CONNECT WITH US  
echo "sudina logo";

ವಿಶ್ವ ನೃತ್ಯದಿನದ ನೃತ್ಯ ಗುತ್ಛ

ಇತ್ತೀಚೆಗೆ ಭರತಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ನಗರದ ಪುರಭವನದಲ್ಲಿ ಇಬ್ಬರು ಯುವಪ್ರತಿಭೆಗಳಿಂದ ವಿಶ್ವ ನೃತ್ಯ ದಿನಕ್ಕೆ ಜೀವ ತುಂಬಲಾಯಿತು. 

ಮೊದಲಿಗೆ ಬೆಂಗಳೂರಿನ ಯುವ ಪ್ರತಿಭೆ ಕು| ಪ್ರಿಯಾಂಕಾ ಜೆ. ರಾವ್‌ ನಾಗಸ್ವರಾವಳಿ ಆದಿತಾಳದ ಪುಷ್ಪಾಂಜಲಿ ನೃತ್ಯದ ಮೂಲಕ ಸುಂದರವಾದ ಅಡವುಗಳ ಜೋಡಣೆಯೊಂದಿಗೆ ವೇದಿಕೆಯೇರಿ ವಕ್ರತುಂಡನ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಾ ಭಕ್ತಿ ಪೂರ್ವಕ ನಮನಗಳೊಂದಿಗೆ ನೃತ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಳಿಕ ಸೌಂದರ್ಯ ಲಹರಿಯಿಂದ ಆಯ್ದ ಸಾಹಿತ್ಯ "ಶಿವ ಶೃಂಗಾರಾರ್ಧ'ಕ್ಕೆ ನವರಸಗಳ ಜೋಡಣೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿ ತನ್ನ ಅಭಿನಯ ಚಾತುರ್ಯದಿಂದ ಶ್ರೋತೃಗಳ ಮನ ಗೆದ್ದರು. ಈ ನೃತ್ಯದಲ್ಲಿ ಶೃಂಗಾರ, ಶಿವನ ಮುಡಿಯೇರಿದ ಗಂಗೆಯನ್ನು ಸಹಿಸದೆ ಆಕೆಯನ್ನು ಕೆಳಗಿಳಿಸುವಂತೆ ತಿಳಿಸುವಂತಹ ಭಾವ, ಅದ್ಭುತ ರಸದಲ್ಲಿ ಭಕ್ತ ಮಾರ್ಕಂಡೇಯ, ಮನ್ಮಥ ದಹನ ಮೊದಲಾದ ಸಂಚಾರಿಯೊಂದಿಗೆ ನರ್ತಿಸಿದ ರೀತಿ ಮನೋಜ್ಞ ವಾಗಿತ್ತು. ಮುಂದಕ್ಕೆ ಸ್ವಾಮೀ ನಾನು ನಿನ್ನ ದಾಸಾನು ದಾಸ ಎಂದು ಪದವರ್ಣಕ್ಕೆ ಹೆಜ್ಜೆಯಿರಿಸಿ ನೀಡಿದ ಭಾವಾಭಿನಯ ಎಳೆಯ ಕಲಾವಿದೆಯ ಪ್ರೌಢಿಮೆಗೆ ಸಾಕ್ಷಿಯಾಯಿತು. ಸುಮಾರು 45 ನಿಮಿಷ ಗಳ ಅಚ್ಚುಕಟ್ಟಾದ ಕಾರ್ಯಕ್ರಮ ನೀಡಿ ತಾನು ಭರವಸೆಯ ಕಲಾವಿದೆ ಎಂಬುದನ್ನು ತೋರಿಸಿಕೊಟ್ಟರು.

