CONNECT WITH US  

ಯಕ್ಷಗಾನ ಕಲಾರಂಗ ಪ್ರಶಸ್ತಿ ಪಾತ್ರರು

ಉಡುಪಿಯ ಯಕ್ಷಗಾನ ಕಲಾರಂಗವು ಪ್ರತಿವರ್ಷ ಮೇ ತಿಂಗಳಿನ ಉತ್ತರಾರ್ಧದಲ್ಲಿ ತಾಳಮದ್ದಲೆ ಸಪ್ತಾಹವನ್ನು ಹಮ್ಮಿಕೊಳ್ಳುತ್ತದೆ. ಸಪ್ತಾಹದ ಸಮಾರೋಪ ಸಮಾರಂಭದಂದು ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಾಳಮದ್ದಲೆ ಕ್ಷೇತ್ರದ ಹಿರಿಯ ಸಾಧಕರೀರ್ವರಿಗೆ ನೀಡುವುದು ಯಕ್ಷಗಾನ ಕಲಾರಂಗ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಈ ವರ್ಷ ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಗೆ ಪ್ರೊ| ಎಂ. ಎಲ್‌. ಸಾಮಗ ಮತ್ತು ಮಟ್ಟಿ ಮುರಲೀಧರ ರಾವ್‌ ಪ್ರಶಸ್ತಿಗೆ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. 29-5-2016ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ತಾಳಮದ್ದಲೆ ಸಪ್ತಾಹದ ಸಮಾರೋಪ - ಪ್ರಶಸ್ತಿ ಪ್ರದಾನ ನಡೆಯಲಿದೆ.

ಪ್ರೊ| ಎಂ. ಎಲ್‌ ಸಾಮಗ
ಯಕ್ಷಗಾನಕ್ಕೆ ಮಲ್ಪೆ ಸಾಮಗ ಮನೆ ತನದ ಕೊಡುಗೆ ಗಮನಾರ್ಹ. ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗರು ಹರಿಕಥೆ, ಯಕ್ಷಗಾನ ಮತ್ತು  ಅರ್ಥಗಾರಿಕೆಗೆ ತಮ್ಮ ವಿಶಿಷ್ಟ ಕಲಾಸ್ಪರ್ಶದ ವಾಚಿಕ ವೈಭವದಿಂದ ಹೊಸ ಮಾರ್ಗ ನಿರ್ಮಿಸಿದ ಪ್ರಾತಃಸ್ಮರಣೀಯರು.

ದೊಡ್ಡ ಸಾಮಗರೆಂದೇ ಖ್ಯಾತರಾದ ಶಂಕರ ನಾರಾಯಣ ಸಾಮಗರ ಸುಪುತ್ರ ಮಲ್ಪೆ ಲಕ್ಷ್ಮೀನಾರಾಯಣ ಸಾಮಗರು ಆಂಗ್ಲಭಾಷೆ ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೂಲ್ಕಿ ವಿಜಯ ಕಾಲೇಜಿನಲ್ಲಿ ವೃತ್ತಿ ಬದುಕು ಆರಂಭಿಸಿ, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ.

ವಂಶಪಾರಂಪರ್ಯವಾಗಿ ಬಂದ ಕಲಾಸಕ್ತಿ ಮತ್ತು ಕಲಾಭ್ಯಾಸವನ್ನು ನಿರಂತರ ಉಳಿಸಿ ಬೆಳೆಸಿಕೊಂಡು ಬಂದು ವೃತ್ತಿ ಬದುಕಿಗೆ ತೊಡಕಾಗದಂತೆ ಈ ಪೃವೃತ್ತಿಯನ್ನು ಪೋಷಿಸಿದವರು. ಆದ್ದರಿಂದಲೇ ವೃತ್ತಿ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲಬಲ್ಲ ಹವ್ಯಾಸಿ ಕಲಾವಿದರೆಂದು ಮಾನ್ಯರು. ತೆಂಕು ಬಡಗು ಎರಡೂ ತಿಟ್ಟುಗಳಲ್ಲಿ ಕಲಾಪ್ರೌಢಿಮೆ ಮೆರೆಯಬಲ್ಲ ವಿದಗ್ಧರು. ನಿಲುವು, ಅಭಿನಯ, ಮಾತುಗಾರಿಕೆಯಿಂದ ವೇಷಧಾರಿಯಾಗಿ ಅವರ ನಿರ್ವಹಣೆ ಕಲಾಸಕ್ತರ ಮೆಚ್ಚುಗೆ ಗಳಿಸಿದೆ. ಇಂಗ್ಲಿಷ್‌, ಹಿಂದಿ ಯಕ್ಷಗಾನದ ಮೂಲಕ ಅನ್ಯ ರಾಜ್ಯದೇಶಗಳಿಗೂ ಈ ಕಲೆಯ ಪ್ರಸಾರಕ್ಕೆ ಕಾರಣರು. ತಮ್ಮ ವಿಸ್ತೃತ ಪುರಾಣ ಜ್ಞಾನ ಮತ್ತು ಲೋಕಾನುಭವದಿಂದ ತಾಳಮದ್ದಲೆ ಅರ್ಥಧಾರಿಯಾಗಿ ಪ್ರಸಿದ್ಧರು.

