CONNECT WITH US  

ಬುದ್ಧಿಮತ್ತೆ ಚುರುಕಿಗೆ ನಗು ಸಿದೌಷಧ

ಚಿಕ್ಕಮಗಳೂರು: ಹೃದಯ ಪರಿಶುದ್ಧತೆ ಮತ್ತು ಬುದ್ಧಿಮತ್ತೆ ಚುರುಕಿಗೆ ನಗು ಸಿದೌœಷಧ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು. ಕಲ್ಯಾಣನಗರ 4ನೇ ಹಂತದ ಕೆ.ಜಿ.ಷಣ್ಮುಖಪ್ಪ ಅವರ ವಿನಾಯಕ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಮ್ಮ ಮನೆಯಂಗಳದಲ್ಲಿ ನಗೋಣ ಬನ್ನಿ ಹಾಸ್ಯರಸಾಯನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಮನೆಗಳಲ್ಲೂ ಸ್ವಲ್ಪ ನಗ-ನಗದು ಇದ್ದೇ ಇರುತ್ತದೆ. ಜೊತೆಗೆ ಹೊಗೆಧಗೆಯೂ ಇರುತ್ತದೆ. ಆದರೆ ನಗೆ ಇರುವುದಿಲ್ಲ. ನಗುವನ್ನು ಜಗ ಕಳೆದುಕೊಂಡಿದೆ. ಕವಿವಾಣಿಯಂತೆ ಜಗ ನಗಲಿ, ಮನೆ ನಗಲಿ, ಮನ ನಗಲಿ ನಾವು ನಗುವ ಹೂವಾಗಬೇಕು. ಆಗ ಮನೆ ಶಾಂತಿಯ ತೋಟವಾಗುತ್ತದೆ ಎಂದರು.

ರೆಪ್ಪೆ ತೆರೆದರೆ ಜನನ, ರೆಪ್ಪೆ ಮುಚ್ಚಿದರೆ ಮರಣ, ಮಿಸುಕಾಟವೇ ಜೀವನ. ನಮ್ಮ ಕುಟುಂಬ ಹಾಗೂ ವೃತ್ತಿಪರತೆಯಲ್ಲಿ ಹಾಸ್ಯದ ವಸ್ತುಗಳನ್ನು ಕಂಡುಕೊಳ್ಳಬಹುದು. ಹಾಸ್ಯ ಸಾಮರಸ್ಯವಾಗಲಿ, ಸಮರವಾಗದಿರಲಿ. ಸಾಹಿತ್ಯದ ಹೂರಣ ನಗೆಯ ಮೂಲಕ ಪಸರಿಸಲಿ. ಕೃತಕ ನಗೆ ಇಂದು ಹೆಚ್ಚುತ್ತಿದೆ. ವಾಸ್ತವವಾಗಿ ಸಂಸ್ಕೃತದಲ್ಲಿ ಸ್ಮಿತಹಸಿತ, ಉಪಹಸಿತ, ಅಪಹಸಿತ ಮತ್ತು ಅತಿಹಸಿತ ಎಂದು ನಾಲ್ಕು ನಗುವನ್ನು ವಿಂಗಡಿಸಲಾಗಿದೆ. ಹೂನಗೆ, ಮೆಲುನಗೆ... ಹೀಗೆ 32ನಗೆಗಳನ್ನು ಕನ್ನಡದಲ್ಲಿ ದ.ರಾ.ಬೇಂದ್ರೆ ಪಟ್ಟಿ ಮಾಡಿದ್ದಾರೆ. ಸದಭಿರುಚಿಯ ನಗೆಯಲ್ಲಿ ಸಂತಸವಿದೆ ಎಂದು ತಿಳಿಸಿದರು.

ನಗುವುದು ಸುಲಭ. ರಸವತ್ತಾಗಿ ಹೇಳುವುದು ಕಲೆ. ನಗು ಗಂಭೀರವಾಗಿರಬೇಕು. ಮಸಾಜ್‌ ಜೊತೆಗೆ ಮೆಸೇಜ್‌ ಇರಬೇಕು. ಹಾಸ್ಯದ ಮೂಲಕ ಕನ್ನಡದ ಸಾಹಿತ್ಯಸವಿ ಉಣಬಡಿಸಬಹುದು. ಭಾಷೆ ಒಂದು ಮಾಧ್ಯಮ. ಅದನ್ನು ಚೆನ್ನಾಗಿ ರೂಢಿಸಿಕೊಳ್ಳುವ ಶಕ್ತಿ ನಮಗಿದೆ. ನಮ್ಮ ಮನೆಗಳಲ್ಲಿ ಕನ್ನಡ ನಗುತ್ತಿಲ್ಲ. ಇಂಗ್ಲಿಷ್‌ ಅಣುಕಿಸುತ್ತಿದೆ. ಮಮ್ಮಿ ಎಂದರೆ ದೆವ್ವ, ಅಮ್ಮ ಎಂದರೆ ಅವ್ವ ಎಂಬ ಕವಿವಾಣಿ ಮರೆತಿದ್ದೇವೆ. ಚಿಕ್ಕಮಗಳೂರಿನ ಜನ ನಗಬೇಕು. ನಗುವ ಮೂಲಕ ಮನೆಯಂಗಳದಲ್ಲಿ ಕನ್ನಡ ವಾತಾವರಣ ಸೃಷ್ಟಿಯಾಗಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಎನ್‌.ಎಸ್‌.ಶಿವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈನಂದಿನ ಜೀವನದಲ್ಲಿ ಹಾಸ್ಯ ಇದೆ. ನಗು ಲವಲವಿಕೆಯ ಲಕ್ಷಣ, ಆರೋಗ್ಯದ ಮಾಣಿಕ್ಯ ಹಾಸ್ಯ ಸವಿಯಬೇಕು. ನಗಬೇಕೆಂಬ ಹುಮ್ಮಸ್ಸಿದ್ದರೆ ನಗೆ ಬರುತ್ತದೆ. ಗಂಭೀರವಾಗಿಯೇ ಇದ್ದರೆ ಹಾಗೆಯೇ ಹರಿದುಹೋಗುತ್ತದೆ ಎಂದರು. ತಾಲೂಕು ಕ.ಸಾ.ಪ.ಅಧ್ಯಕ್ಷ ಬಿ.ಆರ್‌.ಜಗದೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾಸದಸ್ಯ ಎಚ್‌.ಡಿ.ತಮ್ಮಯ್ಯ, ತಾಲ್ಲೂಕು ಕ‌.ಸಾ.ಪ. ಕಾರ್ಯದರ್ಶಿಗಳಾದ ಪವನ್‌ ಮತ್ತು ಶ್ರೀದೇವಿ ಮೋಹನ್‌, ಖಜಾಂಚಿ ಪ್ರಭುಸೂರಿ ಇದ್ದರು.

Trending videos

Back to Top