CONNECT WITH US  

ಯಕ್ಷಕಾವ್ಯದ ಅಂತರಂಗ ತೆರೆದಿರಿಸಿದ ಕಾವ್ಯಾಂತರಂಗ 

ಸಿರಿಬಾಗಿಲು ರಾಮಕೃಷ್ಣ ಮಯ್ಯ ನೇತೃತ್ವದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಅರ್ಥದಾರಿ ಶ್ರೀಧರ ಡಿ.ಎಸ್‌.ಅವರ ನಿರ್ದೇಶನದಲ್ಲಿ ಪಾವಂಜೆಯಲ್ಲಿ ಏರ್ಪಡಿಸಿದ ತೆಂಕುತಿಟ್ಟಿನ ನಾಲ್ಕು ಪರಂಪರೆಯ ಪ್ರಾತಿನಿಧಿಕರಾದ ಮೂವರು ಯುವ ಭಾಗವತರಿಂದ ಹದಿನೈದು ಹಿರಿಯ ಕವಿಗಳು ರಚಿಸಿದ ಪ್ರಸಂಗಗಳಿಂದ ಆಯ್ದ 45 ವಿವಿಧ ಛಂದಸ್ಸಿನ ಪದ್ಯಗಳ ಹಾಡುಗಾರಿಕೆಯ "ಕಾವ್ಯಾಂತರಂಗ' ಕಮ್ಮಟ ಭಾಗವತಿಕೆಯ ವಿವಿಧ ಮಜಲುಗಳನ್ನು ಬಿಂಬಿಸುವ ಕಾರ್ಯಾಗಾರವಾಯಿತು. 

ವಿದ್ವಾಂಸರಿಂದ ಲಿಖಿತವಾಗಿ ನೀಡಲ್ಪಟ್ಟ ಉದ್ದದ ಸಾಹಿತ್ಯವಿರುವ ಪದ್ಯವನ್ನು ಕವಿ-ಕಾವ್ಯದ ಅಂತರಂಗವರಿತು ಛಂದಸ್ಸಿಗೆ ಲೋಪವಾಗದ ಹಾಗೆ , ಸಾಹಿತ್ಯ ಕೆಡದ ಹಾಗೆ ಹಾಡುವುದು ಮೂವರು ಭಾಗವತರಿಗೆ ಸವಾಲೇ ಆಗಿತ್ತು.ಈ ನೆಲೆಯಲ್ಲಿ ಇದು ಅಲ್ಲಲ್ಲಿ ನಡೆಯುವ ಪ್ರಚಲಿತ ಗಾನವೈವಿಧ್ಯಕ್ಕಿಂತ ಭಿನ್ನವಾಗಿದೆ ಎನ್ನಬಹುದು. 

ತೆಂಕುತಿಟ್ಟಿನ ಬಲಿಪ ಶೈಲಿಯ ಬಲಿಪ ಪ್ರಸಾದ ಭಾಗವತ, ಪದ್ಯಾಣ ಮತ್ತು ಅಗರಿ ಶೈಲಿಯಲ್ಲಿ ಹಾಡಬಲ್ಲ ರವಿಚಂದ್ರ ಕನ್ನಡಿಕಟ್ಟೆ, ಕಡತೋಕ ಭಾಗವತರ ಶೈಲಿಯ ಛಾಯೆಯಲ್ಲಿ ಹಾಡುವ ಸಿರಿಬಾಗಿಲು ರಾಮಕೃಷ್ಣ ಮಯ್ಯ ಈ ನಾಲ್ಕು ಪರಂಪರೆಯ ಮೂವರು ಭಾಗವತರು ಸುಮಾರು ಮೂರು ತಾಸು ಹದಿನೈದು ಕವಿಗಳ 45 ಪದ್ಯಗಳನ್ನು ಪರಂಪರೆಯ ಮಟ್ಟು ಮತ್ತು ರಾಗದಲ್ಲಿ ಪ್ರಸ್ತುತಪಡಿಸಿದರು.

ಪ್ರಾಚೀನ ಕವಿಗಳಾದ ಪಾರ್ತಿ ಸುಬ್ಬ,ಅಜಪುರ ವಿಷ್ಣು, ದೇವಿದಾಸ ,ಮಟ್ಟಿ ವಾಸುದೇವ ಪ್ರಭು,ಕೆಳದಿ ಸುಬ್ಬ, ಹಟ್ಟಿಯಂಗಡಿ ರಾಮ ಭಟ್ಟ,ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ,ಮುದ್ದಣ್ಣ ಕವಿ, ಕೊರ್ಗಿ ಸೂರ್ಯನಾರಾಯಣ ಉಪಾಧ್ಯ,ಅಗರಿ ಶ್ರೀನಿವಾಸ ಭಾಗವತರು ಮತ್ತು ಐವರು ಆಧುನಿಕ ಕವಿಗಳಾದ ಬಲಿಪ ನಾರಾಯಣ ಭಾಗವತ, ಹೊಸತೋಟ ಮಂಜುನಾಥ ಭಾಗವತ, ಪ್ರೊ|ಅಮೃತ ಸೋಮೇಶ್ವರ,ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮತ್ತು ಶ್ರೀದರ ಡಿ.ಎಸ್‌.ಹೀಗೆ 15 ಕವಿಗಳ ಮೂರು ಪ್ರಸಂಗದಿಂದ ಆಯ್ದ ಮೂರು ಮೂರು ಪದ್ಯದ ಹಾಗೆ 45 ವೈವಿಧ್ಯಮಯ ಛಂದಸ್ಸಿನಿಂದ ಕೂಡಿದ ಪದ್ಯಗಳನ್ನು ಆಯ್ಕೆಮಾಡಲಾಗಿತ್ತು. 

