CONNECT WITH US  

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಗೆ ಇಂದು ಭಾರತ ರತ್ನ ಅರ್ಪಣೆ

ನವದೆಹಲಿ: "ಅಜಾತ ಶತ್ರು' ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಶುಕ್ರವಾರ ನೀಡಿ ಗೌರವಿಸಲಾಗುತ್ತದೆ.
ವಾಜಪೇಯಿ ಅವರು ಅನಾರೋಗ್ಯಪೀಡಿತರಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಅವರ ನಿವಾಸಕ್ಕೇ ತೆರಳಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಸಂಜೆ 5ಕ್ಕೆ "ಭಾರತ ರತ್ನ' ನೀಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರ ಸಚಿವ ಸಂಪುಟದ ಬಹುತೇಕ ಮಂತ್ರಿಗಳು, ವಾಜಪೇಯಿ ಅವರ ಅತ್ಯಾಪ್ತರಾಗಿರುವ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದವರು ಹಾಜರಿರುವ ನಿರೀಕ್ಷೆ ಇದೆ.

ಜನಾಗ್ರಹದ ಮೇರೆಗೆ ಕಳೆದ ವರ್ಷ ಡಿ.24ರಂದು ವಾಜಪೇಯಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಬನಾರಸ್‌ ಹಿಂದು ವಿ.ವಿ. ಸಂಸ್ಥಾಪಕ ಪಂಡಿತ್‌ ಮದನ್‌ ಮೋಹನ ಮಾಳವೀಯ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿತ್ತು.

ಮಾಳವೀಯ ಅವರಿಗೆ 30ರಂದು:

ಈ ಪೈಕಿ ಶಿಕ್ಷಣ ತಜ್ಞ ಪಂ. ಮದನಮೋಹನ ಮಾಳವೀಯ ಅವರಿಗೆ ಮರಣೋತ್ತರವಾಗಿ ಮಾ.30ರಂದು ರಾಷ್ಟ್ರಪತಿ ಭವನದಲ್ಲಿ ಗೌರವ ಪ್ರದಾನ ಮಾಡಲಾಗುತ್ತದೆ. ಮಾಳವೀಯ ಕುಟುಂಬ ಸದಸ್ಯರು ಈ ಗೌರವ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಾರೋಗ್ಯದ ಕಾರಣ ನೇಪಥ್ಯಕ್ಕೆ

1998ರಿಂದ 2004ರ ವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಸದ್ಯ ಅನಾರೋಗ್ಯದ ಕಾರಣ ಸಾರ್ವಜನಿಕ ಬದುಕಿನಿಂದ ಮತ್ತು ಸಕ್ರಿಯ ರಾಜಕಾರಣ ದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಎಲ್ಲಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಈಗ ಭಾರತ ರತ್ನವನ್ನೂ ಅವರ ಮನೆಗೇ ತೆರಳಿ ನೀಡಲಾಗುತ್ತಿದೆ.

ಭಾರತ ರತ್ನಕ್ಕೆ ನಗದು ಪುರಸ್ಕಾರ ಇಲ್ಲ

ಭಾರತ ರತ್ನ ಪ್ರಶಸ್ತಿ ದೇಶದ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿ ಅಶ್ವತ್ಥ ಎಲೆಯ ಮಾದರಿಯಲ್ಲಿ ಇರುತ್ತದೆ. ಅದರ ಮೇಲೆ ದೇವನಾಗರಿ (ಸಂಸ್ಕೃತ) ಭಾಷೆಯಲ್ಲಿ "ಭಾರತ ರತ್ನ' ಎಂದು ಮುದ್ರಿಸಲಾಗುತ್ತದೆ. ಅದರಲ್ಲಿ ಸೂರ್ಯನ ಚಿತ್ರವೂ ಇರುತ್ತದೆ. ಪ್ರಶಸ್ತಿಯ ಇನ್ನೊಂದು ಭಾಗ ಧ್ಯೇಯ ವಾಕ್ಯ ಮತ್ತು ರಾಷ್ಟ್ರ ಲಾಂಛನವನ್ನು ಹೊಂದಿರುತ್ತದೆ. ಪ್ರಶಸ್ತಿ ನೀಡಿದ್ದನ್ನು ಖಾತರಿ ಪಡಿಸಲು ರಾಷ್ಟ್ರಪತಿಗಳ ಸಹಿ ಇರುವ ಪ್ರಮಾಣ ಪತ್ರವೊಂದನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತದೆ. ಭಾರತ ಪ್ರಶಸ್ತಿ ಜತೆ ಹಣವನ್ನು ನೀಡಲಾಗುವುದಿಲ್ಲ.

