CONNECT WITH US  

ಬ್ಯಾಂಕ್‌ಗಳಲ್ಲಿ ಗ್ರಾಹಕ ದಟ್ಟಣೆ ಇದ್ದರೂ...!

ಉಡುಪಿ/ಮಂಗಳೂರು: ಮೂರು ದಿನಗಳ ವ್ಯವಹಾರ ಸ್ಥಗಿತ ಬಳಿಕ ಶನಿವಾರ ಬ್ಯಾಂಕುಗಳು ಕಾರ್ಯಾಚರಿಸಿದಾಗ ಸಹಜವಾಗಿ ಗ್ರಾಹಕ ದಟ್ಟಣೆ ಕಂಡುಬಂತು. ಆದರೆ ಹಿಂದಿಗಿಂತ ಹೆಚ್ಚು ಎಟಿಎಂಗಳು ಇರುವುದರಿಂದ ಬ್ಯಾಂಕುಗಳ ದಟ್ಟಣೆ ನಿಭಾಯಿಸುವ ಹಂತದಲ್ಲಿತ್ತು.

ಎ. 1ರಂದು ಬ್ಯಾಂಕುಗಳಲ್ಲಿ ವ್ಯವಹಾರವಿರಲಿಲ್ಲ, ಎ. 2 ಮತ್ತು 3ರಂದು ರಜೆ ಇತ್ತು. ಮಾ. 31ರಂದು ಚೆಕ್‌ ಕ್ಲಿಯರೆನ್ಸನ್ನು ಎರಡು ಬಾರಿ ಮಾಡಲಾಗಿತ್ತು. ಮತ್ತೆ ಶನಿವಾರ ಚೆಕ್‌ ಕ್ಲಿಯರೆನ್ಸ್‌ ಮಾಡಲಾಯಿತು. ಎಟಿಎಂಗಳಲ್ಲಿ ಮಾ. 31ರಂದು ನಗದು ಹಾಕಲಾಗಿತ್ತು. ಮತ್ತೆ ಶನಿವಾರ ನಗದು ಹಾಕಲಾಗಿದೆ. ಹೊರಗುತ್ತಿಗೆ ನಿರ್ವಹಿಸುವ ಎಟಿಎಂಗಳಲ್ಲಿ ನಗದು ಕೊರತೆಯಾಗದಂತೆ ನೋಡಿಕೊಂಡಿದ್ದರು.

"ರಜೆ ಇರುವ ಕುರಿತು ಜನರಿಗೆ ಮೊದಲೇ ಗೊತ್ತಿತ್ತು. ಮುಖ್ಯವಾಗಿ ನಮ್ಮ ಬ್ಯಾಂಕ್‌ನಲ್ಲಿ ಹೆಚ್ಚಿನ ಸಿಬಂದಿ ನೀಡಿದ್ದರು. ನಾವು ನಿರೀಕ್ಷಿಸಿದ್ದರೂ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಜನರ ಸಹಕಾರ' ಎಂದು ಸಿಂಡಿಕೇಟ್‌ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯಪ್ರಬಂಧಕ ಸುಬ್ರಹ್ಮಣ್ಯ ಭಟ್‌ "ಉದಯವಾಣಿ'ಗೆ ತಿಳಿಸಿದ್ದಾರೆ.

ಜನರು ಪರದಾಟ

ಮಂಗಳೂರು ವರದಿ: ಮಂಗಳೂರಿನ ಬ್ಯಾಂಕುಗಳಲ್ಲಿ ಗ್ರಾಹಕರ ದಟ್ಟಣೆ ಕಂಡು ಬಂದಿದ್ದು, ಕೆಲವು ಬ್ಯಾಂಕ್‌ ಶಾಖೆಗಳಲ್ಲಿ ಸೇವೆ ಪಡೆಯಲು ಜನರು ಪರದಾಡಿದರು.

ಮೂರು ದಿನಗಳ ರಜೆ ಇದ್ದರೂ ಶನಿವಾರ ಎಂದಿನಂತೆ ಅರ್ಧ ದಿನ ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಿದವು. ಎ. 5ರಂದು ಮತ್ತೆ ರಜೆ. ಒಂದೆಡೆ ಅಧಿಕ ಗ್ರಾಹಕರ ಸಂಖ್ಯೆ; ಇನ್ನೊಂದೆಡೆ ಬ್ಯಾಂಕ್‌ ಸಿಬಂದಿಗಳಲ್ಲಿ ಅನೇಕ ಮಂದಿ ರಜೆ ಹಾಕಿ ಹೋಗಿದ್ದರಿಂದ ಸಿಬಂದಿ ಕೊರತೆ ಉಂಟಾಗಿ ಉತ್ತಮ ಸೇವೆ ಒದಗಿಸುವಲ್ಲಿ ನ್ಯೂನತೆ ಕಂಡು ಬಂತು. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ವ್ಯವಹಾರ ನಡೆಯಿತು. ಬೆಳಗ್ಗೆ 10 ಗಂಟೆಗೆ ಪಾವತಿ ಮಾಡಿದ ಹಣದ ಬಗ್ಗೆ ಕ್ಲಿಯರೆನ್ಸ್‌ ಸಿಗ ಬೇಕಾದರೆ ಮಧ್ಯಾಹ್ರ 1 ಗಂಟೆ ತನಕವೂ ಕಾಯ ಬೇಕಾಗಿ ಬಂದಿತ್ತು.

ಎಟಿಎಂಗಳು ಕಾರ್ಯಾಚರಿಸಿದ್ದರೂ ಕೆಲವು ಎಟಿಎಂಗಳಲ್ಲಿ ಗ್ರಾಹಕರಿಗೆ ಬೇಕಾದ ಮುಖಬೆಲೆಯ ನೋಟುಗಳ ಕೊರತೆ ಕಂಡುಬಂದಿದೆ. ಕೆಲವು ಎಟಿಎಂಗಳಲ್ಲಿ ನೂರರ ನೋಟುಗಳು ಮಾತ್ರ ಇದ್ದವು. ಗ್ರಾಹಕರ ಒತ್ತಡ ಜಾಸ್ತಿಯಾಗಿದ್ದರಿಂದ ಕೆಲವು ಬ್ಯಾಂಕ್‌ಗಳಲ್ಲಿ ಸರ್ವರ್‌ ಸಮಸ್ಯೆ ಕೂಡ ಎದುರಾಗಿತ್ತು ಎಂದು ಬ್ಯಾಂಕಿಂಗ್‌ ಮೂಲಗಳು ತಿಳಿಸಿವೆ.

Trending videos

Back to Top