CONNECT WITH US  

ಮನಗೆದ್ದ ಪದ್ಯಾಣ ಕನ್ನಡಿಕಟ್ಟೆ ಗಾಯನ 

ಸರ್ಪಂಗಳ ಯಕ್ಷೋತ್ಸವ 2018

ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಕಲಾಪೋಷಕರು. ಅವರ ಹೆಸರಿನಲ್ಲಿ ಹಿರಿಯ ಕಲಾವಿದರೊಬ್ಬರನ್ನು ಗೌರವಿಸಿ, ಯಕ್ಷಗಾನ ಪ್ರದರ್ಶನ ಆಯೋಜಿಸುವುದರ ಮೂಲಕ ನೆನಪು ಮಾಡಿಕೊಳ್ಳುವ ಸಂಪ್ರದಾಯ ಅವರ ಪತ್ನಿ, ಮಕ್ಕಳದ್ದು. ಈ ಪ್ರಶಸ್ತಿಗೆ ಆಯ್ಕೆಯಾದ‌ವರು ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು

ಹೆಚ್ಚಾಗಿ ಆಡುವ ಪ್ರಸಂಗವೇ ಆದರೂ ಭಾವಪೂರ್ಣ ಅಭಿನಯ ಹಾಗೂ ಶ್ರವ್ಯಸುಖ ಗಾಯನದಿಂದಾಗಿ ಆಟ ರೈಸಿದ್ದು ಪಿಪಿಸಿ ಅಡಿಟೋರಿಯಂನಲ್ಲಿ. ಪದ್ಯಾಣ ಗಣಪತಿ ಭಟ್‌ ಹಾಗೂ ರವಿಚಂದ್ರ ಕನ್ನಡಿಕಟ್ಟೆಯ ದ್ವಂದ್ವಗಾಯನ ಪ್ರಸಂಗದ ಸೌಂದರ್ಯ ಹೆಚ್ಚಿಸಿತು. ಗೇಯಪರಂಪರೆಯಲ್ಲಿ ತಮ್ಮದೇ ಶೈಲಿ ಉಳಿಸಿ ಬೆಳೆಸಿಕೊಂಡಿರುವ ಪದ್ಯಾಣರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ರವಿಚಂದ್ರ ಕೂಡಾ ಒಬ್ಬರು. ಗುರುಶಿಷ್ಯರು ಒಂದೇ ಮೇಳದಲ್ಲಿ ಯಕ್ಷಗಾನದ ವ್ಯವಸಾಯ ಮಾಡುತ್ತಾ ಶೈಲಿಯೊಂದರ ಬೆಳವಣಿಗೆಗೆ ಕಾರಣರಾಗಿದ್ದಾರೆ. (ದಿವಾಕರ ರೈ ಸಂಪಾಜೆ) ಅಭಿಮನ್ಯುವಿಗೆ ಸುಭದ್ರೆಯಾಗಿ ಜತೆಗೂಡಿದ್ದು ತೆಂಕುಬಡಗಿನ ಪಾತ್ರಧಾರಿ ಕೋಳ್ಯೂರರಂತಹ ಹಿರಿ ತಲೆಮಾರಿನ ಪಾತ್ರಗಾರಿಕೆಯನ್ನು ಅಳವಡಿಸಿಕೊಂಡು ಹೊಸತನ ಹಾಗೂ ಪರಂಪರೆ ಎರಡರಲ್ಲೂ ಮೇಲ್ಮೆ ಸಾಧಿಸಿರುವ ಶಶಿಕಾಂತ ಶೆಟ್ಟಿ ಕಾರ್ಕಳ. ಗರತಿ ಪಾತ್ರಕ್ಕಿಂತಲೂ ಭಾವಪೂರ್ಣ ಅಭಿನಯಕ್ಕೆ ಆಪ್ತರು. 

