CONNECT WITH US  

ಕಡಿವಾಣ ಬೀಳಬೇಕಿದೆ ಕೋಳಿ ಅಂಕ, ಮಟ್ಕಾ ದಂಧೆಗೆ

ಕೋಟ: ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರತಿನಿತ್ಯವೆಂಬಂತೆ ನಾಲ್ಕೈದು ಕಡೆಗಳಲ್ಲಿ ಕೋಳಿ ಅಂಕ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಬೀಳಬೇಕಿದೆ. ಮನೋರಂಜನೆಗಾಗಿ ಹಬ್ಬ,ಜಾತ್ರೆ, ಕೋಲದ ಸಂದರ್ಭ ನಡೆಯುತ್ತಿದ್ದ ಕೋಳಿ ಅಂಕ ಈಗ ಪ್ರತಿನಿತ್ಯವೆಂಬಂತೆ ಯಾವುದಾದರು ಒಂದು ವಿಶೇಷದ ನೆಪದಲ್ಲಿ ಗಲ್ಲಿ-ಗಲ್ಲಿಯಲ್ಲಿ ಯಾವುದೇ ಭಯವಿಲ್ಲದೆ ನಡೆಯುತ್ತಿದ್ದು ಲಕ್ಷಾಂತರ ಹಣ ಜೂಜಿನ ಮೂಲಕ ಇಲ್ಲಿ ಕೈ ಬದಲಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಹಬ್ಬ-ಜಾತ್ರೆಗಳಿಗೆ ಸೀಮಿತವಾಗಿದ್ದ ಕೋಳಿ ಅಂಕ ಈಗ ಸಂಘ-ಸಂಸ್ಥೆಗಳ ವಾರ್ಷಿಕೋತ್ಸವ ಪ್ರಯುಕ್ತ,ಗೃಹಪ್ರವೇಶದ ಪ್ರಯುಕ್ತ ಆಯೋಜಿಸುವ ಮಟ್ಟಿಗೆ ವ್ಯವಸ್ಥೆ ಹಡಗೆಟ್ಟಿದೆ. ಇಂತಹ ಕೋಳಿ ಅಂಕಕ್ಕೆ ಅನುಮತಿ ಪಡೆಯಲಾಗಿದೆ ಎನ್ನುವ ಮಾತು ಎಲ್ಲಾ ಕಡೆಗಳಲ್ಲಿ ಕೇಳಿಬರುತ್ತದೆ. ಆದರೆ ಇಂತಹ ದಂಧೆಗೆ ಅನುಮತಿ ನೀಡುವವರು ಯಾರು? ಹೇಗೆ ಅನುಮತಿ ನೀಡಲಾಗುತ್ತದೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿದೆ.

ಹೈಟೆಕ್‌ ಮಟ್ಕಾ : ಮಟ್ಕಾ ದಂಡೆ ಕೂಡ ಹೈಟೆಕ್‌ ರೀತಿಯಲ್ಲಿ ನಡೆಯತ್ತಿದ್ದು ಅಂಗಡಿಗಳಲ್ಲಿ ಚೀಟಿಗಳ ಮೂಲಕ ರವಾನೆಯಾಗುತ್ತಿದ್ದ ಮಟ್ಕಾ ವ್ಯವಹಾರ ಈಗ ವಾಟ್ಸ್‌ಪ್‌ ಹಾಗೂ ಮೂಬೈಲ್‌ ಮೇಸೆಜ್‌ಗಳ ಮೂಲಕ ರವಾನೆಯಾಗುವುದರೊಂದಿಗೆ ಹೈಟೆಕ್‌ ರೂಪು ಪಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಈ ರೀತಿ ರಾಜಾರೋಷವಾಗಿ ನಡೆಯುತ್ತಿರುವ ಕಳ್ಳ ವ್ಯವಹಾರಗಳಿಗೆ ಆರಕ್ಷರು ಕಡಿವಾಣ ಹಾಕದಿದ್ದಲ್ಲಿ ಸಾರ್ವಜನಿಕರು ಪೊಲೀಸ್‌ ಇಲಾಖೆ ಕುರಿತು ಅನುಮಾನದಿಂದ ನೋಡುವ ಪರಿಸ್ಥಿತಿ ದೂರವಾಗದು. ಜಿಲ್ಲೆಯ ಜನ ಸಾಕಷ್ಟು ನಂಬಿಕೆಯಿಟ್ಟಿರುವ ಪೊಲೀಸ್‌ ಉನ್ನತ ಅಧಿಕಾರಿಗಳು ಈ ಕುರಿತು ಗಮನಹರಿಸಿ ಕ್ರಮಕೈಗೊಳ್ಳುವುದರ ಮೂಲಕ ಈ ವಿಫರೀತ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದೆ.

Trending videos

Back to Top