CONNECT WITH US  

ವಿಂಡೀಸಿಗೆ ಸೋಲಿನೇಟು ಬಿಗಿದ ಇಂಗ್ಲೆಂಡ್‌

ಸೇಂಟ್‌ ಜಾಜ್‌Õì: ಅಂತಿಮ ದಿನದಾಟದಲ್ಲಿ ನಾಟಕೀಯ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಆತಿಥೇಯ ವೆಸ್ಟ್‌ ಇಂಡೀಸ್‌, ಸೈಂಟ್‌ ಜಾಜ್‌Õì ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡಿಗೆ 9 ವಿಕೆಟ್‌ಗಳ ಭಾರೀ ಅಂತರದಿಂದ ಶರಣಾಗಿದೆ. ಇದರೊಂದಿಗೆ ಅಲಸ್ಟೇರ್‌ ಕುಕ್‌ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಹೇಗೂ ಉಳಿಸಿಕೊಳ್ಳಬಹುದಾಗಿದ್ದ ವಿಂಡೀಸಿಗೆ ಆಂಗ್ಲ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮಾರಕವಾಗಿ ಪರಿಣಮಿಸಿದರು. ಅವರು 43 ರನ್ನಿಗೆ 4 ವಿಕೆಟ್‌ ಕಿತ್ತು ಡ್ರಾ ಹಾದಿಯಲ್ಲಿದ್ದ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ಪರವಾದ ಫ‌ಲಿತಾಂಶ ಕೊಡಿಸಿದ ಹೀರೋ ಆಗಿ ಮೆರೆದರು. 143 ರನ್‌ ಗೆಲುವಿನ ಗುರಿ ಪಡೆದ ಇಂಗ್ಲೆಂಡ್‌ ಒಂದೇ ವಿಕೆಟಿಗೆ 144 ರನ್‌ ಪೇರಿಸಿ ವಿಜಯೋತ್ಸವ ಆಚರಿಸಿತು.

ಆರಂಭಕಾರ ಜೊನಾಥನ್‌ ಟ್ರಾಟ್‌ ಖಾತೆ ತೆರೆಯದೇ ಹೋದರೂ ನಾಯಕ ಕುಕ್‌ 59 ಹಾಗೂ ಬ್ಯಾಲನ್ಸ್‌ 81 ರನ್‌ ಹೊಡೆದು, ಅಜೇಯ ಜತೆಯಾಟದಲ್ಲಿ 142 ರನ್‌ ಪೇರಿಸಿ ಇಂಗ್ಲೆಂಡಿನ ಜಯವನ್ನು ಸಾರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ 182 ರನ್‌ ಬಾರಿಸಿದ ಜೋ ರೂಟ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

83 ರನ್ನಿಗೆ ಉರುಳಿತು 8 ವಿಕೆಟ್‌!

165 ರನ್‌ ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಬಳಿಕ ಉತ್ತಮ ರೀತಿಯಲ್ಲೇ ಬ್ಯಾಟಿಂಗ್‌ ನಡೆಸುತ್ತಿದ್ದ ವೆಸ್ಟ್‌ ಇಂಡೀಸ್‌ 4ನೇ ದಿನದಾಟದ ಅಂತ್ಯಕ್ಕೆ ಕೇವಲ 2 ವಿಕೆಟಿಗೆ 202 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಬ್ರಾತ್‌ವೇಟ್‌ 101, ಸಾಮ್ಯುಯೆಲ್ಸ್‌ 22 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಆದರೆ ಉಳಿದ 8 ವಿಕೆಟ್‌ಗಳನ್ನು 30.4 ಓವರ್‌ಗಳಲ್ಲಿ, ಬರೀ 83 ರನ್‌ ಅಂತರದಲ್ಲಿ ಉದುರಿಸಿಕೊಂಡ ವಿಂಡೀಸ್‌ ಸೋಲನ್ನು ಮೈಮೇಲೆ ಎಳೆದುಕೊಂಡಿತು. ಅಂತಿಮವಾಗಿ ಕೆರಿಬಿಯನ್‌ ಪಡೆ 307ಕ್ಕೆ ಸರ್ವಪತನ ಕಂಡಿತು.

ಹೊಸ ಚೆಂಡನ್ನು ಕೈಗೆತ್ತಿಕೊಂಡ ಆ್ಯಂಡರ್ಸನ್‌ ಬೆನ್ನು ಬೆನ್ನಿಗೆ ಬ್ರಾತ್‌ವೇಟ್‌ (116), ಚಂದರ್‌ಪಾಲ್‌ (7) ಹಾಗೂ ಸಾಮ್ಯುಯೆಲ್ಸ್‌ (37) ವಿಕೆಟ್‌ ಉಡಾಯಿಸಿ ವಿಂಡೀಸಿಗೆ ಬರೆ ಎಳೆದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-299 ಮತ್ತು 307. ಇಂಗ್ಲೆಂಡ್‌-464 ಮತ್ತು ಒಂದು ವಿಕೆಟಿಗೆ 144.

Trending videos

Back to Top