ನಾಟಕ ನಟರಾಗಿ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.ಕಲಾಸಂಬಂಧಿ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಹೊಸ ಚಿಂತನೆಗೆ ಇಂಬು ಕೊಟ್ಟಿದ್ದಾರೆ. ಗಮಕ ವಾಚನದ ಪ್ರವಚನಕಾರರಾಗಿ ಪೌರಾಣಿಕ ಸಂದರ್ಭ ಸನ್ನಿವೇಶಗಳನ್ನು ಸೊಗಸಾಗಿ ಕಟ್ಟಿಕೊಡುತ್ತಾರೆ. ರಂಗ ಪ್ರಯೋಗ ಪ್ರದರ್ಶನಗಳ ವಿಮರ್ಶಕರಾಗಿ ಗಮನ ಸೆಳೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಗಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ದ್ದಾರೆ. ಒಬ್ಬ ಪ್ರಜ್ಞಾವಂತ ಪ್ರೇಕ್ಷಕನಾಗಿ ಕುಳಿತು ಕಲಾಸ್ವಾದನೆ ಮಾಡುವ ಅವರ ಸಹೃದಯತೆ ಅನುಕರಣೀಯ. 

ಅವರ ಮನೆ ಕಲಾಯತನದ ಎಲ್ಲ ಸದಸ್ಯರು ಕಲಾವಿದರೇ. ಪತ್ನಿ ಪ್ರತಿಭಾ ಸಾಮಗ ಸಂಗೀತ-ನೃತ್ಯ ಕಲಾವಿದೆ, ಕಲಾ ವಿಮರ್ಶಕಿ. ಮಗ ಹರ್ಷ ತಬಲಾ ವಾದಕ. ಮಗಳು ಅಪರ್ಣಾ ನೃತ್ಯ ವಿದುಷಿ. ಸಂಸ್ಕೃತಿ ಸಂಪನ್ನ ಸರಳ ಸಾತ್ವಿಕ ವ್ಯಕ್ತಿತ್ವದ ಪ್ರೊ| ಸಾಮಗರ ವ್ಯಕ್ತಿತ್ವ ಮಾದರಿಯಾಗಿ ನಿಲ್ಲಬಲ್ಲ ಸಮತೂಕದ ಪ್ರತೀಕ. 

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ
ಯಕ್ಷಗಾನದ ವೇಷಧಾರಿಯಾಗಿ ಉಭಯ ತಿಟ್ಟುಗಳಲ್ಲಿ ಕಲಾಪ್ರೌಢಿಮೆ ಮೆರೆದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ತಾಳಮದ್ದಲೆ ಅರ್ಥಧಾರಿ ಯಾಗಿಯೂ  ಸಿದ್ಧಿ ಪ್ರಸಿದ್ಧಿ ಪಡೆದವರು. 

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟಿನಲ್ಲಿ ಕೊರಗ ಶೆಟ್ಟಿ -ರೇವತಿ ಶೆಡ್ತಿ ದಂಪತಿಯ ಸುಪುತ್ರರಾಗಿ ಜನಿಸಿದ ಸಿದ್ಧಕಟ್ಟೆಯವರು ಪದವಿಪೂರ್ವ ವಿದ್ಯಾಭ್ಯಾಸ ಪೂರೈಸಿ ಯಕ್ಷಗಾನದ ಸೆಳೆತದಿಂದ ಇದನ್ನೇ ವೃತ್ತಿಯಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡವರು. ಕಾವೂರು ಕೇಶವರಲ್ಲಿ ಯಕ್ಷಗಾನಾಭ್ಯಾಸ. ತೆಂಕುತಿಟ್ಟಿನ ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ ಮೇಳಗಳಲ್ಲಿ ಕಲಾವ್ಯವಸಾಯ ಮಾಡಿ ಬಡಗಿನ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆಗೈದವರು. ಸುಮಾರು ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 