ಸಾಮಾನ್ಯವಾಗಿ ಸೌರಾಷ್ಟ್ರ ತ್ರಿವುಡೆ ತಾಳದ ಪದ್ಯಗಳನ್ನು ಮಧ್ಯಮಾವತಿ,ಮೋಹನ ಸಾವೇರಿ ರಾಗದಲ್ಲಿ ಹಾಡುವುದು ರೂಡಿ. ಮೂವರು ಭಾಗವತರು ಸೌರಾಷ್ಟ್ರ ರಾಗದ ಪದ್ಯಗಳನ್ನು ಬೇರೆ ರಾಗದಲ್ಲಿ ಹಾಡಿ ತೋರಿಸಿದರು. ಉಭಯ ತಿಟ್ಟುಗಳಲ್ಲಿ ಪ್ರಸಿದ್ಧವಾದ ಪ್ರಾರ್ಥನಾ ಪದ್ಯ ನಾಟಿ ರಾಗದಲ್ಲಿ ಆದಿ ಏಕ-ಕೋರೆತಾಳದಲ್ಲಿ ಪಾವಂಜೆ ಲಕ್ಷ್ಮೀನಾರಾಯಣ ಭಟ್‌ ವಿರಚಿತ ಬಹು ಪ್ರಸಿದ್ಧ "ವಾರಣ ವದನ'ದ ಮೂರು ಚರಣಗಳನ್ನು ಮೂವರು ಭಾಗವತರು ಪ್ರಸ್ತುತ ಪಡಿಸಿದರು. "ಪಾರ್ತಿ ಸುಬ್ಬನ ಕೃಷ್ಣ ಚರಿತೆ-ಪಟ್ಟಾಭಿಷೇಕ-ಪಂಚವಟಿ' ಪ್ರಸಂಗದ ಪದ್ಯದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. 

ಕೇವಲ ಹಳೆಯ ರಾಗಗಳನ್ನು ಮಾತ್ರ ಬಳಸದೆ ಆಧುನಿಕ ಐದು ಕವಿಗಳ ಪದ್ಯಕ್ಕೆ ಯಕ್ಷಗಾನದಲ್ಲಿ ಇತ್ತೀಚೆಗೆ ಬಳಕೆಗೆ ಬಂದ ಕೆಲವು ರಾಗಗಳನ್ನು ಮೂವರು ಭಾಗವತರು ಬಳಸಿಕೊಂಡು ಪರಂಪರೆ ಮತ್ತು ಆಧುನಿಕತೆಯ ಮಧ್ಯೆ ಸೇತುವೆಯನ್ನು ನಿರ್ಮಿಸಿಕೊಟ್ಟರು.ಅಮೃತ ಸೋಮೇಶ್ವರರ ಸಹಸ್ರಕವಚ ಮೋಕ್ಷ ಪ್ರಸಂಗದ ಎರಕಲಕಾಂಬೋದಿ ಅಷ್ಟತಾಳದ ಪದ್ಯಕ್ಕೆ ರವಿಚಂದ್ರರು ರೇವತಿ ರಾಗವನ್ನೂ, ಪುರುಷೋತ್ತಮ ಪೂಂಜರ ಬಿಲಹರಿ ಅಷ್ಟತಾಳದ ಪದ್ಯಕ್ಕೆ ಮಾಂಡ್‌ ರಾಗವನ್ನೂ, ಹೊಸತೋಟದವರ ಮಾರವಿ ಏಕತಾಳದ ಪದ್ಯಕ್ಕೆ ಬೇಹಾಗ್‌ ರಾಗವನ್ನೂ ಬಳಸಿ ಹೊಸರಾಗದಲ್ಲಿ ತಮ್ಮ ಹಿಡಿತವನ್ನು ಪ್ರಸ್ತುತಪಡಿಸಿದರು. ಹಾಗೆಯೆ ಮಯ್ಯರು ಪೂಂಜರ ಉಭಯಕುಲ ಬಿಲ್ಲೋಜ ಪ್ರಸಂಗದ "ತಿಳಿಯದಾದಿರೆ' ಪದ್ಯವನ್ನು ಬಹುದಾರಿ ರಾಗದಲ್ಲಿ ಹಾಡಿದರು. ಶ್ರೀಧರ ಡಿ.ಎಸ್‌. ಅವರ ಮೂರು ಪದ್ಯಗಳನ್ನು ಮೂವರು ಭಾಗವತರು ಮೋಹನ ಮತ್ತು ಮಧ್ಯಮಾವತಿ ರಾಗದಲ್ಲಿ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಚಂಡೆ ಮದ್ದಳೆವಾದಕರಾದ ಅಡೂರು ಗಣೇಶ ರಾವ್‌ ಮತ್ತು ಲಕ್ಷ್ಮೀಶ ಅಮ್ಮಣ್ಣಾಯರ ನುಡಿಸಾಣಿಕೆಯೂ ಕಾರ್ಯಕ್ರಮದ ಒಟ್ಟು ಯಶಸ್ವಿಗೆ ಸಹಕಾರಿಯಾಗಿತ್ತು.ಚಕ್ರತಾಳದಲ್ಲಿ ಮುರಾರಿ ಭಟ್‌ ಸಹಕರಿಸಿದ್ದರು.

 ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 


Trending videos

Back to Top