CONNECT WITH US  

ಸಂಖ್ಯೆಯಲ್ಲಿ ನಿಮ್ಮ ಭವಿಷ್ಯ

ನಿಮ್ಮ ಸಂಖ್ಯೆ ಯಾವುದು?
ಹುಟ್ಟಿದ ದಿನ + ತಿಂಗಳು + ಈ ವರ್ಷ = ನಿಮ್ಮ ಸಂಖ್ಯೆ

ಉದಾಹರಣೆ: ನಿಮ್ಮ ಹುಟ್ಟಿದ ದಿನ ಸೆಪ್ಟೆಂಬರ್‌ 19 ಆಗಿದ್ದರೆ, 19 + 9 + 2017. ಅಂದರೆ,  1+ 9 + 9 + 2 + 0 + 1 + 7 = 29. ನಿಮ್ಮ ಸಂಖ್ಯೆ: 2 + 9 = 11. ಅಂದರೆ, 1+1= 2. ಕೊನೆಯಲ್ಲಿ ನಿಮ್ಮ ಸಂಖ್ಯೆ 2.

ಇನ್ನೊಂದು ಉದಾಹರಣೆ: ನಿಮ್ಮ ಹುಟ್ಟಿದ ದಿನ ಜೂನ್‌ 8 ಆಗಿದ್ದರೆ, 8 + 6 + 2 + 0 + 1 + 7 = 24. ನಿಮ್ಮ ಸಂಖ್ಯೆ: 2 + 4 = 6.

1. ಬೊಂಬಾಟ್‌ ಆರೋಗ್ಯ
ಇಡೀ ವರ್ಷ ಧನಾತ್ಮಕ ಶಕ್ತಿ ಪ್ರಭಾವಳಿಯಂತೆ ನಿಮ್ಮನ್ನು ಆವರಿಸಿಕೊಂಡಿರುತ್ತದೆ. ವರ್ಷಪೂರ್ತಿ ನವಚೈತನ್ಯದಿಂದ ಕಂಗೊಳಿಸುತ್ತೀರಿ. ನೀವು ಉದ್ಯಮಿ ಅಥವಾ ಉದ್ಯೋಗಿಯಾಗಿದ್ದರೆ ಅವಕಾಶಗಳು ಆಗಾಗ ಬಂದು ಬಾಗಿಲು ತಟ್ಟುತ್ತವೆ. ವಿದ್ಯಾರ್ಥಿಗಳು ಪ್ರಯತ್ನ ಹೆಚ್ಚಿಸಿ, ಉತ್ತಮ ಫ‌ಲ ಪ್ರಾಪ್ತಿಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸರಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿರುವವರಿಗೆ ಈ ವರ್ಷ ಶುಭವಿದೆ. ನೈಜ 'ಕೌಟುಂಬಿಕ ಸಂತಸ' ನಿಮ್ಮೆದುರು ತೆರೆದುಕೊಳ್ಳಲಿದೆ. ನಿಮ್ಮ ಮಕ್ಕಳ ಗೆಲುವುಗಳು ಸದಾ ನಿಮ್ಮನ್ನು ಸಂಪ್ರೀತರನ್ನಾಗಿ ಇರಿಸುತ್ತವೆ. ಈ ವರ್ಷ ನಿಮ್ಮ ಮೇಲೆ ಚಂದ್ರನ ಪ್ರಭಾವ ಹೆಚ್ಚು. ಚಂದ್ರ ಅಂದರೆ ಪ್ರಯಾಣ. ಹಾಗಾಗಿ ಪ್ರಯಾಣ ಅವಕಾಶಗಳು ತೆರೆದುಕೊಳ್ಳುತ್ತವೆ. ಏಕಾಕಿತನ ಮಾಯವಾಗಿ ಹೃದಯ ಸಂಗಾತಿ ನಿಮಗೊದಗುತ್ತಾರೆ. ವಿವಾಹಕ್ಕಾಗಿ ಕಾಯುತ್ತಿದ್ದೀರೋ - ಈ ವರ್ಷ ಅದಕ್ಕೆ ಸುಸಮಯ! ಆರೋಗ್ಯವೂ ಅಷ್ಟೆ - ಬೊಂಬಾಟಾಗಿರುತ್ತದೆ. ಕಿತ್ತಳೆ ಅಥವಾ ಕೆಂಪು ಬಣ್ಣ ನಿಮಗೆ ಅದೃಷ್ಟದಾಯಕ.

