CONNECT WITH US  

ಪದ-ಅರ್ಥ ಪ್ರಸ್ತುತಿಯ ಪ್ರಜ್ಞಾ ಭಾಸ್ಕರ 

ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಈ ಸಾಲಿನ ಯಕ್ಷರಕ್ಷಾ ಪ್ರಶಸ್ತಿ. ಆಗಸ್ಟ್‌ 26ರಂದು ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ. ಅಜೆಕಾರು ಕಲಾಭಿಮಾನಿ ಬಳಗದ ಆಯೋಜನೆ. ಚಿಕ್ಕ ಮುನ್ನೋಟ ಕಟ್ಟಿಕೊಡಲು ಇವಿಷ್ಟು ವಿವರಗಳು ಸಾಕು. ಕರಾವಳಿಯ ಬಹುತೇಕ ಕಲಾವಿದರ ಯಶೋಯಾನಕ್ಕೆ ಅಕ್ಷರಮಾನ ನೀಡಿದ ಕುಕ್ಕುವಳ್ಳಿಯವರ ಬಯೋಡಾಟ ಸುದೀರ್ಘ‌. ಕಲಾಸ್ಪರ್ಶದ ಎಲ್ಲವನ್ನೂ ಸ್ಪರ್ಶಿಸಿದ ಇವರದು ಮೊಗೆವ ಆಸಕ್ತಿ. ಮೊಗೆಮೊಗೆವ ಉತ್ಸುಕತೆ. 

 ಪ್ರತಿಭೆಯ ಜಾಡು ಹಿಡಿದು ಅವಕಾಶಗಳು ಅಟ್ಟಿಸಿಕೊಂಡು ಬರುತ್ತವೆ. ಹಾಗಾಗಿ ಭಾಸ್ಕರರಿಗೆ ಯಕ್ಷಗಾನ, ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯನ್ನು ಊರಲು ಸಾಧ್ಯವಾಯಿತು. ಬದುಕಿನಲ್ಲಿ ಹೊಸ ಹೊಸ ಭಾಸ್ಕರನನ್ನು ನೋಡುವ ಭಾಗ್ಯ ಪ್ರಾಪ್ತವಾಯಿತು.ತಾಳಮದ್ದಳೆ ಅರ್ಥದಾರಿ, ವೇಷಧಾರಿ, ಪ್ರವಚನಕಾರ, ಶಿಕ್ಷಕ, ಸಂಘಟಕ, ಲೇಖಕ, ಕವಿ, ಚಿಂತಕ, ಸಂಶೋಧಕ, ಬೋಧಕ, ಕಲಾ ಪ್ರತಿಪಾದಕ, ವಾಹಿನಿಗಳಲ್ಲಿ ನಿರ್ವಾಹಕ, ಕಮ್ಮಟ-ಕಾರ್ಯಾಗಾರಗಳ ನಿರ್ದೇಶಕ. ಇವೆಲ್ಲವೂ ಒಬ್ಬನಲ್ಲಿ ಮಿಳಿತವಾಗಿರುವುದು ಅಪರೂಪ, ಅನನ್ಯ. ಈ ಮಿಳಿತದೊಳಗಿದೆ ಯಶದ ಸರ್ವ ದರ್ಶನ. 

    ಡಾ| ಶೇಣಿ, ಸಾಮಗರು, ಪೆರ್ಲ ಕೃಷ್ಣ ಭಟ್‌, ತೆಕ್ಕಟ್ಟೆ, ಕಾಂತರೈಗಳು... ಹೀಗೆ ಉದ್ಧಾಮರ ಜತೆ ಅರ್ಥದಾರಿಯಾಗಿ, ಒಡನಾಡಿಯಾಗಿ ಸಂಪರ್ಕ. ಇವರೆಲ್ಲರ ಅರ್ಥಗಾರಿಕೆಯ ಪ್ರಖರತೆಯ ಬೆಳಕಿನಲ್ಲಿ ಸ್ವ-ದಾರಿಯ ಹಾದಿ. ಕನ್ನಡ, ತುಳು ಕೂಟಾಟಗಳಲ್ಲಿ ಸ್ವ-ಶೈಲಿಯ ರೂಢನೆ. 

