CONNECT WITH US  

ರಂಗವಿಹಾರಿ ಸುಬ್ರಾಯ ಹೊಳ್ಳ

ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ ಮಿಂಚು, ಪ್ರಖರ ಪ್ರತಿಭೆಯ ರಂಗವಿಹಾರಿ ಸುಬ್ರಾಯ ಹೊಳ್ಳ ಕಾಸರಗೋಡು ಅವರಿಗೀಗ ಅಂಗೀಕಾರ -ಗೌರವಗಳು ಅರಸಿ ಬರತೊಡಗಿವೆ. ಮೇ 7ರಂದು ಅಡ್ಯನಡ್ಕದ ಎರುಗಲ್ಲಿನಲ್ಲಿರುವ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆರೋಗ್ಯ ಸಂಶೋಧನಾ ಕೇಂದ್ರದ ವಠಾರದಲ್ಲಿ ಶ್ರೀ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಎಡನೀರು ಮೇಳದ ಬಯಲಾಟ ಸಪ್ತಾಹದ ಸಮಾರೋಪದಲ್ಲಿ ಸುಬ್ರಾಯ ಹೊಳ್ಳರಿಗೆ ಗೌರವ ಸಮ್ಮಾನ ನಡೆಯಲಿದೆ. ಇದು ಪ್ರತಿಭೆಯನ್ನು ಗುರುತಿಸಿ ನೀಡುವ ಅರ್ಹ ಸಮ್ಮಾನ; ಅಂಗೀಕಾರ.

ಸುಬ್ರಾಯ ಹೊಳ್ಳರು ಕಾಸರಗೋಡು ಪೇಟೆಯವರು. ನಾರಾಯಣ ಹೊಳ್ಳ-ಪದ್ಮಾವತಿ ಅಮ್ಮನವರ ಪುತ್ರ. ಇವರ ಅಜ್ಜನ ಮನೆ ಎಡನೀರಿನಲ್ಲಿ. ಚಿಕ್ಕಂದಿನಲ್ಲಿ ಎಡನೀರಿಗೆ ಹೋದರೆ ಮಠದಲ್ಲಿ ಜರುಗುತ್ತಿದ್ದ ಆಟ-ಕೂಟಗಳಿಗೆ ಇವರು ಖಾಯಂ ಪ್ರೇಕ್ಷಕರು. ಅಲ್ಲಿಗೆ ಬರುತ್ತಿದ್ದ ಪ್ರಸಿದ್ಧ ಕಲಾವಿದರು, ಅವರ ನೇತೃತ್ವದಲ್ಲಾಗುತ್ತಿದ್ದ ಬಯಲಾಟಗಳನ್ನು ನೋಡಿ ಯಕ್ಷಗಾನದ ಸೆಳೆತಕ್ಕೊಳಗಾದ ಸುಬ್ರಾಯ ಹೊಳ್ಳರು ತಾನೂ ಕಲಾವಿದನಾಗಿ ಮೆರೆಯುವ ಕನಸು ಕಂಡರು. ಕೂಡ್ಲು ಆನಂದ, ನಾರಾಯಣ ಬಲ್ಯಾಯರಲ್ಲಿ ನಾಟ್ಯ ಕಲಿತರು. ಹವ್ಯಾಸಿ ಮೇಳಗಳಲ್ಲಿ ವೇಷ ತೊಟ್ಟರು, ಕಲಾವಿದನಾಗಿ ತಯಾರಾಗುವ ಭರವಸೆ ಮೂಡಿಸಿದರು. ಬಳಿಕ ಮೇಳ ಸೇರಿ ಸುದೀರ್ಘ‌ 32 ವರ್ಷಗಳ ತಿರುಗಾಟದ ಮೂಲಕ ಪ್ರಸ್ತುತ ತೆಂಕುತಿಟ್ಟಿನ ಅನುಭವೀ, ಪಕ್ವ ಕಲಾವಿದರಾಗಿ ಎತ್ತರಕ್ಕೇರಿದರು. ಪ್ರಸ್ತುತ 51ರ ಹರೆಯದ ಸುಬ್ರಾಯ ಹೊಳ್ಳರು ಕಲಾವಿದನಾಗಿ ಸಾಗಿದ ಪಯಣ, ಏರಿದ ಎತ್ತರದಲ್ಲಿ ಅವರ ಪರಿಶ್ರಮ-ಸಾಧನೆ ಅಡಗಿದೆ.