ಬಳಿಕ ವೇದಿಕೆಯೇರಿದ ಮತ್ತೋರ್ವ ಯುವ ಪ್ರತಿಭಾವಂತ ಕಲಾವಿದೆ ಬೆಂಗಳೂರಿನ ದಿವ್ಯಾರವಿ ಮಾರ್ಗ ಪದ್ಧತಿಯಲ್ಲಿ ಆಯ್ದ ಪ್ರಮುಖವಾದ ನೃತ್ಯ ಬಂಧಗಳನ್ನು ಹೂವುಗಳ ಹೋಲಿಕೆಯೊಂದಿಗೆ ನರ್ತಿಸಿ ನೃತ್ಯದ ಹೂಗುತ್ಛವನ್ನೇ ನೆರೆದ ಶ್ರೋತೃ ಗಳಿಗೆ ಅರ್ಪಿಸಿದರು. ಒಂದು ಹೂವು ಹೇಗೆ ಪಂಚಭೂತ ಗಳಿಂದ ವಿಕಸಿತಗೊಂಡಿದೆ ಎಂಬುದನ್ನು, ಅಂತೆಯೇ ಅಷ್ಟದಿಕ್ಕುಗಳಲ್ಲಿ ಅರಳಿದ ಹೂವಿನ ಎಸಳುಗಳನ್ನು ಬಿಂಬಿಸುತ್ತ ಮೊದಲು ಅಲರಿಪುವಿನಲ್ಲಿ ತಮ್ಮ ಚುರುಕಾದ ಹೆಜ್ಜೆಯ ಗೆಜ್ಜೆಯ ನಾದಗಳಿಂದ ವೇದಿಕೆಯನ್ನಾಕ್ರಮಿಸಿ ತುಂಬಿದ ಸಭೆಗೆ ಚೈತನ್ಯ ನೀಡಿ ದರು. ರಾಗಮಾಲಿಕೆಯ ಪದವರ್ಣ ದಲ್ಲಿ ಹತ್ತು ಹಲವಾರು ಬಾರಿ ಕಮಲವನ್ನು ದೇವಿಗೆ ಹೋಲಿಸಿದ ಕಲ್ಪನೆ ಬಹಳ ಸುಂದರ ವಾಗಿ ಮೂಡಿಬಂತು. ಕಮಲವನ್ನು ಮೂಲಾಧಾರ ಚಕ್ರಕ್ಕೆ ಹೋಲಿಸುತ್ತಾ, ಆರು ತಾವರೆಗಳಿಂದ ಉದಿಸಿದ ಕಾರ್ತಿಕೇಯನ ಜನ್ಮದ ಮೋಡಿ, ನೀರಜನಯನೆ ಮಾತೆ ಸರಸ್ವತಿ ಶ್ವೇತ ಪದ್ಮದೊಳು ಎಂಬಿತ್ಯಾದಿ ಗಳಿಂದ ಕಮಲದ ಹೂವಿನ ಪರಿಕಲ್ಪನೆಯಲ್ಲಿ ಪ್ರಸ್ತುತ ಪಡಿಸಿದ ಪದವರ್ಣವು ಸುಂದರವಾಗಿ ಮೂಡಿಬಂತು. ಬಳಿಕ ಆಠಾಣ ರಾಗದ ಜಾವಳಿಯಲ್ಲಿ ಇಂದ್ರಲೋಕದ ಪಾರಿಜಾತವು ಸುರಸುಂದರಿಯಾದ ತನಗೆ ಮಾತ್ರ ಶೋಭಿತವು ಎಂಬ ಸತ್ಯಭಾಮಳ ಅಹಂಕಾರ, ಪಾರಿಜಾತ ವನದಲ್ಲಿ ಗೋಪಬಾಲೆಯರೊಂದಿಗೆ ವಿಹರಿಸಿದ ಕೃಷ್ಣನ ಕುರುಹು ಕಂಡು ಸಿಟ್ಟುಗೊಂಡ ಸತ್ಯಭಾಮೆ ವೈಜಯಂತೀಮಾಲೆ ಧರಿಸಿದ ಕೃಷ್ಣ ತನ್ನ ಸ್ವಂತದವನು ಎಂಬ ಸತ್ಯಭಾಮೆಯ ಗರ್ವಗಳನ್ನು ತನ್ನ ಅಭಿನಯದ ಮೂಲಕ ಎಳೆಎಳೆಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮನ ತಟ್ಟುವಲ್ಲಿÉ ಯಶಸ್ವಿಯಾದರು. ಸಾರಮತಿ ರಾಗದ ಜಾವಳಿಯಲ್ಲಿ ಜ್ಯೋತಿರ್ಲಿಂಗದ ಆದಿ, ಅಂತ್ಯವನ್ನು ಹುಡುಕುವಾಗ ಬ್ರಹ್ಮನ ಮಾತು ಕೇಳಿ ಸುಳ್ಳು ಹೇಳಿದ ಕೇದಗೆಗೆ ಶಾಪ ನೀಡಿದ ಸಂದರ್ಭ, ಇದರಿಂದ ತನ್ನ ತಪ್ಪಿನ ಅರಿವಾದ ಕೇದಗೆ ಪರಿತಪಿಸುವ ನೀತಿ ಸಂದೇಶದೊಂದಿಗೆ ಒಂದು ಅಪರೂಪದ ಪುರಾಣಕತೆಯನ್ನು ನೃತ್ಯದ ಮೂಲಕ ಕಲಾಸಕ್ತರ ಮುಂದಿಟ್ಟರು. 

ಕೊನೆಯಲ್ಲಿ ಆದಿ ಶಂಕರಾಚಾರ್ಯರ ಸಾಹಿತ್ಯಕ್ಕೆ ಸುಮಾರು 90 ನಿಮಿಷಗಳ ಕಾಲ ಸಂಪ್ರದಾಯದ ಚೌಕಟ್ಟಿನೊಳಗೆ ನೂತನ ಪರಿಕಲ್ಪನೆಯ ನೃತ್ಯ ಪುಷ್ಪಗುತ್ಛವನ್ನೇ ಮಂಜರಿ ಎಂಬ ನಾಮಾಂಕಿತ ದೊಂದಿಗೆ ಶಿವನ ಪಾದಗಳಿಗೆ ಅರ್ಪಿಸಿದರು.

ವಿಶ್ವ ನೃತ್ಯ ದಿನದ ಸಂದರ್ಭದಲ್ಲಿ ಇಂತಹ ಅಪರೂಪದ ನೃತ್ಯ ಕಾರ್ಯಕ್ರಮವನ್ನು ಮಂಗಳೂರಿನ ಕಲಾಸಕ್ತರಿಗೆ ಒದಗಿಸಿದ ಭರತಾಂಜಲಿಯ ಶ್ರೀಧರ್‌, ಪ್ರತಿಮಾ ಶ್ರೀಧರ್‌ ಅಭಿನಂದನಾರ್ಹರು. 

ವಿ| ಗೀತಾ ಸರಳಾಯ

Back to Top