    ನೆಯಿ-ಪೇರ್‌, ಒಡ್ಡೋಲಗ, ಯಕ್ಷಿಕಾ, ಅಭಿರಾಮ, ಯಕ್ಷ ಪ್ರಮೀಳಾ, ಯಕ್ಷರ ಚೆನ್ನ, ಪುಳಿಂಚ ಕೃತಿ-ಸ್ಮತಿ, ಪನಿಯಾರ ಸಂಪಾದಿತ ಕೃತಿಗಳು; ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ ಪ್ರಸಂಗಗಳು ಅಚ್ಚಾಗಿವೆ. "ಹರಣ ಹಾರಿತು, ಎರೆಯನೆಡೆಗೆ, ತುಳುವೆರೆ ಬಲೀಂದ್ರೆ, ಗರತಿ ಮಂಜಣೆ, ಜನ್ಮರಹಸ್ಯ, ದಳವಾಯಿ ದೇವುಪೂಂಜೆ, ಅಮರ್‌ ವೀರೆರ್‌ ಮೊದಲಾದ ನಾಟಕಗಳ ರಚಯಿತರು. 

    ಕನ್ನಡ -ತುಳು ಸಂಘ, ಸಂಸ್ಥೆಗಳಲ್ಲಿ ಸಕ್ರಿಯ. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ. ನಾಲ್ಕು ವರ್ಷದಿಂದ ಯಕ್ಷಾಂಗಣ ಮಂಗಳೂರು ರೂಪೀಕರಣ. ಇದರ ಮೂಲಕ ತಾಳಮದ್ದಳೆ ಸಪ್ತಾಹಗಳ ಆಯೋಜನೆ. ಸಾಧಕರಿಗೆ ಸಮ್ಮಾನ, ಕೀರ್ತಿಶೇಷರ ಸಂಸ್ಮರಣೆ. 

    ಭಾಸ್ಕರ ರೈ ಕುಕ್ಕುವಳ್ಳಿಯವರ ಕಲಾಯಾನವನ್ನು ಸೀಮಿತ ಅಕ್ಷರಪುಂಜದಲ್ಲಿ ಹಿಡಿದಿಡಲು ಕಷ್ಟ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದಾಗ ಮಂಗಳೂರಿನಲ್ಲಿ (2004) ಪ್ರಥಮ ಬಾರಿಗೆ ಮಹಿಳಾ ಯಕ್ಷಗಾನ ಸಮ್ಮೇಳನ "ಯಕ್ಷಪ್ರಮೀಳಾ' ಸಂಘಟಿಸಿದ್ದರು. ನೆನಪು ಸಂಚಿಕೆ ಪ್ರಕಾಶಿಸಿದ್ದರು. ಜಾಲತಾಣದಲ್ಲಿ ಜಾಲಾಡಿದಾಗ ಕೈಮುಗಿದ ಭಂಗಿಯ ಯಕ್ಷಗಾನದ ಕಿರೀಟ ವೇಷವೊಂದು ಅಲ್ಲಲ್ಲಿ ಕೈಗೆಟಕುತ್ತದೆ. ಅದು ಭಾಸ್ಕರ ರೈ ಅವರದ್ದೆಂದು ಬಹುತೇಕರಿಗೆ ತಿಳಿದಿಲ್ಲ. ವಿವಿಧ ಅಂತಾರಾಷ್ಟ್ರೀಯ ಕಂಪೆನಿಗಳು, ಬ್ಯಾಂಕ್‌ಗಳು, ಸಂಘಸಂಸ್ಥೆಗಳ ಜಾಹೀರಾತು ಪುಟದಲ್ಲಿ ಈ ಚಿತ್ರ ಹರಿದಾಡುತ್ತಿದೆ. 

    ನೂರಾರು ಸಮ್ಮಾನಗಳು, ಪ್ರಶಸ್ತಿಗಳು, ಪಡೆದ ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಈಗ ಯಕ್ಷರಕ್ಷಾ ಪ್ರಶಸ್ತಿಯ ಬಾಗಿನ.  ಅಜೆಕಾರು ಕಲಾಭಿಮಾನಿ ಬಳಗವು ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ. ಯಕ್ಷಗಾನದ ಸೊಬಗನ್ನು, ಬೆರಗನ್ನು ಮುಂಬಯಿ ನಗರದಲ್ಲಿ ಅನಾವರಣಗೊಳಿಸುವ ಈ ಬಳಗದ ಕಲಾಪ್ರೀತಿ, ಕಲಾವಿದರ ಪ್ರೀತಿ ಶ್ಲಾಘನೀಯ. ಆಪ್ತ ಕುಕ್ಕುವಳ್ಳಿಯವರಿಗೆ ಅಭಿನಂದನೆ, ಅಭಿವಂದನೆ.  

  ನಾರಾಯಣ ಕೆ.ಪಿ. 


Trending videos

Back to Top