CONNECT WITH US  

ಗೋಮಾಂಸ ಪ್ರಕರಣದ ಹೇಳಿಕೆಯಿಂದ ಕಾರ್ನಾಡ್‌ ನಾಟಕ ಪ್ರದರ್ಶನಕ್ಕೆ ಕುತ್ತು

ಉಡುಪಿ: ಗಿರೀಶ್‌ ಕಾರ್ನಾಡ್‌ ಬರೆದ "ನಾಗಮಂಡಲ' ನಾಟಕ ಅವರ ಇತ್ತೀಚಿನ ಗೋಮಾಂಸ ಕುರಿತ ನಡವಳಿಕೆಯಿಂದ ರದ್ದಾದ ಘಟನೆ ಗುರುವಾರ ನಡೆದಿದೆ.

ಮಣಿಪಾಲ ಸಮೀಪದ ನರಸಿಂಗೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮವಾಗಿ "ನಾಗಮಂಡಲ' ನಾಟಕ ಗುರುವಾರ ನಿಗದಿಯಾಗಿತ್ತು. ಆದರೆ "ಗೋಮಾಂಸ ಭಕ್ಷಣೆ ಕುರಿತಂತೆ ಕಾರ್ನಾಡರ ನಡವಳಿಕೆ ಸಭ್ಯವಾದದ್ದಲ್ಲ. ಇಂತಹವರ ನಾಟಕವನ್ನು ದೇವಸ್ಥಾನದಲ್ಲಿ ಪ್ರದರ್ಶಿಸುವುದು ಬೇಡ' ಎಂದು ಭಕ್ತರು ಆಕ್ಷೇಪಿಸಿದರು. ಇದರ ಕುರಿತು ಸಮಿತಿಯವರು ಸಭೆ ಸೇರಿ ಬೇರೆ ನಾಟಕ ಪ್ರದರ್ಶನ ಪ್ರದರ್ಶಿಸಲು ತಂಡಕ್ಕೆ ತಿಳಿಸಿದರು. ತಂಡದವರು "ನಾವು ಬೇಕಾದರೆ ಕಾರ್ನಾಡರನ್ನು ಖಂಡಿಸಿಯೇ ನಾಟಕ ಪ್ರದರ್ಶನ ಮಾಡುತ್ತೇವೆ' ಎಂದು ಹೇಳಿದರು. "ನಮ್ಮದು ದೇವಸ್ಥಾನದ ಕಾರ್ಯಕ್ರಮ. ನಮಗೆ ಧಾರ್ಮಿಕ ವಿಚಾರಗಳು ಮುಖ್ಯವೇ ಹೊರತು, ಸಾಂಸ್ಕೃತಿಕವಲ್ಲ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಏನಿದ್ದರೂ ದ್ವಿತೀಯ ಪ್ರಾಶಸ್ತ್ಯ. ಆದ್ದರಿಂದ ಕಾರ್ನಾಡರ ನಾಟಕ ಬೇಡ. ಬೇರೆ ನಾಟಕ ಮಾಡಿ' ಎಂದು ಸಮಿತಿಯವರು ಹೇಳಿದರು.

ಬೇರೆ ನಾಟಕ ಪ್ರದರ್ಶಿಸಲು ಒಪ್ಪಿದ ತಂಡದವರು ಬುಧವಾರ ರಾತ್ರಿ ದೂರವಾಣಿ ಕರೆ ನೀಡಿ ಬೇರೆ ನಾಟಕ ಪ್ರದರ್ಶಿಸುವುದಿಲ್ಲ ಎಂದರು. "ತೊಂದರೆ ಇಲ್ಲ. ನಮಗೆ ಧಾರ್ಮಿಕ ಕಾರ್ಯಕ್ರಮ ಮುಖ್ಯ ಎಂದು ಉತ್ತರಿಸಿದೆವು. ಇಂದು ಬೇರೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ' ಎಂದು ಸಮಿತಿ ಪದಾಧಿಕಾರಿಗಳು "ಉದಯವಾಣಿ'ಗೆ ತಿಳಿಸಿದರು.


Trending videos

Back to Top