2. ರಾಜನಂತೆ ಬದುಕಿ
ಈ ವರ್ಷ ಗುರು ನಿಮ್ಮ ಬೆಂಗಾವಲಿಗಿರುತ್ತಾನೆ. ಹಾಗಾಗಿ ಈ ವರ್ಷ ರಾಜನಂತೆ ಬದುಕಲು ರೆಡಿಯಾಗಿರಿ. ಈ ವರ್ಷ ನಿಮಗೊದಗುವ ಸಂತೋಷ ಕಳೆದ ವರ್ಷದ ದುಪ್ಪಟ್ಟು. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತೀರಿ. ಅವಕಾಶಗಳು ನೀವು ನಡೆಯುವ ದಾರಿಯಲ್ಲಿ ಕಾಲಿಗೆ ತೊಡರಿಕೊಳ್ಳುತ್ತವೆ, ಬಾಗಿ ಎತ್ತಿಕೊಳ್ಳಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಸದಾ ಬೆಂಬಲವಿದೆ, ಹಾಗಾಗಿ ಬಡ್ತಿ, ಮೆಚ್ಚುಗೆಯ ಸಾಧ್ಯತೆ ಇದ್ದೇ ಇದೆ. ಪತ್ರಿಕೋದ್ಯಮ, ಪ್ರಕಾಶನ, ಕಮಿಶನ್‌ ಏಜೆಂಟ್‌, ಬೋಧನೆ, ರಫ್ತು - ಆಮದು ಕ್ಷೇತ್ರದಲ್ಲಿರುವವರಿಗೆ ಈ ವರ್ಷ ಅತ್ಯುತ್ತಮ. ಶಿಕ್ಷಣಕ್ಕಾಗಿ ವಿದೇಶ ಪ್ರವಾಸದ ಅವಕಾಶ ಇದೆ, ಉಪಯೋಗಿಸಿಕೊಳ್ಳಿ. ಸುಖಮಯ ಸಾಂಸಾರಿಕ ಜೀವನ ಈ ವರ್ಷ ನಿಮ್ಮದು. ಪ್ರೇಮಿಗಳಿಗೆ 2017 ಸ್ಮರಣಾರ್ಹ ವರ್ಷ! ಅವಿವಾಹಿತರಿಗೆ ಗುರು ಕಂಕಣಭಾಗ್ಯ ಒದಗಿಸಿಕೊಡಬಲ್ಲ. ಆರೋಗ್ಯದ ದೃಷ್ಟಿಯಿಂದ ಜಂಕ್‌ ಫ‌ುಡ್‌, ರಸ್ತೆ ಬದಿಯ ಆಹಾರ ವರ್ಜಿಸಿದರೆ ನೀವು ಸುರಕ್ಷಿತರು. ಬಿಳಿ, ಹಸುರು ಮತ್ತು ಕ್ರೀಮ್‌ ಬಣ್ಣ ನಿಮಗೆ ಅದೃಷ್ಟದಾಯಕ. 

3. ಪ್ರೇಮಿಗಳಿಗೆ ಸುವರ್ಣಾವಕಾಶ
ಬದುಕಿನಲ್ಲಿ ಅಚ್ಚರಿಯುಂಟು ಮಾಡುವ ಚಮತ್ಕಾರಿ ಸಂಗತಿಗಳು ಈ ವರ್ಷ ನಿಮ್ಮೆದುರು ತೆರೆದುಕೊಳ್ಳುತ್ತವೆ. ಜೀವನ ಅಂದರೆ ಏಳು ಮತ್ತು ಬೀಳು ನಿಜ. ಯಶಸ್ಸುಗಳನ್ನು ಆನಂದಿಸಿ, ಸೋಲುಗಳೆದುರು ತಲೆಬಾಗಬೇಡಿ. ಉದ್ಯಮಿಗಳಾಗಿದ್ದರೆ ಇನ್‌ವೆಸ್ಟ್‌ ಮೆಂಟ್‌ಗೆ ಮುನ್ನ ಹತ್ತು ಬಾರಿ ಯೋಚಿಸಿ. ಏನೇ ಆದರೂ ಲಾಭ ಇದ್ದೇ ಇದೆ. ಉದ್ಯೋಗಿಗಳು ನಿಮಗೆ ಸಂಬಂಧಿಸದೆ ಇರುವುದರಲ್ಲಿ ಮೂಗು ತೂರಿಸಬೇಡಿ, ನಿಮ್ಮಷ್ಟಕ್ಕೆ ಇರಿ. ಒಂದೊಳ್ಳೆಯ ಉದ್ಯೋಗ ಅವಕಾಶವೂ ಈ ವರ್ಷ ನಿಮ್ಮೆದುರು ತೆರೆದುಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚು ಶ್ರಮ ಹಾಕಿ ಯಶಸ್ಸಿನ ಮೆಟ್ಟಿಲೇರಲು ಇದು ನಿರ್ಣಾಯಕ ವರ್ಷ. ಉನ್ನತ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಸಾಧ್ಯತೆಯೂ ಇದೆ. ಪ್ರಣಯಿಗಳಿಗೆ ಇಂಥ ವರ್ಷ ಇನ್ನೊಂದು ಬರಲಾರದು. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ, ಫಿಟ್‌ನೆಸ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಿ. ಬಿಳಿ ಮತ್ತು ಕೆಂಬಣ್ಣ ನಿಮಗೆ ಅದೃಷ್ಟದಾಯಕ. 

