CONNECT WITH US  

ಸಮತೋಲಿತ ಮಾಧ್ಯಮವಿಲ್ಲದಿದ್ದರೆ ಅಪಾಯ

ಉಡುಪಿ : ಈಗ ನಗರ ಕೇಂದ್ರಿತ ವಿಷಯಗಳು ಮುಖ್ಯವಾಗಿ ಮಾಧ್ಯಮಗಳಲ್ಲಿ ಬೆಳಕು ಕಾಣುತ್ತಿದೆ. ದೊಡ್ಡ ಸಂಖ್ಯೆಯ ಗ್ರಾಮೀಣ ಭಾಗವನ್ನು ನಿರ್ಲಕ್ಷಿಸಲಾಗುತ್ತಿದೆ. ಹೊಣೆಗಾರಿಕೆಯರಿತ ಮಾಧ್ಯಮ ಕ್ಷೇತ್ರ ಇಲ್ಲದೆ ಹೋದರೆ ಸಂವಿಧಾನದ ನಾಲ್ಕನೆಯ ಸ್ತಂಭ ಎಂದು ಹೇಳುವ ಮಾತು ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಈಡಾಗುತ್ತದೆ ಎಂದು ಚಲನಚಿತ್ರ ನಿರ್ಮಾಪಕ, ಚೆನ್ನೈನ ಮೀಡಿಯಾ ಡೆವಲಪ್‌ಮೆಂಟ್‌ ಫೌಂಡೇಶನ್‌ ಮತ್ತು ಏಶ್ಯನ್‌ ಕಾಲೇಜ್‌ ಆಫ್ ಜರ್ನಲಿಸಂ ಅಧ್ಯಕ್ಷ ಶಶಿಕುಮಾರ್‌ ಎಚ್ಚರಿಸಿದ್ದಾರೆ.

ಮಣಿಪಾಲದ ಟಿ.ಎ.ಪೈ ಮ್ಯಾನೆಜ್ಮೆಂಟ್‌ ಇನ್‌ಸ್ಟಿಟ್ಯೂಟ್‌ನ (ಟ್ಯಾಪ್ಮಿ) 18ನೆಯ ನಾಯಕತ್ವ ಸರಣಿ ಉಪನ್ಯಾಸದಲ್ಲಿ "ಭಾರತದಲ್ಲಿ ಹೊಣೆಯರಿತ ಪತ್ರಿಕೋದ್ಯಮ ಸತ್ತಿದೆಯೆ?' ಎಂಬ ಕುರಿತು ಮಾತನಾಡಿದರು. ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಸೋಮವಾರ ಕಾರ್ಯಕ್ರಮ ನಡೆಯಿತು.

ಮಾಧ್ಯಮವು ಪ್ರಜಾಪ್ರಭುತ್ವದ ಒಂದು ಭಾಗ. ಮಾಧ್ಯಮ ಸ್ವಾತಂತ್ರ್ಯ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನ್ನುವುದು ತುರ್ತು ಪರಿಸ್ಥಿತಿ ಇತಿಹಾಸ ಸಾರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನ್ಯಾಯವಾದಿಗಳು ಮತ್ತು ಪತ್ರಕರ್ತರು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದರು. ಆಗ ರಾಷ್ಟ್ರೀಯವಾದ ಮತ್ತು ಭಾರತದ ಕಲ್ಪನೆಯನ್ನು ಇರಿಸಿಕೊಂಡಿದ್ದರೆ ಈಗಲೂ ಇದು ಪ್ರಮುಖವೇ ಆಗಿದೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವವು ಮಾಧ್ಯಮವನ್ನು ಬಲಿಷ್ಠಗೊಳಿಸಬೇಕು ಎಂದು ಲಿಖೀತವಾಗಿದೆ. ಆದರೆ ಭಾರತದಲ್ಲಿ ವಿಶೇಷ ಮಾನ್ಯತೆ ಇಲ್ಲ. ಸಿಂಗಾಪುರ, ಮಧ್ಯಪ್ರಾಚ್ಯದಂತಹ ಸಿರಿವಂತ ದೇಶಗಳಲ್ಲಿ ಸ್ವತಂತ್ರ ರಾಜಕೀಯ ಜೀವನ ಇಲ್ಲ. ಕಮ್ಯುನಿಸ್ಟ್‌ ದೇಶ ಚೀನಾದಲ್ಲಿಯೂ ಮಿಲಿಯಗಟ್ಟಲೆ ಜನರನ್ನು ಕೊಂದರೂ ಮಾಧ್ಯಮಗಳು ಸತ್ಯವನ್ನು ಬಿಚ್ಚಿಡುತ್ತಿರಲಿಲ್ಲ. ಹೀಗೆ ಸ್ವತಂತ್ರ, ಮುಕ್ತವಾದ ಮಾಧ್ಯಮ ಜನಜೀವನಕ್ಕೆ ಅತ್ಯಗತ್ಯ ಎಂದು ಶಶಿಕುಮಾರ್‌ ಹೇಳಿದರು.