ವಾಜಪೇಯಿ 44ನೇ ಗಣ್ಯ

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಭಾರತ ರತ್ನ ಪ್ರಶಸ್ತಿಯನ್ನು ಪಡೆಯುತ್ತಿರುವ 44ನೇ ಗಣ್ಯರಾಗಿದ್ದಾರೆ. ಅಂತೆಯೇ ಮಾ.30ರಂದು ಪಂ. ಮದನ ಮೋಹನ ಮಾಳವೀಯರಿಗೆ ಈ ಗೌರವ ಪ್ರದಾನ ಮಾಡಲಾಗುತ್ತಿದ್ದು ಅವರು 45ನೇ ಗಣ್ಯ ಎನ್ನಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮತ್ತು ವಿಜ್ಞಾನಿ ಸಿ.ಎನ್‌. ಆರ್‌. ರಾವ್‌ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.
---

ಅಜಾತ ಶತ್ರುವಿಗೆ ಅರ್ಹ ಗೌರವ

ಕವಿ ಹೃದಯದ ವಿಶಿಷ್ಟ ರಾಜಕಾರಣಿ. ರಾಜಕೀಯದ ಗಡಿ, ಎಲ್ಲೆಗಳನ್ನು ಮೀರಿ ಎಲ್ಲರಿಗೂ ಆಪ್ತರಾಗಿ "ಅಜಾತಶತ್ರು' ಎಂದೇ ಹೆಸರಾದವರು ಅಟಲ್‌ ಬಿಹಾರಿ ವಾಜಪೇಯಿ. 1992ರ ಬಾಬರಿ ಮಸೀದಿ ಧ್ವಂಸದ ಬಳಿಕ ಬಲಪಂಥೀಯ ಧೋರಣೆಯ ಬಿಜೆಪಿ ಎಲ್ಲ ಪಕ್ಷಗಳಿಂದಲೂ ಅಕ್ಷರಶಃ ಅಸ್ಪೃಶ್ಯತೆ ಅನುಭವಿಸಿತ್ತು. ಆದರೆ ವಾಜಪೇಯಿವರ ಸ್ನೇಹ, ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವ ಮನಸ್ಥಿತಿಯಿಂದಾಗಿ ಹೊಸ ಮಿತ್ರ ಪಕ್ಷ ಸ್ಥಾಪನೆಯೊಂದಿಗೆ ಬಿಜೆಪಿ ಅಧಿಕಾರ ಕಾಣುವಂತಾಯಿತು. ಓರ್ವ ಅತ್ಯುತ್ತಮ ವಾಗ್ಮಿಯಾಗಿ, ಆಡಳಿತದಲ್ಲಿನ ದಿಟ್ಟ ನಡೆಗಳಿಂದಾಗಿ, ಭಿನ್ನಾಭಿಪ್ರಾಯಗಳಿದ್ದರೂ ಭಾರತ-ಪಾಕಿಸ್ತಾನ ಸಂಬಂಧ ವೃದ್ಧಿಗೆ ಶ್ರಮಿಸಿದ್ದರಿಂದಾಗಿ ಬಿಜೆಪಿಯ ರಾಜಕೀಯ ಅಜೆಂಡಾಕ್ಕಿಂತಲೂ ವಾಜಪೇಯಿ ಬೆಳೆದರು. ಕಾಂಗ್ರೆಸ್‌ ಹೊರತಾಗಿ ಸುದೀರ್ಘ‌ ಅವಧಿಗೆ ಅಧಿಕಾರದಲ್ಲಿದ್ದ ಖ್ಯಾತಿ ಬಿಜೆಪಿಯದ್ದಾಗಿದ್ದು, ಇದರ ಚುಕ್ಕಾಣಿ ಹಿಡಿದ ವ್ಯಕ್ತಿ ವಾಜಪೇಯಿಯೇ ಆಗಿದ್ದರು. ವಾಜಪೇಯಿಯವರನ್ನು ಕೆಲವರು ಆರ್‌ಎಸ್‌ಎಸ್‌ನ ಮುಖವಾಡ ಎಂದು ಟೀಕಿಸಿದ್ದರೂ, ಅದಕ್ಕವರು ಅವಕಾಶ ಮಾಡಿಕೊಡದೇ ಅಧಿಕಾರ ನಿಭಾಯಿಸಿದರು. 