4. ಅಭೂತಪೂರ್ವ ಯಶಸ್ಸು
ಮಂಗಳನ ಕ್ರಿಯಾತ್ಮಕ ಶಕ್ತಿಯ ನೆರಳಿನಡಿ ನೀವು ಈ ವರ್ಷ ಬೆಳಗುತ್ತೀರಿ. ಸೃಜನಶೀಲ ಶಕ್ತಿ, ಹೊಸತನ್ನು ನಿರ್ಮಿಸುವ ಸಾಮರ್ಥ್ಯ ನಿಮ್ಮದು. ಯಶಸ್ಸು ಈ ವರ್ಷ ನಿಮ್ಮ ದಾರಿಯಲ್ಲಿದೆ, ನಿಶ್ಚಿಂತೆಯಿಂದ ಹಸನ್ಮುಖೀಯಾಗಿರಿ. ಉದ್ಯಮಿಗಳು ಮತ್ತು ಉದ್ಯೋಗಿಗಳು ಈ ವರ್ಷ ಅಭೂತಪೂರ್ವ ಯಶಸ್ಸು ಗಳಿಸುತ್ತಾರೆ. ಇದೇ ವೇಳೆ ನಿಮ್ಮ ಯಶಸ್ಸಿನಿಂದ ಕಣ್ಣು ಕೆಂಪಾಗಿಸಿಕೊಳ್ಳುವವರ ಬಗ್ಗೆಯೂ ಗಮನ ಹರಿಸಿ. ಲೆಕ್ಕಪತ್ರ, ಮಾರಾಟ, ಸಂವಹನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವರ್ಷ ಶುಭ. ಹೊಸ ಉದ್ಯೋಗ ಅಥವಾ ಉದ್ಯಮ ಆರಂಭಕ್ಕೆ ಪ್ರಯತ್ನಿಸುತ್ತೀರಾದರೆ ಇದೇ ಒಳ್ಳೆಯ ಸಮಯ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಕಲಿಯುವ ಹುಮ್ಮಸ್ಸು ವೃದ್ಧಿಸುತ್ತದೆ. ಕುಟುಂಬ ಮತ್ತು ಸಂಸಾರದ ಜತೆಗೆ ಖುಷಿಯಾಗಿ ಕಾಲ ಕಳೆಯುತ್ತೀರಿ. ಪ್ರಣಯ ಮತ್ತು ಗೆಳೆತನಗಳ ಸುದೀರ್ಘ‌ ಪ್ರಯಾಣವೂ ಈ ವರ್ಷ ಆರಂಭವಾಗುವ ಸಾಧ್ಯತೆಯಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ, ಒಳ್ಳೆಯ ಆಹಾರ ಸೇವಿಸಿ, ಧ್ಯಾನ, ಪ್ರಾಣಾಯಾಮ, ಯೋಗಗಳಲ್ಲಿ ತೊಡಗಿ. ಕಂದು, ಕಪ್ಪು ಮತ್ತು ನೀಲಿ ಬಣ್ಣ ಅದೃಷ್ಟದಾಯಕ.

