CONNECT WITH US  

ಜನ್‌-ಧನ್‌ ಯೋಜನೆ: ಎಸ್‌ಬಿಐ ಓಟ ಯಶಸ್ಸಿನತ್ತ

ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನಧನ ಯೋಜನೆಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಇತರ ಬ್ಯಾಂಕ್‌ಗಳಂತೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ವಿಶೇಷ ಕಾರ್ಯತಂತ್ರ ರೂಪಿಸಿದೆ. ಈ ಯೋಜನೆಯಡಿ ಬ್ಯಾಂಕ್‌ಗಳು 7.5 ಕೋಟಿ ಖಾತೆ ಹೊಂದುವ ಗುರಿ ಹೊಂದಿದ್ದು, 13,68 ಕೋಟಿ ಖಾತೆ ತೆರೆದು 12.18 ಕೋಟಿ ಖಾತೆದಾರರಿಗೆ 1 ಲ.ರೂ. ಅಪಘಾತ ವಿಮೆ ಇರುವ ರುಪೇ ಡೆಬಿಟ್‌ ಕಾರ್ಡ್‌ಗಳನ್ನು ವಿತರಿಸಿವೆ. ಈ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಎಸ್‌ಬಿಐ ಕಟಿಬದ್ಧವಾಗಿದ್ದು, ಈಗಾಗಲೇ ಯಶಸ್ಸಿನತ್ತ ದಾಪುಗಾಲು ಇರಿಸಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ರೀಜನಲ್‌ ಮ್ಯಾನೇಜರ್‌ ಟಿ.ಇ. ನಾಗಪ್ಪ ಹೇಳಿದ್ದಾರೆ.

ಗ್ರಾಮೀಣ ಬ್ಯಾಂಕಿಂಗ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಎಸ್‌ಬಿಐ ರಾಜ್ಯದಲ್ಲಿ ಸಣ್ಣ ಮೌಲ್ಯದ ನಗದು ವ್ಯವಹಾರಕ್ಕಾಗಿ ಕಿರಣಿ ಅಂಗಡಿ, ಔಷಧ ಅಂಗಡಿ, ಗ್ರಾಹಕರ ಸೇವಾ ತಾಣಗಳು ಮುಂತಾದ ವ್ಯಾಪಾರಿ ಸ್ಥಳಗಳಲ್ಲಿ ಛೋಟಾ ಎಟಿಎಂಗಳನ್ನು ಸ್ಥಾಪಿಸಿದೆ. ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳ ಡೆಬಿಟ್‌ ಕಾರ್ಡ್‌ದಾರರು ಅವರ ಬ್ಯಾಂಕ್‌ ಶಾಖೆ ಅಥವ ಎಟಿಎಂಗಳಿಗೆ ಹೋಗದೆ ದಿನವೊಂದರಲ್ಲಿ 1,000 ರೂ.ಗಳ ವರೆಗೆ ಹಣ ಪಡೆಯಬಹುದು. ಅಲ್ಲದೆ ಬ್ಯಾಂಕ್‌ನ ಕಿಯೋಸ್ಕ್ ಗ್ರಾಹಕ ಸೇವಾ ತಾಣಗಳಲ್ಲಿ ದಿನವೊಂದರಲ್ಲಿ 10,000 ರೂ.ಗಳ ವರೆಗೆ ಸಾಲದ ಖಾತೆಗಳಿಗೆ ಜಮೆ ಸೇವಾ ಶುಲ್ಕವಿಲ್ಲದೆ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.

ಇದರಿಂದ ಗ್ರಾಹಕರ ಸಮಯ, ಶ್ರಮ, ಖರ್ಚು ಉಳಿತಾಯವಾಗುತ್ತದೆ. ಗ್ರಾಮೀಣ, ಅರೆಪಟ್ಟಣಗಳಲ್ಲಿ ಹಣ ರವಾನೆ ಹೊರತುಪಡಿಸಿ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಶುಲ್ಕವಿರುವುದಿಲ್ಲ. ಎಲ್ಲ ವ್ಯವಹಾರಗಳಿಗೂ ಯಂತ್ರ ಉತ್ಪಾದಿತ ರಶೀದಿ ಮಾತ್ರ ನೀಡಲಾಗುವುದು. ಕೈ ಬರಹದ ರಶೀದಿ ದೊರೆಯುವುದಿಲ್ಲ. ಸೇವೆಯಲ್ಲಿ ಯಾವುದೇ ನ್ಯೂನತೆಗಳಿದ್ದರೆ ಸಂಬಂಧಿಸಿದ ಶಾಖಾ ಪ್ರಬಂಧಕರನ್ನು ಸಂಪರ್ಕಿಸಬಹುದು.

