CONNECT WITH US  

ಶಾಕಂಬರಿ ಯಾತ್ರಿ ಕುಟೀರ ಉದ್ಘಾಟನೆ

ಬಾದಾಮಿ: ಇಂದಿನ ದಿನಮಾನಗಳಲ್ಲಿ ನೈತಿಕ ಮೌಲ್ಯಗಳು ಉಳಿಯಲು ಮಠ ಮಾನ್ಯಗಳೇ ಕಾರಣ. ಮಠ ಮಾನ್ಯಗಳಲ್ಲಿ ಅದ್ಭುತ ಶಕ್ತಿ ಇದ್ದು, ಸುಕ್ಷೇತ್ರ ಬನಶಂಕರಿ ಶಕ್ತಿ ಪೀಠ ಭಾರತ ದೇಶದ 18 ಶಕ್ತಿ ಪೀಠಗಳಲ್ಲಿ ಒಂದು ಎಂದು ಶಿವಯೋಗ ಮಂದಿರದ ಶ್ರೀ ಮದ್ವೀರಶೈವ ಸಂಸ್ಥೆಯ ಅಧ್ಯಕ್ಷ ಡಾ| ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಸುಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ಗುರುವಾರ 5 ಕೋಟಿ ರೂ. ವೆಚ್ಚದ ಶ್ರೀ ಶಾಕಂಬರಿ ಅನ್ನಸದ್ಮ ಹಾಗೂ ಶ್ರೀ ಶಾಕಂಬರಿ ಯಾತ್ರಿ ಕುಟೀರ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ನಿತ್ಯ ಅನ್ನಸಂತರ್ಪಣೆಯ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸುಕ್ಷೇತ್ರ ಬನಶಂಕರಿ ದೇವಿ ಶಕ್ತಿ ಅದ್ಭುತವಾಗಿದೆ. ದೇವಿಯ ಸೇವೆ ಮಾಡುವುದರಿಂದ ನಾಸ್ತಿಕ ಇದ್ದವರು ಆಸ್ತಿಕರಾಗುತ್ತಾರೆ. ರೋಗಿಗಳು ಆರೋಗ್ಯವಂತರಾಗುತ್ತಾರೆ. ಶಕ್ತಿ ಇದ್ದಲ್ಲಿ ನೀರು ಇರುತ್ತದೆ. ನೀರು ಇದ್ದಲ್ಲಿ ದೇವಿ ಶಕ್ತಿ ಇರುತ್ತದೆ. ಮಾನವ ಹಣದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಇಂತಹ ಮಠ, ಮಾನ್ಯಗಳಿಗೆ ದಾನ ನೀಡುವ ಮೂಲಕ ಇಂತಹ ಸತ್ಕಾರ್ಯಗಳಿಗೆ ನೆರವಾಗಬೇಕು ಎಂದರು. ಬನಶಂಕರಿ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಮಲ್ಲಾರಭಟ್ಟ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಪ್ರತಿಷ್ಟಿತ ವೀರಪುಲಿಕೇಶಿ ಸಂಸ್ಥೆಯ ಚೇರಮನ್‌ ಎ.ಸಿ. ಪಟ್ಟಣದ, ಮಾಜಿ ಜಿಪಂ ಸದಸ್ಯ ಎಂ.ಬಿ. ಹಂಗರಗಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪುರ ಹಾಜರಿದ್ದರು.

ಕೆ.ಆರ್‌. ಪ್ರಕಾಶಬಾಬು ಮಂಡಗದ್ದೆ ಇವರ ಭಾಗ್ಯದೇವತೆ ಬಾದಾಮಿ ಬನಶಂಕರಿ ಎಂಬ ಕಿರುಹೊತ್ತಿಗೆಯನ್ನು ಡಾ| ಸಂಗನಬಸವ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಬನಶಂಕರಿ ಭವ್ಯಕಟ್ಟಡಕ್ಕೆ ದೇಣಿಗೆ ನೀಡಿದ ದಾನಿ ದಂಪತಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು. ಪ್ರಕಾಶ ಪೂಜಾರ, ಅಶೋಕ ಭಟ್ಟ ಪೂಜಾರ ಮಾತನಾಡಿದರು. ಎ.ಕೆ. ಪೂಜಾರ ವಂದಿಸಿದರು.
 


Trending videos

Back to Top