5. ಲಾಭದಾಯಕ ವರ್ಷ
ಸೌಂದರ್ಯ, ಸಿರಿವಂತಿಕೆ, ವಿಲಾಸಗಳ ಭಾಗ್ಯದಾಯಕ ಶುಕ್ರ ನಿಮ್ಮೊಡನೆ ಈ ವರ್ಷ ಸದಾ ಇರುತ್ತಾನೆ. ಉದ್ಯೋಗಿಗಳಿಗೆ ಮತ್ತು ಉದ್ಯಮಿಗಳಿಗೆ ಈ ವರ್ಷ ಬಹಳ ಲಾಭದಾಯಕ ಎನಿಸಿಕೊಳ್ಳುತ್ತದೆ. ಉದ್ಯೋಗ  ಸ್ಥಳದಲ್ಲಿಯೇ ಯೋಗ್ಯರೊಂದಿಗೆ ಪ್ರಣಯ ಕಲಾಪ ಆರಂಭವಾಗುವ ಸಾಧ್ಯತೆಯಿದೆ, ಸ್ಥಿರತೆ ಮತ್ತು ಘನತೆಯೊಂದಿಗೆ ಮುಂದುವರಿಯರಿ. ವಾಹನ, ಕರಕುಶಲ, ಹೊಟೆಲ್‌ ಮ್ಯಾನೇಜ್‌ಮೆಂಟ್‌, ಸಂಗೀತ, ಕಲೆಗಳು, ಜವಳಿ ಉದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಈ ವರ್ಷ ಹುಲುಸಾಗಿ ಇರಲಿದೆ. ಕುಟುಂಬ ಸಂಬಂಧ ಸುಂದರವಾಗಿ ಸಾಗಲಿದೆ. ಸಂಗಾತಿಯೊಂದಿಗೆ ಪ್ರಯಾಣ ಸಾಧ್ಯತೆ ಆಗಾಗ ಒದಗಿಬರುತ್ತದೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತೀರಿ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ, ವ್ಯಾಯಾಮ, ಒಳ್ಳೆಯ ಆಹಾರ ಸೇವನೆ ಮಾಡಿ. ಮದ್ಯ ಇತ್ಯಾದಿಗಳಿಂದ ದೂರ ಇರಿ. ಹಸುರು, ಕಂದು ಮತ್ತು ಊದಾ ಬಣ್ಣ ಶುಭಕರ. 

6. ಬಾಸ್‌ನಿಂದ ಶಹಬ್ಟಾಸ್‌
ಯಶಸ್ಸಿನೊಂದಿಗೆ ಕೊನೆ ಮುಟ್ಟುವ ಕೆಲಸ ಕಾರ್ಯಗಳು ವರ್ಷವಿಡೀ ನಿಮ್ಮನ್ನು ವ್ಯಸ್ತರಾಗಿ ಇರಿಸುತ್ತವೆ. ಒತ್ತಡ ಇರುತ್ತದೆ, ಅದರ ಬೆನ್ನಿಗೆ ಗೆಲುವುಗಳ ಸಮಾಧಾನ, ಖುಷಿ! ನಿಮ್ಮ ವೃತ್ತಿಪರ ಜೀವನ ಈ ವರ್ಷ ಸೊಗಸಾಗಿರುತ್ತದೆ, ಯಶಸ್ಸು ಜತೆಗೇ ನಡೆಯುತ್ತಿರುತ್ತದೆ. ಕಚೇರಿಯಲ್ಲಿ ಮೇಲಧಿಕಾರಿಗಳ ಮೆಚ್ಚುಗೆ, ಸಹೋದ್ಯೋಗಿಗಳ ಅಚ್ಚರಿಯ ಉದ್ಗಾರಗಳ ಕೇಂದ್ರ ನೀವಾಗುತ್ತೀರಿ. ನಿಮ್ಮ ಕೆಲಸ ಹೇಗಿರುತ್ತದೆ ಎಂದರೆ, ಎದುರಾಳಿಯೂ ಮೆಚ್ಚಿ ವಾಹ್‌ ಎನ್ನುತ್ತಾನೆ. ವಿದ್ಯಾರ್ಥಿಗಳಿಗೆ ಅಂಕಗಳಿಕೆ, ಹೊಸ ಶಾಲೆ/ಕಾಲೇಜು ಪ್ರವೇಶಗಳ ದೃಷ್ಟಿಯಿಂದ ಬಯಸಿದ್ದು ಎದುರಾಗುತ್ತದೆ. ಪತ್ನಿ, ಮಕ್ಕಳೊಂದಿಗೆ ಸಾಂಸಾರಿಕ ಸುಖ, ನೆಮ್ಮದಿಯ ನಿಜ ಅರ್ಥ ನಿಮಗೆ ಈ ವರ್ಷ ಆಗುತ್ತದೆ. ಪ್ರೇಮಿಯಾಗಿ ಮಾರ್ಪಡುವ ಸಾಧ್ಯತೆ ಇದೆ, ಆದರೆ ಆಲೋಚಿಸಿ ಮುಂದಡಿ ಇಡಿ. ಆರೋಗ್ಯಕ್ಕಾಗಿ ಚೆನ್ನಾಗಿ ವ್ಯಾಯಾಮ ಮಾಡಿ, ಆಹಾರದ ಬಗ್ಗೆ ಎಚ್ಚರ ಇರಲಿ. ಬಿಳಿ ಮತ್ತು ಕೆಂಬಣ್ಣ ಶುಭದಾಯಕ.

