CONNECT WITH US  

ಮನೆಯ ಗೋಡೆಯಲ್ಲಿ ಅರಳಿದೆ ವರ್ಲಿ ಚಿತ್ರ : ತುಳುನಾಡ ಸಂಸ್ಕೃತಿಯ ಅನಾವರಣ

ಪಾಲ್ತಾಡಿ: ಮನೆಯೊಳಗೆ ತುಳುನಾಡ ಸಂಸ್ಕೃತಿ ಅನಾವರಣಗೊಂಡಿದೆ. ಕೋಟಿಚೆನ್ನಯರ ಜೀವನ ಚರಿತ್ರೆಯಿಂದ ತೊಡಗಿ ತುಳುನಾಡಿನ ವಿವಿಧ ಆಚರಣೆ ಈ ಮನೆಯ ಗೋಡೆಯಲ್ಲಿ ವರ್ಲಿ ಚಿತ್ರದ ಮೂಲಕ ಕಾಣುತ್ತದೆ.ಬಹುಶ ಜಿಲ್ಲೆಯಲ್ಲಿ ಇದೊಂದು ವಿನೂತನ ಪ್ರಯತ್ನ.ಇಂತಹ ಪ್ರಯತ್ನ ನಡೆದಿರುವುದು ಪುತ್ತೂರಿನ ಸ್ವರ ಮನೆಯಲ್ಲಿ.

ಪುತ್ತೂರು ನಗರದ ಹೊರವಲಯದ ಚಿಕ್ಕಮುಟ್ನೂರು ಗ್ರಾಮದ ತಾರಿಗುಡ್ಡೆ ಸಿದ್ಯಾಳದಲ್ಲಿರುವ ಸ್ವರಮನೆ ಶಿಕ್ಷಣ ಇಲಾಖೆ ಸಿಆರ್‌ಪಿ ರಮೇಶ್‌ ಉಳಯ ಅವರದ್ದು.ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕವಾಗಿ , ಸಾಹಿತ್ಯಿಕವಾಗಿ ಪುತ್ತೂರಿನೆಲ್ಲಡೆ ಓಡಾಟ ಮಾಡಿರುವ, ಮಾಡುತ್ತಿರುವ ರಮೇಶ್‌ ಉಳಯರ ಒಳಗೆ ಕಲೆಯ ಬೆಳವಣಿಗೆ ಸದ್ದಿಲ್ಲದೆ ಬೆಳೆಯುತ್ತಲೇ ಇತ್ತು. ಅದರ ಭಾಗ ತನ್ನ ಮನೆಯ ಗೋಡೆಗಳ ತುಂಬಾ ವರ್ಲಿ ಚಿತ್ರದ ಮೂಲಕ ಕಲೆಗೆ ಜೀವ ತುಂಬಿದ್ದಾರೆ.

ಮನೆಯಲ್ಲಿ ವರ್ಲಿ ಚಿತ್ರ ಬಿಡಿಸುವುದು ಹಾಗೂ ಕಲೆಗೆ ಜೀವ ತುಂಬುವ ಕೆಲಸ ಹಲವೆಡೆ ನಡೆದಿದೆ. ಆದರೆ ಇಲ್ಲಿ ಒಂದು ಕಾನ್ಸೆಪ್ಟ್ ಆಧಾರದಲ್ಲಿ ಮನೆಯ ಒಳಗಡೆ ಜೀವ ತುಂಬಿರುವುದು ಇದೇ ಮೊದಲು.ಇಲ್ಲಿ ಕೋಟಿ ಚೆನ್ನಯರ ಜೀವನ ಚರಿತ್ರೆಯನ್ನು ದಾಖಲಾಗುವಂತೆ ಮಾಡಿರುವ ಜತೆಗೆ ತುಳುನಾಡಿನ ಸಂಸ್ಕೃತಿಯನ್ನು ಚಿತ್ರದ ಮೂಲಕ ಅನಾರಣ ಮಾಡಿದ್ದಾರೆ.ಹೀಗಾಗಿ ಇದು ಅಪರೂಪದ ಕೆಲಸ.

ಏನೆಲ್ಲಾ ಇದೆ ?

