CONNECT WITH US  

ಪಾತ್ರದ ಅಂತರಂಗ ತೆರೆದಿಟ್ಟ ಅರ್ಥಾಂತರಂಗ 

ಯಕ್ಷಗಾನ ಗಾಯನ ವಾದನ ನರ್ತನಗಳುಳ್ಳ ತೌರ್ಯತ್ರಿಕ ಮಾಧ್ಯಮದ ಒಂದು ಕಲಾಪ್ರಕಾರವಾದರೂ ಅರ್ಥವಿನ್ಯಾಸ ಇಲ್ಲಿನ ವಿಶೇಷತೆ. ವೇಷಭೂಷಣ ನೃತ್ಯಾದಿಗಳಿಲ್ಲದೇ ಮಾತಿನಿಂದಲೇ ಪಾತ್ರವನ್ನು ಅನಾವರಣಗೊಳಿಸುವ ತಾಳಮದ್ದಲೆ ಯಕ್ಷಗಾನದ ಮತ್ತೂಂದು ಮುಖ.ಕಲೆಯ ಯಾವುದೇ ಪ್ರಕಾರವಾದರೂ ಪಾತ್ರ ಪೋಷಣೆಯೇ ಪಾತ್ರಧಾರಿಯ ಪ್ರಧಾನ ಲಕ್ಷ್ಯವಾಗಿದ್ದರೆ ಚೆನ್ನ. ಕೆಲವೊಮ್ಮೆ ಪಾತ್ರಧಾರಿಯ ಪ್ರಭುತ್ವಕ್ಕನುಗುಣವಾಗಿ ಕೆಲ ಬದಲಾವಣೆ ಆಗುತ್ತವೆ.ಉದಾಹರಣೆಗೆ ಕೆಲ ಪಾತ್ರಗಳಿಗೆ ಪೀಠಿಕೆಯ ಅಗತ್ಯವಿಲ್ಲ. ಕೆಲ ಪಾತ್ರಗಳಿಗೆ ಸ್ವಗತವಿಲ್ಲ. ಸಂಸ್ಕೃತ ಸಾಹಿತ್ಯದ ಅಗತ್ಯವಿಲ್ಲ. ಆದರೂ ಇದೆಲ್ಲ ನಡೆಯುತ್ತಲೇ ಇದ್ದರೆ? ಬಹುಮುಖ್ಯವಾದ ಇನ್ನೊಂದು ಅಂಶ ಎಂದರೆ ಕಾಲ. ಪಾತ್ರದ ಕಾಲ, ಆಗಿನ ಸಂಸ್ಕೃತಿ ಸಂಸ್ಕಾರಗಳನ್ನು ತೋರಿಸದೆ ಈ ಕಾಲದ ನೀತಿ ನಿಯಮಗಳನ್ನು ಆ ಪಾತ್ರಕ್ಕೆ ಹೇರುವುದು ಅಸಮಂಜಸ ಎನಿಸುತ್ತದೆ. ಕಥಾನಕದಲ್ಲಿ ಅತ್ಯಂತಿಕವಾಗಿ ಗೆಲ್ಲಬೇಕಾದ ವಿಷಯಕ್ಕೆ ಸೋಲಾದರೆ ತತ್ವ ಚಿಂತನೆ ಹೇಗಾಗಬೇಕು?