ಪುಂಡುವೇಷ, ಪೋಷಕಪಾತ್ರಗಳ ಮೂಲಕ ಕಲಾಸಕ್ತರ ಗಮನ ಸೆಳೆದು ಸುಧನ್ವ, ಕೃಷ್ಣ, ರಾಮ, ವಾಲ್ಮೀಕಿ, ಪರಶುರಾಮ ಮೊದಲಾದ ಪೌರಾಣಿಕ ಪಾತ್ರಗಳನ್ನು ಸೊಗಸಾಗಿ ಚಿತ್ರಿಸಿದವರು. ಸೌಮ್ಯ ಪಾತ್ರದಲ್ಲಿ, ನಿರ್ವಹಣೆಯಲ್ಲಿ ಅಪೂರ್ವ ಯಶಸ್ಸು ಪಡೆದವರು. ತುಳು ಯಕ್ಷಗಾನದಲ್ಲೂ ತಮ್ಮ ಛಾಪು ಒತ್ತಿರುವ ವಿಶ್ವನಾಥ ಶೆಟ್ಟರು ಎಲ್ಲೆಡೆ ಸಲ್ಲಬಹುದಾದ ಬೇಡಿಕೆಯ ಕಲಾವಿದ. 

ಅರ್ಥಧಾರಿಯಾಗಿ ತಮ್ಮನ್ನು ಸ್ಥಾಪಿಸಿಕೊಂಡ ಇವರು ಚುಟುಕಾದ, ಚೊಕ್ಕ ಮಾತಿನ ಮೂಲಕ ರಸಿಕರ ಮನಗೆದ್ದವರು. ಯಾವುದೇ ಪಾತ್ರವಿರಲಿ ಅದರ ಸ್ವಭಾವ ತಿಳಿದು ವ್ಯವಹರಿಸುವ ಕಲಾಪ್ರಜ್ಞೆ,  ಕಾಲಪ್ರಜ್ಞೆ ಎರಡನ್ನೂ ಮೀರದೆ ಪ್ರೇಕ್ಷಕರಿಗೆ ಮುದನೀಡಿದವರು. ಔಚಿತ್ಯವರಿತು ಆಡುವ, ಮಾತಿನ ಹಿಡಿತ ಸಾಧಿಸಿದ ಅರ್ಥಧಾರಿ.

ಪ್ರಸಂಗಕರ್ತರಾಗಿ ಚಾಣಕ್ಯತಂತ್ರ, ವಿಷಮ ಸಮರಂಗ, ಕನ್ಯಾಂತರಂಗ ಮೊದಲಾದ ಹತ್ತಾರು ಪ್ರಸಂಗಗಳನ್ನು ರಚಿಸಿದ್ದಾರೆ. ಉತ್ಕೃಷ್ಟ, ಸಾಹಿತ್ಯ, ಪೌರಾಣಿಕ ಹೊಸ ಸಂದೇಶದ ಕಾರಣಕ್ಕೆ ವಿದ್ವಾಂಸರಿಂದ ಮಾನಿತರು. ರಂಗನಿರ್ದೇಶನದ ಕುರಿತಂತೆ ಅಪಾರ ಅನುಭವವಿರುವ ಇವರು ಎಳೆಯ ಕಲಾವಿದರಿಗೆ ಮಾರ್ಗದರ್ಶಕ. ಅವರ ಬರಹವೂ ಮಾತಿನಂತೆ ನೇರ, ಸ್ಪಷ್ಟ. ಸಾಮಾಜಿಕ ಕಲಾಸಂಬಂಧಿ ವಿಷಯಗಳಿಗೆ ಪತ್ರಿಕೆಗಳಲ್ಲಿ ಸದಾ ಸ್ಪಂದಿಸುತ್ತಾ ನಾಗರಿಕ ಪ್ರಜ್ಞೆ ಕಾಪಿಟ್ಟುಕೊಂಡು ಬಂದವರು. ಪತ್ನಿ ಜಯಂತಿ, ಮೂವರು ಮಕ್ಕಳೊಂದಿಗೆ ಯಕ್ಷಶ್ರೀ ಮನೆಯಲ್ಲಿ ನೆಲೆನಿಂತಿದ್ದಾರೆ. 

ನಾರಾಯಣ ಹೆಗಡೆ

Trending videos

Back to Top