ಆಲಿಪುದೆಲೆ ತಾಯೆ ಎನ್ನ ಬಿನ್ನಪವನು, ತಡೆವರೆನೆಲೆ ತಾಯೆ, ಏತಕಿಂತಾ ಬುದ್ಧಿ ಬಂತೋ ಕಂದ ಕಂದ ಎಂಬಂತಹ ಪದ್ಯಗಳಿಗೆ ಸುಭದ್ರೆ ಅಭಿಮನ್ಯುವಿನ ಸಂಭಾಷಣಾ ದೃಶ್ಯಗಳು ಪ್ರೇಕ್ಷಕರ ಮನ ಮುಟ್ಟಿದವು. ಪತಿ ಎಲ್ಲಿ ಎಂದು ಕೇಳಿದರೆ ಮನೆತುಂಬಿಕೊಂಡ ಸೊಸೆಗೆ ಏನೆಂದು ಉತ್ತರಿಸಲಿ, ಯುದ್ಧಕ್ಕೆ ಹೋದ ತಂದೆ ಮರಳಿ ಬಂದು ಮಗನೆಲ್ಲಿ ಎಂದಾಗ ಏನೆಂದು ಹೇಳಲಿ. ಇಂತಹ ಹುಡುಗುತನದ ನಿರ್ಧಾರ ಮಾಡಿ ಯುದ್ಧಕ್ಕೆ ಹೋಗುವ ಬದಲು "ನೀತಿಯಲ್ಲ ಪೋಪುದಿಂದು ಕಂದ, ಕಂದ. ಎನ್ನ ಘಾತಿಸಿ ಪೋಗಯ್ಯ ರಣಕೆ' ಎಂದು ಸುಭದ್ರೆ ಸ್ವಂತ ಮಗನನ್ನು ಯುದ್ಧ ಭೂಮಿಗೆ ಕಳುಹಿಸಿಕೊಡುವ ದೃಶ್ಯ ಅಮೋಘವಾಗಿ ಮೂಡಿಬಂತು. 

ಕೌರವ (ಜಯಾನಂದ ಸಂಪಾಜೆ) ಹಾಗೂ ದ್ರೋಣರ (ಸುಣ್ಣಂಬಳ ವಿಶ್ವೇಶ್ವರ ಭಟ್‌) ಸಂಭಾಷಣೆ ಅರ್ಥಪೂರ್ಣವಾಗಿತ್ತು. ಸಮಕಾಲೀನ ರಾಜಕೀಯ ಮಾತುಗಳಿಗೆ ಬಣ್ಣ ಹಚ್ಚಿ ಪೌರಾಣಿಕದ ಲೇಪನ ಕೊಟ್ಟದ್ದು ಮನರಂಜನೆಯಾಗಿತ್ತು. ಇದು ಅಭಿಮನ್ಯು ದ್ರೋಣರ ಸಂಭಾಷಣೆವರೆಗೂ ಬಂತು. 

ಅಭಿಮನ್ಯುವಾಗಿ ಕೆಲವೇ ಪದ್ಯಗಳಿಗೆ ಬಂದು ಹೋದರೂ ರಕ್ಷಿತ್‌ ಪಡ್ರೆ ಕೂಡಾ ಚೆನ್ನಾದ ಅಭಿನಯ ನೀಡಿದರು. ಧರ್ಮರಾಯ (ಶಂಭಯ್ಯ ಕಂಜರ್ಪಣೆ) ಪಾತ್ರಪೋಷಣೆ ಚೆನ್ನಾಗಿತ್ತು. ಪ್ರಬುದ್ಧ ಹಿಮ್ಮೇಳ ಪದ್ಯಾಣ ಜಯರಾಮ ಭಟ್‌ ಹಾಗೂ ಪದ್ಯಾಣ ಶಂಕರನಾರಾಯಣ ಭಟ್‌. ಗದ್ದಲವಿಲ್ಲದ ಮೆಲುನುಡಿಯ ಚೆಂಡೆ ಗಾಯನದ ಆಸ್ವಾದನೆಗೆ ಆಸ್ಪದ ನೀಡಿತ್ತು. 