ಕಟೀಲು, ಪುತ್ತೂರು, ಕದ್ರಿ, ಕರ್ನಾಟಕ, ಮಧೂರು, ಬಪ್ಪನಾಡು ಮೊದಲಾದ ಮೇಳಗಳಲ್ಲಿ ದುಡಿದ ಇವರು ಪ್ರಸ್ತುತ ಹೊಸನಗರ ಮೇಳದ ಪ್ರಧಾನ ಕಲಾವಿದರು. ತನ್ನ ಗುರು ಸಮಾನ ಹಿರಿ ತಲೆಮಾರಿನ ಕಲಾವಿದರಾದ ಹೊಸ ಹಿತ್ಲು ಮಾಲಿಂಗ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್‌, ಪೆರುವೋಡಿ ಹಾಸ್ಯಗಾರರು, ಬಲಿಪ-ತೆಂಕಬೈಲು ಭಾಗವತರು ಇವರಿಂದೆಲ್ಲ ಪ್ರಭಾವ ಮತ್ತು ಪ್ರಚೋದನೆ -ಸ್ಫೂರ್ತಿ ಪಡೆದಿ ರುವ ಸುಬ್ರಾಯ ಹೊಳ್ಳರು ಕೇವಲ ಒಬ್ಬ ವೇಷಧಾರಿ ಕಲಾವಿದ ನಲ್ಲ. ಯಾವುದೇ ಪಾತ್ರವಿದ್ದರೂ ಅದರ ಸಮಗ್ರವನ್ನರಿತು ರಂಗನಿರ್ವಹಿಸುವ, ಪ್ರೇಕ್ಷಕ ಮನತಟ್ಟುವ ಅನನ್ಯ ಕಲಾವಿದ.

ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಮೆಚ್ಚುವ, ಪ್ರೀತಿಸುವ ಇವರು ಪ್ರತಿನಾಯಕನಾಗಿಯೇ ಜನಪ್ರಿಯ. ಅಚ್ಚುಕಟ್ಟಾದ ವೇಷಗಾರಿಕೆ, ಪರಿಪೂರ್ಣವಾದ ಬಣ್ಣದ ಬರವಣಿಗೆ, ಯಕ್ಷಗಾನೀಯ ನಿಲುಮೆ-ರಂಗಚಲನೆ, ಆಕರ್ಷಕ ಶೈಲಿಯ ರಂಗಲಯ, ಶ್ರುತಿಬದ್ಧ ಮಾತುಗಾರಿಕೆ, ತರ್ಕಕ್ಕೆ ಬಿದ್ದರೆ ಸ್ಫೋಟಗೊಳ್ಳುವ ಪಾಂಡಿತ್ಯಭರಿತ ವಾಕ³ಟುತ್ವ ಸುಬ್ರಾಯ ಹೊಳ್ಳರನ್ನು ಕಲಾವಿದನಾಗಿ ಎತ್ತರಕ್ಕೇರಿಸಿವೆ. ಯಾವುದೇ ತಂಡದಲ್ಲಿ ಸುಬ್ರಾಯ ಹೊಳ್ಳರಿದ್ದಾರೆಂದರೆ ಸಾಕು, ಯಾವುದೇ ಭಾಗವತನಿಗೂ ನಿಶ್ಚಿಂತೆಯಲ್ಲಿ ಆಟ ಆಡಿಸುವ ಧೈರ್ಯ ಬರುತ್ತದೆ. ಕಾರಣ, ಯಾವುದೇ ಪುರಾಣ ಪ್ರಸಂಗವಿದ್ದರೂ ಪದ್ಯಗಳ ಆಯ್ಕೆಯಿಂದ ಮೊದಲ್ಗೊಂಡು ಪ್ರಸಂಗ ಸಾಗಬೇಕಾದ ಮಾಹಿತಿಗಳೆಲ್ಲ ಇವರು ಬಲ್ಲರು. ಹೀಗಾಗಿ ಭಾಗವತರಿಗೂ-ಕಲಾವಿದರಿಗೂ ಹೊಳ್ಳರು ಸಂಪನ್ಮೂಲ ವ್ಯಕ್ತಿ.

