CONNECT WITH US  

Happy New Year: ವರ್ಷ ಭವಿಷ್ಯ

2017 ಜನವರಿಯಿಂದ 28.03.2017ರವರೆಗೂ ಶ್ರೀ ದುರ್ಮುಖೀ ನಾಮ ಸಂವತ್ಸರವೇ ಚಾಲ್ತಿಯಲ್ಲಿರುತ್ತದೆ. 29.03.2016 ರಂದು ಯುಗಾದಿ ಅಂದರೆ ಶ್ರೀ ಹೇವಿಳಂಬಿ ನಾಮ ಸಂವತ್ಸರದ ಪ್ರಾರಂಭ. 

ಹೊಸ ವರ್ಷದಲ್ಲಿ ಗ್ರಹಗಳ ಸಂಚಲನ: ಸೂರ್ಯಾದಿ ಕೇತುವಿನವರೆಗೂ 9 ಗ್ರಹಗಳಿದ್ದರೂ ನಾವು ಹೆಚ್ಚಾಗಿ ಗಮನಿಸುವುದು ಶನಿ, ಗುರು ಹಾಗೂ ರಾಹುಕೇತುಗಳ ಚಲನೆಯನ್ನು ಮಾತ್ರ. ಏಕೆಂದರೆ ಈ ಗ್ರಹಗಳನ್ನು ಹೊರತು ಪಡಿಸಿ ಬಾಕಿ ಗ್ರಹಗಳು ಒಂದು ರಾಶಿಯಲ್ಲಿ ಒಂದು ತಿಂಗಳು ಅಥವಾ ಒಂದೂವರೆ ತಿಂಗಳ ಕಾಲ ಇರುತ್ತದೆ. ಆದರೆ ಶನಿ ಒಂದು ರಾಶಿಯಲ್ಲಿ ಎರಡೂವರೆ ವರ್ಷ, ಗುರು, ಒಂದು ವರ್ಷ, ರಾಹು ಕೇತುಗಳು ಒಂದೂವರೆ ವರ್ಷ ಇರುತ್ತವೆ. 

2017 ನೇ ವರ್ಷದ ಜನವರಿಯಲ್ಲಿ ವೃಶ್ಚಿಕರಾಶಿಯಲ್ಲಿರುವ ಶನಿ ಧನುಸ್ಸು ರಾಶಿಗೆ, ಆಗಸ್ಟ್‌ನಲ್ಲಿ ರಾಹು ಸಿಂಹದಿಂದ ಕಟಕಕ್ಕೆ, ಕೇತು ಕುಂಭದಿಂದ ಮಕರಕ್ಕೆ, ಸೆಪ್ಟೆಂಬರ್‌ನಲ್ಲಿ ಗುರು ಕನ್ಯಾದಿಂದ ತುಲಾರಾಶಿಗೆ ಪ್ರವೇಶವಾಗುತ್ತದೆ.  

ಈ ಗ್ರಹಗಳ ಚಲನೆಯನ್ನು ಆಧರಿಸಿ 2017 ಜನವರಿಯಿಂದ ಡಿಸೆಂಬರ್‌ 2017 ರವರೆಗೂ ಗೋಚಾರ ಫ‌ಲಗಳು ಹೀಗಿವೆ.

ಮೇಷ:
ಅಶ್ವಿ‌ನಿ, ಭರಣಿ ಕೃತ್ತಿಕ 1 ನೇಪಾದ,
ಚು.ಚೆ,ಚೊ,ಲ,ಲಿ,ಲು,ಲೆ,ಲೊ,ಅ.