ಡಿಸ್ಕ್ರೈಬಿಂಗ್‌-ಪ್ರಿಸ್ಕ್ರೈಬಿಂಗ್‌
ನಾವು ಇದ್ದ ವಿಷಯಗಳನ್ನು (ಡಿಸ್ಕ್ರೈಬಿಂಗ್‌) ನೀಡದೆ ನಿರ್ದೇಶನ (ಪ್ರಿಸ್ಕ್ರೈಬಿಂಗ್‌) ನೀಡುತ್ತಿದ್ದೇವೆ. ರಾಜಕೀಯ, ಚಲನಚಿತ್ರ, ಫ್ಯಾಶನ್‌ ಇತ್ಯಾದಿ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇವೆ. ಸರಿಯಾದ ಮಾಹಿತಿ ಕೊಡುವ ಬದಲು ಸರಿಯಾದ ಮಾಹಿತಿಯಿಂದ ವಂಚಿಸುತ್ತಿದ್ದೇವೆ. ಬದಲಾಗುತ್ತಿರುವ ಹವಾಮಾನ, ಉಷ್ಣಾಂಶದಂತಹ ಜಾಗತಿಕ ತಾಪಮಾನದ ಪರಿಣಾಮವನ್ನು ನಿತ್ಯವೂ ಮಾಧ್ಯಮಗಳು ಕೊಡಬೇಕಿತ್ತು. ನಮ್ಮಲ್ಲಿ ಪ್ರಾಕೃತಿಕ ವಿಕೋಪ ನಡೆದಾಗ ಮಾತ್ರ ಈ ಸುದ್ದಿಗಳನ್ನು ಕೊಟ್ಟು ಈವೆಂಟ್‌ ಜರ್ನಲಿಸಂ ತೋರಿಸುತ್ತೇವೆ ಎಂದರು.

ಡ್ರಗ್ಸ್‌ ಕೇಳಿದರೆಂದು ಕೊಡಲಾಗುತ್ತದೆಯೆ?
ಶೇ.70-75 ಭಾಗ ಈಗಲೂ ಗ್ರಾಮೀಣ ಪ್ರದೇಶಗಳು. ರೇಡಿಯೋ, ಪತ್ರಿಕೆಗಳು, ದೃಶ್ಯಮಾಧ್ಯಮಗಳೆಲ್ಲವೂ ಮಾತ್ರ ನಗರ ಕೇಂದ್ರಿತವಾಗಿ ಸುದ್ದಿ ಕೊಡುತ್ತಿವೆ. ರೈತರ ಆತ್ಮಹತ್ಯೆ, ಜಾತಿ ಸಮಸ್ಯೆಗಳು, ಓಡಿಹೋದ ಘಟನೆಗಳಿಗೆ ಮಾತ್ರ ಗ್ರಾಮೀಣ ಸುದ್ದಿಗಳನ್ನು ಕೊಡುತ್ತೇವೆ. ಗ್ರಾಮೀಣ ಭಾಗದ ಕೌಟುಂಬಿಕ ಜೀವನ, ಸಂಸ್ಕೃತಿ, ಪರಂಪರೆ, ಸಾಮಾನ್ಯ ಜ್ಞಾನ, ನೈತಿಕ ಜೀವನ ಇತ್ಯಾದಿ ವಿಷಯಗಳ ಬಗ್ಗೆ ಗಮನ ಕೊಡುತ್ತಿಲ್ಲ. ಹೀಗಾಗಿ ಜನರಿಗೆ ತಪ್ಪು ಸಂದೇಶಗಳನ್ನು ಕೊಟ್ಟು ದಾರಿತಪ್ಪಿಸುತ್ತಿದ್ದೇವೆ. ಕೇಳಿದರೆ ಜನರಿಗೆ ಬೇಕಾದ್ದನ್ನು ಕೊಡುತ್ತೇವೆ ಎನ್ನುತ್ತಾರೆ. ಡ್ರಗ್ಸ್‌ ಕೇಳಿದರೆಂದು ಕೊಡಲು ಆಗುತ್ತದೆಯೆ ಎಂದು ಶಶಿಕುಮಾರ್‌ ಪ್ರಶ್ನಿಸಿದರು.

ಸ್ವನಿಯಂತ್ರಣ-ಬಾಹ್ಯನಿಯಂತ್ರಣ
ಮಾಧ್ಯಮ ಕ್ಷೇತ್ರದ ಪತ್ರಕರ್ತರು ಸ್ವನಿಯಂತ್ರಣ ಮಾಡಿಕೊಳ್ಳದೆ ಇದ್ದರೆ ಪ್ರಜಾಪ್ರಭುತ್ವದ ಇತರ ಮೂರು ಸ್ತಂಭಗಳು ಮಾಧ್ಯಮ ಕ್ಷೇತ್ರವನ್ನು ನಿಯಂತ್ರಿಸುತ್ತಾರೆ. ನಾನು ಬಾಹ್ಯ ನಿಯಂತ್ರಣವನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ನಾವೇ ನೀತಿಯನ್ನು ಹಾಕಿಕೊಂಡು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರೆ ಮಾಧ್ಯಮ ಕ್ಷೇತ್ರದೊಂದಿಗೆ ಪ್ರಜಾಪ್ರಭುತ್ವವೂ ಶಿಥಿಲವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಟ್ಯಾಪ್ಮಿ ಟ್ರಸ್ಟ್‌ ಅಧ್ಯಕ್ಷ ಡಾ|ರಾಮದಾಸ್‌ ಪೈ ವಹಿಸಿದ್ದರು. ಟ್ರಸ್ಟಿ ಡಾ|ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ ನಿರ್ದೇಶಕ ಡಾ|ಆರ್‌.ಸಿ.ನಟರಾಜನ್‌ ಪರಿಚಯಿಸಿದರು. ಪ್ರೊ|ಸೀನಾ ಬಿಜು ಕಾರ್ಯಕ್ರಮ ನಿರ್ವಹಿಸಿದರು.

Trending videos

Back to Top