CONNECT WITH US  

ಸೂಪರ್‌ ಮರ್ಮಯೆ ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ

ಮಂಗಳೂರು : ಆನಂದ ಫಿಲಂಸ್‌ ಲಾಂಛನದಲ್ಲಿ ಅಡ್ಯಾರು ಮಾಧವ ನಾಯ್ಕ ನಿರ್ಮಾಣದ, ರಾಮ್‌ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷಿತ "ಸೂಪರ್‌ ಮರ್ಮಯೆ' ಕಾಮಿಡಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು.

ನಗರದ ಪ್ರಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ತುಳುಚಿತ್ರರಂಗದಲ್ಲಿ ಪ್ರಸ್ತುತ ಬದಲಾವಣೆ ಕಂಡು ಬಂದಿದ್ದು, ಸಮೃದ್ಧಿಯ ಕಾಲ ಆರಂಭವಾಗಿದೆ ಎಂದರು.

ಚಿತ್ರದ ನಿರ್ದೇಶಕ ರಾಮ್‌ ಶೆಟ್ಟಿ ಮಾತನಾಡಿ, ಈಗಾಗಲೇ ನೂರಾರು ಸಾಹಸಮಯ ಸಿನೆಮಾಗಳನ್ನು ನೀಡಿರುವ ತಾನು ಸಂಪೂರ್ಣ ಹಾಸ್ಯವನ್ನೇ ಕೇಂದ್ರವಾಗಿಸಿರಿಸಿಕೊಂಡು "ಸೂಪರ್‌ ಮರ್ಮಯೆ' ಸಿನೆಮಾ ನಿರ್ದೇಶಿಸಿದ್ದೇನೆ. ಶೀಘ್ರದಲ್ಲಿ "ಎಕ್ಕ-ಸಕ್ಕ' ಚಿತ್ರ ಬಿಡುಗಡೆಗೊಳ್ಳಲಿದ್ದು, ಬಳಿಕ "ಸೂಪರ್‌ ಮರ್ಮಯೆ' ಸಿನೆಮಾ ಕರಾವಳಿಯಾದ್ಯಂತ ತೆರೆ ಕಾಣಲಿದೆ ಎಂದರು.

ಮಾವನಿಗೆ ಬೇಡದ ಅಳಿಯನಾಗಿ ಪಂಚರಂಗಿ ಪೊಂ ಪೊಂ ಖ್ಯಾತಿಯ "ಮಂಗಳೂರು ಮೀನನಾಥ' ರಾಘವೇಂದ್ರ ರೈ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ಮಾವನ ಪಾತ್ರಧಾರಿಯಾಗಿ ಗೋಪಿನಾಥ ಭಟ್‌ ಅಭಿನಯಿಸಿದ್ದಾರೆ. ಕರಾವಳಿಯ ಶ್ರೇಷ್ಠ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು ಈ ಚಿತ್ರದಲ್ಲಿ ನಗುವಿನ ಲಹರಿ ಹರಿಸಿದ್ದಾರೆ ಎಂದರು.

ಕಲಾವಿದ ನವೀನ್‌ ಡಿ. ಪಡೀಲ್‌ ಮಾತನಾಡಿ, ಕಾಮಿಡಿ ಲುಕ್‌ನಲ್ಲಿ ಸಿನೆಮಾ ಅದ್ಬುತವಾಗಿ ಮೂಡಿಬಂದಿದೆ. 700ಕ್ಕೂ ಹೆಚ್ಚು ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ತಮಿಳು ಚಲನಚಿತ್ರಗಳಲ್ಲಿ "ಸ್ಟಂಟ್‌ ಮಾಸ್ಟರ್‌' ಆಗಿ ದುಡಿದು, ಹಲವು ಹಿಂದಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್‌ ಶೆಟ್ಟಿ ಹಾಗೂ ನಿರ್ಮಾಪಕ ಮಾಧವ ನಾಯ್ಕ ಅವರ ಗರಡಿಯಲ್ಲಿ ಅತ್ಯಂತ ಉತ್ತಮ ದರ್ಜೆಯ ತುಳು ಸಿನೆಮಾವಾಗಿ ಇದು ಮೂಡಿಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಅಡ್ಯಾರು ಮಾಧವ ನಾಯ್ಕ, "ಕಡಲ ಮಗೆ' ಖ್ಯಾತಿಯ ಸಂಗೀತ ನಿರ್ದೇಶಕ ಎಸ್‌.ಪಿ. ಚಂದ್ರಕಾಂತ್‌, ಚಿತ್ರನಟರಾದ ಅರವಿಂದ ಬೋಳಾರ್‌, ಗೋಪಿನಾಥ್‌ ಭಟ್‌, ಗೀತೆ ಸಾಹಿತ್ಯ ಬರೆದ ಶಶಿರಾಜ್‌ ಕಾವೂರು, ಸಂಭಾಷಣೆ ಬರೆದ ನವೀನ್‌ ಶೆಟ್ಟಿ ಅಳಕೆ, ಕಲಾ ನಿರ್ದೇಶಕ ತಮ್ಮಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.

Trending videos

Back to Top