ಈ ರಾಶಿಯವರಿಗೆ ಜನವರಿ ನಂತರ ಅಷ್ಟಮ ಶನಿಯಿಂದ ಬಿಡುಗಡೆಯಾಗುತ್ತದೆ. ಇದುವರೆಗೂ ಇದ್ದ ಮಾನಸಿಕ ಕಿರಿಕಿರಿ, ಗೊಂದಲಗಳು ಕಳೆದು ಅಭಿವೃದ್ಧಿಗೆ ಒಂದು ಸ್ಪಷ್ಟವಾದ ದಾರಿ ಕಾಣುತ್ತದೆ. ಆದರೂ ಗುರುಬಲ ಬರುವುದು ಸೆಪ್ಟೆಂಬರ್‌ ನಂತರವೇ. ಅಲ್ಲಿಯವರೆಗೂ ಕೊಂಚ ಕಷ್ಟ ಪಡಬೇಕಾಗುತ್ತದೆ. ಹಣಬಲ, ಸಾಮಾಜಿಕ ಗೌರವ, ವೃತ್ತಿಯಲ್ಲಿ ಮನ್ನಣೆ ಮನಸ್ಸಿಗೆ ಉಲ್ಲಾಸ ಕೊಡುವಂಥ ಘಟನೆಗಳು ಎಲ್ಲವೂ ಈ ವರ್ಷದ ಕೊನೆಯ ಹೊತ್ತಿಗೆ ನಿಮಗೆ ಸಿಗುತ್ತದೆ. ಜನವರಿಯ ನಂತರ ಬೇಡದ ಖರ್ಚುಗಳು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ. ಆದರೂ ಆರೋಗ್ಯದಲ್ಲಿ ಜೋಪಾನವಿರಲಿ. 

ವೃಷಭ:

ಕೃತ್ತಿಕ 2,3,4, ರೋಹಿಣಿ, ಮೃಗಶಿರಾ 1ನೇ ಪಾದ.
ಇ,ಉ,ಎ,ಒ,ವ,ವಿ,ವು,ವೆ,ವೊ

ಈ ವರ್ಷ ನಿಮಗೆ ಮಿಶ್ರವರ್ಷ. ಜನವರಿಯಲ್ಲಿ ಶನಿ ಅಷ್ಟಮಕ್ಕೆ ಬರುವುದರಿಂದ ವಿಪರೀತವಾದ ಖರ್ಚುಗಳು, ಆರೋಗ್ಯದಲ್ಲಿ ಏರುಪೇರು ಉಂಟಾಗಬುದು. ವೃತ್ತಿಯಲ್ಲಿ ಅಧಿಕ ಒತ್ತಡ ಎದುರಿಸ ಬೇಕಾಗಬಹುದು. ಯಾರೊಂದಿಗೂ ವಾಗ್ವಾದಕ್ಕೆ ನಿಲ್ಲಬೇಡಿ. ಆದರೂ ಸೆಪ್ಟೆಂಬರ್‌ ವರೆಗೂ ಗುರುಬಲವಿದೆ. ಅದೇ ನಿಮ್ಮನ್ನು ಕಾಪಾಡುತ್ತದೆ. ಆಗಸ್ಟ್‌ ನಂತರ ರಾಹು ಮೂರನೆ ಮನೆಗೆ ಪ್ರವೇಶವಾಗಿ, ನಿಮಗೆ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಾನೆ. ವೃತ್ತಿಯಲ್ಲಿ ಮನ್ನಣೆಯೂ ಇದೆ ಒತ್ತಡವೂ ಇದೆ. ಹಣಕಾಸಿನ ಹರಿವು ಉತ್ತಮವಾಗಿದ್ದರೂ ಖರ್ಚುಗಳ ಮೇಲೆ ಹಿಡಿತವಿರಲಿ. ಗುರುವಿನ ಆರನೇ ಮನೆ ಪ್ರವೇಶದಿಂದ ಮಾನಸಿಕ ಕಿರಿಕಿರಿ. ಹಿತ ಶತೃಗಳ ಕಾಟ. ಈಶ್ವರನ ಧ್ಯಾನ ಮಾಡಿ. 

ಮಿಥುನ:

ಮೃಗಶಿರಾ 2,3,4, ಆರಿದ್ರಾ, ಪುನರ್ವಸು 1,2,3.
ಕ,ಕಿ,ಕು,ಘ, ಕೆ,ಕೊ,ಹ.

