CONNECT WITH US  

ಜೊನಾಥನ್‌ ಟ್ರಾಟ್‌ ನಿವೃತ್ತಿ

ಲಂಡನ್‌ : ರನ್‌ ಬರಗಾಲ ಎದುರಿಸುತ್ತಿರುವ ಇಂಗ್ಲೆಂಡಿನ ಬ್ಯಾಟ್ಸ್‌ಮನ್‌ ಜೊನಾಥನ್‌ ಟ್ರಾಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಕೆರೆಬಿಯನ್‌ನಲ್ಲಿ ರವಿವಾರ ಮುಗಿದ ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿ ವೇಳೆ ತಂಡಕ್ಕೆ ಮರಳಿದ್ದ ಟ್ರಾಟ್‌ ಬ್ಯಾಟಿಂಗ್‌ ಫಾರ್ಮ್ಗೆ ಬರಲು ಬಹಳಷ್ಟು ಒದ್ದಾಡಿದ್ದರು. ಈ ಸರಣಿ 1-1 ಅಂತರದಿಂದ ಸಮಬಲದೊಂದಿಗೆ ಅಂತ್ಯಗೊಂಡಿದೆ.

ನಿವೃತ್ತಿ ಘೋಷಿಸುವ ನಿರ್ಧಾರ ಕಠಿನವೆಂಬುದು ನನಗೆ ತಿಳಿದಿದೆ. ಆದರೆ ಇಂಗ್ಲೆಂಡಿಗೆ ಅಗತ್ಯವಾಗಿ ಬೇಕಾದ ಮಟ್ಟದಲ್ಲಿ ನನ್ನ ಆಟ ಸಾಗುತ್ತಿಲ್ಲ ಎಂಬ ಭಾವನೆ ನನಗಾಗುತ್ತಿದೆ. ಹಾಗಾಗಿ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಟ್ರಾಟ್‌ ಅವರು ಇಂಗ್ಲೆಂಡ್‌ ಆ್ಯನ್‌x ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಿಸಿದ ಹೇಳಿಕೆಯಲ್ಲಿ ಹೇಳಿದ್ದಾರೆ.

ಮತ್ತೂಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಕಲ್ಪಿಸಿಕೊಡುವ ಮೂಲಕ ನನ್ನನ್ನು ಗೌರವಿಸಿದ್ದೀರಿ. ಆದರೆ ನಿರೀಕ್ಷಿತ ನಿರ್ವಹಣೆ ನೀಡದೇ ನಿರಾಶೆಗೊಂಡಿದ್ದೇನೆ ಎಂದು 34ರ ಹರೆಯದ ಟ್ರಾಟ್‌ ತಿಳಿಸಿದರು. ಆದರೆ ಅವರು ತನ್ನ ಕೌಂಟಿ ವಾರ್ವಿಕ್‌ಶೈರ್‌ ಪರ ಆಡುವುದನ್ನು ಮುಂದುವರಿಸಲಿದ್ದಾರೆ. ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಲು ಅವಕಾಶ ಕಲ್ಪಿಸಿದ ಮತ್ತು ನೆರವು ನೀಡಿದ ಪ್ರತಿಯೊಬ್ಬರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಹೇಳುತ್ತಿದ್ದೇನೆ. ಇಷ್ಟು ವರ್ಷ ನನಗೆ ಪ್ರೋತ್ಸಾಹ, ಬೆಂಬಲ ನೀಡಿದ ಅಭಿಮಾನಿಗಳಿಗೆ ಕೂಡ ಕೃತಜ್ಞತೆ ಎಂದವರು ತಿಳಿಸಿದರು.

ಮುಂಬರುವ ಸರಣಿಗೆ ತಂಡದ ಆಟಗಾರರಿಗೆ ಶುಭವಾಗಲಿ ಎಂದು ಟ್ರಾಟ್‌ ಹಾರೈಸಿದ್ದಾರೆ. ವೆಸ್ಟ್‌ಇಂಡೀಸ್‌ ಸರಣಿ ವೇಳೆ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಟ್ರಾಟ್‌ ಕೇವಲ 72 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು ಮತ್ತು ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಟ್ರಾಟ್‌ ಆಡಿದ 52 ಟೆಸ್ಟ್‌ ಪಂದ್ಯಗಳ ವೇಳೆ ಅವರ ಜತೆಯಲ್ಲಿ ಆಡುವ ಅವಕಾಶ ಲಭಿಸಿರುವುದು ನನಗೆ ಸಿಕ್ಕಿದ ಗೌರವವೆಂದು ಭಾವಿಸುತ್ತೇನೆ. ಅವರು ಕ್ರಿಕೆಟ್‌ ಬಾಳ್ವೆ ವೇಳೆ ಬಹಳಷ್ಟನ್ನು ಸಾಧಿಸಿದ್ದಾರೆ ಎಂದು ಇಂಗ್ಲೆಂಡ್‌ ನಾಯಕ ಅಲಸ್ಟೇರ್‌ ಕುಕ್‌ ನುಡಿದಿದ್ದಾರೆ.

Trending videos

Back to Top