7. ಪ್ರೀತಿಸುವವರು ಸಿಗುತ್ತಾರೆ
ಶನಿಯ ಶುಭದಾಯಕ ಆಧಿಪತ್ಯ ಇಡೀ ವರ್ಷ ನಿಮ್ಮನ್ನು ಮುನ್ನಡೆಸುತ್ತದೆ. ಉದ್ಯಮ, ವೃತ್ತಿ ಕ್ಷೇತ್ರದಲ್ಲಿ ಸಲಗದಂತೆ ಮುಂದುವರಿಯುತ್ತೀರಿ. ಕೆಲಸ ಕಾರ್ಯಗಳನ್ನು ಚೆನ್ನಾಗಿ ಯೋಜಿಸಿ, ವ್ಯವಸ್ಥಿತವಾಗಿ ಮುನ್ನಡೆಸಿ, ಯಶಸ್ಸು ಕೈಹಿಡಿಯುತ್ತದೆ. ಉಕ್ಕು, ಲೆದರ್‌, ಯಂತ್ರಗಳು, ಆಸ್ತಿಪಾಸ್ತಿ ಇತ್ಯಾದಿ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಫ‌ಲ ಒದಗುವ ವರ್ಷ ಇದು. ಪ್ರಾಮಾಣಿಕರಾಗಿರಿ, ಜತೆಗೆ ಮೋಸ, ವಂಚನೆ, ಕಾಲೆಳೆಯುವ ಪ್ರವೃತ್ತಿಯವರ ಬಗ್ಗೆ ಎಚ್ಚರವೂ ಇರಲಿ. ಸಂಶೋಧನೆ, ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಯಶಸ್ಸು ಕಾದಿದೆ. ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕವಾಗಿ ಗಂಭೀರ ಮನೋದೃಷ್ಟಿ ಸಾಧಿಸುತ್ತೀರಿ. ನಿಮ್ಮನ್ನು ಅಪಾರವಾಗಿ ಪ್ರೀತಿಸುವ, ಆರಾಧಿಸುವ ಸಂಗಾತಿ ಒದಗುವ ಸಂಭವ ಗರಿಷ್ಠವಾಗಿದೆ. ಒಳ್ಳೆಯ ಆಹಾರ ಸೇವಿಸಿ, ಕ್ರೀಡೆ, ವ್ಯಾಯಾಮಗಳಲ್ಲಿ ಪಾಲ್ಗೊಂಡರೆ ಆರೋಗ್ಯ ಚೆನ್ನಾಗಿರುತ್ತದೆ. ನೀಲಿ, ಕ್ರೀಮ್‌, ಹಳದಿ, ತಿಳಿಹಸಿರು ಶುಭವರ್ಣಗಳು.