ಈ ರಾಶಿಯವರಿಗೆ ಶನಿಯ ಏಳನೇ ಮನೆ ಪ್ರವೇಶದಿಂದ ಕೊಂಚ ಇರಿಸುಮುರಿಸು ಪ್ರಾರಂಭವಾಗಬಹುದು. ಸಂಗಾತಿಯೊಡನೆ ವಿನಾ ಕಾರಣ ಜಗಳವಾಗಬಹುದು. ಎಚ್ಚರಿಕೆಯಿಂದ ಇರಿ. ಗುರುವಿನ ತುಲಾರಾಶಿ ಪ್ರವೇಶದ ನಂತರ ಉತ್ತಮ ದಿನಗಳನ್ನು ಕಾಣಬಹುದು. ಪ್ರವಾಸ ಯೋಗ, ಸಂತಸದ ಸಮಾರಂಭಗಳು, ಮನೆಯಲ್ಲಿ ಶುಭಕಾರ್ಯ ನಡೆಯುವುದು ಮುಂತಾದ ಶುಭ ಸುದ್ದಿಗಳು ಕಾದಿವೆ. ಎರಡನೇ ಮನೆ ರಾಹು ಎಂಟನೇ ಮನೆ ಕೇತು ಪ್ರವೇಶದಿಂದ ಅಂತ ಹೆಚ್ಚಿನ ಲಾಭವಿಲ್ಲ. ವೃತ್ತಿಯಲ್ಲಿ ಒಳ್ಳೆಯ ದಿನಗಳನ್ನು ಕಾಣುವಿರಿ. ಸಾಮಾಜಿಕವಾಗಿ ಗುರುತಿಸಲ್ಪಡುತ್ತೀರಿ. ಗೊತ್ತಿಲ್ಲದ ಮೂಲಗಳಿಂದ ಹಣ ಬರುವ ಸಾಧ್ಯತೆಗಳಿವೆ. 

ಕರ್ಕ:

ಪುನರ್ವಸು, 4, ಪುಷ್ಯ, ಆಶ್ಲೇಷ.
ಹಿ,ಹು,ಹೆ,ಹೊ, ಡ,ಡಿ,ಡು,ಡೆ,ಡೊ

ಈ ರಾಶಿಯವರಿಗೆ ಈಗ ಗುರು ಮೂರರಲ್ಲಿದ್ದಾನೆ, ಸೆಪ್ಟೆಂಬರ್‌ ನಂತರ ನಾಲ್ಕನೆ ಮನೆಗೆ ಬರುತ್ತಾನೆ. ಅಂಥ ವ್ಯತ್ಯಾಸವೇನೂ ಇರುವುದಿಲ್ಲ. ಆದರೆ ಜನವರಿಯ ನಂತರ ಪಂಚಮ ಶನಿಯಿಂದ ಮುಕ್ತರಾಗುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಕಳೆದುಕೊಂಡಿದ್ದ ನೆಮ್ಮದಿ ಶಾಂತಿ ಬಹುಮಟ್ಟಿಗೆ ಕೈಹಿಡಿಯುತ್ತದೆ. ಆದರೆ ಪೂರ್ತಿ ಪರಿಸ್ಥಿತಿ ಸುಧಾರಿಸಲು 2018ಆಗಸ್ಟ್‌ ಬರಬೇಕು. ಆದರೆ ಪಂಚಮ ಶನಿ ಬಿಟ್ಟ ಮೇಲೆ ಹಣಕಾಸಿನ ಸ್ಥಿತಿ ಕೊಂಚ ಸುಗಮವಾಗುತ್ತದೆ. ಕಟಕಕ್ಕೆ ರಾಹು ಪ್ರವೇಶದದಿಂದ ಚರ್ಮದ ಅಲರ್ಜಿ ಬರಬಹುದು. ಏಳರ ಕೇತು ಮನಸ್ಸನ್ನು ಚಂಚಲ ಮಾಡಬಹುದು. ಜಾಗ್ರತೆಯಾಗಿರಿ. ಸುಬ್ರಮಣ್ಯನನ್ನು ಆರಾಧಿಸಿ. 