ಚಕ್ರವ್ಯೂಹದ ಬಳಿಕ ಪದ್ಮವ್ಯೂಹ ನಡೆಯಿತು. ಪರಂಪರೆಯ ಶೈಲಿಯಲ್ಲಿ ಬಲಿಪ ಪ್ರಸಾದ ಭಾಗವತರು ಏರುಶ್ರುತಿಯಲ್ಲಿ ಸೈಂಧವ ವಧೆ ಕಥಾಭಾಗವನ್ನು ನಡೆಸಿದರು. ಸಂಶಪ್ತಕರನ್ನು ಸದೆಬಡಿದ ಕೃಷ್ಣಾರ್ಜುನರು ಮರಳಿ ಬರುವಾಗ ಅಭಿಮನ್ಯುವಿನ ಮರಣದ ದಾರುಣ ವಾರ್ತೆ ಕೇಳಿ ಸಹಿಸಿಕೊಳ್ಳಲು ಕೃಷ್ಣ (ವಾಸುದೇವ ರಂಗ ಭಟ್‌) ಪಾರ್ಥ(ಸುಬ್ರಾಯ ಹೊಳ್ಳ)ನನ್ನು ಸನ್ನದ್ಧಗೊಸುತ್ತಾನೆ. ಇಲ್ಲಿಯೂ ಸುಭದ್ರೆಯಾಗಿ ಮಿಂಚಿದವರು ಶಶಿಕಾಂತ್‌ ಶೆಟ್ಟರು. ಮಗನ ಅಗಲುವಿಕೆಯ ನೋವಿನ ವಾರ್ತೆಯನ್ನು ಪತಿಯ ಬಳಿ ಹೇಳುವ ಭಾವನಾತ್ಮಕ ಸನ್ನಿವೇಶ ಮನಮುಟ್ಟಿತು. ಸೂರ್ಯಾಸ್ತದೊಳಗೆ ಸೈಂಧವ(ಶಶಿಕಿರಣ ಕಾವು)ನನ್ನು ವಧಿಸುವ ಮನಸ್ಸಂಕಲ್ಪ ಮಾಡಿ ಹೊರಡುವುದು, ದ್ರೋಣ (ಸುನಿಲ್‌ ಪಲ್ಲೆಮಜಲು) ಕೌರವ (ಲಕ್ಷ್ಮಣ ಮರಕಡ)ನ ಕೊಂಕುನುಡಿಗಳು, ಸೈಂಧವನಿಗೆ ಮರಣಭೀತಿಯಾಗುವುದು, ಪದ್ಮವ್ಯೂಹದ ರಚನೆ, ಯುದ್ಧ, ಸೂರ್ಯನಿಗೆ ಅಡ್ಡಲಾಗಿ ಸುದರ್ಶನ ಚಕ್ರ ಹಿಡಿದ ಕೃಷ್ಣ ಕತ್ತಲೆಯ ವಾತಾವರಣ ನಿರ್ಮಿಸಿ ಸೈಂಧವನ ವಿಜಯೋತ್ಸವಕ್ಕೆ ಅನುವು ಮಾಡಿಕೊಡುವುದು, ಹೇಳಿದ್ದನ್ನು ಮಾಡಲಾಗದೇ ಅರ್ಜುನ ಅಗ್ನಿಗಮನಗೈಯುವ ಮನ ಮಾಡಿದಾಗ ಕೃಷ್ಣನ ಆಜ್ಞೆಯಂತೆ ಸೈಂಧವ ವಧೆ ಕಥಾಹಂದರ. ಸಾತ್ಯಕಿಯಾಗಿ ಲೋಕೇಶ್‌ ಮುಚ್ಚಾರು ಉತ್ತಮ ಅಭಿನಯ. ಹರಿರಾಜ ಕಟೀಲು, ಅಜಿತ್‌ ಪುತ್ತಿಗೆ, ಪ್ರಜ್ವಲ್‌ ಇರುವೈಲು, ಶ್ರೀನಿಧಿ, ಶಶಾಂಕ್‌, ಶಿವಾನಂದ ಪೆರ್ಲ, ವೆಂಕಟೇಶ್‌ ಕಲ್ಲುಗುಂಡಿ, ಆದಿತ್ಯ ಹಾಗೂ ಶಿವರಾಜ್‌ ಕಲಾವಿದರಾಗಿ ಯಶಸ್ವಿಯಾಗಿದ್ದರು. ಚೈತನ್ಯ ಪದ್ಯಾಣರ ಚೆಂಡೆ, ಕೃಷ್ಣ ಪ್ರಕಾಶ ಉಳಿತ್ತಾಯರ ಮದ್ದಳೆ ಹಿಮ್ಮೇಳದ ಹೈಲೈಟ್‌.

ಲಕ್ಷ್ಮೀ ಮಚ್ಚಿನ


Trending videos

Back to Top