ಈ ಎಲ್ಲ ಅರ್ಥಗಾರಿಕೆಯ ತೊಡಕುಗಳನ್ನು ಪರಿಹರಿಸುವಲ್ಲಿ ಅರ್ಥಾಂತರಂಗ ಶ್ಲಾಘ ಪ್ರಯತ್ನ. ಇದು ಸಂಪೂರ್ಣ ಯಶಸ್ವಿಯಾಗ ಬೇಕಾದರೆ, ಕಲಾವಿದರು ಸಹೃದಯರೂ, ಸಮಾನ ಮನಸ್ಕರೂ ಆಗಿರಬೇಕು. ಪಾತ್ರದ ಸಂಸ್ಕಾರಕ್ಕೊಪ್ಪುವ ಭಾಷಿಕ, ಆಂಗಿಕ ಅಭಿನಯಗಳಿಂದ ಪಾತ್ರವನ್ನು ಗೆಲ್ಲಿಸಬೇಕೇ ಹೊರತು ತನ್ನ ಪಾಂಡಿತ್ಯದ ಪಾರಮ್ಯಕ್ಕೆ ಪಾತ್ರವನ್ನು ಬಲಿಕೊಡಬಾರದು. ಪ್ರೇಕ್ಷಕನೂ ಪ್ರಜ್ಞಾವಂತಿಕೆಯಿಂದ ಕಂಡು ಪಾತ್ರದ ಸೋಲು ಗೆಲುವನ್ನು ಬಹಿರಂಗದಲ್ಲಿಯೇ ಹೇಳಿದಾಗ ಒಂದಷ್ಟು ಶುದ್ಧೀಕರಣವಾದೀತು. ಭಕ್ತ ಸುಧನ್ವದಲ್ಲಿ ಕೃಷ್ಣನನ್ನು ಹಾಸ್ಯ ಮಾಡುವ ಸುಧನ್ವ , ಶಾಸ್ತ್ರವಾಕ್ಯಗಳನ್ನು ಪುಂಖಾನುಪುಂಖವಾಗಿ ಬಿತ್ತರಿಸುವ ಶೂರ್ಪನಖಾ, ರಾಜರ್ಷಿ ಜನಕನಿಗೆ ಉಪದೇಶ ಮಾಡುವ ಶ್ರೀರಾಮ, ಭೀಷ್ಮನಲ್ಲಿ ಧರ್ಮ ಜಿಜ್ಞಾಸೆ ಮಾಡುವ, ಕೊನೆಯಲ್ಲಿ ಸಂಪೂರ್ಣ ಕುರುವಂಶವನ್ನೇ ಶಪಿಸುವ ಅಂಬೆ ಹೀಗೆ ಅನೇಕಾನೇಕ ಸಂಗತಿಗಳು ಪರಾಮರ್ಶಿಸಲ್ಪಡಬೇಕು. ಹಿಮ್ಮೇಳನದಲ್ಲಿಯೂ ಅರ್ಥಸಿದ್ಧಿ (ಶುದ್ಧಿ)ಯುಳ್ಳ ಭಾಗವತರು ಹೆಚ್ಚಾಗಬೇಕಿದೆ. ಇಂತಹ ವಿಚಾರಗಳನ್ನೂ ಪಾತ್ರದ ಸೂಕ್ಷ್ಮವನ್ನೂ ಎಲ್ಲ ಕಲಾವಿದರೂ ಕಲಾಪ್ರಿಯರೂ ಅರಿಯುವಂತಾಗಬೇಕು. 

ಅರ್ಥಾಂತರಂಗ - 10ರಲ್ಲಿ ರಾಜಸೂಯಾಧ್ವರದ ಧರ್ಮರಾಯ ಕೃಷ್ಣರ ಸಂಭಾಷಣೆ ಅತ್ಯಂತ ಸುಂದರವಾಗಿ ಪಾತ್ರವೇ ತಾನೆಂಬ ಹಾಗೆ ಕಂಡಿತು. ಔಚಿತ್ಯಕೊಪ್ಪುವ ಧರ್ಮರಾಯನ ಮಾತು ಪಾತ್ರದ ಶ್ರೇಷ್ಠತೆಯ ಕನ್ನಡಿಯಂತಿತ್ತು. ಕೃಷ್ಣನ ಸೌಜನ್ಯ ಧರ್ಮರಕ್ಷಣೆಯ ತುಡಿತ, ಸೂಕ್ಷ್ಮ ರಾಜನೀತಿ ಎಲ್ಲವೂ ಮೇಳೈಸಿದ ಶೃತಿಬದ್ಧವೂ ಭಾವಪೂರ್ಣವೂ ಆದ ಮಾತುಗಳು ದ್ವಾಪರವನ್ನೇ ತೆರೆದಿಟ್ಟ ಹಾಗಿತ್ತು. ದೂರ್ವಾಸರ ತೀಕ್ಷ್ಣ ಮಾತುಗಳಿಗೆ ಲಕ್ಷ್ಮಣನ ಅಸಹಾಯಕತೆಯ ಭಾವ ಕರುಳಹಿಂಡುವಂತಿತ್ತು. ಶಂತನುವಿನ ಸಂಸ್ಕಾರವನ್ನು ಎತ್ತಿ ತೋರಿದ ಸುಶೀಲ ಶೃಂಗಾರ ಯೋಜನಗಂಧಿಯ ನಯ-ವಿನಯ, ಅಧೀನೆಯದ ತಾನು ಧರ್ಮ ಮೀರಬಾರದೆನ್ನುವ ಶುದ್ಧ ಮನಸ್ಥಿತಿಯ ಅನಾವರಣ ಪಾತ್ರಧಾರಿಗಿಂತ ಹೆಚ್ಚಾಗಿ ಪಾತ್ರವನ್ನೇ ಬೆಳಗಿದವು. ಹಿತವಾದ ಹಿಮ್ಮೇಳ ಮೆರಗನ್ನು ಹೆಚ್ಚಿಸಿತು.

ವಿ|ಯು. ವಿಘ್ನೇಶ ಶರ್ಮಾ 

Trending videos

Back to Top