ಸಿಂಹ:

ಮಖೆ, ಪುಬ್ಬೆ, ಉ.ಫಾ. 1ನೇಪಾದ.
ಮ,ಮಿ,ಮು,ಮೊ, ಮೆ,ಟ,ಟಿ,ಟು,ಟೆ

ಈ ರಾಶಿಯವರಿಗೆ 2017 ಸೆಪ್ಟೆಂಬರ್‌ವರೆಗೂ ಪೂರ್ಣ ಗುರುಬಲವಿದೆ. ಏನೇನು ಒಳ್ಳೆಯ ಕೆಲಸಗಳು ಅಭಿವೃದ್ಧಿಯ ಕೆಲಸಗಳು ಬಾಕಿ ಇವೆಯೋ ಎಲ್ಲವೂ ನೆರವೇರುತ್ತದೆ. ಆಸ್ತಿ ಮಾಡುವ ಯೋಗ. ಸಾಲಗಳಿಂದ ಮುಕ್ತರಾಗುವಿರಿ. ಆದರೆ ನಿಮಗೆ ಜನವರಿಯ ನಂತರ ಪಂಚಮ ಶನಿ ಪ್ರಾರಂಭವಾಗುತ್ತೆ. ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಿ. ಒತ್ತಡಗಳು ಹೆಚ್ಚಾಗಬಹುದು. ವಿನಾ ಕಾರಣ ಖರ್ಚು ಹೆಚ್ಚಾಗುತ್ತದೆ. ಮಾನಸಿಕ ಕಿರಿಕಿರಿ. ಆದರೆ ಆರನೆ ಮನೆಗೆ ಬರುವ ಕೇತು ಕೊಂಚ ಆತ್ಮಬಲವನ್ನು ವೃದ್ಧಿಸುತ್ತಾನೆ. ಹನ್ನೆರಡನೆ ಮನೆಗೆ ಬರುವ ರಾಹುವಿನಿಂದ ಐಹಿಕ ಸುಖಭೊಗಗಳಿಗೆ ಕೊಂಚ ಧಕ್ಕೆಯಾಗುತ್ತದೆ. ವೃಥಾ ಅಲೆದಾಟ ಆಯಾಸ. ಆದಿತ್ಯ ಹೃದಯ ಸ್ತೋತ್ರ ಪಠಿಸಿ. 

ಕನ್ಯಾ:

ಉಫಾ 2,3,4, ಹಸ್ತ, ಚಿತ್ತಾ 1,2.
ಟೊ,ಪ,ಪಿ,ಪು,ಷ,ಣ,ಠ,ಪೆ,ಪೊ

ಈ ರಾಶಿಯವರು ಒಳ್ಳೆಯ ದಿನಗಳನ್ನು ಕಾಣಲು ಆಗಸ್ಟ್‌-ಸೆಪ್ಟೆಂಬರ್‌ವರೆಗೂ ಕಾಯಬೇಕು. ಅಲ್ಲಿಯವರೆಗೂ ತಾಳ್ಮೆ ವಹಿಸಿ. ಜನವರಿಯ ನಂತರ ಶನಿಯ ನಾಲ್ಕನೆಮನೆಯ ಪ್ರವೇಶದಿಂದ ಕೊಂಚ ಮಾನಸಿಕ ಕಿರಿಕಿರಿ, ವೃಥಾ ಖರ್ಚು, ಬೇಡದ ಅಲೆದಾಟ ಇವುಗಳನ್ನು ಅನುಭವಿಸಬೇಕಾಗಿ ಬಂದರೂ ಗುರುವಿನ ತುಲಾರಾಶಿ ಪ್ರವೇಶದ ನಂತರ ಪರಿಸ್ಥಿತಿ ಬಹು ಮಟ್ಟಿಗೆ ಸುಧಾರಿಸುತ್ತದೆ. ರಾಹು ಹನ್ನೊಂದನೇ ಪ್ರವೇಶದಿಂದ ಯಾವುದಾವುದೋ ಮೂಲಗಳಿಂದ ಹಣ ಒದಗಿ ಬರುತ್ತದೆ. ಆಗಸ್ಟ್‌ ನಂತರ ಪರಿಸ್ಥಿತಿ ನಿಮ್ಮ ಹತೋಟಿಗೆ ಬರುತ್ತದೆ. ನಿಮ್ಮ ಕೈಗೂಡದೆ ಬಾಕಿಯಾದ ಆಸೆಗಳೆಲ್ಲಾ ನೆರವೇರುವ ಕಾಲ. ಹಣದ ಹರಿವು ಉತ್ತಮವಾಗಿರುತ್ತದೆ. ಮನಕ್ಕೆ ಖುಷಿ ಕೊಡುವ ಕಾಲ. ಸಾಮಾಜಿಕ ಗೌರವ ವೃತ್ತಿಯಲ್ಲಿ ಬಡ್ತಿ ಸಿಗುವ ಕಾಲ. 

