಚನೆಕಾರ, ಸಂಭಾಷಣೆಕಾರ ಕೆ.ಎನ್‌. ಟೇಲರ್‌ (ಕಡಂದಲೆ ನಾರಾಯಣ ಟೇಲರ್‌-76 ವರ್ಷ) ಅವರು ಮಾ. 18ರಂದು ನಗರದ ಬಜೊjàಡಿಯ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಜಯಂತಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

19ರ ಹರೆಯದಿಂದ ತುಳು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಐದೂವರೆ ದಶಕಗಳ ಕಾಲ ಇಲ್ಲಿ ಮಿಂಚಿದರು. 1970ರಲ್ಲಿ ತುಳು ಚಲನಚಿತ್ರರಂಗಕ್ಕೆ ದಾರೆದ ಬುಡೆದಿ ಎಂಬ ಚಿತ್ರದ ಮೂಲಕ ಪ್ರವೇಶಿಸಿ ಭಾಗ್ಯವಂತೆದಿ ಎಂಬ ಚಿತ್ರದ ಮೂಲಕ 33 ವರ್ಷ ಕಾಲ ಸೇವೆ ಸಲ್ಲಿಸಿದರು. 70ನೇ ಮತ್ತು 80ನೇ ದಶಕದಲ್ಲಿ ತುಳು ಸಿನೆಮಾ ರಂಗದಲ್ಲಿ ಅದ್ವಿತೀಯ ಸಾಧನೆಯನ್ನು ನಾಯಕ ನಟ, ಗೀತೆ ರಚನೆಕಾರ, ನಿರ್ದೇಶಕನಾಗಿ ದಾಖಲಿಸಿ, ತುಳು ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟರು.

ಬಿಸತ್ತಿಬಾಬು ಎಂಬ ಅವರ ತುಳು ಚಿತ್ರ 1972-73ರ ಕರ್ನಾಟಕ ರಾಜ್ಯ ಸರಕಾರದ ಮೂರನೆಯ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿ ಪಡೆಯುವ ಮೂಲಕ ತುಳು ಚಿತ್ರರಂಗ ಅದ್ವಿತೀಯ ಮನ್ನಣೆಗೆ ಪಾತ್ರವಾಯಿತು.

ಸಾಧನೆಯ ಸರದಾರ

1994ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಮೂರು ಬಾರಿ ನವಭಾರತ-ತುಳುಕೂಟ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಸಾವಿರಕ್ಕೂ ಮಿಕ್ಕಿದ ಸಮ್ಮಾನಗಳನ್ನು ಕೆ.ಎನ್‌. ಟೇಲರ್‌ ಅವರು ಸ್ವೀಕರಿಸಿದ್ದಾರೆ.

ಗಲ್ಫ್ ದೇಶಕ್ಕೆ ತುಳು ರಂಗಭೂಮಿ ಕಲಾವಿದರ ಬಳಗವನ್ನು ಪ್ರಥಮ ಬಾರಿಗೆ ಸಂಘಟಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. 56 ವರ್ಷಗಳ ಹೆಮ್ಮೆಯ ಪರಂಪರೆಯ ಅವರ ಶ್ರೀ ಗಣೇಶ ನಾಟಕ ಸಭಾ ಸಂಸ್ಥೆ ಬೊಂಬಾಯಿ ಕಂಡನೆ, ಸೈನಗಾಂಡಲ ಸತ್ಯ ಪನ್‌ಲ ಸಹಿತ 15 ನಾಟಕಗಳು ಸಹಸ್ರಾರು ಪ್ರದರ್ಶನ ನೀಡಿವೆ. ಛತ್ರಪತಿ ಶಿವಾಜಿ, ತ್ಯಾಗಮೂರ್ತಿ ಸಹಿತ 12 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ದಾರೆದ ಬೊಡೆದಿ, ಭಾಗ್ಯವಂತೆದಿ ಮೊದಲಾದ 9 ತುಳು ಚಿತ್ರಗಳು. (ನಮ್ಮ ಭಾಗ್ಯ ಎಂಬ ಚಿತ್ರ ಬಿಡುಗಡೆಯಾಗಿಲ್ಲ.)

ಲೀಲಾವತಿ-ಜಯಮಾಲ

ಪ್ರಸಿದ್ಧ ನಟಿ ಲೀಲಾವತಿ ಅವರು ಬಿಸತ್ತಿ ಬಾಬು ಮೂಲಕ ತುಳು ಚಿತ್ರರಂಗ ಪ್ರವೇಶಿಸಿದರು. ಪ್ರಸಿದ್ಧ ನಟಿ ಜಯಮಾಲ ಅವರು ಟೇಲರ್‌ ಅವರ ನಾಟಕ, ಚಿತ್ರಗಳ ಮೂಲಕ ಜನಪ್ರಿಯರಾದರು. ಅಂತೆಯೇ, ಮಮತಾ ಶೆಣೈ, ರತ್ನಮಾಲಾ, ಸರೋಜಿನಿ ಶೆಟ್ಟಿ, ಹೇಮಲತಾ ಮುಂತಾದ ಕಲಾವಿದರು ಪ್ರಸಿದ್ಧಿ ಪಡೆದರು.

