CONNECT WITH US  

ಬಿಜೆಪಿಯಿಂದ ಶೇ. 70 ಅಭ್ಯರ್ಥಿಗಳ ಆಯ್ಕೆ ಪೂರ್ಣ

ಮಂಗಳೂರು : ಗ್ರಾಮಪಂಚಾಯತ್‌ ಚುನಾವಣೆಯಲ್ಲಿ ದ.ಕನ್ನಡ ಜಿಲ್ಲೆಯಲ್ಲಿ ಶೇ. 70 ಬಿಜೆಪಿ ಅಭ್ಯರ್ಥಿಗಳ ಗುರುತಿಸುವಿಕೆ ಕಾರ್ಯಪೂರ್ಣಗೊಂಡಿದ್ದು ನಾಮಪತ್ರ ಸಲ್ಲಿಕೆಗೆ ತಯಾರಿ ನಡೆದಿದೆ ಎಂದು ಜಿಲ್ಲಾ ಬಿಜೆಪಿ ಸಮಿತಿ ಅಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್‌ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳಿಗೆ ಬಿಜೆಪಿ ವತಿಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮೇ16ರೊಳಗೆ ಎಲ್ಲಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಗ್ರಾಮಪಂಚಾಯತ್‌ ಚುನಾವಣೆ ಸಿದ್ದತೆ ಕುರಿತಂತೆ ಪರಿಶೀಲನಾ ಸಭೆ ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳು ನಡೆದಿದ್ದು ಅದರ ವರದಿಗಳನ್ನು ಪಡೆದುಕೊಳ್ಳಲಾಗಿದೆ. ಎಲ್ಲಾ ಗ್ರಾಮಪಂಚಾಯತ್‌ಗಳಿಗೆ ಪಕ್ಷದ ವತಿಯಿಂದ ಪ್ರಭಾರಿ ಹಾಗೂ ಸಹಪ್ರಭಾರಿಗಳನ್ನು ನೇಮಿಸಲಾಗಿದೆ. ವಾರ್ಡ್‌ಮಟ್ಟದಲ್ಲಿ ಹೊಣೆಗಾರಿಕೆಗಳನ್ನು ನಿಗದಿಪಡಿಸಿ ಹಂಚಲಾಗಿದೆ ಎಂದವರು ವಿವರಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದರು.

ರಾಜ್ಯ ವರಿಷ್ಠರ 3 ತಂಡಗಳು
ನಾಮಪತ್ರ ಸಲ್ಲಿಕೆಗೆ ಮೊದಲು ರಾಜ್ಯದಿಂದ ಕೇಂದ್ರ ಸಚಿವ ಅನಂತ್‌ ಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಆರ್‌. ಆಶೋಕ್‌, ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಪಕ್ಷದ ವರಿಷ್ಠರ 3 ತಂಡಗಳು ಜಿಲ್ಲೆಗೆ ಆಗಮಿಸಿಲಿದ್ದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ, ಪ್ರಭಾರಿಗಳ ಸಮಾವೇಶ ಜರಗಲಿದೆ ಎಂದರು.

ರಾಜ್ಯ ಸರಕಾರದಿಂದ ಪಂಚಾಯತ್‌ ಅಧಿಕಾರಗಳ ಮೊಟಕು
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಗ್ರಾಮ ಪಂಚಾಯತ್‌ಗಳ ಅಧಿಕಾರವನ್ನು ಮೊಟಕುಗೊಳಿಸಿದೆ. ಸರಕಾರದ ನೀತಿಯಿಂದಾಗಿ ಗ್ರಾಮಪಂಚಾಯತ್‌ಗಳು ಕಳೆದ 6 ತಿಂಗಳುಗಳಿಂದ ಮನೆಗಳ ನಿರ್ಮಾಣಕ್ಕೆ ಪರವಾನಿಗೆ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರ ಗ್ರಾಮಪಂಚಾಯತ್‌ಗಳಿಗೆ ಬಿಡುಗಡೆ ಮಾಡಿರುವ ಅಭಿವೃದ್ದಿ ಅನುದಾನಗಳನ್ನು ವಿದ್ಯುತ್‌ ಬಿಲ್‌ಗ‌ಳ ಪಾವತಿಗೆ ವಿನಿಯೋಗಿಸುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದ್ದು ಇದರಿಂದ ಗ್ರಾಮಗಳಲ್ಲಿ ಸಣ್ಣಪುಟ್ಟ ಅಭಿವೃದ್ದಿ ಕಾರ್ಯಗಳನ್ನು ಕೂಡಾ ಮಾಡದ ಪರಿಸ್ಥಿತಿ ಇದೆ. ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಪಾವತಿಯಾಗುತ್ತಿಲ್ಲ ಎಂದು ಪ್ರತಾಪಸಿಂಹ ನಾಯಕ್‌ ವಿವರಿಸಿದರು.

ವಿಧಾನಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ನಿಕ್‌, ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿ.ಪಂ. ಉಪಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಸಂಜೀವ ಮಠಂದೂರು, ಕಿಶೋರ್‌ ರೈ, ಸತೀಶ್‌ ಪ್ರಭು, ಸಂಜಯ ಪ್ರಭು ,ವಿಕಾಸ್‌ ಪುತ್ತೂರು ಉಪಸ್ಥಿತರಿದ್ದರು.

Trending videos

Back to Top