ತುಲಾ:

ಚಿತ್ತಾ 3,4, ಸ್ವಾತಿ, ವಿಶಾಖ 1,2,3.
ರ,ರಿ,ರು,ರೆ,ರೊ,ತ,ತಿ,ತು,ತೆ.

ಎಲ್ಲಾ ಗ್ರಹಗಳೂ ಪ್ರತಿಕೂಲ ಪರಿಸ್ಥಿತಿಯಲ್ಲಿರುವುದರಿಂದ ಬೆಳವಣಿಗೆ ಕುಂಠಿತವಾಗಿರುತ್ತದೆ. ಹಣದ ಮುಗ್ಗಗ್ಗ ಎದುರಿಸಬೇಕಾಗಬಹುದು. ಹಣವಿದ್ದರೂ ನೀವು ನಿಮ್ಮದೇ ಹಣವನ್ನು ಖರ್ಚುಮಾಡಲಾರದ ಪರಿಸ್ಥಿತಿ.. ವೃತ್ತಿಯಲ್ಲಿ ಕಿರಕಿರಿ, ವೈಯುಕ್ತಿಕ ಗೌರವಕ್ಕೆ ಧಕ್ಕೆ ಮುಂತಾದ ಅಹಿತ ಪ್ರಸಂಗಗಳನ್ನು ಎದುರಿಸಬೇಕಾಗಬಹುದು. ಆದರೆ ಮೂರನೆ ಮನೆಗೆ ಬರುವ ಶನಿ ಸಾಡೆಸಾತಿಯಿಂದ ಮುಕ್ತಿ ಕೊಡಿಸುತ್ತಾನೆ. ಮಾನಸಿಕ ಬಲವನ್ನು ಹಿಗ್ಗಿಸುತ್ತಾನೆ. ಎಂಥಹುದೇ ಪರಿಸ್ಥಿತಿಯನ್ನು ನಿಭಾಯಿಸುವ ಛಾತಿ ಕೊಡುತ್ತಾನೆ. ಇದು ಬಹು ಮಟ್ಟಿಗೆ ನಿಮ್ಮ ಅನಾನುಕೂಲಗಳನ್ನು ನಿವಾರಿಸಿ ಪರಿಸ್ಥಿತಿ ಕೈಮೀರದಂತೆ ಕಾಪಾಡುತ್ತದೆ. ಅನಿರೀಕ್ಷಿತವಾಗಿ ಖರ್ಚುಗಳು ಬೆಳೆಯಬಹುದು. ನೀವು ಸಾಧಿಸಬೇಕಾದ ಕಾರ್ಯಗಳಿಗೆ ವಿಘ್ನಗಳು ತಲೆದೋರಬಹುದು. ದೇವಿ ಸ್ತುತಿ ಮಾಡಿ.

ವೃಶ್ಚಿಕ:

ವಿಶಾಖ 4, ಅನೂರಾಧ, ಜೇಷ್ಠ.
ತೊ,ನ,ನಿ,ನು,ನೆ, ನೊ,ಯ,ಯಿ,ಯು.