ಡಾ| ರಾಜ್‌ಕುಮಾರ್‌ ಅವರು ಟೇಲರ್‌ ಅವರ ಅಭಿನಯ ಸಾಮರ್ಥ್ಯವನ್ನು ಮುಕ್ತಕಂಠದಿಂದ ಪ್ರಶಂಶಿಸಿದ್ದರು. ದೇಶದ ವಿವಿಧ ಕ್ಷೇತ್ರಗಳ ಗಣ್ಯರಿಂದ ಸಮ್ಮಾನ ಪಡೆದಿದ್ದರು. ತೀರಾ ಇತ್ತೀಚೆಗಿನ ವರೆಗೂ ಅವರು ಕಲಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ತೀವ್ರ ಅಸ್ವಸ್ಥರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸದಾ ಲವಲವಿಕೆಯ, ಉತ್ಸಾಹದ, ಸ್ಫೂರ್ತಿದಾಯಕ ವ್ಯಕ್ತಿತ್ವ ಅವರದ್ದಾಗಿತ್ತು. ಈ ಐದೂವರೆ ದಶಕಗಳ ಅವಧಿಯಲ್ಲಿ ನೂರಾರು ಕಲಾವಿದರನ್ನು ರೂಪಿಸುತ್ತಾ, ಹೊಸತನ ತುಂಬುತ್ತಾ ಕಲಾಜಗತ್ತಿನಲ್ಲಿ ವಿಶೇಷ ಮನ್ನಣೆಗೆ ಅವರು ಪಾತ್ರರಾದರು. ಅವರು ನಟಿಸಿದ ಚಿತ್ರಗಳಲ್ಲಿ ಬಹುತೇಕ ಚಿತ್ರಕಥೆ, ಸಂಭಾಷಣೆ, ಹಾಡು ಅವರದ್ದೇ ಆಗಿತ್ತು ಅನ್ನುವುದು ಉಲ್ಲೇಖನೀಯ. ತುಳು ರಂಗಭೂಮಿಯನ್ನು ಪೋಷಿಸಿ, ತುಳು ಚಲನಚಿತ್ರರಂಗ ಕಟ್ಟಿ ಬೆಳೆಸಿದ ಕೀರ್ತಿ ಟೇಲರ್‌ ಅವರಿಗೆ ಸಲ್ಲುತ್ತದೆ.

ಟೇಲರ್‌ ತುಳುಚಿತ್ರ

ಕತೆ, ಚಿತ್ರಕತೆ, ಸಂಭಾಷಣೆಕಾರ, ನಿರ್ದೇಶಕ, ನಿರ್ಮಾಪಕನಾಗಿ ಟೇಲರ್‌ ಅಭಿನಯಿಸಿದ ತುಳು ಚಿತ್ರಗಳು: ದಾರೆದ ಬುಡೆದಿ, ಪಗೆತ ಪುಗೆ, ಬಿಸತ್ತಿಬಾಬು, ಯಾನ್‌ ಸನ್ಯಾಸಿ ಆಪೆ, ಕಾಸ್‌ದಾಯೆ ಕಂಡನೆ, ಯೇರ್‌ ಮಲ್ತಿನ ತಪ್ಪು, ತುಳುನಾಡ ಸಿರಿ, ಸಾವಿರಡೊರ್ತಿ ಸಾವಿತ್ರಿ, ಭಾಗ್ಯವಂತೆದಿ.

ತುಳು ನಾಟಕಗಳು

ಟೇಲರ್‌ ಅವರು ಬರೆದು ನಟಿಸಿದ ತುಳು ನಾಟಕಗಳು (ಸಹಸ್ರಾರು ಪ್ರದರ್ಶನ ನೀಡಿದ್ದಾರೆ): ಬೊಂಬಾಯಿ ಕಂಡನೆ, ಪುದರ್‌ ಕೇನಡೆ, ಡಾಕ್ಟರ್‌ ಶಂಕರ್‌, ತಮ್ಮಲೆ ಅರ್ವತ್ತನ ಕೋಲ, ಯೇರ್‌ ಮಲ್ತಿನ ತಪ್ಪು, ಎನನ್‌ ಬದ್ಕೆರೆ ಬುಡ್ಲೆ, ಯಾನ್‌ ಸನ್ಯಾಸಿ ಆಪೆ, ಕಾಸ್‌ದಾಯೆ ಕಂಡನೆ, ಕಲ್ಜಿಗದ ವಿಶ್ವಾಮಿತ್ರ ಮೇನಕೆ, ಇಂದ್ರನ ಆಸ್ತಿ, ಕಲ್‌Éದ ದೇವೆರ್‌, ಏರೆನÉ ನಂಬೊಡಿj, ದೇವೆರ್‌ ಕೊರೆ³ರ್‌, ಬಾಡಯಿದ ಬಂಗಾರ್‌, ಸೈನಗಾಂಡಲ ಸತ್ಯಪನ್‌ಲ.

ಅಪೂರ್ವ ದಾಖಲೆ

ಟೇಲರ್‌ ಅವರ ಬಿಸತ್ತಿ ಬಾಬು ತುಳುಚಿತ್ರ 1972-73ರ, ಕರ್ನಾಟಕ ಸರಕಾರದ 3ನೇ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಯಿತು. ಭಾಗ್ಯವಂತೆದಿ ಚಿತ್ರ ರಾಜ್ಯ ಸರಕಾರದ ವಿಶೇಷ ಪ್ರಶಸ್ತಿ ಪಡೆಯಿತು. (1981-82), ನವಭಾರತ-ತುಳುಕೂಟದ ವತಿಯಿಂದ 1973ರಲ್ಲಿ ಪ್ರಶಸ್ತಿ; 1974ರಲ್ಲಿ ಯಾನ್‌ ಸನ್ಯಾಸಿ ಆಪೆ ಚಿತ್ರಕ್ಕೆ ಉತ್ತಮ ನಟ ಪ್ರಶಸ್ತಿ.
 

Trending videos

Back to Top