1999ರಲ್ಲಿ ಸ್ವತಃ ಸ್ವಪಕ್ಷೀಯರೇ ವಾಜಪೇಯಿಯವರ ಲಾಹೋರ್‌ ಬಸ್‌ ಯಾತ್ರೆಗೆ ಭಿನ್ನ ಧ್ವನಿ ತೆಗೆದಿದ್ದರೂ, ನೈಜ ಸ್ನೇಹ ಹಸ್ತ, ದಿಪಕ್ಷೀಯ ಸಂಬಂಧಕ್ಕೊಂದು ಶ್ರೀಕಾರ ಹಾಕಿ ಟೀಕಾಕಾರರ ಬಾಯಿ¾ಚ್ಚಿಸಿದರು. ಇಂದಿಗೂ ವಾಜಪೇಯಿಯವರ ಲಾಹೋರ್‌ ಬಸ್‌ ಯಾತ್ರೆಯ ಕ್ರಮ ಭಾರತ-ಪಾಕ್‌ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಎಂದೇ ಕರೆಯಲಾಗುತ್ತದೆ. ಅದಾದ ಬಳಿಕ ಪಾಕ್‌ ಕಾರ್ಗಿಲ್‌ನಲ್ಲಿ ಉದ್ಧಟತನ ಮೆರೆದರೂ ಅದನ್ನು ಹತ್ತಿಕ್ಕುವಲ್ಲಿ ಸಫ‌ಲರಾದರು. ಸತತ ನಾಲ್ಕು ದಶಕಗಳ ಕಾಲ ವಿಪಕ್ಷ ಸ್ಥಾನದಲ್ಲಿದ್ದ ವಾಜಪೇಯಿ, 1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಿಯಾದರು. ಆದರೆ ಬಹುಮತದ ಕೊರತೆಯಿಂದಾಗಿ ಸರ್ಕಾರದ ಆಯುಷ್ಯ ಕೇವಲ 13 ದಿನಕ್ಕೆ ಕೊನೆಗೊಂಡಿತು. ಎರಡನೇ ಬಾರಿಗೆ 1998ರಲ್ಲಿ ಅಧಿಕಾರಕ್ಕೆ ಬಂದರೂ, 13 ತಿಂಗಳಿಗೆ ಅಧಿಕಾರ ಕೊನೆಗೊಂಡಿತು. ಆ ಸಂದರ್ಭ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಅಧಿಕಾರ ಕೊನೆಗೊಂಡಿತು. 1999ರಲ್ಲಿ ಮತ್ತೆ ಪುನರಾಯ್ಕೆಯಾಗಿದ್ದು, ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ಮಿತ್ರಕೂಟ ಪೂರ್ಣಾವಧಿಯ ಅಧಿಕಾರ ನಡೆಸಿತು. ನೆಹರೂ ಅವರಂತೆಯೇ‌ ದೇಶ-ವಿದೇಶಗಳಲ್ಲಿ ಪ್ರಧಾನಿಯಾಗಿ ಹೆಸರು ಮಾಡಿದವರು ವಾಜಪೇಯಿ. ಪ್ರಪಂಚವೇ ಹದ್ದಿನ ಕಣ್ಣಿಟ್ಟಿದ್ದರೂ, ಸದ್ದಿಲ್ಲದೇ 1998ರಲ್ಲಿ ಪೋಖÅಣ್‌ ಅಣು ಬಾಂಬ್‌ ಪರೀಕ್ಷೆಯನ್ನು ನಡೆಸಲು ಮುಂದಾದರು. ಯಶಸ್ವಿಯೂ ಆದರು. ಹಾಗೆ ನೋಡಿದರೆ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿದ್ದ ವಾಜಪೇಯಿ ಆ ಸಂದರ್ಭದಲ್ಲೇ ಭಾರತ-ಪಾಕ್‌ ಸಂಬಂಧ ವೃದ್ಧಿಗೆ ಶ್ರಮಿಸಿದ್ದರು. ಲಾಹೋರ್‌ ಬಸ್‌ ಯಾತ್ರೆ ಹೆಸರು ಮಾಡಿತಾದರೂ, ಫ‌ಲಿತಾಂಶ ಶೂನ್ಯವಾಗಿತ್ತು. ಪರಿಣಾಮ 2001ರಲ್ಲಿ ಮತ್ತೆ ಆಗಿನ ಪಾಕ್‌ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್ ಅವರೊಂದಿಗೆ ಆಗ್ರಾ ಸಮ್ಮೇಳನ ನಡೆಸಿದರಾದರೂ ಫ‌ಲ ಕಾಣಲಿಲ್ಲ. ರಾಜಕೀಯ ಜೀವನದುದ್ದಕ್ಕೂ ಶುದ್ಧ ಹಸ್ತರಾಗಿ ವಾಜಪೇಯಿ ಹೆಸರು ಮಾಡಿದವರು. ಅವಿವಾಹಿತರಾಗಿದ್ದು, ಕವಿತೆಗಳ ಮೂಲಕ ಸಾಹಿತ್ಯ ಪ್ರೇಮಿಯೂ ಆಗಿದ್ದವರು. 