ಈ ರಾಶಿಯವರಿಗೆ ಸಾಡೆಸಾತಿ ಶನಿ ಕೊನೆಯ ಭಾಗದಲ್ಲಿದ್ದಾನೆ. ಆದರೂ ಈ ವರ್ಷ ಪೂರ್ಣ ಗುರುಬಲವಿರುವುದರಿಂದ ಯಾವುದಕ್ಕೂ ಯೋಚನೆ ಮಾಡಬೇಕಿಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸಾಮಾಜಿಕ ಗೌರವ, ಪ್ರಶಸ್ತಿ ಪುರಸ್ಕಾರಗಳು ಲಭಿಸುತ್ತದೆ. ವಿದೇಶ ಪ್ರವಾಸ ಯೋಗವೂ ಇದೆ. ಮೂರರ ಕೇತು ಧೈರ್ಯವನ್ನೂ, ಆತ್ಮಶಕ್ತಿಯನ್ನೂ ಕೊಡುತ್ತಾನೆ. ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತವೆ. ಜೀವನದಲ್ಲಿ ಒಂದು ಶುಭ ಸೂಚಕ ಬದಲಾವಣೆಯನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿ, ಮಕ್ಕಳಿಂದ ಸುಖ, ವೃತ್ತಿಯಲ್ಲಿ ಗೌರವ, ಬಡ್ತಿ ಎಲ್ಲವೂ ಇವೆ. ನೀವು ಸಾಧಿಸಬೇಕಾದ ಕೆಲಸಕಾರ್ಯಗಳು ನಿರಾತಂಕವಾಗಿ ನೆರವೇರುತ್ತವೆ. ಕೋರ್ಟು ವ್ಯವಹಾರಗಳು ನಿಮ್ಮ ಕಡೆಗೇ ಆಗುವ ಸಾಧ್ಯತೆಗಳಿವೆ. 

ಧನು:

ಮೂಲಾ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದ.
ಯೆ,ಯೊ,ಬ,ಬಿ,ಬು,ಧ,ಭ,ಢ,ಭೆ.

ಧನುಸ್ಸು ರಾಶಿಯವರಿಗೆ ಸಾಡೆಸಾತಿ ಶನಿ ಪ್ರಾರಂಭದಲ್ಲಿದೆ. ಇನ್ನೂ ನಿಮ್ಮ ಕಷ್ಟಗಳು ಮುಗಿದಿಲ್ಲ. ನಿಮ್ಮ ಪಾಲಿಗೆ ಗುರುಬಲವೂ ಈ ವರ್ಷ ಸೆಪ್ಟೆಂಬರ್‌ ತನಕ ಸೊನ್ನೆಯಾಗಿರುವುದರಿಂದ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಆರೋಗ್ಯ ಜಾಗ್ರತೆ. ಖರ್ಚುಗಳು ಇತಿಮಿತಿಯಿಲ್ಲದೆ ಬರಬಹುದು. ವೃತ್ತಿಯಲ್ಲಿ ಅಸಾಧ್ಯ ಒತ್ತಡಗಳಿರಬಹುದು. ಸಂಗಾತಿಯ ಆರೋಗ್ಯದಲ್ಲೂ ಜಾಗ್ರತೆ ವಹಿಸಿ. ಈಗ ಮೂರರಲ್ಲಿರುವ ಕೇತು ಕೊಂಚ ಕೈಹಿಡಿಯುತ್ತಾನೆ. ಗುರು ತುಲಾರಾಶಿಗೆ ಪ್ರವೇಶವಾದ ನಂತರ ಪರಿಸ್ಥಿತಿ ಸ್ವಲ್ಪ$ ಮಟ್ಟಿಗೆ ಹತೋಟಿಗೆ ಬರುತ್ತದೆ. ಆಗಲೂ ರಾಹುವಿನ ಎಂಟನೇ ಮನೆ ಪ್ರವೇಶದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಇದ್ದೇ ಇರುತ್ತದೆ. ಕೋರ್ಟು ವ್ಯಾಜ್ಯ ಇರುವವರಿಗೆ ತೀರ್ಪನ್ನು ಮುಂದೂಡಿದರೆ ಒಳ್ಳೆಯದು. ಆದಷ್ಟೂ ಜನರೊಡನೆ ಸೌಹಾರ್ದತೆ ಕಾಯ್ದುಕೊಳ್ಳಿ. ನಿಮ್ಮದಲ್ಲದ ತಪ್ಪಿಗೂ ನೀವು ದಂಡ ತೆರೆಬೇಕಾಗುತ್ತದೆ. ಮನೆ ದೇವರ ಪ್ರಾರ್ಥನೆ ಮಾಡಿ.