8. ಹಟ ಬಿಡದೆ ಮುನ್ನುಗ್ಗಿ
ಧನಾತ್ಮಕ ಶಕ್ತಿ ಸಾಮರ್ಥ್ಯಗಳನ್ನು ನಿಮಗೊದಗಿಸುವ ಮಂಗಳ ನಿಮ್ಮನ್ನು ಆಳುತ್ತಿರುತ್ತಾನೆ. ಹೊಸ ವೃತ್ತಿ ಯೋಜನೆಗಳನ್ನು ಕೊಂಚ ನಿಧಾನಿಸಿ ಮುಂದಡಿ ಇಡಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ತತ್‌ಕ್ಷಣ ಸಿಗದೆ ಹತಾಶೆ ಉಂಟಾಗಬಹುದು. ಆದರೆ, ಕುಗ್ಗದೆ ತಾಳ್ಮೆ ವಹಿಸಿ ಕಾದರೆ ಅಚ್ಚರಿ ಎದುರಾಗುವುದು. ಆಸ್ತಿಪಾಸ್ತಿ, ಯಂತ್ರೋಪಕರಣ ಇತ್ಯಾದಿ ಕ್ಷೇತ್ರಗಳವರು ಎಚ್ಚರಿಕೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಎದುರಾಗಬಹುದು, ಆದರೆ ಹಟ ಬಿಡದೆ ಮುಂದುವರಿಯಿರಿ. ತಾಳ್ಮೆ, ಸಂಯಮ, ಸಹನೆ ದೃಢವಾಗಿದ್ದರೆ ಎಲ್ಲವೂ ಶುಭ. ಕುಟುಂಬದ, ಮಕ್ಕಳ ಜತೆಗೆ ಹೆಚ್ಚು ಸಮಯ ಕಳೆಯಿರಿ, ಜೀವನ ನೆಮ್ಮದಿಯದ್ದಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆಯಿಂದಿರಿ. ಕಪ್ಪು, ಕಂದು, ಕಡು ನೀಲಿ, ನೇರಳೆ ಬಣ್ಣಗಳು ನಿಮ್ಮ ಪಾಲಿಗೆ ಶುಭ.

9. ವಿವಾದಗಳು ಅಂತ್ಯ
ಇಡೀ ವರ್ಷ ಸೂರ್ಯನಿಂದ ಆಳಲ್ಪಡುತ್ತೀರಿ. ಹಾಗಾಗಿ ನಿಮ್ಮ ಧೈರ್ಯ ಮತ್ತು ಕಠಿಣ ಶ್ರಮಗಳ ಆಧಾರದಲ್ಲಿ ಅವನಂತೆಯೇ ಹೊಳೆಯುತ್ತೀರಿ. ಯಶಸ್ಸು ನಿಮ್ಮ ಪಾಲಿಗಿದೆ. ಉದ್ಯಮ - ವ್ಯವಹಾರದಲ್ಲಿ ಲಾಭ ಗಳಿಕೆಯ ಹಾದಿ ಮುಂದಿದೆ. ಉದ್ಯೋಗ, ನೌಕರಿಗಳಲ್ಲಿರುವ ಮಂದಿಗೆ ಮೆಚ್ಚುಗೆ, ಬಡ್ತಿ, ವೇತನ ಏರಿಕೆಯ ಶುಭ ಸುದ್ದಿ. ಪೊಲೀಸ್‌, ಆಸ್ತಿಪಾಸ್ತಿ, ಔಷಧಿ, ಕಟ್ಟಡ ನಿರ್ಮಾಣ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಒಳ್ಳೆಯ ದಿನಗಳನ್ನು ಕಾಣುತ್ತೀರಿ. ಪ್ರವೇಶ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ನೀವಾಗಿದ್ದರೆ ಯಶಸ್ಸು ಕೈಹಿಡಿಯುತ್ತದೆ. ಪ್ರೇಮಿಗಳು ಮಾತ್ರ ಅಲ್ಲ, ದಂಪತಿಗಳಿಗೂ ಪ್ರಣಯಭರಿತ ಉಲ್ಲಾಸದ ದಿನಗಳು ಮುಂದಿವೆ. ವಿವಾದಗಳು ಅಂತ್ಯಗೊಂಡು ಎಲ್ಲವೂ ನಿಳಿನೀರಿನಂತಾಗುತ್ತದೆ ಈ ವರ್ಷ. ಏಕಾಂಗಿಯಾಗಿರುವವರು ಪ್ರೀತಿಯಲ್ಲಿ ಬೀಳಲು ಸಿದ್ಧರಾಗಿರಿ. ಆರೋಗ್ಯ ಚೆನ್ನಾಗಿರುತ್ತದೆ, ಆದರೆ ಒಳ್ಳೆಯ ಆಹಾರ, ಅದಕ್ಕೆ ತಕ್ಕ ವ್ಯಾಯಾಮ ಜತೆಯಲ್ಲಿದ್ದರೆ ನಿಮ್ಮ ವ್ಯಕ್ತಿತ್ವ ಹೊಳೆಯುತ್ತದೆ. ಕೆಂಬಣ್ಣ, ಊದಾ ಬಣ್ಣ ಶುಭಕರ.

Trending videos

Back to Top