1924 ಡಿ.25ರಂದು ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ಕೃಷ್ಣ ಬಿಹಾರಿ ವಾಜಪೇಯಿ, ಕೃಷ್ಣಾ ದೇವಿ ವಾಜಪೇಯಿ ಬ್ರಾಹ್ಮಣ ದಂಪತಿಗೆ ಜನಿಸಿದ ವಾಜಪೇಯಿ ಐದು ದಶಕಗಳ ಕಾಲ ಸಂಸತ್‌ ಸದಸ್ಯರಾಗಿದ್ದವರು. 1957ರಲ್ಲಿ ಅವರು ಪ್ರಥಮಬಾರಿಗೆ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದು 2009ರವರೆಗೆ ಇದ್ದರು. ವಾಜಪೇಯಿ ರಾಜಕೀಯಕ್ಕೆ ಬಂದಿದ್ದರ ಹಿಂದೆ ಹಲವು ಘಟನೆಗಳಿವೆ. ಯುವಕರಾಗಿದ್ದಾಗ ಬ್ರಿಟಿಷ್‌ ಆಡಳಿತ ವಿರುದ್ಧ ಸಿಡಿದೆದ್ದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಇದೇ ವೇಳೆ ಕಮ್ಯುನಿಸ್ಟ್‌ ವಿಚಾರಧಾರೆ ಅವರನ್ನು ಸೆಳೆದಿತ್ತು. 1942-45ರ ವೇಳೆ ಜರುಗಿದ್ದ ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭ ವಾಜಪೇಯಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರದತ್ತ ಆಕರ್ಷಿತರಾಗಿದ್ದರು. ಅದು ಅವರನ್ನು ಜನಸಂಘದತ್ತ ಕರೆದೊಯ್ದಿತು. 1950ರ ದಶಕದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ಆರೆಸ್ಸೆಸ್‌ ನಿಯತಕಾಲಿಕೆಯ ಕೆಲಸಕ್ಕಾಗಿ ಕಲಿಕೆಯನ್ನೇ ಮೊಟಕುಗೊಳಿಸಿದರು. ಜನಸಂಘದತ್ತ ಮುಖಮಾಡಿದ ವಾಜಪೇಯಿಯವರು ಬಳಿಕ ಜನಸಂಘದ ಸ್ಥಾಪಕರಾದಶ್ಯಾಮಪ್ರಸಾದ ಮುಖರ್ಜಿಯವರ ಕಟ್ಟಾ ಅನುಯಾಯಿಯಾದರು. ಕಾಶ್ಮೀರ ಪ್ರವೇಶಕ್ಕೆ ಭಾರತೀಯರಿಗೆ ಅನುಮತಿ ಪತ್ರ ಬೇಕೆನ್ನುವ ವಿಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಶ್ಯಾಮಪ್ರಸಾದ ಮುಖರ್ಜಿಯವರು ಜೈಲಿನಲ್ಲೇ ಕೊನೆಯುಸಿರೆಳೆದರು. ಈ ಸಂದರ್ಭ ಸಿಡಿದೆದ್ದ ವಾಜಪೇಯಿ ಹೊಸ ರಾಜಕೀಯ ಹೋರಾಟಕ್ಕೆ ಧುಮುಕಿದ್ದು, ಸಂಸತ್ತಿಗೂ ಪ್ರವೇಶಿಸಿದರು. ಕ್ರಮೇಣ ಇದು ಬಿಜೆಪಿಯ ಹುಟ್ಟಿಗೂ ಕಾರಣವಾಯಿತು.

Trending videos

Back to Top