ಮಕರ:

ಉ.ಷಾ. 2,3,4, ಶ್ರವಣ, ಧನಿಷ್ಟ 1,2.
ಬೊ,ಜ,ಜೆ,ಶಿ,ಶು,ಗ,ಗಿ

ಈ 2016 ನಿಮಗೆ ಬಹಳ ಒಳ್ಳೆಯ ವರ್ಷವಾಗಿತ್ತು. ಗಾಬರಿಯಾಗಬೇಡಿ ಈ 2017 ಸೆಪ್ಟೆಂಬರ್‌ವರೆಗೂ ನಿಮ್ಮ ಸಮಯ ಚೆನ್ನಾಗಿಯೇ ಇದೆ. ಅಂದುಕೊಂಡ ಕೆಲಸಕಾರ್ಯಗಳು ನೆರವೇರುತ್ತದೆ. ವೃತ್ತಿ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯ ಸಾಧ್ಯತೆಯಿದೆ. ಶುಭ ಸೂಚಕವಾದ್ದರಿಂದ ನಿಮಗೆ ಅನುಕೂಲವೇ ಆಗುತ್ತದೆ. ನಿಮ್ಮ ಬಹುದಿನಗಳ ಒಂದು ಕನಸು ನೆರವೇರುವಂಥಾ ಸಮಯ. ಸಾಮಾಜಿಕ ಗೌರವ ಸ್ಥಾನಮಾನ ಸಿಗುವ ಸಮಯ. ಜನವರಿ 26 ನಂತರ ಸಾಡೆಸಾತಿ ಶನಿ ಪ್ರಾರಂಭವಾಗುವುದರಿಂದ ಕೊಂಚ ಎಚ್ಚರಿಕೆ ವಹಿಸುವುದು ಒಳ್ಳೆಯದು. ಖರ್ಚುಗಳ ಮೇಲೆ ನಿಗಾ ಇರಲಿ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ಹಣಕಾಸಿನ ಸ್ಥಿತಿಯನ್ನು ಬಹು ಚಾಕಚಕ್ಯತೆಯಿಂದ ನಿಭಾಯಿಸಬೇಕಾಗುತ್ತದೆ. ಒಂದು ಸುದರ್ಶನ ಹೋಮ ಮತ್ತು ಒಂದು ಧನ್ವಂತರಿ ಹೋಮ ಮಾಡಿಸುವುದು ಒಳ್ಳೆಯದು. ಸುಬ್ರಮಣ್ಯನ ಪ್ರಾರ್ಥನೆ ಮಾಡಿ. 

ಕುಂಭ:

ಧನಿಷ್ಟಾ, 3,4 ಶತಭಿಷ, ಪೂರ್ವಾಭಾದ್ರ 1,2,3.
ಗು,ಗೆ,ಗೊ,ಸ,ಸಿ,ಸು,ಸೆ,ಸೊ,ದ

ನೀವು 2016ರಲ್ಲಿ ಅನುಭವಿಸಿರುವ ಕಷ್ಟಗಳಿಗೆ ಲೆಕ್ಕವೇ ಇಲ್ಲ, ಬೇಸತ್ತು ಹೋಗುವಷ್ಟು ಕೋಟಲೆಗಳು. ನಿಮಗೂ ಆರೋಗ್ಯದ ತೊಂದರೆ, ಸಂಗಾತಿಗೂ ಆರೋಗ್ಯದ ತೊಂದರೆ, ಹಣಕಾಸಿನ ಮುಗ್ಗಟ್ಟು, ಅಪಘಾತ ಭಯ, ಬಾಕಿ ವಸೂಲಿಯಾಗದ ಹಣ, ಹಿತಶತ್ರುಗಳು ಹೀಗೆ. ಆದರೆ ಈ ವರ್ಷ ಜನವರಿಯ ನಂತರ ನಿಮ್ಮ ಪರಿಸ್ಥಿತಿ ಬಹುಮಟ್ಟಿಗೆ ಸುಧಾರಿಸುತ್ತದೆ. ಗುರುವಿನ ತುಲಾರಾಶಿ ಪ್ರವೇಶದಿಂದ ಕಳೆದುಕೊಂಡ ಹಣ ವಾಪಸು ಬರುವುದು, ಸಾಮಾಜಿಕ ಸ್ಥಾನಮಾನ, ಆರೋಗ್ಯದಲ್ಲಿ ಚೇತರಿಕೆ, ವೃತ್ತಿಯಲ್ಲಿ ಬಡ್ತಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಮುಂತಾದ ಶುಭ ಸಂಗತಿಗಳು ನಡೆಯುತ್ತವೆ. ಆಗಸ್ಟ್‌ ನಂತರ ಆರನೆ ಮನೆ ಪ್ರವೇಶವಾಗುವ ರಾಹು ನಿಮಗೆ ಧೈರ್ಯವನ್ನು ಹೆಚ್ಚಿಸುತ್ತಾನೆ. ಶತೃಧ್ವಂಸ ಮಾಡುತ್ತಾನೆ. 2017 ರ ದ್ವಿತೀಯಾರ್ಧದಿಂದ ನೀವು ಊಹಿಸಲೂ ಆಗದಂಥಾ ಒಳ್ಳೆಯ ಬದಲಾವಣೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುತ್ತೀರಿ. 

ಮೀನ:

ಪೂಭಾ 4, ಉತ್ತರಾಭಾದ್ರ, ರೇವತಿ.
ದಿ,ದು,ಖ,ಝ,ಥ,ದೆ,ದೊ,ಚ,ಚಿ.

ಈ 2016 ವರ್ಷ ನಿಮಗೆ ಅದೃಷ್ಟ ತಂದ ವರ್ಷ. ಅದೇ ಅದೃಷ್ಟ ಸೆಪ್ಟೆಂಬರ್‌ವರೆಗೂ ಮುಂದುವರೆಯುತ್ತದೆ. ಸೆಪ್ಟೆಂಬರ್‌ ನಂತರ ಎಂಟನೇ ಮನೆಗೆ ಗುರು ಪ್ರವೇಶದಿಂದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ, ಆರ್ಥಿಕ ಮುಗ್ಗಟ್ಟು, ಆರೋಗ್ಯದಲ್ಲಿ ಏರುಪೇರು, ಹಿತಶತೃಗಳ ಕಾಟ ಮೊದಲಾದ ಕಿರಿಕಿರಿಗಳನ್ನು ಅನುಭವಿಸುತ್ತೀರಿ. ಆಗಸ್ಟ್‌ ನಂತರ ಐದನೇ ಮನೆಗೆ ಬರುವ ರಾಹುವೂ ನಿಮಗೆ ಪ್ರಯೋಜಕನಲ್ಲ. ಹತ್ತನೇ ಮನೆಗೆ ಪ್ರವೇಶವಾಗುವ ಶನಿಯಿಂದಲೂ ನಿಮಗೆ ಉಪಯೋಗವಿಲ್ಲ. ಆದರೆ ಹತ್ತನೇ ಮನಗೆ ಕೇತುವಿನ ಪ್ರವೇಶದಿಂದ ಕೊಂಚ ಮಟ್ಟಿನ ಸುಧಾರಣೆ ಸಾಧ್ಯವಿದೆ. ಆಗಸ್ಟ್‌ ನಂತರ ಕೇತುವೊಬ್ಬನೇ ನಿಮಗೆ ಆಧಾರ ಗಣೇಶನನ್ನು ಪೂಜಿಸಿ.

ಸರ್ವೇಜನಾ ಸುಖೀನೋಭವಂತು

- ವೀಣಾ ಚಿಂತಾಮಣಿ ; Veenarao27@gmail.com

Trending videos

Back to Top