ಸಮಾಜದ ಅಸಂಘಟಿತ ವರ್ಗದ/ಆರ್ಥಿಕ ಅನನುಕೂಲ ವರ್ಗದ ಜನರಿಗೆ ಇಳಿ ವಯಸ್ಸಿನ ವರಮಾನ ಭದ್ರತೆ ಒದಗಿಸಲು ಎನ್‌ಪಿಎಸ್‌ ಲೈಟ್‌ ಎಂಬ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ಈ ಯೋಜನೆಯನ್ನು ಬ್ಯಾಂಕ್‌ಗಳು ಮತ್ತು ರೆಗ್ಯುಲೇಟೆಡ್‌ ಪೆನ್ಶನ್‌ ಫ‌ಂಡ್‌ ರೆಗ್ಯುಲೇಟರಿ ಆ್ಯಂಡ್‌ ಡೆವಲಪ್‌ಮೆಂಟ್‌ ಆಥಾರಿಟಿ ಸಂಸ್ಥೆಗಳು ಜಾರಿಗೊಳಿಸುತ್ತಿವೆ. ಪ್ರತಿ ವರ್ಷ 1,000 ರೂ.ಗೆ ಮೇಲ್ಪಟ್ಟು ಮತ್ತು 12,000 ರೂ.ಗೆ ಮೀರದಂತೆ ಸಂದಾಯ ಮಾಡುವ ಸೇವಾದಾರರಿಗೆ ಕೇಂದ್ರ 1,000 ರೂ. ಸಹಾಯಧನ ನೀಡುತ್ತದೆ. ಅಸಂಘಟಿತ ವರ್ಗದ 18ರಿಂದ 60 ವರ್ಷದೊಳಗಿನ ಯಾವುದೇ ಭಾರತೀಯ ಪ್ರಜೆ ಈ ಎನ್‌ಪಿಎಸ್‌ ಲೈಟ್‌ ಖಾತೆ ತೆರೆಯಬಹುದು. ಈ ಯೋಜನೆಯಡಿ ಸಂಗ್ರಹಿಸಿದ ಧನವನ್ನು ನುರಿತ ಧನ ಪ್ರಬಂಧಕರು ಸೂಕ್ತವಾಗಿ ನಿರ್ವಹಿಸುತ್ತಾರೆ.

ಕೇಂದ್ರ/ಆರ್‌ಬಿಐ ಆರಂಭಿಸಿರುವ ಆರ್ಥಿಕ ಒಳಪಡಿಕೆಯ ಯೋಜನೆಗಳಲ್ಲಿ ಎಸ್‌ಬಿಐ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿದೆ. ಎಸ್‌ಬಿಐನ ಕಾರ್ಯಚಟುವಟಿಕೆ ಕುರಿತು ಹೆಚ್ಚಿನ ಮಾಹಿತಿಗೆ ಪಿ.ಪಿ.ಜಿ. ಮುನಿಸುಬ್ಟಾರೆಡ್ಡಿ, ಸಹಾಯಕ ಪ್ರಬಂಧಕರು (ಔಟ್‌ರೀಚ್‌), ಭಾರತೀಯ ಸ್ಟೇಟ್‌ ಬ್ಯಾಂಕ್‌, ಸ್ಥಳೀಯ ಪ್ರಧಾನ ಕಚೇರಿ, ಬೆಂಗಳೂರು ಇವರನ್ನು agmoutreach.lhoban@sbi.co.in  ಮೂಲಕ ಸಂಪರ್ಕಿಸಬಹುದು ಎಂದು ಟಿ.ಇ. ನಾಗಪ್ಪ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Trending videos

Back to Top