ಇಂದೀಗ ಚಾಲ್ತಿಯಲ್ಲಿಲ್ಲದ ಬಹುತೇಕ ಪ್ರಸಂಗಗಳು ಇವರಿಗೆ ಕಂಠಸ್ಥ. ಅನೇಕ ಪ್ರಸಂಗಗಳ ರಂಗನಡೆಗಳು ಕರತಲಾ ಮಲಕ. ರಂಗಸ್ಥಳದಲ್ಲಿ ಪಾತ್ರವಾಗಿ ಮೈದಾಳಿದರೆ ಗಂಡುಗತ್ತಿನ ಛಾಪು. ಹೀಗಾಗಿ ಅನೇಕ ಪ್ರಸಂಗಗಳನ್ನಾಡಬೇಕಿದ್ದರೆ ಸುಬ್ರಾಯ ಹೊಳ್ಳರು ಅನಿವಾರ್ಯ ಕಲಾವಿದ. ಇದಕ್ಕೆ ಕಾರಣ ತಾನು ಹಿರಿಯ ಕಲಾವಿದರನ್ನು ಅನುಸರಿಸಿದ್ದು ಎನ್ನುವ ಸುಬ್ರಾಯ ಹೊಳ್ಳರು ಯಕ್ಷಗಾನದ ನಿತ್ಯ ವಿದ್ಯಾರ್ಥಿ. ಇಂದಿಗೂ ಪ್ರಸಂಗ ಗಳನ್ನು ನಕಲು ಮಾಡಿ ಬರೆದಿಡುವುದು ಅವರ ಆಸಕ್ತಿಯ ವಿಷಯ. ಎಲ್ಲೂ ಲಭ್ಯವಿಲ್ಲದ ಅನೇಕ ಪ್ರಸಂಗಗಳ ಸಂಗ್ರಹ ಇವರ ಬಳಿ ಇದೆ ಎನ್ನುವುದೂ ವಿಶೇಷ.

ಬಾಲ್ಯದಲ್ಲೇ ಹೊಳ್ಳರಿಗೆ ಶೇಣಿ ಗೋಪಾಲಕೃಷ್ಣ ಭಟ್ಟರೆಂದರೆ ಆಸಕ್ತಿ. ಬಿಡುವಿದ್ದಾಗ ಶೇಣಿ ಅಜ್ಜನ ಮನೆಯಲ್ಲೇ ಮೊಕ್ಕಾಂ. ಅವರೊಂದಿಗೆ ಪುರಾಣ ಸಂದೇಹಗಳ ಜಿಜ್ಞಾಸೆ. ಪರಿಣಾಮ ಸುಬ್ರಾಯ ಹೊಳ್ಳರು ತಾಳಮದ್ದಳೆಗಳ ಸಮರ್ಥ ಅರ್ಥ ಧಾರಿಯೂ ಹೌದು, ಭಾಗವತಿಕೆಯೂ ಮಾಡಬಲ್ಲರು. ಯಕ್ಷಗಾನದ ಹಿಮ್ಮೇಳ-ಮುಮ್ಮೇಳವಲ್ಲದೆ ಪ್ರಸಂಗ ಸಾಹಿತ್ಯದ ಬಗ್ಗೆಯೂ ಅಪಾರ ಒಲವುಳ್ಳ, ಅರಿವುಳ್ಳ ಕಲಾವಿದನಾದುದರಿಂದ ಯಾವುದೇ ಮೇಳಕ್ಕೂ ಇವರೊಂದು ಆಸ್ತಿ. ಪ್ರಸ್ತುತ ತೆಂಕುತಿಟ್ಟಿನ ಪಾರಂಪರಿಕ ಶೈಲಿಯ ಪ್ರಾತಿನಿಧಿಕ ವೇಷಧಾರಿಯಾಗಿ ಹೆಸರಿಸಬಲ್ಲ ಇವರ ಅರ್ಹತೆಯನ್ನು ಗುರುತಿಸಿ ನೀಡುವ ಸಮ್ಮಾನವೆಂಬ ಅಂಗೀಕಾರ ಯಕ್ಷಗಾನದಲ್ಲಿ ಅವರುಗೈದ ಸಾಧನೆಗೆ ಮನ್ನಣೆ.

ಎಂ.ನಾ. ಚಂಬಲ್ತಿಮಾರ್‌

Trending videos

Back to Top