ಸ್ವರಮನೆಯ ಒಳಗೆ ಹೊಕ್ಕಿದಂತೆ ವರ್ಲಿ ಚಿತ್ರದಿಂದ ಚೆಂಡೆಯ ಮೂಲಕ ಸ್ವಾಗತ.ಬಳಿಕ ತುಳುನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಕದಿಕೆ, ಭತ್ತ ಕುಟ್ಟುವುದು, ರಾಗಿ ಬೀಸುವುದು, ಕೃಷ್ಣನ ಕೊಳಲಿನ ವಾದನ, ಹಳ್ಳಿ ಬದುಕು ಕಾಣುತ್ತದೆ.ಅದರ ಜತೆಗೆ ವರ್ಲಿಯ ಮೂಲ ಸ್ವರೂಪ ಎನ್ನುವಂತೆ ನವಿಲಿನ ನೃತ್ಯ ಇದೆ.ವಿವಿಧ ಕಲಾಕೃತಿ ಕಾಣುತ್ತದೆ.ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಇಡೀ ಬದುಕನ್ನು ಸಾರುವ ಚಿತ್ರ ಅತ್ಯಂತ ಹೆಚ್ಚು ಗಮನ ಸೆಳೆಯುತ್ತದೆ.ದೇಯಿ ಬೈದೆತಿ ಕಾಡಿಗೆ ತೆರಳುವುದರಿಂದ ಆರಂಭಿಸಿ ಕೋಟಿ ಚೆನ್ನಯರು ಗರಡಿಗೆ ಸೇರುವವರೆಗಿನ ಎಲ್ಲಾ ಘಟನೆಗಳನ್ನು ಚಿತ್ರಿಸಲಾಗಿದೆ.ಹೀಗಾಗಿ ಇದು ವಿಶೇಷವಾಗಿದೆ.ಮನೆಯ ಗೋಡೆಯಲ್ಲಿ 20 ಬಣ್ಣಗಳ ಕಾಂಬಿನೇಶನ್‌ ಆಕರ್ಷಕವಾಗಿದೆ.

ಕೈ ಜೋಡಿಸಿದವರು

ರಮೇಶ್‌ ಉಳಯ ಅವರ ಈ ವಿಭಿನ್ನ ಯೋಚನೆಗೆ ಅವರ ಪತ್ನಿ ಭಾರತಿ ಮತ್ತು ಪುತ್ರ ಸ್ವರಭಾರವಿ ಅವರ ಸಂಪೂರ್ಣ ಸಹಕಾರ ಇತ್ತು. ರಮೇಶ್‌ ಅವರು ತನ್ನ ಯೋಚನೆಯನ್ನು ಕಲಾವಿದ ಮಿತ್ರರಲ್ಲಿ ಹಂಚಿಕೊಂಡಾಗ ಅವರಿಗೆ ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ, ಜಗನ್ನಾಥ್‌ ಅರಿಯಡ್ಕ ಮತ್ತು ಸುಚೇತ್‌ ಸುಳ್ಯ, ಚರಣ್‌ ಕುಮಾರ್‌ ಪುದು, ಶ್ರೀಕಾಂತ್‌ ನಾಯಕ್‌ ಕಂಬಳಕೋಡಿ, ಕೇಶವ ಕೆಮ್ಮಿಂಜೆ ಸಹಕರಿಸಿದ್ದಾರೆ.

ಅರ್ಥಪೂರ್ಣ ಕಾರ್ಯಕ್ರಮ

ರಮೇಶ್‌ ಉಳಯ ಅವರ ಕಲ್ಪನೆ ಯಾವತ್ತೂ ವಿಶೇಷವೇ. ಈ ಹಿಂದ ಅವರ ವಿವಾಹ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ , ಕವಿಗೋಷ್ಟಿ, ಪುತ್ರನ ಹುಟ್ಟುಹಬ್ಬದಲ್ಲಿ ಕವಿ ಕಯ್ನಾರ ಕಿಂಞಣ್ಣ ರೈ ಅವರಿಂದ ಕಾವ್ಯಗೋಷ್ಟಿ, ಪುಸ್ತಕ ಬಿಡುಗಡೆ , ಮಕ್ಕಳ ಕವಿಗೋಷ್ಟಿ , ಗೃಹಪ್ರವೇಶದಲ್ಲಿ ಶಿಕ್ಷಕರ ಜೊತೆ ಕಾವ್ಯ ಕಮ್ಮಟ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಿದ್ದರು.ಇದೀಗ 10 ವರ್ಷಗಳ ಬಳಿಕ ಮನೆ ವಿಸ್ತರಣೆ ಮಾಡಿ ವಿದ್ಯುತ್‌ ಅಲಂಕಾರದ ಬದಲು 1001 ಹಣತೆ ಬೆಳಗಿಸಿದ್ದಾರೆ.

ಪ್ರವೀಣ್‌ ಚೆನ್ನಾವರ.

Trending videos

Back to Top